ಕನ್ನಡ ಸುದ್ದಿ  /  ಕರ್ನಾಟಕ  /  ಚಿಕ್ಕಮಗಳೂರು ಗೋಬ್ಯಾಕ್ ಎಂದರೂ ವೆಲ್‌ಕಮ್ ಎಂದ ಬೆಂಗಳೂರು ಉತ್ತರ ಮತದಾರ; ಆದರೂ ಶೋಭಾ ಕರಂದ್ಲಾಜೆ ಸಚಿವೆಯಾಗುವ ಸಾಧ್ಯತೆ ಕಡಿಮೆ

ಚಿಕ್ಕಮಗಳೂರು ಗೋಬ್ಯಾಕ್ ಎಂದರೂ ವೆಲ್‌ಕಮ್ ಎಂದ ಬೆಂಗಳೂರು ಉತ್ತರ ಮತದಾರ; ಆದರೂ ಶೋಭಾ ಕರಂದ್ಲಾಜೆ ಸಚಿವೆಯಾಗುವ ಸಾಧ್ಯತೆ ಕಡಿಮೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಭಿನ್ನ ಕ್ಷೇತ್ರದಿಂದ ಟಿಕೆಟ್‌ ಪಡೆದು ಮತ್ತೆ ಸಂಸದೆಯಾಗಿ ಆಯ್ಕೆಯಾದ ಶೋಭಾ ಅವರಿಗೆ ಈ ಬಾರಿ ಸಚಿವೆಯಾಗುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ. (ಎಚ್ ಮಾರುತಿ, ಬೆಂಗಳೂರು)

ಚಿಕ್ಕಮಗಳೂರು ಗೋಬ್ಯಾಕ್ ಎಂದರೂ ವೆಲ್‌ಕಮ್ ಎಂದ ಬೆಂಗಳೂರು ಉತ್ತರ ಮತದಾರ
ಚಿಕ್ಕಮಗಳೂರು ಗೋಬ್ಯಾಕ್ ಎಂದರೂ ವೆಲ್‌ಕಮ್ ಎಂದ ಬೆಂಗಳೂರು ಉತ್ತರ ಮತದಾರ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅನಿರೀಕ್ಷಿತ ಅಲ್ಲ. ಹೇಳಿ ಕೇಳಿ ನಗರ ಪ್ರದೇಶದ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಸತತ ನಾಲ್ಕು ಚುನಾವಣೆಗಳಿಂದ ತನ್ನ ಅಧಿಪತ್ಯ ಸಾಧಿಸುತ್ತಾ ಬಂದಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೋ ಬ್ಯಾಕ್ ಚಳವಳಿ ಎದುರಿಸಿ ಯಡಿಯೂರಪ್ಪ ಅವರ ಕೃಪಾಕಟಾಕ್ಷದಿಂದ ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅತ್ತ ಕಾಂಗ್ರೆಸ್ ಅಷ್ಟೇನೂ ಚಿರಪರಿಚಿತ ಅಲ್ಲದ ಪ್ರೊ.ರಾಜೀವ್ ಗೌಡ ಅವರಿಗೆ ಟಿಕೆಟ್ ಘೋಷಿಸಿತ್ತು. ಅಂದೇ ಶೋಭಾ ಗೆಲುವು ಖಚಿತವಾಗಿತ್ತು. ಆದರೆ ಈ ಅಂತರದಲ್ಲಿ ಗೆಲ್ಲುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ.

ಟ್ರೆಂಡಿಂಗ್​ ಸುದ್ದಿ

ಶೋಭಾ ಸುಮಾರು 1,91,727 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಬ್ಯಾಟರಾಯನಪುರ ಮತ್ತು ಪುಲಕೇಶಿನಗರ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಬೆಂಗಳೂರು ನಗರದ ಉತ್ತರ ಭಾಗದ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ರಚಿಸಲಾಗಿದೆ. ಕಳೆದ ಕ್ಷೇತ್ರಗಳಲ್ಲಿ ಶೋಭಾ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 5 ಮತ್ತು ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕೆಆರ್ ಪುರಂ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಬ್ಯಾಟರಾಯನಪುರ, ಹೆಬ್ಬಾಳ ಮತ್ತು ಪುಲಕೇಶಿನಗರ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.

004ರಿಂದ ಬಿಜೆಪಿ ಹಿಡಿತದಲ್ಲಿ ಕ್ಷೇತ್ರ

1951ರಿಂದ ಕಾಂಗ್ರೆಸ್ ಹಿಡಿತದಲ್ಲಿದ್ದ ಈ ಕ್ಷೇತ್ರ 2004ರಿಂದ ಬಿಜೆಪಿ ತೆಕ್ಕೆಗೆ ಜಾರಿತ್ತು. 2004ರಲ್ಲಿ ಬಿಜೆಪಿ ಅಭ್ಯರ್ಥಿ ಎಚ್‌ಟಿ ಸಾಂಗ್ಲಿಯಾನಾ, 2009ರಲ್ಲಿ ಡಿಬಿ ಚಂದೇಗೌಡ ಮತ್ತು 2014 ಹಾಗೂ 2019ರಲ್ಲಿ ಡಿವಿ ಸದಾನಂದಗೌಡ ಆಯ್ಕೆಯಾಗಿದ್ದರು.

