ಬೆಂಗಳೂರಲ್ಲಿ ಖಾಸಗಿ ಶಾಲಾ ಅರ್ಜಿ ಶುಲ್ಕವೇ 3000 ರೂಪಾಯಿ!; ಏರುತ್ತಿರುವ ಶುಲ್ಕಕ್ಕೆ ಕಡಿವಾಣ ಹಾಕುವುದೇ ಸರ್ಕಾರ, ಪಾಲಕರ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಖಾಸಗಿ ಶಾಲಾ ಅರ್ಜಿ ಶುಲ್ಕವೇ 3000 ರೂಪಾಯಿ!; ಏರುತ್ತಿರುವ ಶುಲ್ಕಕ್ಕೆ ಕಡಿವಾಣ ಹಾಕುವುದೇ ಸರ್ಕಾರ, ಪಾಲಕರ ನಿರೀಕ್ಷೆ

ಬೆಂಗಳೂರಲ್ಲಿ ಖಾಸಗಿ ಶಾಲಾ ಅರ್ಜಿ ಶುಲ್ಕವೇ 3000 ರೂಪಾಯಿ!; ಏರುತ್ತಿರುವ ಶುಲ್ಕಕ್ಕೆ ಕಡಿವಾಣ ಹಾಕುವುದೇ ಸರ್ಕಾರ, ಪಾಲಕರ ನಿರೀಕ್ಷೆ

ಬೆಂಗಳೂರಲ್ಲಿ ಖಾಸಗಿ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಅರ್ಜಿ ಫಾರಂ ವಿತರಣೆ ಶುರುವಾಗಿದೆ. ಖಾಸಗಿ ಶಾಲಾ ಅರ್ಜಿ ಶುಲ್ಕವೇ 3000 ರೂಪಾಯಿ! ಇದ್ದು, ಹೀಗೆ ಏರುತ್ತಿರುವ ಶುಲ್ಕಕ್ಕೆ ಕಡಿವಾಣ ಹಾಕುವುದೇ ಸರ್ಕಾರ ಎಂಬುದು ಸದ್ಯ ಪಾಲಕರ ನಿರೀಕ್ಷೆ. ಈ ಸಮಸ್ಯೆ ಕಡೆಗೊಂದು ನೋಟ ಬೀರುವ ವರದಿ ಇಲ್ಲಿದೆ.

ಬೆಂಗಳೂರಲ್ಲಿ ಖಾಸಗಿ ಶಾಲಾ ಅರ್ಜಿ ಶುಲ್ಕವೇ 3000 ರೂಪಾಯಿ ತನಕ ತಲುಪಿದ್ದು, ಹೀಗೆ ಏರುತ್ತಿರುವ ಶುಲ್ಕಕ್ಕೆ ಸರ್ಕಾರ ಕಡಿವಾಣ ಹಾಕುವುದೇ ಎಂಬುದು ಪಾಲಕರ ನಿರೀಕ್ಷೆ. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಖಾಸಗಿ ಶಾಲಾ ಅರ್ಜಿ ಶುಲ್ಕವೇ 3000 ರೂಪಾಯಿ ತನಕ ತಲುಪಿದ್ದು, ಹೀಗೆ ಏರುತ್ತಿರುವ ಶುಲ್ಕಕ್ಕೆ ಸರ್ಕಾರ ಕಡಿವಾಣ ಹಾಕುವುದೇ ಎಂಬುದು ಪಾಲಕರ ನಿರೀಕ್ಷೆ. (ಸಾಂಕೇತಿಕ ಚಿತ್ರ) (pexels)

