ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌; ಬಂದೂಕು ಹಿಡಿದು ಓಡಾಡುತ್ತಿದ್ದರೆಂದು ಕೊಂದು ಹಾಕಬಹುದೇ ಮಾಜಿ ನಕ್ಸಲ್‌ ನಾಯಕರ ಪ್ರಶ್ನೆ, ತನಿಖೆಗೆ ಆಗ್ರಹ
ಕನ್ನಡ ಸುದ್ದಿ  /  ಕರ್ನಾಟಕ  /  ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌; ಬಂದೂಕು ಹಿಡಿದು ಓಡಾಡುತ್ತಿದ್ದರೆಂದು ಕೊಂದು ಹಾಕಬಹುದೇ ಮಾಜಿ ನಕ್ಸಲ್‌ ನಾಯಕರ ಪ್ರಶ್ನೆ, ತನಿಖೆಗೆ ಆಗ್ರಹ

ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌; ಬಂದೂಕು ಹಿಡಿದು ಓಡಾಡುತ್ತಿದ್ದರೆಂದು ಕೊಂದು ಹಾಕಬಹುದೇ ಮಾಜಿ ನಕ್ಸಲ್‌ ನಾಯಕರ ಪ್ರಶ್ನೆ, ತನಿಖೆಗೆ ಆಗ್ರಹ

ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌: ಬಂದೂಕು ಹಿಡಿದು ಓಡಾಡುತ್ತಿದ್ದರೆಂದು ಕೊಂದು ಹಾಕಬಹುದೇ ಎಂದು ಪ್ರಶ್ನಿಸಿರುವ ಮಾಜಿ ನಕ್ಸಲ್‌ ನಾಯಕರಾದ ನೂರ್ ಶ್ರೀಧರ್‌ ಮತ್ತು ಸಿರಿಮನೆ ನಾಗರಾಜ್, ವಿಕ್ರಂ ಗೌಡ ಎನ್‌ಕೌಂಟರ್‌ ಪ್ರಕರಣವನ್ನು ಸ್ವತಂತ್ರ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ನಕ್ಸಲ್‌ ನಾಯಕ ವಿಕ್ರಂ ಗೌಡ (ಬಲ ಚಿತ್ರ) ಎನ್‌ಕೌಂಟರ್‌ ಪ್ರಶ್ನಿಸಿ ಮಾಜಿ ನಕ್ಸಲ್ ನಾಯಕರಾದ ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಮತ್ತು ಇತರರು ಈ ಪ್ರಕರಣದ ಸ್ವತಂತ್ರ ತನಿಖೆಯಾಗಬೇಕು ಎಂದು ಬೆಂಗಳೂರಿನಲ್ಲಿ ನಿನ್ನೆ (ನವೆಂಬರ್ 20) ಆಗ್ರಹಿಸಿದರು.
ನಕ್ಸಲ್‌ ನಾಯಕ ವಿಕ್ರಂ ಗೌಡ (ಬಲ ಚಿತ್ರ) ಎನ್‌ಕೌಂಟರ್‌ ಪ್ರಶ್ನಿಸಿ ಮಾಜಿ ನಕ್ಸಲ್ ನಾಯಕರಾದ ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಮತ್ತು ಇತರರು ಈ ಪ್ರಕರಣದ ಸ್ವತಂತ್ರ ತನಿಖೆಯಾಗಬೇಕು ಎಂದು ಬೆಂಗಳೂರಿನಲ್ಲಿ ನಿನ್ನೆ (ನವೆಂಬರ್ 20) ಆಗ್ರಹಿಸಿದರು.

