ಹೀಗಿದೆ ನೋಡಿ ಸ್ವಿಗ್ಗಿ ಧೋರಣೆ: 10 ವರ್ಷಗಳಿಂದ ಕರ್ನಾಟಕದಲ್ಲಿದ್ದರೂ ಈ ಕಂಪನಿಗೆ ಕನ್ನಡ ಬೇಕಿಲ್ಲ, ಸ್ವಿಗ್ಗಿಗೆ ಚುರುಕು ಮುಟ್ಟಿಸಬೇಕಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಹೀಗಿದೆ ನೋಡಿ ಸ್ವಿಗ್ಗಿ ಧೋರಣೆ: 10 ವರ್ಷಗಳಿಂದ ಕರ್ನಾಟಕದಲ್ಲಿದ್ದರೂ ಈ ಕಂಪನಿಗೆ ಕನ್ನಡ ಬೇಕಿಲ್ಲ, ಸ್ವಿಗ್ಗಿಗೆ ಚುರುಕು ಮುಟ್ಟಿಸಬೇಕಿದೆ

ಹೀಗಿದೆ ನೋಡಿ ಸ್ವಿಗ್ಗಿ ಧೋರಣೆ: 10 ವರ್ಷಗಳಿಂದ ಕರ್ನಾಟಕದಲ್ಲಿದ್ದರೂ ಈ ಕಂಪನಿಗೆ ಕನ್ನಡ ಬೇಕಿಲ್ಲ, ಸ್ವಿಗ್ಗಿಗೆ ಚುರುಕು ಮುಟ್ಟಿಸಬೇಕಿದೆ

ಬೆಂಗಳೂರು, ಕರ್ನಾಟಕದಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸ್ವಿಗ್ಗಿ ಸಂಸ್ಥೆಯ ಸಹಾಯವಾಣಿಯಲ್ಲಿ ಕನ್ನಡದ ಆಯ್ಕೆಯೇ ಇಲ್ಲ. ಕನ್ನಡದಲ್ಲಿ ಮಾತನಾಡಬೇಕು ಅಂದರೆ ‘ವಿ ಆರ್ ಇಂಡಿಯನ್ಸ್’ ಎನ್ನುತ್ತಾರೆ. ಅಂದ್ರೆ ಕನ್ನಡಿಗರೇನು ಭಾರತೀಯರಲ್ವಾ? ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಣ್ಣಿಗೆ ಇಂಥವು ಬೀಳುವುದೇ ಇಲ್ಲವೇ? ನವೆಂಬರ್‌ನಲ್ಲಿ ಆದ ಕೆಟ್ಟ ಅನುಭವ ಇದು.

ಬೆಂಗಳೂರಿಗರ ಮನೆಮಾತು ಸ್ವಿಗ್ಗಿ, ಗ್ರಾಹಕ ಸೇವೆಯ ಸಹಾಯವಾಣಿ ವಿಭಾಗಕ್ಕೆ ಕನ್ನಡದವರನ್ನು ಯಾವಾಗ ನೇಮಕ ಮಾಡ್ತೀರಿ ಎಂಬುದು ಆ ಕಂಪನಿಗೆ ನೇರ ಪ್ರಶ್ನೆ. (ಸಾಂಕೇತಿಕ ಚಿತ್ರ)
ಬೆಂಗಳೂರಿಗರ ಮನೆಮಾತು ಸ್ವಿಗ್ಗಿ, ಗ್ರಾಹಕ ಸೇವೆಯ ಸಹಾಯವಾಣಿ ವಿಭಾಗಕ್ಕೆ ಕನ್ನಡದವರನ್ನು ಯಾವಾಗ ನೇಮಕ ಮಾಡ್ತೀರಿ ಎಂಬುದು ಆ ಕಂಪನಿಗೆ ನೇರ ಪ್ರಶ್ನೆ. (ಸಾಂಕೇತಿಕ ಚಿತ್ರ) (Canva)

