ಕನ್ನಡ ಸುದ್ದಿ  /  ಕರ್ನಾಟಕ  /  ಶಕ್ತಿ ಯೋಜನೆ ನಂತರವೂ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಏರಿಕೆ, ದೂರದ ಪ್ರಯಾಣ ಬೆಳೆಸುವ ಮಹಿಳೆಯರ ಬೇಡಿಕೆಗಳೇನು?

ಶಕ್ತಿ ಯೋಜನೆ ನಂತರವೂ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಏರಿಕೆ, ದೂರದ ಪ್ರಯಾಣ ಬೆಳೆಸುವ ಮಹಿಳೆಯರ ಬೇಡಿಕೆಗಳೇನು?

ಕರ್ನಾಟಕದಲ್ಲಿ ಶಕ್ತಿ ಯೋಜನೆ ಇದ್ದರೂ ರೈಲ್ವೆ ಸೇವೆ ಬಳಸುವ ಮಹಿಳೆಯರೂ ಸಾಕಷ್ಟಿದ್ದಾರೆ. ಅಲ್ಲಿ ಬೇಕಿರುವ ಸೌಲಭ್ಯಗಳೇನು. ಇಲ್ಲಿದೆ ವರದಿ..ವರದಿ: ಎಚ್.ಮಾರುತಿ. ಬೆಂಗಳೂರು

ಶಕ್ತಿ ಯೋಜನೆ ಜತೆಗೆ ಕರ್ನಾಟಕದಲ್ಲಿ ರೈಲ್ವೆ ಸೇವೆಗಳಿಗೂ ಬೇಕಾಗಿದೆ ಶಕ್ತಿ.
ಶಕ್ತಿ ಯೋಜನೆ ಜತೆಗೆ ಕರ್ನಾಟಕದಲ್ಲಿ ರೈಲ್ವೆ ಸೇವೆಗಳಿಗೂ ಬೇಕಾಗಿದೆ ಶಕ್ತಿ.

ಬೆಂಗಳೂರು: ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಗಳಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿದ್ದರೂ ರೈಲುಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಲ್ಲಿ ಗಮನಾರ್ಹ ಇಳಿಮುಖವಾಗಿಲ್ಲ. ದಿನ ನಿತ್ಯ ಮತ್ತು ದೂರದ ಪ್ರಯಾಣಕ್ಕೆ ಈಗಲೂ ಮಹಿಳೆಯರ ಮೊದಲ ಆಯ್ಕೆ ರೈಲು. ಹಾಗೆಂದು ರೈಲು ಪ್ರಯಾಣದಲ್ಲಿ ಸಮಸ್ಯೆಗಳೇ ಇಲ್ಲವೆಂದಿಲ್ಲ, ರೈಲುಗಳಲ್ಲಿ ಪ್ರತ್ಯೇಕ ಬೋಗಿಗಳ ವ್ಯವಸ್ಥೆ ಮಾಡಿಕೊಡುವಂತೆ ಮಹಿಳೆಯರು ಬೇಡಿಕೆ ಮುಂದಿಟ್ಟಿದ್ದಾರೆ. ಕನಿಷ್ಟ ಪಕ್ಷ ಕಚೇರಿ ಸಮಯ, ವಾರಾಂತ್ಯ, ಮತ್ತು ದೂರದ ಪ್ರಯಾಣ ಬೆಳೆಸುವಾಗ ಪ್ರತ್ಯೇಕ ಬೋಗಿಗಳ ಅವಶ್ಯಕತೆ ಇರುತ್ತದೆ ಎಂದು ಹೇಳಿದ್ದಾರೆ. ‌

