ಚಿಕ್ಕಮಗಳೂರು: ಎನ್‌ಆರ್ ಪುರ ತಾಲೂಕಿನಲ್ಲಿ ಅಸಹಜ ಸ್ಥಿತಿಯಲ್ಲಿ 30 ಮಂಗಗಳ ಮೃತದೇಹ ಪತ್ತೆ, ಹೊಡೆದು ಕೊಂದು ಹಾಕಿದ ಶಂಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಚಿಕ್ಕಮಗಳೂರು: ಎನ್‌ಆರ್ ಪುರ ತಾಲೂಕಿನಲ್ಲಿ ಅಸಹಜ ಸ್ಥಿತಿಯಲ್ಲಿ 30 ಮಂಗಗಳ ಮೃತದೇಹ ಪತ್ತೆ, ಹೊಡೆದು ಕೊಂದು ಹಾಕಿದ ಶಂಕೆ

ಚಿಕ್ಕಮಗಳೂರು: ಎನ್‌ಆರ್ ಪುರ ತಾಲೂಕಿನಲ್ಲಿ ಅಸಹಜ ಸ್ಥಿತಿಯಲ್ಲಿ 30 ಮಂಗಗಳ ಮೃತದೇಹ ಪತ್ತೆ, ಹೊಡೆದು ಕೊಂದು ಹಾಕಿದ ಶಂಕೆ

ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನಲ್ಲಿ ಅಸಹಜ ಸ್ಥಿತಿಯಲ್ಲಿ 30 ಮಂಗಗಳ ಮೃತದೇಹ ಪತ್ತೆಯಾಗಿದೆ. ಅವುಗಳ ಪ್ರಜ್ಞೆ ತಪ್ಪಿಸಿ ಹೊಡೆದು ಕೊಂದು ಹಾಕಿದ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಂಗಗಳ ಮೃತದೇಹದ ಭಾಗಗಳನ್ನು ರವಾನಿಸಿದ್ದಾರೆ.

ಚಿಕ್ಕಮಗಳೂರು: ಎನ್‌ಆರ್ ಪುರ ತಾಲೂಕಿನಲ್ಲಿ ಅಸಹಜ ಸ್ಥಿತಿಯಲ್ಲಿ 30 ಮಂಗಗಳ ಮೃತದೇಹ ಪತ್ತೆ, ಹೊಡೆದು ಕೊಂದು ಹಾಕಿದ ಶಂಕೆ ವ್ಯಕ್ತವಾಗಿದೆ.
ಚಿಕ್ಕಮಗಳೂರು: ಎನ್‌ಆರ್ ಪುರ ತಾಲೂಕಿನಲ್ಲಿ ಅಸಹಜ ಸ್ಥಿತಿಯಲ್ಲಿ 30 ಮಂಗಗಳ ಮೃತದೇಹ ಪತ್ತೆ, ಹೊಡೆದು ಕೊಂದು ಹಾಕಿದ ಶಂಕೆ ವ್ಯಕ್ತವಾಗಿದೆ.

ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ ದ್ಯಾವಣ ಗ್ರಾಮದ ಬಳಿ ಕಿಡಿಗೇಡಿಗಳು ಮಂಗಗಳನ್ನು ಗುರುವಾರ ರಾತ್ರಿ ಕೊಂದು, ಶುಕ್ರವಾರ ಬೆಳಗ್ಗೆ ರಸ್ತೆಗೆ ತಂದೆಸೆದ ಘಟನೆ ನಡೆದಿದೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕೂಡಲೇ ಆರೋಗ್ಯ, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ರಾಮನಹಡ್ಡು ಸಮೀಪದ ಚಿಕ್ಕಅಗ್ರಹಾರ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಮೇಗರಮಕ್ಕಿಮೀಸಲು ಅರಣ್ಯದಲ್ಲಿ 30 ಮಂಗಗಳ ಮೃತದೇಹ ಪತ್ತೆಯಾಗಿರುವಂಥದ್ದು. ಇದರಲ್ಲಿ 16 ಗಂಡು, 14 ಹೆಣ್ಣು ಹಾಗೂ 4 ಮರಿಗಳು ಸೇರಿಕೊಂಡಿವೆ.