ಬೆಂಗಳೂರು ನಗರ ಮತ್ತು ಕರ್ನಾಟಕ ರಾಜ್ಯಗಳು ನವೋದ್ಯಮಗಳ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಅಮ್ಮನ ಪಾತ್ರವನ್ನು ನಿರ್ವಹಿಸುತ್ತಿದೆ. ಬೆಂಗಳೂರು ಹೆತ್ತು ಹೊತ್ತು ಸಾಕುತ್ತಿರುವ ನವೋದ್ಯಮಗಳ ಪೈಕಿ “ಸ್ವಿಗ್ಗಿ” ಎಂಬ ಆಹಾರ ಪೂರೈಕೆ ಸಂಸ್ಥೆಯೂ ಒಂದು. ಇತ್ತೀಚೆಗಷ್ಟೇ ಸಂಸ್ಥೆಯ ಐಪಿಒ ಸಹ ಬಿಡುಗಡೆಯಾಗಿತ್ತು. ಇನ್ನೇನು ಷೇರುಪೇಟೆಯಲ್ಲಿಯೂ ಸ್ವಿಗ್ಗಿ ಷೇರುಗಳ ವಹಿವಾಟು ಶುರುವಾಗಲಿದೆ. ಸ್ವಿಗ್ಗಿಯ ಕಾರ್ಪೊರೇಟ್‌ ಕಚೇರಿ, ಕೇಂದ್ರ ಕಚೇರಿ ಇರುವುದು ನಮ್ಮ ಬೆಂಗಳೂರಿನಲ್ಲೇ. 2014ರಲ್ಲೇ ಶುರುವಾದ ಈ ಕಂಪನಿಗೆ ಈಗ 10 ವರ್ಷ. ತನ್ನ ವ್ಯವಹಾರನ್ನು ದೇಶಾದ್ಯಂತ 800ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆ. ಕರ್ನಾಟಕದಲ್ಲೂ ತಾಲೂಕು ಮಟ್ಟಕ್ಕೆ ಸೇವೆಯನ್ನು ವಿಸ್ತರಿಸಿದೆ. 2020ರಲ್ಲಿ ಕ್ವಿಕ್ ಕಾಮರ್ಸ್‌ ಸೇವೆಯನ್ನೂ ಆರಂಭಿಸಿದೆ.

ಹೋಟೆಲ್‌, ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಮನೆ ಬಾಗಿಲಿಗೆ ತಲುಪಿಸುವ “ಸ್ವಿಗ್ಗಿ” ಬೆಂಗಳೂರಿಗರ ಮನೆ ಮಾತು. ಆದರೆ, ಸ್ವಿಗ್ಗಿ ಮಾತ್ರ ವ್ಯವಹಾರ ಬಿಟ್ಟರೆ ಬೇರಾವ ಭಾವನೆಯೂ ಇಲ್ಲದ ಕಂಪನಿ. ಆಹಾರ ತಲುಪಿಸುವುದು ತಡವಾಯಿತು ಅಥವಾ ಇನ್ಯಾವುದೋ ಕಾರಣಕ್ಕೆ ಕಂಪನಿಯ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿದರೆ ಅಲ್ಲಿ ಕನ್ನಡದ ಮಾತು ಬಿಡಿ, ಕರ್ನಾಟಕದವರು ಗ್ರಾಹಕರೆಂಬ ಭಾವನೆಯೇ ಇಲ್ಲ! ಗ್ರಾಹಕ ಸೇವಾ ಸಹಾಯವಾಣಿಯಲ್ಲಿ ಮಾತನಾಡುವವರಿಗೆ ಹಿಂದಿ, ಇಂಗ್ಲಿಷ್ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಐವಿಆರ್‌ (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್‌) ಫೋನ್‌ನಲ್ಲಿ ಈ ಎರಡು ಭಾಷೆ ಬಿಟ್ಟರೆ ಕನ್ನಡಕ್ಕೆ ಜಾಗವೇ ಇಲ್ಲ!

