ಎಸ್ಕಾಂ ತಂತ್ರಾಂಶ ಉನ್ನತೀಕರಣ; ಮಾರ್ಚ್ ತಿಂಗಳ ಕರೆಂಟ್ ಬಿಲ್ ತಡವಾಗಿ ಕಟ್ಟಿದ್ರೂ ದಂಡ ಇಲ್ಲ, ಫ್ಯೂಸ್ ಕಿತ್ಕೊಂಡು ಹೋಗಲ್ಲ
ಕರ್ನಾಟಕದಲ್ಲಿ ಎಸ್ಕಾಂಗಳ ತಂತ್ರಾಂಶ ಉನ್ನತೀಕರಣ ಪ್ರಗತಿಯಲ್ಲಿದೆ. ಹೀಗಾಗಿ ಆನ್‌ಲೈನ್ ಪಾವತಿಗಳಿಗೆ ತೊಂದರೆ ಆಗಿದೆ. ಆದ್ದರಿಂದ ನಗರವಾಸಿ ಗ್ರಾಹಕರು ಮಾರ್ಚ್ ತಿಂಗಳ ಕರೆಂಟ್ ಬಿಲ್ ತಡವಾಗಿ ಕಟ್ಟಿದ್ರೂ ದಂಡ ಇಲ್ಲ, ಫ್ಯೂಸ್ ಕಿತ್ಕೊಂಡು ಹೋಗಲ್ಲ ಎಂದು ಇಂಧನ ಇಲಾಖೆ ಹೇಳಿದೆ. ಇದರ ವಿವರ ಇಲ್ಲಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಸಲುವಾಗಿ ಮಾರ್ಚ್ 10 ರಿಂದ 19 ರವರೆಗೆ ಎಲ್ಲಾ 5 ಎಸ್ಕಾಂಗಳಲ್ಲಿ ನಗರ ಪ್ರದೇಶಗಳ ಸ್ಥಗಿತಗೊಂಡಿದ್ದ ಆನ್‌ಲೈನ್ ವಿದ್ಯುತ್ ಸೇವೆಗಳು ಇದೀಗ ಹಂತ ಹಂತವಾಗಿ ಪುನಾರಂಭಗೊಳ್ಳುತ್ತಿವೆ. ಈ ತಿಂಗಳ 30 ರೊಳಗೆ ಎಲ್ಲಾ ಆನ್‌ಲೈನ್ ಸೇವೆಗಳು ಯಥಾಸ್ಥಿತಿಗೆ ಬರಲಿದ್ದು ಗ್ರಾಹಕರು ಆತಂಕ ಪಡಬೇಕಿಲ್ಲ ಎಂದು ಇಂಧನ ಇಲಾಖೆ ತಿಳಿಸಿದೆ.
ಸಾಫ್ಟ್ ವೇರ್ ಉನ್ನತೀಕರಣ ಸಂದರ್ಭದ ಅವಧಿಯಲ್ಲಿ ವಿದ್ಯುತ್ ಬಿಲ್ ವಿಳಂಬ ಪಾವತಿಗೆ ಬಡ್ಡಿ ವಿಧಿಸುವುದಿಲ್ಲ. ಈ ಸಂದರ್ಭದಲ್ಲಿ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.
ತಂತ್ರಾಂಶಗಳ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ಜಕಾತಿ ಬದಲಾವಣೆ ಸೇರಿ ಯಾವುದೇ ಆನ್‌ಲೈನ್ ಸೇವೆಗಳು ವಿದ್ಯುತ್ ಬಳಕೆದಾರರಿಗೆ ಲಭ್ಯವಿರಲಿಲ್ಲ.
ಮಾರ್ಚ್ 30 ರೊಳಗೆ ಆನ್‌ಲೈನ್ ವಿದ್ಯುತ್ ಸೇವೆಗಳು ಯಥಾಸ್ಥಿತಿಗೆ
ಮಾರ್ಚ್ 20ರಂದು ಆನ್ ಲೈನ್ ಸೇವೆಗಳನ್ನು ಮತ್ತೆ ಆರಂಭ ಮಾಡಲಾಗಿತ್ತು. ಆದರೆ ಕಳೆದ 10 ದಿನಗಳ ಕಾಲ ಸೇವೆ ಸ್ಥಗಿತಗೊಂಡಿದ್ದ ಕಾರಣ, ಎಲ್ಲಾ ಗ್ರಾಹಕರು ಕಳೆದ ಎರಡು ದಿನಗಳಿಂದ ಒಂದೇ ಬಾರಿ ವಿದ್ಯುತ್ ಬಿಲ್ ಪಾವತಿಸಲು ಎಸ್ಕಾಂಗಳ ಕೌಂಟರುಗಳಿಗೆ ದೌಡಾಯಿಸಿದ್ದರಿಂದ ಸರ್ವರ್ ಓವರ್‌ಲೋಡ್ ಆಗಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದನ್ನು ಹಂತ ಹಂತವಾಗಿ ಸರಿಪಡಿಸುವ ಕೆಲಸ ನಡೆಯುತ್ತಿದ್ದು, ಮಾರ್ಚ್ 30 ರೊಳಗೆ ಆನ್‌ಲೈನ್ ವಿದ್ಯುತ್ ಸೇವೆಗಳು ಯಥಾಸ್ಥಿತಿಗೆ ಬರಲಿವೆ ಎಂದು ಇಂಧನ ಇಲಾಖೆ ತಿಳಿಸಿದೆ.