ಗ್ರಾಮದ ಹೊರವಲಯದಲ್ಲಿ ಈ ಮಂಗಗಳು ಬಹುಕಾಲದಿಂದ ವಾಸವಿದ್ದು, ಯಾರೋ ದುಷ್ಕರ್ಮಿ ಗಳು ಬಾಳೆಹಣ್ಣಿಗೆ ಪ್ರಜ್ಞೆ ತಪ್ಪುವ ಔಷಧ ಹಾಕಿ ಮಂಗಗಳಿಗೆ ತಿನ್ನಲು ನೀಡಿದ್ದಾರೆ. ಪ್ರಜ್ಞೆ ತಪ್ಪಿದ ಮಂಗಗಳ ತಲೆಗೆ ಆಯುಧದಿಂದ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾರೆ. ತಲೆಯಿಂದ ರಕ್ತ ಸೋರಿ ಮಂಗಗಳು ಮೃತಪಟ್ಟಿವೆ. ಮಂಗಗಳ ಕಳೇಬರಗಳನ್ನು ರಸ್ತೆಗೆ ತಂದು ಹಾಕಿ ಅಲ್ಲಿಂದ ದುಷ್ಕರ್ಮಿಗಳು ಪರಾರಿಯಾಗಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮಸ್ಥರ ಕಳವಳ; ಮಂಗಗಳ ಮೃತದೇಹಗಳ ಪೋಸ್ಟ್‌ಮಾರ್ಟಂ

ಇದು ಮಲೆನಾಡಿ ಭಾಗವಾಗಿದ್ದು, ಮಂಗನ ಕಾಯಿಲೆ/ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಆತಂಕ ಹರಡಿಕೊಂಡಿರುವ ಪ್ರದೇಶದಲ್ಲೇ ಇದೆ. ದಿಢೀರ್ ಇಷ್ಟೊಂದು ಮಂಗಗಳನ್ನು ಕೊಂದು ರಸ್ತೆಗೆ ತಂದು ಹಾಕಿರುವುದು ಜನರ ಕಳವಳವನ್ನು ಹೆಚ್ಚಿಸಿದೆ. ಹೀಗೆ ಆತಂಕಗೊಂಡ ಗ್ರಾಮಸ್ಥರು ಕೂಡಲೇ ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಗ್ರಾಪಂ ಹಾಗೂ ಗಮನಕ್ಕೆ ಈ ವಿಚಾರ ತಂದಿದ್ದಾರೆ. ತಕ್ಷಣ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಸಚಿನ್, ಎಸಿಎಫ್‌ ಸುದರ್ಶನ್, ಕಾನೂರು ಉಪವಲಯ ಅರಣ್ಯಾಧಿಕಾರಿರಂಗನಾಥ್, ಕಾನೂರು ಗ್ರಾಪಂ ಪಿಡಿಒ ಶ್ರೀನಿವಾಸ್, ಗ್ರಾಮ ಆಡಳಿತಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಗಳ ಅಸಹಜ ಸಾವು ಹಿನ್ನೆಲೆಯಲ್ಲಿ ಆ ಮೃತದೇಹಗಳ ಪೋಸ್ಟ್‌ಮಾರ್ಟಂ ಮಾಡಿಸಲಾಗಿದೆ. ಪಶುವೈದ್ಯರು ಪೋಸ್ಟ್‌ಮಾರ್ಟಂ ಮಾಡಿದ್ದು, ಅವುಗಳ ಸಾವಿಗೆ ನಿಖರ ಕಾರಣ ತಿಳಿಯಲು ಪ್ರಯತ್ನಿಸಿದ್ದಾರೆ. ಅವುಗಳ ದೇಹದ ಕೆಲ ಭಾಗಗ ಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈ ನಡುವೆ, ಅಪರಿಚಿತ ದುಷ್ಕರ್ಮಿಗಳ ವಿರುದ್ಧ 1972 ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಬೆಳೆಹಾನಿ ಮಾಡು ತ್ತಿದ್ದ ಕಾರಣಕ್ಕೆಹಾಸನದಲ್ಲಿ 38 ಮಂಗಗಳನ್ನು ವಿಷವಿಟ್ಟು ಕೊಂದಿದ್ದು ಭಾರೀ ಸುದ್ದಿಯಾಗಿತ್ತು. ಇದು ಕೂಡ ಅದೇ ರೀತಿಯ ಹತ್ಯೆಯೇ ಎಂಬ ಅನುಮಾನ ಇದೀಗ ಗ್ರಾಮಸ್ಥರಲ್ಲಿ ಮೂಡಿದೆ.