ಬೆಂಗಳೂರು: ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ಕುರಿತ ಅನುಮಾನಗಳು ಹೆಚ್ಚಾಗಿದ್ದು, ಮಾಜಿ ನಕ್ಸಲ್‌ ನಾಯಕರು ನ್ಯಾಯ ಸಮ್ಮತ ರೀತಿಯಲ್ಲಿ ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ವಿಕ್ರಂ ಗೌಡ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾಗಲಿ, ಠಾಣೆ ಮೇಲೆ ದಾಳಿ ನಡೆಸಿದ್ದಾಗಲಿ, ಬೆದರಿಕೆ, ಕೊಲೆ ಅಥವಾ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ. ಕರಪತ್ರ ಕೂಡ ಹಂಚಿಲ್ಲ. ಕೇವಲ ಬಂದೂಕು ಹಿಡಿದು ಓಡಾಡುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಕೊಂದು ಹಾಕಬಹುದಾ ಎಂದು ಮಾಜಿ ನಕ್ಸಲ್‌ ನಾಯಕರಾದ ನೂರ್ ಶ್ರೀಧರ್‌ ಮತ್ತು ಸಿರಿಮನೆ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆತನನ್ನು ಕೊಂದು ಹಾಕುವ ಅಗತ್ಯ ಏನಿತ್ತು. ಇದು ಸರ್ಕಾರ ತೋರಿದ ಕ್ರೂರ ನಡವಳಿಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ (ನವೆಂಬರ್ 20) ಸುದ್ದಿಗೋಷ್ಠಿ ನಡೆಸಿದ ಅವರು, ಆತ ನಕ್ಸಲ್ ನಾಯಕ ಅಲ್ಲ. ಚಳವಳಿಯ ಹಾದಿಯಲ್ಲಿದ್ದ ಆದಿವಾಸಿ ಯುವಕ. ಆದ್ದರಿಂದ ಈ ಎನ್‌ಕೌಂಟರ್‌ ಬಗ್ಗೆ ನ್ಯಾಯ ಸಮ್ಮತ ರೀತಿಯಲ್ಲಿ ಸ್ವತಂತ್ರ ತನಿಖೆಯಾಗಬೇಕು ಎಂದು ಹೇಳಿದರು.

ಮಾಜಿ ನಕ್ಸಲ್ ನಾಯಕ ನೂರ್‌ ಶ್ರೀಧರ್‌ ಹೇಳಿದ್ದಿಷ್ಟು

ಎನ್‌ಕೌಂಟರ್‌ ಮಾದರಿ ಹೃದಯ ಹೀನ ನಡವಳಿಕೆಗಳನ್ನು ಪ್ರದರ್ಶಿಸುವುದರಿಂದ ಮಲೆನಾಡಿನ ಆದಿವಾಸಿ ಸಮುದಾಯದ ಯುವಕರು ಮತ್ತೆ ನಕ್ಸಲ್ ಚಟುವಟಿಕೆಗಳ ಕಡೆಗೆ ವಾಲಬಹುದು. ಆ ರೀತಿ ಆಗದಂತೆ ತಡೆಯುವ ಹೊಣೆಗಾರಿಕೆ ಸರ್ಕಾರದ ಮೇಲೆ ಇದೆ. ವಿಕ್ರಂ ಗೌಡ ತನ್ನ ಪಾಲಕರ 14 ಗುಂಟೆ ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದ. ಆಗ ಹೋರಾಟಕ್ಕೆ ಇಳಿದಾತ. ಇದೇ ಕಾರಣಕ್ಕೆ ಪೊಲೀಸರು ಆತನಿಗೆ ಮತ್ತು ಆತನ ಕುಟುಂಬಕ್ಕೆ ಅನೇಕ ಕಿರುಕುಳ ನೀಡಿದರು. ಇದರಿಂದಾಗಿಯೇ ವಿಕ್ರಂ ಗೌಡ ಮತ್ತು ಇತರರು ಕಾಡು ಸೇರುವಂತಾಯಿತು ಎಂದು ನೂರ್ ಶ್ರೀಧರ್ ಪ್ರತಿಪಾದಿಸಿದ್ದಾಗಿ ಕನ್ನಡ ಪ್ರಭ ವರದಿ ಮಾಡಿದೆ.