ಟ್ರೆಂಡಿಂಗ್​ ಸುದ್ದಿ

ಜೊತೆಗೆ ಹೆಚ್ಚಿನ ಭದ್ರತೆ ಮತ್ತು ಸುರಕ್ಷತೆಗಾಗಿ ಹೆಚ್ಚಿನ ಸಿಸಿಟಿವಿಗಳ ಅಳವಡಿಕೆ, ಶೌಚಾಲಯಗಳ ನಿರ್ವಹಣೆ ಮತ್ತು ಆರೋಗ್ಯದ ದೃಷ್ಟಿಯಿಂದ ಸ್ವಚ್ಚತೆಯನ್ನು ಕಾಪಾಡುವಂತೆಯೂ ಬೇಡಿಕೆ ಮುಂದಿಟ್ಟಿದ್ದಾರೆ. ಮೈಸೂರಿನಿಂದ ಹೊರಡುವ 20ಕ್ಕೂ ಹೆಚ್ಚು ರೈಲುಗಳಲ್ಲಿ ಸುಮಾರು 60 ಸಾವಿರ ಪ್ರಯಾಣಿಕರು ಪ್ರಯಾಣಿಸಲಿದ್ದು, ಇವರಲ್ಲಿ ಶೇ.30ರಷ್ಟು ಪ್ರಯಾಣಿಕರು ಮಹಿಳೆಯರೇ ಆಗಿರುತ್ತಾರೆ. ಶತಾಬ್ದಿ ಮತ್ತು ವಂದೇ ಭಾರತ್‌ ರೈಲುಗಳನ್ನು ಹೊರತುಪಡಿಸಿದರೆ ಉಳಿದ ರೈಲುಗಳಲ್ಲಿ ಮಹಿಳೆಯರಿಗಾಗಿ ಒಂದು ಬೋಗಿ ಮಾತ್ರ ಮೀಸಲಾಗಿರುತ್ತದೆ. ಒಂದು ಬೋಗಿಯಲ್ಲಿ 80 ಪ್ರಯಾಣಿಕರಿಗೆ ಮಾತ್ರ ಅವಕಾಶವಿರುತ್ತದೆ. ಈ ಬೋಗಿ ರೈಲಿನ ಕೊನೆಯಲ್ಲಿರುತ್ತದೆ. ಇದೂ ಕೂಡಾ ಮಹಿಳೆಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ದುಡಿಯುವವರ ಪ್ರಮಾಣ ಏರಿಕೆ

ವರ್ಷದಿಂದ ವರ್ಷಕ್ಕೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ.ಪ್ರತಿದಿನ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಮಹಿಳಾ ಉದ್ಯೋಗಿಗಳು, ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಿದೆ. ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಪುರುಷರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ.

ಚನ್ನಪಟ್ಟಣ ಸೇರಿದಂತೆ ಅನೇಕ ನಿಲ್ದಾಣಗಳಲ್ಲಿ ನಿಲ್ಲಲೂ ಸ್ಥಳ ಇರುವುದಿಲ್ಲ. ಸಾಮಾನ್ಯ ಮತ್ತು ಮಹಿಳಾ ಬೋಗಿಗಳಲ್ಲಿ ಪ್ರಯಾಣಿಕರು ಶೌಚಾಲಯಗಳ ಸಮೀಪವೂ ನಿಂತುಕೊಂಡಿರುತ್ತಾರೆ.

ಇದು ಕೇವಲ ಮೈಸೂರು- ಬೆಂಗಳೂರಿನಿಂದ ಪ್ರಯಾಣಿಸುವ ಪ್ರಯಾಣಿಕರ ಪರಿಸ್ಥಿತಿ ಮಾತ್ರವಲ್ಲ, ತುಮಕೂರು-ಬೆಂಗಳೂರು, ಕೋಲಾರ-ಬೆಂಗಳೂರು ಸೇರಿದಂತೆ ಅನೇಕ ಮಾರ್ಗಗಳಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಮಹಿಳಾ ಪ್ರಯಾಣಿಕರ ಪರಿಸ್ಥಿತಿ ಶೋಚನೀಯ ಎಂದು ಅನೇಕ ಪ್ರಯಾಣಿಕರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

ಬೋಗಿ ಹೆಚ್ಚಿಸಿ

ಇನ್ನು ಗರ್ಭಿಣಿಯುರು, ಹಿರಿಯ ನಾಗರೀಕರು ಮತ್ತು ಸಣ್ಣ ಮಕ್ಕಳನ್ನು ಕರೆದುಕೊಂಡು ಓಡಾಡುವ ಮಹಿಳಾ ಪ್ರಯಾಣಿಕರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಈ ಎಲ್ಲ ಕಾರಣಗಳಿಗಾಗಿ ಮಹಿಳೆಯರಿಗಾಗಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಬೇಕು ಎಂದು ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಪ್ರತಿದಿನ ಆಗಮಿಸುವ ಮಹಿಳೆಯರ ಒತ್ತಾಯವಾಗಿದೆ.

ಮಹಿಳಾ ಪ್ರಯಾಣಿಕರಿಗೆ ರಕ್ಷಣೆ ಮುಖ್ಯ. ನಮ್ಮ ಸಹ ಪ್ರಯಾಣಿಕರು ಯಾರು ಎನ್ನುವುದು ತಿಳಿದಿರುವುದಿಲ್ಲ. ಪುರುಷ ಪ್ರಯಾಣಿಕರು ದುರ್ವರ್ತನೆ ತೋರಿದರೆ ದೂರು ದಾಖಲಿಸಲೂ ಸಾಧ್ಯವಾಗುವುದಿಲ್ಲ. ಒಂದು ವೇಳೆ ದೂರು ದಾಖಲಿಸಿದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಶಿಕ್ಷೆಯೇ ಆಗುವುದಿಲ್ಲ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಿಸಿಟಿವಿಗಳನ್ನು ಅಳವಡಿಸಿದರೆ ಸಹಾಯವಾಗುತ್ತದೆ ಎನ್ನವುದು ಮಹಿಳೆಯರ ಅಭಿಪ್ರಾಯವಾಗಿದೆ.