ಮಂಗನ ಜ್ವರ ಅಥವಾ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಎಂದರೇನು

ಕ್ಯಾಸನೂರು ಎಂಬುದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಒಂದು ಊರು. ಪ್ರಪಂಚದಲ್ಲೇ ಅತ್ಯಧಿಕ ಇಳುವರಿ ಮತ್ತು ಉತ್ಕೃಷ್ಟ ಅಡಕೆಯ ಸಸಿಗಳಿಗೆ ಈ ಊರು ಪ್ರಸಿದ್ದಿ ಪಡೆದಿದೆ. 1957ರ ಬೇಸಿಗೆಯಲ್ಲಿ ಮಂಗಗಳು ಸತ್ತು ಹೋದವು. ಆ ನಂತರ ಊರಿನ ಜನರಿಗೆ ಬಂದ ಕಾಯಿಲೆ ಸ್ಥಳೀಯರನ್ನು ತಲ್ಲಣಗೊಳಿಸಿತು. ಮನುಷ್ಯರನ್ನು ಕಾಡಿದ ಈ ಕಾಯಿಲೆಯನ್ನು ಅಂದು ಮಂಗನ ಕಾಯಿಲೆ ಎಂದು ಗುರುತಿಸಿದರು. ಬಳಿಕ ಇದು ಕ್ಯಾಸನೂರಿನಲ್ಲಿ ಮಾತ್ರ ಕಾಣಿಸಿಕೊಂಡ ಕಾರಣ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಎಂದು ಗುರುತಿಸಿದರು.

ಕೆಎಫ್‌ಡಿಯು ಪ್ರಾಣಿಗಳಲ್ಲಿ ಕಾಣುವ ರೋಗವಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ, ಪ್ರಾಣಿಗಳ ಮೈಮೇಲಿನ ಉಣ್ಣೆಗಳು ಮನುಷ್ಯರನ್ನು ಕಚ್ಚಿದರೆ ಈ ರೋಗ ಹರಡುತ್ತದೆ. ಈ ರೋಗ ಹುಟ್ಟಿ ನಾಲ್ಕಾರು ದಶಕಗಳಾದರೂ ಇದಕ್ಕೆ ಶಾಶ್ವತ ಔ‍ಷಧ ಇನ್ನೂ ಅಭಿವೃದ್ಧಿಪಡಿಸಲಾಗಿಲ್ಲ.

ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಹೀಗೆ ಮಲೆನಾಡಿನ ಕೆಲವೇ ಪ್ರದೇಶಕ್ಕೆ ಇದು ಸೀಮಿತವಾಗಿದ್ದ ಕಾಯಿಲೆ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೂ ವ್ಯಾಪಿಸಿದೆ. ಆರು ಸಾವಿರ ಚದರು ಕಿಲೋ ಮೀಟರ್ ಪ್ರದೇಶವನ್ನು ಆಕ್ರಮಿಸಿರುವ ಕಾಯಿಲೆ ಪ್ರತಿವರ್ಷದ ಬೇಸಗೆಯಲ್ಲಿ ಮರುಕಳಿಸುತ್ತಿದ್ದು, ಪ್ರತಿವರ್ಷ ನೂರರಷ್ಟು ಬಲಿ ತೆಗೆದುಕೊಂಡು, ಒಂದೆರಡು ಸಾವಿರ ಜನರನ್ನು ಪೀಡಿಸುತ್ತಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner