ದಾಮೋದರಾಚಾರ್ಯ, ಮಧ್ವೇಶ, ಸತ್ಯಬೋಧಾಚಾರ್ಯರಿಗೆ ಭಂಡಾರಕೇರಿ ಮಠದ ಪ್ರಶಸ್ತಿ, ಬೆಂಗಳೂರಿನಲ್ಲಿ 20 ರಂದು ಪ್ರದಾನ-bangalore news damodaracharya madhvesha satyabodhacharya to get bhandarkeri mutt award presented in bangalore kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ದಾಮೋದರಾಚಾರ್ಯ, ಮಧ್ವೇಶ, ಸತ್ಯಬೋಧಾಚಾರ್ಯರಿಗೆ ಭಂಡಾರಕೇರಿ ಮಠದ ಪ್ರಶಸ್ತಿ, ಬೆಂಗಳೂರಿನಲ್ಲಿ 20 ರಂದು ಪ್ರದಾನ

ದಾಮೋದರಾಚಾರ್ಯ, ಮಧ್ವೇಶ, ಸತ್ಯಬೋಧಾಚಾರ್ಯರಿಗೆ ಭಂಡಾರಕೇರಿ ಮಠದ ಪ್ರಶಸ್ತಿ, ಬೆಂಗಳೂರಿನಲ್ಲಿ 20 ರಂದು ಪ್ರದಾನ

ಉಡುಪಿ ಶ್ರೀ ಭಂಡಾರಕೇರಿ ಮಠದಿಂದ( Udupi Bhandarkeri Mutt) ಕೊಡ ಮಾಡುವ ವಾರ್ಷಿಕ ಪ್ರಶಸ್ತಿಗೆ ಮೂವರು ವಿದ್ವಾಂಸರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದ ದಾಮೋದರಾಚಾರ್ಯ,  ಮಧ್ವೇಶ ನಡಿಲ್ಲಾಯ, ಸತ್ಯಬೋಧಾಚಾರ್ಯ.
ಪ್ರಶಸ್ತಿಗೆ ಆಯ್ಕೆಯಾದ ದಾಮೋದರಾಚಾರ್ಯ, ಮಧ್ವೇಶ ನಡಿಲ್ಲಾಯ, ಸತ್ಯಬೋಧಾಚಾರ್ಯ.

ಬೆಂಗಳೂರು: ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಸೇರಿದಂತೆ ಇಬ್ಬರು ವಿದ್ವಾಂಸರು ಆಯ್ಕೆಯಾಗಿದ್ದಾರೆ.ವೇದಪೀಠ ಪ್ರಶಸ್ತಿಗೆ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಆಯ್ಕೆಯಾಗಿದ್ದು, ಹಿರಿಯ ಅಗ್ನಿಹೋತ್ರಿ, ಪ್ರಾಚಾರ್ಯ ದಾಮೋದರಾಚಾರ್ಯರಿಗೆ 1 ಲಕ್ಷ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆನೀಡಿ ಗೌರವಿಸಲಾಗುವುದು ಎಂದು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಯುವ ವಿದ್ವಾಂಸರಿಗೆ ಮಠ ನೀಡುವ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ, ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ವಾನ್ ಸತ್ಯಬೋಧಾಚಾರ್ಯ ಹೊನ್ನಾಳಿ ಆಯ್ಕೆ ಗೊಂಡಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ.

ಬೆಂಗಳೂರಿನ ಗಿರಿನಗರದ ಭಾಗವತಾಶ್ರಮದಲ್ಲಿ ಮೇ. 20ರಂದು ಆಯೋಜಿಸಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಅಭಿನಂದನೆ, ಶ್ರೀ ವಿದ್ಯೇಶತೀರ್ಥರ 70ನೇ ವರ್ಧಂತಿ, ವಿದ್ವಾಂಸರಿಂದ ವಾಕ್ಯಾರ್ಥ ಗೋಷ್ಠಿ, ಶೋಭಾಯಾತ್ರೆ, ನರಸಿಂಹ ಮಂತ್ರಹೋಮವೂ ನೆರವೇರಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಪ್ರಶಸ್ತಿಗೆ ಭಾಜನರಾದವರ ಪರಿಚಯ ಹೀಗಿದೆ.

