ಬೆಂಗಳೂರಿನಲ್ಲಿ ನಾಯಿ ಕಾಟ, 6 ತಿಂಗಳಲ್ಲಿ 14 ಸಾವಿರ ಜನರಿಗೆ ಕಚ್ಚಿದ ಶ್ವಾನಗಳು; ನಿಯಂತ್ರಣಕ್ಕೆ ಬಿಬಿಎಂಪಿ ಯೋಜನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ6 ತಿಂಗಳಲ್ಲಿ ಅಂದರೆ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ13,748 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆಜಾಲಹಳ್ಳಿ ವ್ಯಾಪ್ತಿಯಲ್ಲಿ ನಾಯಿ ಕಡಿದಿದ್ದರಿಂದ ನಿವೃತ್ತ ಶಿಕ್ಷಕಿಯೊಬ್ಬರು ಅಸು ನೀಗಿದ್ದರು. ಈ ಪ್ರಕರಣದ ನಂತರ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. (ವರದಿ:ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಉದ್ಯಾನನಗರಿ ಎಂದೇ ಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಯಿ ಕಡಿತದ ಸುದ್ದಿ ವರದಿಯಾಗದೇ ದಿನ ಪೂರ್ಣಗೊಳ್ಳುವುದಿಲ್ಲವೇನೋ ಎಂದು ಅನ್ನಿಸಿದರೆ ಅದು ಅತಿಶಯೋಕ್ತಿಯೇನಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಂದಿಲ್ಲೊಂದು ಕಡೆ ಬೀದಿ ನಾಯಿಗಳಿಂದ ಸಾರ್ವಜನಿಕರು ಕಡಿಸಿಕೊಳ್ಳುವ ಸುದ್ದಿ ವರದಿಯಾಗುತ್ತಲೇ ಇರುತ್ತದೆ. ಕಳೆದ 6 ತಿಂಗಳಲ್ಲಿ ಬೆಂಗಳೂರಿನಲ್ಲಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ನೋಡಿದರೆ ಬೆಚ್ಚಿ ಬೀಳುವಂತಾಗುತ್ತದೆ.
ಹೌದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಲ್ಲಿ ಅಂದರೆ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ 13,748 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆ ಜಾಲಹಳ್ಳಿ ವ್ಯಾಪ್ತಿಯಲ್ಲಿ ನಾಯಿ ಕಡಿದಿದ್ದರಿಂದ ನಿವೃತ್ತ ಶಿಕ್ಷಕಿಯೊಬ್ಬರು ಅಸು ನೀಗಿದ್ದರು. ಈ ಪ್ರಕರಣದ ನಂತರ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನಾಯಿಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಬಿಬಿಎಂಪಿ ಕೆಲವೊಂದು ಕ್ರಮಗಳನ್ನು ಘೋಷಿಸಿತ್ತು.
ಪಶುಸಂಗೋಪನೆ ಇಲಾಖೆಯ ವರದಿಗಳ ಪ್ರಕಾರ, ಮೇ ತಿಂಗಳಲ್ಲಿ ಅತಿ ಹೆಚ್ಚು ಅಂದರೆ 3,047 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ಅತಿ ಕಡಿಮೆ ಪ್ರಕರಣಗಳು ಆಗಸ್ಟ್‌ನಲ್ಲಿ ವರದಿಯಾಗಿದ್ದು, ಈ ತಿಂಗಳಲ್ಲಿ 1,934 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ವಾರ್ಷಿಕ 30 ಸಾವಿರದಿಂದ 35 ಸಾವಿರ ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತಿವೆ. ಆಗಸ್ಟ್ 28ರಂದು ಬೆಂಗಳೂರಿನ ಉತ್ತರ ಭಾಗದ ಜಾಲಹಳ್ಳಿಯಲ್ಲಿ 76 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರು ವಾಯುವಿಹಾರ ನಡೆಸುತ್ತಿದ್ದಾಗ ಸುಮಾರು 12ಕ್ಕೂ ಹೆಚ್ಚು ಬೀದಿನಾಯಿಗಳು ಅವರ ಮೇಲೆ ಎರಗಿ ದೇಹದ ಬಹುತೇಕ ಕಡೆ ಕಚ್ಚಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ.
