Bangalore News: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಮುಜಮೀಲ್ ಶರೀಫ್ ವಿಚಾರಣೆ ಅಂತ್ಯ, ಮಹತ್ವದ ಮಾಹಿತಿ ಸಂಗ್ರಹ
ಆರೋಪಿ ಮುಜಮೀಲ್‌ನನ್ನು ಹಲವು ಸ್ಥಳಗಳಿಗೆ ಕರೆದೊಯ್ದು ಮಹಜರು ಮಾಡಲಾಗಿದೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಈತನ ಜೊತೆ ಕೈ ಜೋಡಿಸಿರುವ, ನೇರವಾಗಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆಗೆ ಮಾಹಿತಿ ಕಲೆಹಾಕಲಾಗಿದೆ. (ವರದಿ: ಎಚ್ ಮಾರುತಿ)
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ (Rameshwaram Cafe Blast Case) ಬಂಧಿಸಲ್ಪಟ್ಟಿರುವ ಶಂಕಿತ ಆರೋಪಿ ಮುಜಮೀಲ್ ಶರೀಫ್‌ನ ಎನ್‌ಐಎ (NIA) ಕಸ್ಟಡಿ ಮುಗಿದಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಈತನಿಂದ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ ಎಂದು ಗೊತ್ತಾಗಿದೆ. ಆರೋಪಿ 31 ವರ್ಷದ ಮುಜಮೀಲ್ ಶರೀಫ್‌ನನ್ನ 5 ದಿನಗಳವರೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕಸ್ಟಡಿಗೆ ಪಡೆದಿತ್ತು. ಈ ಐದು ದಿನಗಳಲ್ಲಿ ಎನ್‌ಐಎ ಅಧಿಕಾರಿಗಳು ಸ್ಫೋಟಕ್ಕೆ ಸಂಬಂಧಪಟ್ಟ ವಿವಿಧ ಸ್ಥಳಗಳಿಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದ್ದಾರೆ. ಮಾರ್ಚ್ 23 ರಂದು ಚಿಕ್ಕಮಗಳೂರು ಜಿಲ್ಲೆಯ ಕಳಸ ಗ್ರಾಮದ ಮುಜಮೀಲ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿ ಏಪ್ರಿಲ್ 3ರವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಮುಜಮೀಲ್ ನೀಡಿದ್ದ ಮಾಹಿತಿ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದ ಎನ್‌ಐಎ ಅಧಿಕಾರಿಗಳು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮತ್ತೊಬ್ಬ ಶಂಕಿತ ಆರೋಪಿ ಮಾಝ್ ಮುನೀರ್ ಅಹಮದ್‌ನನ್ನು ಬಂಧಿಸಿದ್ದರು.
ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ ಎಂಬಾತನೇ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಎನ್ನುವುದಕ್ಕೆ ಹಲವು ಸಾಕ್ಷ್ಯಗಳು ಲಭ್ಯವಾಗಿವೆ. ಇವರ ಜೊತೆಗೆ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಸಹ ಕೈ ಜೋಡಿಸಿದ್ದ ಎನ್ನುವುದು ಖಚಿತವಾಗಿದೆ. ಈ ಆರೋಪಿಗಳ ಜೊತೆ ಮುಜಮೀಲ್ ಶರೀಫ್ ಹಲವು ವರ್ಷಗಳ ಸಂಬಂಧ ಹೊಂದಿದ್ದ ಎನ್ನುವುದಕ್ಕೆ ಪುರಾವೆಗಳಿವೆ. ಸದ್ಯಕ್ಕೆ ಪ್ರಮುಖ ಆರೋಪಿ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹ್ಮದ್ ತಾಹಾ ತಲೆಮರೆಸಿಕೊಂಡಿದ್ದಾರೆ. ಅವರಿಬ್ಬರನ್ನು ಪತ್ತೆ ಮಾಡಲು ಮುಜಮೀಲ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ. ಈತನಿಂದ ಮತ್ತಷ್ಟು ಸ್ಫೋಟಕ ಮಾಹಿತಿ ಲಭ್ಯವಾಗಲಿದೆ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಕ್ಕೆ ಹೇಗೆ ಸಂಚು ರೂಪಿಸಲಾಗಿತ್ತು ಮತ್ತು ಬಾಂಬ್ ತಯಾರಿಸಲು ಎಲ್ಲೆಲ್ಲಿ ಯಾವ ಯಾವ ಕಚ್ಚಾ ಸಾಮಗ್ರಿಗಳನ್ನು ಖರೀದಿ ಮಾಡಲಾಗಿತ್ತು ಎಂಬ ಖಚಿತ ಮಾಹಿತಿ ಮುಜಮೀಲ್‌ಗೆ ತಿಳಿದಿದೆ. ಯಾವ ಯಾವ ಊರುಗಳಲ್ಲಿ ಇತರೆ ಶಂಕಿತ ಆರೋಪಿಗಳನ್ನು ಮುಜಮೀಲ್ ಭೇಟಿಯಾಗಿದ್ದ ಎಂಬ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಕುರಿತು ವಿಚಾರಣೆ ನಡೆಸಲು ಮುಜಮೀಲ್‌ನನ್ನು ಏಪ್ರಿಲ್ 6ರಂದು ಎರಡನೇ ಬಾರಿ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿತ್ತು. ಐದು ದಿನಗಳ ವಿಚಾರಣೆ ಅಂತ್ಯಗೊಂಡಿದ್ದು, ಈತನನ್ನು ಏಪ್ರಿಲ್ 10 ರಂದು ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇತರೆ ಆರೋಪಿಗಳ ಪತ್ತೆಗಾಗಿ ಮಾಹಿತಿ ಸಂಗ್ರಹಿಸುತ್ತಿರುವ ಎನ್‌ಐಎ
ಈ ಐದು ದಿನಗಳಲ್ಲಿ ಮುಜಮೀಲ್‌ನನ್ನು ಹಲವು ಸ್ಥಳಗಳಿಗೆ ಕರೆದೊಯ್ದು ಮಹಜರು ಮಾಡಲಾಗಿದೆ. ಈ ಪ್ರಕರಣದಲ್ಲಿ ಇವರ ಜೊತೆಗೆ ಕೈ ಜೋಡಿಸಿರುವ ಅಥವಾ ನೇರವಾಗಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆಗೆ ಮಾಹಿತಿ ಕಲೆಹಾಕಲಾಗಿದೆ. ಇವರ ಜೊತೆಗೆ ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದ ಹಲವು ಶಂಕಿತರ ಜೊತೆ ಸಂಪರ್ಕ ಇಟ್ಟುಕೊಂಡಿರುವ ಮಾಹಿತಿ ಸಿಕ್ಕಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ 2024ರ ಮಾರ್ಚ್ 1 ರಂದು ವೈಟ್‌ಫೀಲ್ಡ್ ಮುಖ್ಯರಸ್ತೆಯ ಐಟಿಪಿಎಲ್‌ನಲ್ಲಿ ಅತ್ಯಂತ ಜನಪ್ರಿಯ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. (ವರದಿ: ಎಚ್ ಮಾರುತಿ)