ನಕ್ಸಲರ ಪುನರ್ವಸತಿ ಯೋಜನೆ ಏನಾಯಿತು, ನಿಲಗುಳಿ ಪದ್ಮನಾಭ ಅಲೆಯುತ್ತಿರುವುದೇಕೆ

ನಕ್ಸಲ್ ಚಟುವಟಿಕೆ ಬಿಟ್ಟು ಮುಖ್ಯವಾಹಿನಿಗೆ ಸೇರ್ಪಡೆಯಾಗಬೇಕಾದರೆ ಶರಣಾಗಬೇಕು ಎನ್ನುತ್ಥಾರೆ. 2014-2018 ರ ನಡುವೆ ನಾನು, ಸಿರಿಮನೆ ನಾಗರಾಜ್ ಸೇರಿ ಅನೇಕರು ಮುಖ್ಯವಾಹಿನಿಗೆ ಬಂದೆವು. ನಾವು ಹೇಗೋ ಕಾನೂನು ಹೋರಾಟ ನಡೆಸಿದೆವು. ಆದರೆ ಈ ಪ್ಯಾಕೇಜ್ ಮೇಲೆ ವಿಶ್ವಾಸ ಬರುತ್ತಿಲ್ಲ. ಕನ್ಯಾಕುಮಾರಿ ಎಂಬ ಯುವತಿಯ ಮೇಲೆ ಆಧಾರರಹಿತ 58 ಕೇಸ್ ಹಾಕಿ ಜೈಲಿಗೆ ಕಳಿಸಿದ್ದಾರೆ. ನಿಲಗುಳಿ ಪದ್ಮನಾಭ ಎಂಬುವರು ಹೊರಗೆ ಬಂದು 8 ವರ್ಷಗಳಾಗಿವೆ. ಈಗಲೂ ನ್ಯಾಯಾಲಯಕ್ಕೆ ಅಲೆಯುತ್ತಾರೆ. ಅವರಿಗೆ ಸರ್ಕಾರದಿಂದ ನೆರವು, ಮನೆ, ಕೆಲಸ ಯಾವುದೂ ಸಿಕ್ಕಿಲ್ಲ. ಇದೇ ರೀತಿ ಚಳವಳಿ ಬಿಟ್ಟು ಹೊರಬಂದವರ ಅನೇಕರ ಜೀವನ ಕಷ್ಟಕ್ಕೆ ಸಿಲುಕಿದೆ ಎಂದು ನೂರ್ ಶ್ರೀಧರ್ ಹೇಳಿದರು.

ನಕ್ಸಲರು ಕಾನೂನು ಚೌಕಟ್ಟಿನಲ್ಲಿ ಬದುಕಬೇಕು ಎಂದ ಮಾಜಿ ನಕ್ಸಲ್‌ ಅಗಲಗಂಡಿ ವೆಂಕಟೇಶ್

ನಕ್ಸಲರು ಸಮಾಜದ ಆಸ್ತಿ. ಸ್ವಾರ್ಥ ಇಲ್ಲದೆ ಕೆಲಸ ಮಾಡುವವರು. ಅವರು ಮುಖ್ಯವಾಹಿನಿಗೆ ಬಂದು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಬೇಕು. ಬಂದೂಕಿನ ಮೂಲಕ ಉತ್ತರ ಕಂಡುಕೊಳ್ಳಬಹುದು ಎಂಬ ಭ್ರಮ ಬಿಟ್ಟುಬಿಡಬೇಕು. ಪ್ರಜಾತಾಂತ್ರಿಕ, ಕಾನೂನಾತ್ಮಕ ಅಡಿಯಲ್ಲೇ ಈ ವ್ಯವಸ್ಥೆ ವಿರುದ್ಧ ಹೋರಾಡಬೇಕು. ಇನ್ನುಳಿದ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸರ್ಕಾರ ನೇಮಿಸಿರುವ ವೇದಿಕೆ ಅಥವಾ ಕೋರ್ಟಿಗೆ ಶರಣಾಗಬೇಕು ಎಂದು ಮಾಜಿ ನಕ್ಸಲ್‌ ಅಗಲಗಂಡಿ ವೆಂಕಟೇಶ್ ಕೊಪ್ಪ ತಾಲೂಕು ಅಗಲಗಂಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾಗಿ ಕನ್ನಡ ಪ್ರಭ ವರದಿ ಮಾಡಿದೆ.

ವಿಕ್ರಂ ಗೌಡ ಮತ್ತು ನಾನು 2002ರಲ್ಲಿ ಒಳ್ಳೆಯ ಸ್ನೇಹಿತರು. ಅವರು, ಕಡು ಬಡತನದಿಂದ ಬಂದವರು. ಬಹಳ ಕಷ್ಟಪಟ್ಟು ಜೀವನ ನಡೆಸುತ್ತಿದ್ದ ಕುಟುಂಬ ಅವರದ್ದು. ಆತ ಕ್ರೂರಿ ಅಲ್ಲ. ನಗುನಗುತ್ತ ಇರುವಾತ. ಮಲೆನಾಡಿನ ಸಮಸ್ಯೆ ಬಗೆಹರಿಸದೆ ಅದನ್ನು ಇನ್ನಷ್ಟು ಜಟಿಲಗೊಳಿಸುತ್ತಿರುವ ಕರ್ನಾಟಕ ಸರ್ಕಾರವೇ ಇವೆಲ್ಲದಕ್ಕೂ ಕಾರಣ. ಸರ್ಕಾರ ಶರಣಾದವರಿಗೆ ಪರಿಹಾರದ ಪ್ಯಾಕೇಜ್‌ನಡಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಮಾಜಿ ನಕ್ಸಲ್ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ವರದಿ ಹೇಳಿದೆ.

Whats_app_banner