ಸೆಪ್ಟಂಬರ್ 28ರಂದು ಜಾಲಹಳ್ಳಿಯ ಡಿಫೆನ್ಸ್ ಕಾಲೋನಿಯಲ್ಲಿ ಇಬ್ಬರು ಬಾಲಕಿಯರು ನಡೆದುಕೊಂಡು ಹೋಗುತ್ತಿದ್ದಾಗ ಓರ್ವ ಬಾಲಕಿಯ ಕಾಲನ್ನು ನಾಯಿಯೊಂದು ಕಚ್ಚಿತ್ತು. ಕೆಲವು ಕ್ಷಣಗಳ ನಂತರ ನಾಯಿಗಳ ಗುಂಪೊಂದು ಮತ್ತೆ ಅದೇ ಬಾಲಕಿಯ ಮೇಲೆ ಆಕ್ರಮಣ ಮಾಡಲು ಪ್ರಯತ್ನ ನಡೆಸಿದವಾದರೂ ಅಲ್ಲಿಯೇ ಇದ್ದ ಸಾರ್ವಜನಿಕರು ಬಾಲಕಿಯನ್ನು ರಕ್ಷಿಸಿದ್ದರು. ಕೂಡಲೇ ಆ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಈಗ ಗುಣಮುಖಳಾಗಿದ್ದಾಳೆ. ಈ ಪ್ರಕರಣವೂ ತಡವಾಗಿ ಬೆಳಕಿಗೆ ಬಂದಿತ್ತು.
ಆಹಾರ ಇಲ್ಲದೆ ನಾಯಿಗಳು ಹಸಿದುಕೊಂಡಿರುತ್ತವೆ. ಆಗ ನಾಯಿಗಳು ಆಕ್ರಮಣಕಾರಿ ಮನೋಭಾವವನ್ನು ಬೆಳೆಸಿಕೊಳ್ಳುತ್ತವೆ. ಇದರ ಪರಿಣಾಮ ಮನುಷ್ಯರನ್ನು ಕಚ್ಚುತ್ತವೆ. ಇಂತಹ ಘಟನೆಗಳು ಮುಂಜಾನೆ ಇಲ್ಲವೇ ಸಂಜೆಯ ವೇಳೆಯೇ ಹೆಚ್ಚು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ವಿಶ್ಲೇಶಿಸಿದ್ದಾರೆ. ನಾಯಿಗಳು ಕಡಿಯುವುದನ್ನು ತಪ್ಪಿಸಲು ಬಿಬಿಎಂಪಿ ನಾಯಿಗಳಿಗೆ ಆಹಾರ ಹಾಕಲು ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿದೆ. ಸಾರ್ವಜನಿಕರು ಕೈಜೋಡಿಸಿದರೆ ನಾಯಿ ಕಡಿತದ ಪ್ರಕರಣಗಳು ಕಡಿಮೆಯಾಗಬಹುದು ಎಂದು ಬಿಬಿಎಂಪಿ ನಿರೀಕ್ಷಿಸಿದೆ.
ಮತ್ತೊಂದು ಕಡೆ ಬಿಬಿಎಂಪಿ, ಪ್ರಾಣಿ ಜನನ ನಿಯಂತ್ರಣಾ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದು, ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಲು ಯೋಜನೆ ರೂಪಿಸಿದೆ. ಇದರಿಂದ ನಾಯಿಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಿದೆ. ರೇಬಿಸ್ ರೋಗ ಹರಡದಂತೆ ನಾಯಿಗಳಿಗೆ ಲಸಿಕೆ ಕೂಡಾ ನೀಡಲಾಗುತ್ತಿದೆ. ನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸಲಾಗುತ್ತಿದೆ. ಇದರಿಂದ ಲಸಿಕೆ, ಸಂತಾನಶಕ್ತಿ ಹರಣ ಚಿಕಿತ್ಸೆ ಮತ್ತು ನಾಯಿಗಳ ಸ್ಥಳ ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ, ಪ್ರಾಣಿ ದಯಾ ಸಂಘಗಳು ಬೇರೆಯದ್ದೆ ಆದ ಆರೋಪ ಮಾಡುತ್ತಿವೆ. ಸಾಕು ನಾಯಿಗಲೂ ಮತ್ತು ಬೀದಿ ನಾಯಿಗಳನ್ನು ಗುರುತಿಸಲು ಬಿಬಿಎಂಪಿ ಬಳಿ ಯಾವುದೇ ಯೋಜನೆಗಳಿಲ್ಲ. ನಾಯಿ ಕಡಿತವನ್ನೂ ಉತ್ಪ್ರೇಕ್ಷೆ ಮಾಡಲಾಗುತ್ತಿದೆ. ನಾಯಿಗಳಿಗೆ ಊಟ ಹಾಕಲು ನಿರ್ದಿಷ್ಟ ಸ್ಥಳ ಗುರುತಿಸುವುದರಿಂದ ನಾಯಿಗಳು ಪರಸ್ಪರ ಜಗಳವಾಡುವದಿಲ್ಲ. ಇದರಿಂದ ನಾಯಿ ಕಡಿತದ ಸಂಖ್ಯೆ ಕಡಿಮೆಯಾಗಬಹುದು ಎಂದೂ ಪ್ರಾಣಿ ದಯಾ ಸಂಘಗಳ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.