10 ವರ್ಷವಾದರೂ ಕನ್ನಡ ಕಲಿಯದ ಸ್ವಿಗ್ಗಿ

ಬೆಂಗಳೂರಿಗರ ಮನೆ ಮಾತಾಗಿದ್ದ ಸ್ವಿಗ್ಗಿ ಈಗ ತಾಲೂಕು ಕೇಂದ್ರಗಳಿಗೂ ಕಾಲಿಟ್ಟಿದೆ. ವ್ಯವಹಾರ ವಿಸ್ತರಣೆಯಾದಂತೆ ಕರ್ನಾಟಕದ ವಿವಿಧ ನಗರಗಳಲ್ಲಿ, ಕನ್ನಡಿಗರನ್ನು ಗ್ರಾಹಕರು ಎಂದು ಪರಿಗಣಿಸಿ ಸೇವೆ ಒದಗಿಸುವ ಸ್ವಿಗ್ಗಿಯ ಪ್ರಯತ್ನ ಶ್ಲಾಘನೀಯ. ಡೆಲಿವರಿ ಪಾಲುದಾರರು ಒಂದಷ್ಟು ಜನ ಕನ್ನಡಿಗರೇ ಇರಬಹುದು. ಆದರೆ, ಸ್ವಿಗ್ಗಿ ಕಂಪನಿ ಶುರುವಾಗಿ 10 ವರ್ಷವಾದರೂ ಗ್ರಾಹಕ ಸಹಾಯವಾಣಿ ವಿಭಾಗಕ್ಕೆ ಕನ್ನಡಿಗರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಬೇಕು, ಐವಿಆರ್‌ನಲ್ಲಿ ಕನ್ನಡ ಭಾಷೆಯನ್ನು ಸೇರಿಸಬೇಕು ಎಂಬ ವ್ಯಾಪಾರ, ವ್ಯವಹಾರ ಸೂಕ್ಷ್ಮವನ್ನು ನಿರ್ಲಕ್ಷಿಸಿರುವುದು ಕ್ಷಮೆಗೆ ಅರ್ಹ ವಿಚಾರವಲ್ಲ. ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿ ಅಂತಹ ಅನಿವಾರ್ಯ ಇಲ್ಲ ಎಂಬ ಧೋರಣೆಯಂತೆ ಕಂಡುಬರುತ್ತಿದೆ. ಇದು ಕೂಡ ಸರಿಯಲ್ಲ. ಯಾಕೆ ಈ ಮಾತು ಅಂತೀರಾ? ಖುದ್ದು ಸ್ವಿಗ್ಗಿ ಸಹಾಯವಾಣಿಗೆ ಕರೆ ಮಾಡಿ ಮಾತನಾಡಿದಾಗ ಆದ ಅನುಭವ ಹೀಗಿತ್ತು -

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ಸ್ವಿಗ್ಗಿ ಸೇವೆ ಲಭ್ಯವಿದೆ. ಆದರೆ ಬೆಂಗಳೂರಿಗೆ ಹೋಲಿಸುವಂತೆ ಇಲ್ಲ. ಪಿಜ್ಜಾ ಅಥವಾ ಇನ್ಯಾವುದೇ ಆಹಾರ ವಸ್ತು ಆರ್ಡರ್ ಮಾಡಿದರೆ ಅದು ಸಿದ್ಧವಾಗಿ ಒಂದು ಗಂಟೆ ಆದ ಮೇಲೆ ಸ್ವಿಗ್ಗಿ ಡೆಲಿವರಿ ಪಾಲುದಾರ ಮನೆಬಾಗಿಲಿಗೆ ತಲುಪಿಸಬಹುದು. ನಿನ್ನೆ (ನವೆಂಬರ್ 8) ಮೂವರು ಡೆಲಿವರಿ ಪಾಲುದಾರರು ಬದಲಾದರು. ಅವರ ಹೆಸರು ಸ್ವಿಗ್ಗಿ ಆಪ್‌ನಲ್ಲಿ ಕಾಣಿಸುತ್ತದೆ. ಕೆಲವೇ ನಿಮಿಷದಲ್ಲಿ ಅವರ ಹೆಸರು ನಾಪತ್ತೆ. ಹೀಗೆ ಹೆಚ್ಚು ಕಡಿಮೆ ಒಂದೂ ಕಾಲು ಗಂಟೆ ಆದ ಬಳಿಕ ಸ್ವಿಗ್ಗಿ ಸಹಾಯವಾಣಿ ಸಂಖ್ಯೆ (080 674 66725)ಗೆ ಎರಡು ಸಲ ಕರೆ ಮಾಡಿ ಮಾತನಾಡಿದೆ.