ವಿದ್ವಾನ್ ದಾಮೋದರಾಚಾರ್ಯ

ಪ್ರತಿ ದಿನವೂ ಶಾಸ್ತ್ರ ವಿದ್ಯಾ ಅಧ್ಯಯನ, ಅಧ್ಯಾಪನ, ಅಗ್ನಿಹೋತ್ರ ನಡೆಸುತ್ತಾ, ಸನಾತನ ಭಾರತೀಯ ಪರಂಪರೆಯನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿಯನ್ನು ಸಂಭ್ರಮದಿಂದಲೇ ನಿರ್ವಹಿಸುತ್ತಿರುವವರು ಈರೋಡಿನ ವಿದ್ವಾನ್ ದಾಮೋದರಾಚಾರ್ಯ.

ವಿದ್ವಾನ್ ಪದ್ಮನಾಭಾಚಾರ್ಯ - ಜಾನಕೀಬಾಯಿ ಅವರ ಪುತ್ರರಾದ ಇವರು ತಂದೆಯಿಂದಲೇ ವ್ಯಾಕರಣ, ವೇದ, ಶಾಸ್ತ್ರಗಳನ್ನು ಕಲಿತರು. ಪವಿತ್ರ ಕ್ಷೇತ್ರ ರಂಗದ ಬಳಿಯ ಸಿರುಗಮಣಿ ಎಂಬ ಗ್ರಾಮದಲ್ಲಿ ತಂದೆಯವರೇ ಪ್ರಾರಂಭಿಸಿದ ವೇದರಕ್ಷಣ ವೇದವ್ಯಾಸ ಗುರುಕುಲದಲ್ಲಿ 12 ವರ್ಷ ವೇದ ಅಧ್ಯಯನ ಮಾಡಿದವರು. ನಂತರ ಕಾಂಚೀಪುರದ ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ವೇದಾಂತ, ಘನ, ಐತರೇಯ ಬ್ರಾಹ್ಮಣ, ಗೃಹ್ಯಸೂತ್ರಗಳ ಸಹಿತ ವೇದಾಧ್ಯಯನ ನಡೆಸಿದರು. ನಂತರ ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ಹಿರಿಯ ವಿದ್ವಾಂಸ ಮಾಹುಲಿ ಗೋಪಾಲಾಚಾರ್ಯ ಮತ್ತು ವಿದ್ಯಾಸಿಂಹಾಚಾರ್ಯರ ಶಿಷ್ಯತ್ವ ಪಡೆದು 8 ವರ್ಷಗಳ ಕಾಲ ದ್ವೈತ ವೇದಾಂತ ಅಧ್ಯಯನ ನಡೆಸಿದರು. ಬಹು ವಿಶೇಷ ಎಂದರೆ ಇವರು ನಿತ್ಯ ಅಗ್ನಿಹೋತ್ರಿಗಳು, ಸೋಮಯಾಜಿಗಳು. ವಾಜಪೇಯ ಮಹಾಯಾಗ ಮಾಡಲು ಸಿದ್ಧರಾಗಿರುವ ಸಿದ್ಧಪುರುಷರು. ತಮ್ಮ ತಂದೆಯರು ಸ್ಥಾಪಿಸಿದ ಗುರುಕುಲವನ್ನು 2000ರಿಂದ ಈರೋಡಿನಲ್ಲಿ ಮುನ್ನಡೆಸುತ್ತಿರುವುದು ಬಹು ವಿಶೇಷ.

ಚೆನ್ನೈನಲ್ಲಿರುವ ಶ್ರೀ ಕಾಂಚಿಪುರಂ ವೇದ ರಕ್ಷಣಾ ನಿಧಿ ಟ್ರಸ್ಟ್ ಸಹಾಯ ಪಡೆದು ಗುರುಕುಲವನ್ನು ಸುವ್ಯವಸ್ಥಿತ ವಿದ್ಯಾಕೇಂದ್ರ ಮಾಡಿರುವುದು ಹೆಮ್ಮೆಯ ವಿಚಾರ. ಪ್ರಸ್ತುತ ಎಂಟನೇ ತಂಡದ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ದಾಮೋದರಾಚಾರ್ಯ ನಾಡಿನ ಹಿರಿಮೆ. ಅಪರೂಪದಲ್ಲಿ ಅನುರೂಪ ವ್ಯಕ್ತಿತ್ವ ಹೊಂದಿದವರು.