ದೂರದ ಮಹಿಳಾ ಪ್ರಯಾಣಿಕರ ಗೋಳು ಮತ್ತೊಂದು ರೀತಿಯದ್ದಾಗಿರುತ್ತದೆ. ಯಾರು ರೈಲು ಹತ್ತುತ್ತಾರೆ, ಯಾರು ಇಳಿಯುತ್ತಾರೆ ಎನ್ನುವುದು ತಿಳಿಯುವುದೇ ಇಲ್ಲ. ಲಗೇಜ್‌ ಮತ್ತು ಬ್ಯಾಗ್‌ ಗಳ ರಕ್ಷಣೆ ಸಮಸ್ಯೆಯಾಗುತ್ತದೆ. ಆದ್ದರಿಂದ ದೂರದ ಪ್ರಯಾಣಕ್ಕೂ ಮಹಿಳೆಯರಿಗೆ ವಿಶೇಷ ಬೋಗಿಗಳ ವ್ಯವಸ್ಥೆ ಕಲ್ಪಿಸಿದರೆ ಸಹಾಯಕವಾಗುತ್ತದೆ ಎಂದು ಅಗ್ರಹಪಡಿಸುತ್ತಾರೆ.

ಸಂಸದರು ಸಂಚರಿಸಲಿ

ರೈಲ್ವೆ ಅಧಿಕಾರಿಗಳು ಮತ್ತು ಸಂಸದರು ರೈಲುಗಳಲ್ಲಿ ಅದರಲ್ಲೂ ಮಹಿಳೆಯರ ಬೋಗಿಗಳಲ್ಲಿ ಒಮ್ಮೆ ಪ್ರಯಾಣಿಸಿದರೆ ನಮ್ಮ ಕಷ್ಟ ಅರಿವಿಗೆ ಬರುತ್ತದೆ. ಕೆಲವು ನಿಲ್ದಾಣಗಳಲ್ಲಿ ಎಲಿವೇಟರ್‌ ಹಾಗೂ ನೆರಳಿನ ವ್ಯವಸ್ಥೆ ಇರುವುದಿಲ್ಲ ಎಂದು ಸಮಸ್ಯೆಗಳ ಪಟ್ಟಿಯನ್ನೇ ಮುಂದಿಡುತ್ತಾರೆ. ಮಹಿಳೆಯರ ಬೇಡಿಕೆಗಳನ್ನು ಒಪ್ಪುತ್ತೇವೆ. ಆದರೆ ಹೆಚ್ಚಿನ ಬೋಗಿಗಳನ್ನು ಕಲ್ಪಿಸುವುದು ರೈಲ್ವೇ ಸಚಿವಾಲಯದ ನಿರ್ಧಾರವನ್ನು ಅವಲಂಬಿಸಿದೆ. ಈಗಾಗಲೇ ಈ ಸಂಬಂಧ ಪ್ರಸ್ತಾವನೆಗಳನ್ನು ಕಳುಹಿಸಿಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

ಶಕ್ತಿ ಯೋಜನೆಯಿಂದ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರು ದೂರದ ಪ್ರಯಾಣಕ್ಕೆ ರೈಲನ್ನೇ ಅವಲಂಬಿಸುತ್ತಾರೆ ಎನ್ನುತ್ತಾರೆ.

ಹೆಚ್ಚೆಂದರ ಶೇ.20ರಷ್ಟು ಮಹಿಳಾ ಪ್ರಯಾಣಿಕರು ಮಾತ್ರ ರೈಲುಗಳಿಂದ ಕೆ ಎಸ್‌ ಆರ್‌ ಟಿಸಿ ಬಸ್‌ ಗಳಿಗೆ ವಲಸೆ ಬಂದಿದ್ದಾರೆ ಅಷ್ಟೇ ಎಂದು ಸಾರಿಗೆ ನಿಗಮದ ಅಧಿಕಾರಿಗಳು ಹೇಳುತ್ತಾರೆ.

ಒಟ್ಟಿನಲ್ಲಿ ರೈಲುಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರತ್ಯೇಕ ಬೋಗಿ ಮತ್ತು ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುವುದಂತೂ ಅತ್ಯಾವಶ್ಯಕ ಎನ್ನುವುದು ಅವರ ತುರ್ತು ಬೇಡಿಕೆಯಾಗಿದೆ. ಹೊಸ ಸಂಸದರು ಇತ್ತ ಗಮನ ಹರಿಸುತ್ತಾರೆ ಎಂದು ಮಹಿಳಾ ಪ್ರಯಾಣಿಕರು ನಿರೀಕ್ಷಣೆಯಲ್ಲಿದ್ದಾರೆ.

ವರದಿ: ಎಚ್.ಮಾರುತಿ, ಬೆಂಗಳೂರು

IPL_Entry_Point