2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿವಿ ಸದಾನಂದ ಗೌಡ 8,24,500 ಮತಗಳನ್ನು ಪಡೆದು ಆಯ್ಕೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ 6,76,982 ಮತ ಪಡೆದಿದ್ದರು.

ಆರಂಭದಲ್ಲಿ ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿ ಗೌಡರು ಮತ್ತೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಆದರೆ ಆ ವೇಳೆಗೆ ಕಾಲ ಮಿಂಚಿಹೋಗಿ ಶೋಭಾ ಅವರಿಗೆ ಯಡಿಯೂರಪ್ಪ ಅವರು ಟಿಕೆಟ್ ಖಚಿತಪಡಿಸಿದ್ದರು. ಈ ಕ್ಷೇತ್ರ ಶೇ. 92ರಷ್ಟು ನಗರ ಪ್ರದೇಶ ಮತ್ತು ಶೇ.8ರಷ್ಟು ಮಾತ್ರ ಗ್ರಾಮೀಣ ಪ್ರದೇಶವನ್ನು ಒಳಗೊಂಡಿದೆ. ಸಹಜವಾಗಿಯೇ ನಗರ ಪ್ರದೇಶದ ಮತದಾರರು ಎಂದಿನಂತೆ ಬಿಜೆಪಿ ಬೆಂಬಲಿಸಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗಿದೆ. ತಳಹಂತದಲ್ಲಿ ಕಾರ್ಯಕರ್ತರ ಪಡೆ ಇದೆ. ಐವರು ಶಾಸಕರ ಪೈಕಿ ಯಶವಂತಪುರದ ಎಸ್‌ಟಿ ಸೋಮಶೇಖರ್ ಹೊರತುಪಡಿಸಿ ಉಳಿದ ಶಾಸಕರು ಪಕ್ಷದ ಅಭ್ಯರ್ಥಿ ಗೆಲುವಿಗೆ ಅಪಾರ ಶ್ರಮ ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ, ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದರೂ ಒಕ್ಕಲಿಗರು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಅವರು ಸುಶಿಕ್ಷಿತ ಅಭ್ಯರ್ಥಿ. ನೀತಿ ನಿರೂಪಣೆ ರೂಪಿಸುವಲ್ಲಿ ಎತ್ತಿದ ಕೈ. ಉತ್ತಮ ಸಂಸದೀಯ ಪಟು. ಆದರೆ ಮತದಾರರಿಗೆ ಇಂತಹ ಅಂಶಗಳು ಮತಗಳಿಕೆಗೆ ಸಹಾಯ ಮಾಡುವುದಿಲ್ಲ. ಈ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಿಂತ ಮೋದಿಗಾಗಿ ಮತ ಚಲಾಯಿಸಿರುವುದು ಎದ್ದು ಕಾಣುತ್ತದೆ.

ಸಚಿವೆಯಾಗುವ ಸಾಧ್ಯತೆ ಕಡಿಮೆ

ಒಮ್ಮೆ ಇದೇ ಕ್ಷೇತ್ರದ ಯಶವಂತಪುರದ ಶಾಸಕಿಯಾಗಿಯೂ ಆಯ್ಕೆಯಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರಿನ ಪರಿಚಯ ಇದ್ದದ್ದು ಗೆಲುವಿಗೆ ಸಹಕಾರಿಯಾಗಿದೆ. ಕೇಂದ್ರ ಸಚಿವೆಯಾಗಿ ಕೆಲಸ ಮಾಡುತ್ತಿರುವ ಇವರಿಗೆ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ. ಈ ಅವಕಾಶ ಪಕ್ಕದ ಗ್ರಾಮಾಂತರ ಕ್ಷೇತ್ರದ ಡಾ.ಮಂಜುನಾಥ್ ಅವರಿಗೆ ಲಭ್ಯವಾಗುವ ಸಾಧ್ಯತೆಗಳು ಹೆಚ್ಚು ಎನ್ನಲಾಗುತ್ತಿದೆ. ಒಟ್ಟಾರೆ ಬೆಂಗಳೂರಿನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿಯ ಪತಾಕೆ ಹಾರಾಡುತ್ತಿದೆ.

ವರದಿ: ಎಚ್ ಮಾರುತಿ, ಬೆಂಗಳೂರು

ಲೋಕಸಭೆ ಚುನಾವಣೆ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಟಿ20 ವರ್ಲ್ಡ್‌ಕಪ್ 2024