ವಿದ್ವಾನ್ ಮಧ್ವೇಶ ನಡಿಲ್ಲಾಯ

ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥರ ಶಿಷ್ಯರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿದ ಈ ಯುವ ಪ್ರತಿಭೆ, ವಿದ್ಯಾರ್ಥಿ ದಿಸೆಯಲ್ಲಿಯೇ ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 7 ಚಿನ್ನದ ಪದಕ, ತಿರುಪತಿಯ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ 3 ಚಿನ್ನದ ಪದಕ, ರಾಜ್ಯ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 11 ಚಿನ್ನದ ಪದಕ ಪಡೆದ ಜ್ಞಾನ ಚೇತನ. 2021ರಲ್ಲಿ ವಿವಿಧ ಮಾಧ್ವ ಪೀಠಾಧಿಪತಿಗಳ ಸಮ್ಮುಖ ಸಮಗ್ರ ಶ್ರೀಮನ್ ನ್ಯಾಯಸುಧಾ ಪರೀಕ್ಷೆ ನೀಡಿ ‘ಸುಧಾ ಪಂಡಿತ’ ಕೀರ್ತಿಗೆ ಭಾಜನರಾದವರು. ಸದ್ಯ ಬೆಂಗಳೂರಿನ ಪ್ರತಿಷ್ಠಿತ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಾಪಕರಾಗಿ ಮಧ್ವೇಶ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.

ವಿದ್ವಾನ್ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ ಅವರು ಶ್ರೀಧರಾಚಾರ್ಯ ಮತ್ತು ಧನ್ಯಾ ಅವರ ಪುತ್ರ. ದ್ವಿತೀಯ ಮಂತ್ರಾಲಯ ಹೊನ್ನಾಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸೇವೆ ಮಾಡಿ ವಿಶೇಷ ಅನುಗ್ರಹೀತರಾದ ಇವರು ಬೆಂಗಳೂರಿನ ಉತ್ತರಾದಿ ಮಠದ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ 14 ವರ್ಷ ಅಧ್ಯಯನ ಮಾಡಿದರು. 2012 ರಲ್ಲಿ ಧಾರವಾಡದಲ್ಲಿ ಸುಧಾ ಪರೀಕ್ಷೆ ನೀಡಿ ಸುಧಾ ಪಂಡಿತರೆಂಬ ಕೀರ್ತಿಗೆ ಭಾಜನರಾದವರು.

2015ರಲ್ಲಿ ಬೆಂಗಳೂರಿನಲ್ಲಿ ಸಮಗ್ರ ಶ್ರೀಮನ್ ನ್ಯಾಯ ಸುಧಾ ಎಂಬ ಕಠಿಣತಮ ಪರೀಕ್ಷೆ, 2017ರಲ್ಲಿ ಏಕಕಾಲದಲ್ಲಿ ವ್ಯಾಸತ್ರಯಗಳ ಪರೀಕ್ಷೆ ನೀಡಿದ ಪ್ರತಿಭಾ ಪುಂಜ. ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜನೆಗೊಂಡಿದ್ದ ವಿದ್ವತ್ ಸಭೆಯಲ್ಲಿ ಶ್ರೀ ಮನ್ ನ್ಯಾಯಸುಧಾಚಾರ್ಯ ಹಾಗೂ ವ್ಯಾಸತ್ರಯಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸಿದ ಯುವ ಚೇತನ. ತಿರುಪತಿಯಲ್ಲಿ ಖ್ಯಾತ ವಿದ್ವಾಂಸ ದೇವನಾಥಾಚಾರ್ಯರ ಬಳಿ ತರ್ಕ ಮತ್ತು ಮೀಮಾಂಸಾ ಶಾಸ್ತ್ರಗಳ ಅಧ್ಯಯನ ಮಾಡಿ, 2009- 2010ರಲ್ಲಿ ತೆನಾಲಿ ಪರೀಕ್ಷೆಯಲ್ಲೂ ಜಯಭೇರಿ ಬಾರಿಸಿದ ಜ್ಞಾನವಂತ. ವಯಸ್ಸು ಚಿಕ್ಕದಿದ್ದರೂ ಅಧ್ಯಯನ ಮತ್ತು ಅಧ್ಯಾಪನದಲ್ಲಿ ವಿಶೇಷ ಶ್ರದ್ಧೆ ಮತ್ತು ಆಸಕ್ತಿ ಹೊಂದಿದ್ದು, ಗುರುಸೇವೆಯಲ್ಲೇ ಪರಮ ಸುಖ ಕಾಣುವ ಸಾಧಕರಾಗಿರುವುದು ಗಮನಾರ್ಹ.

ಪ್ರಸ್ತುತ ಉತ್ತರಾದಿ ಮಠದ ಸುಧಾ ಗ್ರಂಥ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅಂತಿಮ ಹಂತದ ಪರೀಕ್ಷೆಗಾಗಿ ಉನ್ನತ ಮಟ್ಟದ ತರಬೇತಿ ನೀಡುವ ಗುರುತರ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದಾರೆ.