ಕರ್ನಾಟಕ ಬಜೆಟ್‌ 2024: 3 ಜವಳಿ ಪಾರ್ಕ್‌ ಸ್ಥಾಪನೆ, ಹೊಸ ನೀತಿ, 5 ಲಕ್ಷ ಉದ್ಯೋಗ ಸೃಷ್ಟಿಗೆ ಆದ್ಯತೆ; ನೇಕಾರಿಕೆ ವಲಯಕ್ಕೆ ಏನಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಬಜೆಟ್‌ 2024: 3 ಜವಳಿ ಪಾರ್ಕ್‌ ಸ್ಥಾಪನೆ, ಹೊಸ ನೀತಿ, 5 ಲಕ್ಷ ಉದ್ಯೋಗ ಸೃಷ್ಟಿಗೆ ಆದ್ಯತೆ; ನೇಕಾರಿಕೆ ವಲಯಕ್ಕೆ ಏನಿದೆ

ಕರ್ನಾಟಕ ಬಜೆಟ್‌ 2024: 3 ಜವಳಿ ಪಾರ್ಕ್‌ ಸ್ಥಾಪನೆ, ಹೊಸ ನೀತಿ, 5 ಲಕ್ಷ ಉದ್ಯೋಗ ಸೃಷ್ಟಿಗೆ ಆದ್ಯತೆ; ನೇಕಾರಿಕೆ ವಲಯಕ್ಕೆ ಏನಿದೆ

ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನೇಕಾರ ಸಮುದಾಯವನ್ನು ಉತ್ತೇಜಿಸಲು ಸಿದ್ದರಾಮಯ್ಯ ಕರ್ನಾಟಕ ಬಜೆಟ್‌ 2024 ಮೂಲಕ ಜವಳಿ ವಲಯಕ್ಕೆ ಆದ್ಯತೆ ಕೊಟ್ಟಿದ್ಧಾರೆ.

ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ನಲ್ಲಿ ಜವಳಿ ವಲಯಕ್ಕೂ ಒತ್ತು ನೀಡಲಾಗಿದೆ.
ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ನಲ್ಲಿ ಜವಳಿ ವಲಯಕ್ಕೂ ಒತ್ತು ನೀಡಲಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ನೇಕಾರಿಕೆ ಜತೆಗೆ ಉದ್ಯೋಗ ಸೃಷ್ಟಿಸಬಲ್ಲ ಜವಳಿ ವಲಯಕ್ಕೆ ಈ ಬಾರಿ ಬಜೆಟ್‌ನಲ್ಲಿ ಸಿದ್ದರಾಮಯ್ಯ ಹೆಚ್ಚಿನ ಒತ್ತು ನೀಡಿದ್ದಾರೆ. ಹೊಸ ಜವಳಿ ನೀತಿ ಜಾರಿ, 10,000 ಕೋಟಿ ರೂ ಬಂಡವಾಳ ಹೂಡಿಕೆ, ಜವಳಿಪಾರ್ಕ್‌ಗಳ ಸ್ಥಾಪನೆ, 5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ. ಮೈಸೂರು, ರಾಯಚೂರು ಹಾಗೂ ಕಿತ್ತೂರು ಕರ್ನಾಟಕ ಭಾಗದ ಒಂದು ಕಡೆ ನೂತನ ಜವಳಿ ಪಾರ್ಕ್‌ ಬರಲಿದೆ. ಅಲ್ಲದೇ ಎಲ್ಲೆಲ್ಲಿ ಜವಳಿ ಪಾರ್ಕ್‌ ಇಲ್ಲವೇ ಆಯಾ ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್‌ ಸ್ಥಾಪಿಸುವುದನ್ನು ಕರ್ನಾಟಕ ಬಜೆಟ್‌ 2024ರಲ್ಲಿ ಸಿದ್ದರಾಮಯ್ಯ ಅವರು ಉಲ್ಲೇಖಿಸಿದ್ದಾರೆ.

ಜವಳಿ ವಲಯದ ಆದ್ಯತೆಗಳು ಹೀಗಿವೆ

ರಾಜ್ಯದಲ್ಲಿ ಜವಳಿ ಹಾಗೂ ನೇಕಾರಿಕೆ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜಿಸಲು 2024-29ರ ಅವಧಿಗೆ 10,000 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಹಾಗೂ 2 ಲಕ್ಷ ಉದ್ಯೋಗಗಳ ಸೃಜನೆಯ ಗುರಿಯೊಂದಿಗೆ ಹೊಸ ಜವಳಿ ನೀತಿಯನ್ನು ಜಾರಿಗೊಳಿಸಲಾಗುವುದು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ಜಿಲ್ಲೆಯ 1,000 ಎಕರೆ ಪ್ರದೇಶದಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಮೆಗಾ ಜವಳಿ ಪಾರ್ಕ್‌ ಸ್ಥಾಪಿಸಲಾಗುತ್ತಿದೆ. ಇದರಿಂದ 1 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಜನೆಯಾಗುವ ನಿರೀಕ್ಷೆಯಿದೆ. ಈ ಯೋಜನೆಗೆ ಪೂರಕವಾದ ಮೂಲ ಸೌಕರ್ಯಕ್ಕಾಗಿ 50 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ರಾಯಚೂರು ಮತ್ತು ಮೈಸೂರು ವಿಭಾಗಗಳಲ್ಲಿ ನೂತನ ಜವಳಿ ಪಾರ್ಕ್‌ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು. ಇದರಿಂದ ಸುಮಾರು 10,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬಜೆಟ್‌ ಭಾಷಣದಲ್ಲಿ ವಿವರಿಸಿದ್ಧಾರೆ.

ಬಳ್ಳಾರಿ ಜೀನ್ಸ್

ಬಳ್ಳಾರಿಯಲ್ಲಿ ಅಸಂಘಟಿತವಾಗಿರುವ ಜೀನ್ಸ್ ಉದ್ದಿಮೆಗಳನ್ನು ಸಂಘಟಿಸಿ, ವಿಶ್ವದರ್ಜೆಗೆ ಉನ್ನತೀಕರಿಸಲು ಮೂಲ ಸೌಕರ್ಯಗಳನ್ನು ಒಳಗೊಂಡಂತೆ ಜೀನ್ಸ್ ಅಪಾರೆಲ್ ಪಾರ್ಕ್ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಜವಳಿ ಪಾರ್ಕ್‌ಗಳು ಇಲ್ಲದಿರುವ ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್‌ ಸ್ಥಾಪಿಸುವ ಉದ್ದಿಮೆದಾರರಿಗೆ ಮೂಲಸೌಕರ್ಯಕ್ಕಾಗಿ ಜವಳಿ ನೀತಿಯನ್ವಯ ಸಹಾಯಧನವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಖಾದಿಗೂ ಒತ್ತು

ಇನ್ನು ಮಹಾತ್ಮಾ ಗಾಂಧೀಜಿ ಶತಮಾನದ ಹಿಂದೆ ಭೇಟಿ ನೀಡಿದ್ದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಖಾದಿ ಚಟುವಟಿಕೆ ಪ್ರೋತ್ಸಾಹಕ್ಕಾಗಿ ಕ್ರಮ ವಹಿಸಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Whats_app_banner