ಈ ಸೇವಾ ಸ್ಥಗಿತ ಅವಧಿಯಲ್ಲಿ ಬಿಲ್ ಪಾವತಿಸಲು ಅಥವಾ ಇತರ ವಿದ್ಯುತ್ ಸೇವೆಗಳನ್ನು ಪಡೆಯಲು ವಿದ್ಯುತ್ ಬಳಕೆದಾರರಿಗೆ ಸಾಧ್ಯವಾಗಿಲ್ಲ. ಹಾಗಾಗಿ ವಿಳಂಬ ವಿದ್ಯುತ್ ಬಿಲ್ ಪಾವತಿಗೆ ಯಾವುದೇ ದಂಡ ಅಥವಾ ಬಡ್ಡಿ ವಿಧಿಸದಿರಲು ನಿರ್ಧರಿಸಲಾಗಿದೆ ಎಂದು ವಿದ್ಯುತ್ ಇಲಾಖೆ ತಿಳಿಸಿದೆ.
ತಂತ್ರಾಂಶ ಸ್ಥಿರತೆ 15 ದಿನಗಳ ಕಾಲಾವಕಾಶ ಬೇಕು
ತಂತ್ರಾಂಶವು ಕಾರ್ಯಾರಂಭಗೊಂಡ ನಂತರ ಅದು ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದೂ ಇಲಾಖೆ ಗ್ರಾಹಕರಿಗೆ ಮಾಹಿತಿ ನೀಡಿದೆ.
ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣಕ್ಕಾಗಿ ಮಾರ್ಚ್ 10 ರಿಂದ 19 ರವರೆಗೆ ಬೆಸ್ಕಾಂ,ಸೆಸ್ಕ್, ಮೆಸ್ಕಾಂ, ಹೆಸ್ಕಾಂ ವ್ಯಾಪ್ತಿಯ ಹಲವಾರು ನಗರಗಳಲ್ಲಿ ಆನ್‌ಲೈನ್ ಸೇವೆ ಲಭ್ಯವಿರಲಿಲ್ಲ. ಆನ್ ಲೈನ್ ಸೇವೆಗಳು ಮಾತ್ರವೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವೇ ಹೊರತು ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಅಥವಾ ಕಡಿತವಾಗಿರಲಿಲ್ಲ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ಸುಧಾಮೂರ್ತಿ ಮನೆಯ ಒಗ್ಗಟ್ಟು ಕೆಡಿಸಲು ಬಂದ ಭಾರ್ಗವಿಯೇ ಸಹನಾಳ ತಾಯಿ, ಬೃಂದಾವನದಲ್ಲೊಂದು ಬಿಗ್ ಟ್ವಿಸ್ಟ್
2) ಸುರೇಶನ ಮನೆಯಲ್ಲಿರುವುದು ಒಟ್ಟು ಎಷ್ಟು ಜನ? ಯೋಚ್ನೆ ಮಾಡಿ ಉತ್ತರ ಹೇಳಿ; ನಿಮ್ಮ ಜಾಣ್ಮೆಗೊಂದು ಸವಾಲು
3) ಬೆಂಗಳೂರಿನ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ; ಏನಿದು ಏರಿಯೇಟರ್? ಇದು ನೀರು ಉಳಿಸಲು ಹೇಗೆ ಸಹಾಯ ಮಾಡುತ್ತೆ; ಇಲ್ಲಿದೆ ವಿವರ
4) ರಷ್ಯಾದಲ್ಲಿ ರಕ್ತದೋಕುಳಿ; ಮಾಸ್ಕೋ ಸಂಗೀತ ಸಭಾಂಗಣದ ಮೇಲೆ ಐಸಿಸ್ ದಾಳಿಗೆ 70 ಕ್ಕೂ ಹೆಚ್ಚು ಸಾವು, 10 ಅಂಶಗಳು
5) 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಸಾಗಲಿರುವ ಶನಿ; ಈ 4 ರಾಶಿಯವರು ಪ್ರತಿ ಹಂತದಲ್ಲೂ ಜಾಗರೂಕರಾಗಿರಬೇಕು