ಬೆಂಗಳೂರು ಮಳೆ; ಉತ್ತರ ಬೆಂಗಳೂರಲ್ಲಿ ಭಾರಿ ಮಳೆ, 100ಕ್ಕೂ ಹೆಚ್ಚು ಮನೆ ಜಲಾವೃತ್ತ, ವಿವಿಧೆಡೆ ಸಂಚಾರ ದಟ್ಟಣೆ
ಬೆಂಗಳೂರಲ್ಲಿ ಭಾರಿ ಮಳೆ ಮುಂದುವರಿದಿದ್ದು, ವಿವಿಧ ಪ್ರದೇಶಗಳಲ್ಲಿ ಇನ್ನೂ ನಿಧಾನಗತಿಯ ಸಂಚಾರ ಇದೆ. ಬೆಂಗಳೂರು ಮಳೆಯ ಕಾರಣ ಉತ್ತರ ಬೆಂಗಳೂರು ಭಾಗದಲ್ಲಿ 100ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಪ್ರವಾಹ ಪರಿಸ್ಥಿತಿ ಇದ್ದು, ಅದರ ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಪ್ರಸ್ತುತ ಹಿಂಗಾರು ಮಳೆಯ ಪರಿಣಾಮವನ್ನು ಎದುರಿಸುತ್ತಿದೆ. ಕಳೆದ ನಾಲ್ಕು ದಿನಗಳಿಂದ ಸಾಧಾರಣದಿಂದ ಭಾರಿ ಮಳೆ ಮುಂದುವರಿದಿದೆ. ಸ್ಥಿರ ಮಳೆಯ ಕಾರಣ ರಸ್ತೆಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡುಬಂದಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಭಾನುವಾರ ಮಳೆ ಕೊಂಚ ವಿರಾಮ ಪಡೆದುಕೊಂಡಿತ್ತಾದರೂ, ಸೋಮವಾರ ನಸುಕಿನಲ್ಲಿ ಮಳೆ ತೀವ್ರಗೊಂಡಿದೆ. ಮಂಗಳವಾರವೂ ಮಳೆ ಸುರಿದಿದೆ. ಇದರ ಪರಿಣಾಮ ವಿಶೇಷವಾಗಿ ಐಟಿ ಸೆಕ್ಟರ್ ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಉದ್ಯೋಗಿಗಳಿಗೆ ನೀಡಬೇಕಾಗಿ ಬಂತು. ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಶಾಂತಿನಗರದ ಆಸ್ಟಿನ್ ಟೌನ್ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದವು. ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ನೀರು ಒಳನುಗ್ಗಿದ್ದು ಜನ ಪಾಲಿಕೆ ವಿರುದ್ಧ ಹಿಡಿಶಾಪ ಹಾಕಿದ್ದಲ್ಲದೆ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ದ ಹಿಂದೂ ವರದಿ ಮಾಡಿದೆ. ಮಳೆನೀರು ಚರಂಡಿಯ ಅಸಾಮರ್ಥ್ಯದಿಂದ ನಾವು ವರ್ಷಗಳಿಂದ ಪ್ರವಾಹ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸರಿಪಡಿಸುವಂತೆ ಬಿಬಿಎಂಪಿಗೆ ಲೆಕ್ಕವಿಲ್ಲದಷ್ಟು ಬಾರಿ ಮನವಿ ಮಾಡಿದರೂ ಏನೂ ಆಗಿಲ್ಲ ಎಂದು ಸ್ಥಳೀಯರು ಹೇಳಿದ್ದಾಗಿ ವರದಿ ವಿವರಿಸಿದೆ.
ರೈನ್‌ಬೋ ಡ್ರೈವ್ ಲೇಔಟ್‌ನಲ್ಲಿ ಪ್ರವಾಹ
ಪ್ರತಿ ಮಳೆಗಾಲದಲ್ಲೂ ಪ್ರವಾಹಕ್ಕೆ ಕುಖ್ಯಾತವಾಗಿರುವ ರೈನ್‌ಬೋ ಡ್ರೈವ್ ಲೇಔಟ್ ಈ ಸಲವೂ ಭಾರೀ ಮಳೆಯಿಂದಾಗಿ ಜಲಾವೃತವಾಗಿ ತೊಂದರೆಗೆ ಸಿಲುಕಿದೆ. ಕ್ಲಬ್‌ಹೌಸ್ ಪ್ರದೇಶದ ಬಳಿ ನಿವಾಸಿಗಳು ಬಿಬಿಎಂಪಿ ಮತ್ತು ಅವರ 26 ವರ್ಷದ ಸಮುದಾಯ ನಿರ್ಮಾಪಕರದ ನಿರ್ಲಕ್ಷ್ಯದ ಬಗ್ಗೆ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸುತ್ತಿರುವುದಾಗಿ ವರದಿ ವಿವರಿಸಿದೆ.
ಚಲ್ಲಘಟ್ಟ, ಹೊರವರ್ತುಲ ರಸ್ತೆಯೂ ಪ್ರವಾಹಪೀಡಿತ
ರಾತ್ರಿ ಸುರಿದ ಮಳೆಯಿಂದಾಗಿ ಬೆಳಗ್ಗೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಚಾಲಕರು ಜಲಾವೃತ ಮತ್ತು ಗುಂಡಿ ಬಿದ್ದ ರಸ್ತೆಗಳಲ್ಲಿ ಹರಸಾಹಸ ಮಾಡುತ್ತ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೊರ ವರ್ತುಲ ರಸ್ತೆ (ORR) ಕಠಿಣ ಪರಿಸ್ಥಿತಿ ಇತ್ತು. ಬೆಂಗಳೂರು ನಗರದ ಸಂಚಾರ ಪೊಲೀಸರು ಚಲ್ಲಘಟ್ಟ ರಸ್ತೆಯಲ್ಲಿ ಕೆಂಪಾಪುರ ಕಡೆಗೆ ನಿಧಾನಗತಿ ಸಂಚಾರ ಇರುವುದಾಗಿ ಎಚ್ಚರಿಸಿದ್ದರು. ಪ್ರವಾಹದ ಕಾರಣಕ್ಕೆ ವಿಂಡ್ ಟನಲ್ ರಸ್ತೆಯನ್ನು ತಾತ್ಕಲಿಕವಾಗಿ ಮುಚ್ಚಲಾಗಿತ್ತು.
ಸದ್ಯ ಎಲ್ಲಿ ರಸ್ತೆ ಜಲಾವೃತ ಮತ್ತು ನಿಧಾನಗತಿ ಸಂಚಾರ
1) ಯಶವಂತಪುರ ಮೆಟ್ರೋ ನಿಲ್ದಾಣ ದಿಂದ ಗೋವರ್ಧನ ಕಡೆಗೆ.
2) ಆಡುಗೋಡಿ ಜಂಕ್ಷನ್ ನಿಂದ ಆನೆಪಾಳ್ಯ ಜಂಕ್ಷನ್ ಕಡೆಗೆ.
3) ಎಂಎಸ್ ಪಾಳ್ಯ ನಿಂದ ಯಲಹಂಕದ ಕಡೆಗೆ.
4) ದೊಡ್ಡಬೆಟ್ಟಹಳ್ಳಿ ಜಂಕ್ಷನ್ ನಿಂದ ಎಂಎಸ್ ಪಾಳ್ಯ ಕಡೆಗೆ.
5) ಭದ್ರಪ್ಪ ಲೇಔಟ್ ನಿಂದ BEL ಸರ್ಕಲ್ ಕಡೆಗೆ.
6) ವಾಟಾಳ್ ನಾಗರಾಜ್ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ.
7) ಸಾಗರ್ ಜಂಕ್ಷನ್ ನಿಂದ ಡೈರಿ ಸರ್ಕಲ್ ಕಡೆಗೆ.
8) ರೂಬಿ 2 ನಿಂದ ಜಿಡಿ ಮರದ ಕಡೆಗೆ.
9) ಮಂತ್ರಿ ಮಾಲ್ ನಿಂದ ಮಲ್ಲೇಶ್ವರಂ ಕಡೆಗೆ.
10) ಬಿ ನಾರಾಯಣಪುರ ನಿಂದ ಟಿನ್ ಫ್ಯಾಕ್ಟರಿ ಕಡೆಗೆ.
11) ಪ್ರಸನ್ನ ಜಂಕ್ಷನ್ ನಿಂದ ಬಸವ ಮಂಟಪ ಜಂಕ್ಷನ್ ಕಡೆಗೆ.
12) ಚಿಕ್ಕಪೇಟೆ ಮೆಟ್ರೋ ನಿಂದ ಚಿಕ್ಕಪೇಟೆ ವೃತ್ತದ ಕಡೆಗೆ.
13) ರಾಮಮೂರ್ತಿನಗರ ಜಂಕ್ಷನ್ ನಿಂದ ರಾಮಮೂರ್ತಿನಗರ ಮುಖ್ಯರಸ್ತೆಯ ಕಡೆಗೆ.
14) ವಿಂಡ್ಸರ್ ಮೇನರ್ ಜಂಕ್ಷನ್ ನಿಂದ ಪಿಜಿ ಹಳ್ಳಿ ಕಡೆಗೆ.
15) ನಾಯಂಡಹಳ್ಳಿ ಜಂಕ್ಷನ್ ನಿಂದ BEL ಕಡೆಗೆ.
16) ಬಿಇಎಲ್ ವೃತ್ತ ಸಾಹಿತ್ಯ ಕೂಟ.
17) ಬಾಷ್ಯಂ ವೃತ್ತದಿಂದ ವೈಯಾಲಿಕಾವಲ್ ಕಡೆಗೆ.
18) ಹೆಬ್ಬಾಳ ಪೊಲೀಸ್ ಠಾಣೆಯಿಂದ ವಿಮಾನ ನಿಲ್ದಾಣದ ಕಡೆಗೆ.
19) ಸಂಜಯ ನಗರದಿಂದ ವಿಮಾನ ನಿಲ್ದಾಣದ ಕಡೆಗೆ.
20) ಸಿಬಿಐ ಮೇಲ್ಸೇತುವೆಯಿಂದ ವಿಮಾನ ನಿಲ್ದಾಣದ ಕಡೆಗೆ.