ಬೆಂಗಳೂರಲ್ಲಿ ಇಂದು ಕೆಲವೆಡೆ ದಟ್ಟ ಮುಂಜಾನೆ ಮಂಜು, ವಿಮಾನ ಹಾರಾಟ ವಿಳಂಬ ಸಾಧ್ಯತೆ, ಕರ್ನಾಟಕ ಹವಾಮಾನ ವಿವರ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಇಂದು ಕೆಲವೆಡೆ ದಟ್ಟ ಮುಂಜಾನೆ ಮಂಜು, ವಿಮಾನ ಹಾರಾಟ ವಿಳಂಬ ಸಾಧ್ಯತೆ, ಕರ್ನಾಟಕ ಹವಾಮಾನ ವಿವರ ಹೀಗಿದೆ

ಬೆಂಗಳೂರಲ್ಲಿ ಇಂದು ಕೆಲವೆಡೆ ದಟ್ಟ ಮುಂಜಾನೆ ಮಂಜು, ವಿಮಾನ ಹಾರಾಟ ವಿಳಂಬ ಸಾಧ್ಯತೆ, ಕರ್ನಾಟಕ ಹವಾಮಾನ ವಿವರ ಹೀಗಿದೆ

ಬೆಂಗಳೂರು ಹವಾಮಾನ: ಬೆಂಗಳೂರು ನಗರ ಮತ್ತು ಗ್ರಾಮಾಂತರದ ಕೆಲವೆಡೆ ಇಂದು ದಟ್ಟ ಮುಂಜಾನೆ ಮಂಜು ಆವರಿಸಲಿದೆ. ಚಳಿ ಕೂಡ ಇರಲಿದೆ. ವಿಮಾನ ಹಾರಾಟ ವಿಳಂಬವಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಬಹುತೇಕ ಪ್ರದೇಶಗಳಲ್ಲಿ ಮುಂಜಾನೆ ಮಂಜು ಇರಲಿದ್ದು, ಚಳಿ, ಒಣಹವೆ ಇರಲಿದೆ. ಈ ದಿನದ ಕರ್ನಾಟಕ ಹವಾಮಾನ ವಿವರ ಹೀಗಿದೆ.

ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಇಂದು ಕೆಲವೆಡೆ ದಟ್ಟ ಮುಂಜಾನೆ ಮಂಜು, ವಿಮಾನ ಹಾರಾಟ ವಿಳಂಬ ಸೂಚನೆಗಳನ್ನು ವಿಮಾನ ಯಾನ ಕಂಪನಿಗಳು ಪ್ರಕಟಿಸಿವೆ. (ಸಾಂಕೇತಿಕ ಚಿತ್ರ)
ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಇಂದು ಕೆಲವೆಡೆ ದಟ್ಟ ಮುಂಜಾನೆ ಮಂಜು, ವಿಮಾನ ಹಾರಾಟ ವಿಳಂಬ ಸೂಚನೆಗಳನ್ನು ವಿಮಾನ ಯಾನ ಕಂಪನಿಗಳು ಪ್ರಕಟಿಸಿವೆ. (ಸಾಂಕೇತಿಕ ಚಿತ್ರ) (Pexels)

ಬೆಂಗಳೂರು: ಸದ್ಯ ಮಳೆ ದೂರಾಗಿದೆ. ಆದರೆ ಬೆಂಗಳೂರು ಸುತ್ತಮುತ್ತ ಹಲವೆಡೆ ದಟ್ಟವಾಗಿರುವ ಮುಂಜಾನೆ ಮಂಜು ಆವರಿಸುತ್ತಿದ್ದು, ವಾಹನ ಸಂಚಾರ ನಿಧಾನವಾಗುವಂತೆ ಮತ್ತು ವಿಮಾನ ಹಾರಾಟ ವಿಳಂಬವಾಗುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ (ನ.10) ಬೆಳಗ್ಗೆ 8.30ರ ತನಕವೂ ಮಂಜು ಆವರಿಸಿದ್ದು 100 ಮೀಟರ್ ಅಂತರದ ದೃಶ್ಯ ಕಾಣುತ್ತಿರಲಿಲ್ಲ. ಹೀಗಾಗಿ 15 ವಿಮಾನ ಹಾರಾಟ ವಿಳಂಬವಾಗಿತ್ತು. 6 ವಿಮಾನಗಳನ್ನು ಬೇರೆ ನಿಲ್ದಾಣಗಳತ್ತ ತಿರುಗಿಸಲಾಗಿತ್ತು. ಇಂದು ಕೂಡ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದ್ದು, ವಿಮಾನ ಪ್ರಯಾಣಿಕರು ಅಗತ್ಯಕ್ಕೆ ತಕ್ಕಂತೆ ಪ್ರಯಾಣ ಯೋಜನೆಗಳನ್ನು ಹೊಂದಿಸಿಕೊಳ್ಳಿ ಎಂದು ಇಂಡಿಗೋ ವಿಮಾನ ಯಾನ ಸಂಸ್ಥೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇಂದು ಕೂಡ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಕೆಲವೆಡೆ ಮುಂಜಾನೆ ಮಂಜು ಮತ್ತು ಚಳಿ ಅನುಭವಕ್ಕೆ ಬರಲಿದೆ. ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕರ್ನಾಟಕ ಹವಾಮಾನದ ವಿವರ ತಿಳಿಯೋಣ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಹವಾಮಾನ ಇಂದು; ಮುಂಜಾನೆ ಮಂಜು, ಮೋಡ ಕವಿದ ವಾತಾವರಣ

ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ ಅಪರಾಹ್ನ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ಪ್ರಕಾರ, ನಾಳೆ ಬೆಳಗ್ಗೆವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಮುಂಜಾನೆ ಮಂಜು, ಒಣಹವೆ ಇರಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮಂಜು ದಟ್ಟವಾಗಿ ಇರಲಿದ್ದು, ಚಳಿ ಹೆಚ್ಚಾಗಿರಲಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಶಿಯಸ್ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಶಿಯಸ್ ಇರಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ.

ಮುಂಜಾನೆ ಮಂಜು ಇರಬಹುದು ಎಂಬುದನ್ನು ಅಂದಾಜಿಸಿದ ಇಂಡಿಗೋ ಸಂಸ್ಥೆ ತನ್ನ ಬೆಳಗ್ಗೆ ವಿಮಾನದ ಪ್ರಯಾಣಿಕರಿಗೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪ್ರಯಾಣದ ಹೊಂದಾಣಿಕೆ ಮಾಡಿಕೊಳ್ಳುವಂತೆ ಸಂದೇಶ ರವಾನಿಸಿದೆ.

ಕರ್ನಾಟಕದ ಹವಾಮಾನ ಇಂದು

ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ನವೆಂಬರ್ 10) ಅಪರಾಹ್ನ ಪ್ರಕಟಿಸಿದ ಹವಾಮಾನ ಮುನ್ಸೂಚನೆ ಮಾಹಿತಿ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆಯು ಸಮುದ್ರ ಮಟ್ಟದಿಂದ 3.6 ಕಿ.ಮೀ ವರೆಗೆ ವಿಸ್ತರಿಸಿದೆ. ನವೆಂಬರ್ 10ರಂದು ಬೆಳಗ್ಗೆ 8.30ಕ್ಕೆ ಅದೇ ರೀತಿ ಮುಂದುವರಿದಿದ್ದು, ಅದರ ಪ್ರಭಾವದ ಕಾರಣ ಮುಂದಿನ 36 ಗಂಟೆಗಳ ಅವಧಿಯಲ್ಲಿ ಅಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಇದರಿಂದಾಗಿ ಮುಂದಿನ 2 ದಿನಗಳ ಅವಧಿಯಲ್ಲಿ ಅದು ತಮಿಳುನಾಡು/ ಶ್ರೀಲಂಕಾ ಕರಾವಳಿ ಕಡೆಗೆ ಪಶ್ಚಿಮಕ್ಕೆ ನಿಧಾನವಾಗಿ ಚಲಿಸುವ ಸಾಧ್ಯತೆ ಇದೆ.

ಚಂಡಮಾರುತದ ಪರಿಚಲನೆ ನೈಋತ್ಯ ಬಂಗಾಳ ಕೊಲ್ಲಿಯ ಪೂರ್ವ ಮಧ್ಯ ಬಂಗಾಳ ಕೊಲ್ಲಿಯವರೆಗೆ ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ವ್ಯಾಪಿಸಿದೆ. ದಕ್ಷಿಣ ಅರೇಬಿಯನ್ ಸಮುದ್ರದ ಮಧ್ಯ ಭಾಗಗಳಲ್ಲಿ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಮೀ ಎತ್ತರದಲ್ಲಿ ಕಡಿಮೆ ಗುರುತಿಸಲ್ಪಟ್ಟಿದೆ ಎಂದು ವರದಿ ಹೇಳಿದೆ.

ಇಂದು (ನವೆಂಬರ್ 11) ಪೂರ್ತಿ ಮತ್ತು ನಾಳೆ ಬೆಳಗ್ಗೆ ವರೆಗೆ ಒಣಹವೆ ಇರಲಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮುಂಜಾನೆ ಮಂಜು ಮತ್ತು ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ. ಕರ್ನಾಟಕದಲ್ಲಿ ನಿನ್ನೆ ಗರಿಷ್ಠ ಉಷ್ಣಾಂಶ 36.8 ಡಿ.ಸೆ ಕಾರವಾರದಲ್ಲಿ ಮತ್ತು ಕನಿಷ್ಠ ಉಷ್ಣಾಂಶ ದಾವಣಗೆರೆಯಲ್ಲಿ ದಾಖಲಾಗಿದೆ.

Whats_app_banner