ಕನ್ನಡ ಭಾಷೆಯ ಆಯ್ಕೆಯೇ ಸ್ವಿಗ್ಗಿಯಲ್ಲಿ ಇಲ್ಲ

ಐವಿಆರ್ ಕರೆ ಆದ ಕಾರಣ ರಿಂಗಣಿಸಿ ಅತ್ತ ಕಡೆಯಿಂದ ಸಂಪರ್ಕ ಸಿಕ್ಕಿದ ಕೂಡಲೇ ಇಂಗ್ಲಿಷ್ ಭಾಷೆಗಾಗಿ 1 ಒತ್ತಿ. ಹಿಂದಿ ಭಾಷೆಗಾಗಿ 2 ಒತ್ತಿ ಎಂಬ ಮಾತು ಇಂಗ್ಲಿಷ್ ಭಾಷೆಯಲ್ಲೇ ಕೇಳುತ್ತದೆ. “ಕನ್ನಡ” ಭಾಷೆಯ ಆಯ್ಕೆಯೇ ಇಲ್ಲ.

ಹಾಗೆ 1 ಒತ್ತಿದೆ. ಮಹಿಳೆಯೊಬ್ಬರ ಧ್ವನಿ ಕೇಳಿತು. ಕನ್ನಡದಲ್ಲೇ ಮಾತು ಆರಂಭಿಸಿದೆ. ‘ಐ ಡೋಂಟ್ ಅಂಡರ್‌ಸ್ಟ್ಯಾಂಡ್, ಕ್ಯಾನ್ ಯೂ ಸ್ಪೀಕ್ ಇನ್ ಇಂಗ್ಲಿಷ್’ ಅಂತ ಕೇಳಿದರು. ನೀವು ಕನ್ನಡದಲ್ಲಿ ಮಾತನಾಡಿ ಅಂತ ಹೇಳಿದೆ. ನೋ… ನೋ.. ಯೂ ಸೆಲೆಕ್ಟೆಡ್ ಇಂಗ್ಲಿಷ್.. ಪ್ಲೀಸ್ ಸ್ಪೀಕ್ ಇನ್ ಇಂಗ್ಲಿಷ್ ಅಂತ ಹೇಳಿದರು. ಕೊನೆಗೆ ಇಂಗ್ಲಿಷ್‌ನಲ್ಲೇ ಮಾತನಾಡಿದೆ. ವಾಟ್‌ ಈಸ್ ಯುವರ್ ಕನ್ಸರ್ನ್‌ ಅಂತ ಕೇಳಿದರು. ಸ್ವಿಗ್ಗಿಯ ಗ್ರಾಹಕ ನಾನು. ಕನ್ನಡದವನಿದ್ದೇನೆ. ಕರ್ನಾಟಕದವನಿದ್ದೇನೆ. ನನಗೆ ನನ್ನ ಭಾಷೆಯಲ್ಲಿ ಮಾತನಾಡುವ ಗ್ರಾಹಕ ಸಹಾಯವಾಣಿ ಪ್ರತಿನಿಧಿ ಬೇಕು. ಐವಿಆರ್‌ನಲ್ಲಿ ನನ್ನ ಭಾಷೆ “ಕನ್ನಡ”ದ ಆಯ್ಕೆಯೂ ಬೇಕು. ಇದು ಆದ್ಯತೆಯ ವಿಚಾರ. ನಿಮ್ಮ ಆಡಳಿತ ಮಂಡಳಿ ಗಮನಕ್ಕೆ ತನ್ನಿ ಎಂದು ಹೇಳಿದೆ.

ಸ್ವಲ್ಪ ಹೊತ್ತು ಬಿಟ್ಟು ಮತ್ತೊಮ್ಮೆ ಅದೇ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದೆ. ಐವಿಆರ್ ಕರೆ ಆದ ಕಾರಣ ಮತ್ತೆ 1 ಒತ್ತಿದೆ. ಆಗ ಕರೆ ಸ್ವೀಕರಿಸಿದ್ದು ಒಬ್ಬ ಪುರುಷ. ಹಿಂದಿಯಲ್ಲಿ ಮಾತು ಶುರುಮಾಡಿದ. ಕನ್ನಡದಲ್ಲಿ ಮಾತು ಆರಂಭಿಸಿದೆ. ಹಿಂದಿ… ಹಿಂದಿ.. ಅಂದ.. ಇಲ್ಲ ಕನ್ನಡ.. ಕನ್ನಡ ಅಂದೆ.. ಕೊನೆಗೆ ಇಂಗ್ಲಿಷ್‌.. ಇಂಗ್ಲಿಷ್ ಎಂದು ಹೇಳತೊಡಗಿದ. ಹಾಗೆ ಇಂಗ್ಲಿಷ್‌ನಲ್ಲಿ ಮಾತುಕತೆ ಶುರುವಾಯಿತು. ನನ್ನ ಹೆಸರು ಹೇಳಿದೆ. ಆತನ ಹೆಸರು ಕೇಳಿದೆ.. ವಿಕಾಸ್ ಎಂದು ಪರಿಚಯಿಸಿಕೊಂಡ. ನಾನು ಟೀಸ್ ಮಾಡ್ತಾ ಇಲ್ಲ. ನನ್ನ ಕಾಳಜಿ ಇದು.. ನೀವು ವ್ಯಾಪಾರ, ವ್ಯವಹಾರ ಮಾಡ್ತಿರೋದು ಕರ್ನಾಟಕದಲ್ಲಿ. ನಿಮ್ಮ ಕಂಪನಿಯ ಗ್ರಾಹಕ ನಾನು. ಆದರೆ, ಐವಿಆರ್ ಕರೆಯಲ್ಲಿ “ಕನ್ನಡ” ಭಾಷೆ ಆಯ್ಕೆ ಯಾಕೆ ಕೊಟ್ಟಿಲ್ಲ. ನಾನು ಕನ್ನಡಿಗ.. ನನಗೆ ಕನ್ನಡ ಭಾಷೆಯಲ್ಲಿ ಮಾತನಾಡುವವರು ಬೇಕು. ನೀವು ಮಾತನಾಡುತ್ತೀರಾ ಎಂದು ಕೇಳಿದೆ. ಆಗ ಆತ, ‘ಐ ಆಮ್ ಇಂಡಿಯನ್‌, ಐ ಕಾಂಟ್ ಡಿಸ್‌ಕ್ಲೋಸ್ ಮೈ ಪರ್ಸನಲ್ ಡೀಟೇಲ್ಸ್’ ಎಂದೆಲ್ಲ ಹೇಳಿದ.

ಕನ್ನಡ ಭಾಷಿಕರಿಗೆ ಕೆಲಸವೇ ಸಿಗುತ್ತಿಲ್ಲ

ವೈಯಕ್ತಿಕ ಮಾಹಿತಿ ಬೇಕಾಗಿಲ್ಲ. ನನ್ನ ಕಾಳಜಿ ಇಷ್ಟೆ. ಗ್ರಾಹಕ ಸಹಾಯವಾಣಿ ವಿಭಾಗದಲ್ಲಿ ಕನ್ನಡದವರ ಜತೆಗೆ ವ್ಯವಹರಿಸುವುದಕ್ಕೆ ಕನ್ನಡದವರು ಬೇಕು. ಐವಿಆರ್‌ನಲ್ಲಿ ಕನ್ನಡ ಭಾಷೆ ಸೇರಿಸಬೇಕು ಎಂದೆ. ಇಲ್ಲ ನಮ್ಮ ಕಂಪನಿಯಲ್ಲಿ ಬಹಳಷ್ಟು ಜನ ಕನ್ನಡದವರಿದ್ದಾರೆ ಎಂದ. ಗ್ರಾಹಕ ಸಹಾಯವಾಣಿ ವಿಭಾಗದಲ್ಲಿ ಇದ್ದರೆ ಫೋನ್ ಕೊಡಿ ಅವರಿಗೆ ಎಂದೆ. ಅದಕ್ಕೆ ಆತ, ನಿಮ್ಮ ಕಾಳಜಿ ಅರ್ಥ ಆಗ್ತದೆ ಎಂದ. ನಾನು ಆಡಳಿತ ಮಂಡಳಿ ಗಮನಕ್ಕೆ ತರುತ್ತೇನೆ ಎಂದು ನಗುತ್ತ ಹೇಳಿದ. ನಿಮ್ಮ ಜೊತೆ ಮಾತನಾಡಿದ್ದಕ್ಕೆ ರೇಟಿಂಗ್ ಕೊಡಬೇಕು ಎಂದು ಆಗ್ರಹಿಸಿದ. ಕನ್ನಡ ಕಲಿಯುವ ಆಸಕ್ತಿ ಇದೆಯಾ ಎಂದು ಕೇಳಿದೆ. ಕೆಲವು ಸೆಕೆಂಡ್ ಮೌನವಹಿಸಿದ. ಬಳಿಕ ಆಸಕ್ತಿ ಇದೆ. ಕಲಿಸುವವರು ಯಾರು ಎಂದ.

ಕನ್ನಡದವರ ಜೊತೆಗೆ ಕನ್ನಡದಲ್ಲೇ ಮಾತನಾಡಬೇಕು. ನಮಗೆ ಟ್ಯೂಟರ್ ಅನ್ನು ನೇಮಕ ಮಾಡಿ ತರಬೇತಿ ಕೊಡಿ ಎಂದು ಆಂತರಿಕವಾಗಿ ಕಂಪನಿ ಆಡಳಿತಕ್ಕೆ ನಿಮ್ಮ ಬೇಡಿಕೆಯನ್ನು ತಿಳಿಸಿ. ನಾವು ಗ್ರಾಹಕರಾಗಿ ಕನ್ನಡ ಭಾಷೆ ಬಲ್ಲವರು ವ್ಯವಹರಿಸುವುದಕ್ಕೆ ಬೇಕು ಎಂಬ ಆಗ್ರಹವನ್ನು ಕಂಪನಿಯ ಆಡಳಿತಕ್ಕೆ ಮುಟ್ಟಿಸುತ್ತೇವೆ ಎಂದೆ. ಹಾಗೆ ನಮ್ಮಿಬ್ಬರ ಮಾತುಕತೆ ಮುಕ್ತಾಯವಾಯಿತು.

ಕನ್ನಡದವರನ್ನು ಯಾವಾಗ ನೇಮಕ ಮಾಡ್ತೀರಿ

ಕರ್ನಾಟಕದ ರಾಜಧಾನಿಯಲ್ಲೇ ಹುಟ್ಟಿ ಬೆಳೆದ ಕಂಪನಿ ಸ್ವಿಗ್ಗಿ. ಕನ್ನಡ, ಕರ್ನಾಟಕದ ಸಂಸ್ಕೃತಿಗೆ ಒಗ್ಗಿಕೊಳ್ಳದಿದ್ದರೆ ಹೇಗೆ, ಬೆಂಗಳೂರಿಗರ ಮನೆಮಾತಾಗಿರುವ ಸ್ವಿಗ್ಗಿಯನ್ನು ಕರ್ನಾಟಕದವರು ಒಪ್ಪಿಕೊಂಡು ಆಲಂಗಿಸಿದ ಹಾಗೆ ಸ್ವಿಗ್ಗಿ ಕೂಡ ಒಪ್ಪಿಕೊಂಡು ಆಲಂಗಿಸಬೇಕಲ್ಲವೆ? ಕನ್ನಡವನ್ನು ಇನ್ನು ನಿರ್ಲಕ್ಷಿಸುವಂತೆ ಇಲ್ಲ. ಕರ್ನಾಟಕದ ಗ್ರಾಹಕರ ಜೊತೆಗೆ ಹೇಗೆ ಇದ್ದರೂ ನಡೆಯುತ್ತದೆ ಎಂಬ ಧೋರಣೆಯೂ ಬೇಡ. ವ್ಯಾವಹಾರಿಕವಾಗಿ ನಾವು ಕನ್ನಡ ಬಳಸದೇ ಇದ್ದರೆ, ಉಳಿದವರಿಗೂ ಅದು ಬೇಡ. ಇದಕ್ಕೆ ಉದಾಹರಣೆ ಸ್ವಿಗ್ಗಿ. 10 ವರ್ಷದಿಂದ ಬೆಂಗಳೂರಿಗರ ಮನೆಮಾತು ಸ್ವಿಗ್ಗಿ. ಆದರೂ ಅವರ ವ್ಯವಹಾರಕ್ಕೆ ಕನ್ನಡ ಅನಿವಾರ್ಯವಾಗಲಿಲ್ಲ. ಈಗ ಕೇಳಿ ಪಡೆಯಬೇಕಾದ ಸಮಯ. ಸ್ವಿಗ್ಗಿಗೆ ನೇರ ಬೇಡಿಕೆ - ಗ್ರಾಹಕ ಸೇವೆಯ ಸಹಾಯವಾಣಿ ವಿಭಾಗಕ್ಕೆ ಕನ್ನಡದವರನ್ನು ಯಾವಾಗ ನೇಮಕ ಮಾಡ್ತೀರಿ ಎಂಬುದನ್ನು ಘೋಷಿಸಿ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನು ಮಾಡ್ತಿದೆ

