ವಾಲ್ಮೀಕಿ ನಿಗಮ ಹಗರಣ; ರಾಜೀನಾಮೆ ನೀಡಲು ಸಚಿವ ಬಿ ನಾಗೇಂದ್ರಗೆ ಸಿಎಂ ಸಿದ್ದರಾಮಯ್ಯ ಸೂಚನೆ-ವರದಿ
ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ರಾಜಕೀಯವಾಗಿ ಸಂಚಲನ ಮೂಡಿಸಿದೆ. ಇದೇ ಹಗರಣದಲ್ಲಿ ಸಚಿವ ಬಿ ನಾಗೇಂದ್ರ ಅವರ ರಾಜೀನಾಮೆಗೆ ವಿಪಕ್ಷಗಳು ಒತ್ತಡ ಹೇರಿದ್ದರು. ಇದರ ಬೆನ್ನಿಗೆ ಇಂದು (ಮೇ 31), ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿ ನಾಗೇಂದ್ರಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಬಂದಿದೆ.
ಬೆಂಗಳೂರು: ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈಗ ರಾಜಕೀಯ ಸಂಚಲನ ಉಂಟುಮಾಡಿದೆ. ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ವಿಪಕ್ಷ ಬಿಜೆಪಿ ಪಟ್ಟು ಹಿಡಿದು ಗಡುವನ್ನೂ ನೀಡಿತ್ತು. ಈ ನಡುವೆ, ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಸಚಿವರ ತಪ್ಪು ಮಾಡಿದ್ದರೆ ಅವರೂ ರಾಜೀನಾಮೆ ನೀಡ್ತಾರೆ ಎಂದು ಹೇಳಿದ್ದರು.
ಇದರ ಬೆನ್ನಿಗೆ ಇಂದು (ಮೇ 31) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪದ ಕಾರಣ ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ (B Nagendra) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸೂಚಿಸಿರುವುದಾಗಿ ಟಿವಿ9 ಕನ್ನಡ ವರದಿ ಮಾಡಿದೆ.
ಇದೇ ಹಗರಣಕ್ಕೆ ಸಂಬಂಧಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಿನ್ನೆ (ಮೇ 30) ಸಭೆ ನಡೆಸಿದ್ದರು. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯುವ ವಿಚಾರ ಚರ್ಚೆ ನಡೆಸಿದ ಅವರು, ಸರ್ಕಾರಕ್ಕೆ ಮುಖಭಂಗವಾಗಬಾರದು ಎಂಬುದರಲ್ಲಿ ಒಮ್ಮತಕ್ಕೆ ಬಂದ ಕಾರಣ ಈ ರೀತಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಅಧಿಕಾರಿಯ ಆತ್ಮಹತ್ಯೆ ಕೇಸ್ ತನಿಖೆ ಪೂರ್ಣಗೊಂಡ ಬಳಿಕ ನಿರಪರಾಧಿತ್ವ ಸಾಬೀತಾಗುವ ತನಕ ಸಚಿವ ಸ್ಥಾನದಿಂದ ದೂರ ಉಳಿಯುವಂತೆ ನಾಗೇಂದ್ರ ಅವರಿಗೆ ಸೂಚಿಸಲು ತೀರ್ಮಾನ ತೆಗೆದುಕೊಂಡರು. ಈ ವಿಚಾರ ಈಗಾಗಲೇ ಸಚಿವ ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವರದಿ ಹೇಳಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.