ಕರ್ನಾಟಕ ಸರ್ಕಾರದಲ್ಲಿ ಕನ್ನಡದ ಉಳಿವು, ಬಳಕೆಯನ್ನು ಪ್ರೋತ್ಸಾಹಿಸಲೆಂದೇ ಕನ್ನಡ ಸಂಸ್ಕೃತಿ ಇಲಾಖೆ ಇದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಪ್ರಾಧಿಕಾರಗಳು, ಅಕಾಡೆಮಿಗಳು ಇವೆ. ಷೇರುಪೇಟೆಯಲ್ಲಿ ಐಪಿಒ ಬಿಡುಗಡೆ ಮಾಡುವ ಮಟ್ಟಕ್ಕೆ ಬೆಳೆದಿರುವ, ಕರ್ನಾಟಕದ, ಕನ್ನಡಿಗರ ನಡುವೆಯೇ ಹತ್ತಾರು ವರ್ಷಗಳಿಂದ ವ್ಯವಹಿಸುತ್ತಿರುವ ಒಂದು ಜನಪ್ರಿಯ ಕಂಪನಿಯ ಸಹಾಯವಾಣಿಯೇ ಕನ್ನಡದಲ್ಲಿ ಇಲ್ಲ ಎನ್ನುವುದು ಈ ಪ್ರಾಧಿಕಾರ, ಅಕಾಡೆಮಿಗಳಲ್ಲಿ ಇರುವ ಘಟಾನುಘಟಿಗಳ ಗಮನಕ್ಕೆ ಬಂದಿಲ್ಲ ಎಂದರೆ ಹೇಗೆ? ಅಥವಾ ಬಂದಿದ್ದರೂ ಅದು ಜಾಣಕುರುಡು ಇರಬಹುದು. ‘ವಿ ಆರ್ ಇಂಡಿಯನ್ಸ್‌’ ಎನ್ನುವ ಉದ್ಧಟತನದ ಕಂಪನಿಗಳಿಗೆ, ‘ಹೌದು ಸ್ವಾಮಿ, ನಾವೂ ಭಾರತೀಯರೇ, ಕರ್ನಾಟಕವೂ ಭಾರತದಲ್ಲಿಯೇ ಇದೆ. ನೀವು ಇಲ್ಲಿ ವ್ಯವಹಾರ ಮಾಡಬೇಕು ಎಂದಾದರೆ ಕನ್ನಡ ಕಲಿಯಬೇಕು, ಬಳಸಬೇಕು’ ಎಂದು ತಾಕೀತು ಮಾಡುವ ಧೈರ್ಯವನ್ನು ನಮ್ಮ ಸರ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪ್ರದರ್ಶಿಸಬೇಕಿದೆ.

ಬರಹ: ಉಮೇಶ್ ಕುಮಾರ್ ಶಿಮ್ಲಡ್ಕ

(ಗಮನಿಸಿ: ಇಲ್ಲಿರುವುದು ಲೇಖಕರ ವೈಯಕ್ತಿಕ ಅನುಭವ ಮತ್ತು ವೈಯಕ್ತಿಕ ಅಭಿಪ್ರಾಯ)

Whats_app_banner