ಬೆಂಗಳೂರು: ಹೊಸ ಶೈಕ್ಷಣಿಕ ವರ್ಷ ಶುರುವಾಗಲು ಇನ್ನು ಕೆಲವು ತಿಂಗಳು ಇರುವಾಗಲೇ ಪ್ರವೇಶ ಪ್ರಕ್ರಿಯೆಗೆ ತಯಾರಿ ಆರಂಭವಾಗಿದೆ. ಈಗಾಗಲೇ ಹಲವು ಖಾಸಗಿ ಶಾಲೆಗಳಲ್ಲಿ ಅರ್ಜಿ ಮತ್ತು ಕೈಪಿಡಿಗಳನ್ನು ಕೊಡಲಾಗುತ್ತಿದ್ದು, ಅದರ ಹೆಸರಿನಲ್ಲಿ ಸಾವಿರಾರು ರೂಪಾಯಿ ಸಂಗ್ರಹಿಸುತ್ತಿವೆ. ಈ ಶುಲ್ಕಗಳಿಗಾದರೂ ಕಡಿವಾಣ ಹಾಕಬೇಕು ಎಂದು ಪಾಲಕರು ಸರ್ಕಾರವನ್ನು ಆಗ್ರಹಿಸಲಾರಂಭಿಸಿದ್ದಾರೆ. ಶಾಲಾ ಪ್ರವೇಶದ ಅರ್ಜಿ ಶುಲ್ಕ ಎಂದು 2,000 ರೂಪಾಯಿಯಿಂದ 3000 ರೂಪಾಯಿ ತನಕ ವಸೂಲಿ ಮಾಡಲಾಗುತ್ತಿದೆ ಎಂದು ಹಲವರು ಅಳಲು ತೋಡಿಕೊಂಡಿರುವುದಾಗಿ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಖಾಸಗಿ ಶಾಲೆಗಳ ಶುಲ್ಕವನ್ನು ಸರ್ಕಾರ ನಿಗದಿ ಮಾಡುವಂತೆ ಇಲ್ಲ ಎಂಬ ಕೋರ್ಟ್ ತೀರ್ಪು ಬಳಿಕ, ಶಾಲೆಗಳು ತಮ್ಮಿಷ್ಟದಂತೆ ಶುಲ್ಕಗಳನ್ನು ನಿಗದಿ ಮಾಡುತ್ತಿದ್ದು ಸರ್ಕಾರವೂ ಕೈ ಚೆಲ್ಲಿ ಕುಳಿತಿದೆ.

ಖಾಸಗಿ ಶಾಲಾ ಶುಲ್ಕ, ಪ್ರವೇಶದ ಅರ್ಜಿ ಶುಲ್ಕ ನಿಯಂತ್ರಣಕ್ಕೆ ಪಾಲಕರ ಆಗ್ರಹ

ಮಗಳನ್ನು ಖಾಸಗಿ ಶಾಲೆಗೆ ಸೇರಿಸುವುದಕ್ಕಾಗಿ ಕಳೆದ ಎರಡು ವರ್ಷಗಳಿಂದ ಹಣ ಹೊಂದಿಸುತ್ತಿದ್ದೇನೆ. ಪ್ರವೇಶಾತಿ ಯಾವಾಗ ಶುರುವಾಗುತ್ತದೆ ಎಂದು ತಿಳಿಯಲು ಈಗಾಗಲೇ ಶಾಲೆಗಳನ್ನು ಸಂಪರ್ಕಿಸಿ ಮಾಹಿತಿ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಪತ್ನಿಯೂ ಇದೇ ಕೆಲಸ ಮಾಡುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಪ್ರವೇಶಕ್ಕೆ ಅರ್ಜಿಗಳನ್ನು ವಿತರಿಸಲಾರಂಭಿಸಿದ್ದಾರೆ. ಖಾಸಗಿ ಶಾಲೆಗಳಲ್ಲಿ ಅರ್ಜಿ ಫಾರಂ ಮತ್ತು ಕೈಪಿಡಿಗೆ ಸರಾಸರಿ 2000 ರೂಪಾಯಿ ಪಡೆಯುತ್ತಿದ್ದಾರೆ ಎಂದು ಸರ್ಜಾಪುರದ ನಿವಾಸಿಯೊಬ್ಬರು ಹೇಳಿದ್ದಾಗಿ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ವಿವರಿಸಿದೆ.

ಇನ್ನು ಕನಕಪುರ ರಸ್ತೆಯ ಬೃಹತ್ ಅಪಾರ್ಟ್‌ಮೆಂಟ್‌ ನಿವಾಸಿಯೊಬ್ಬರು ಹೇಳಿರುವುದು ಇಷ್ಟು - ಅಪಾರ್ಟ್‌ಮೆಂಟ್‌ನ ಎಲ್ಲ ಮಕ್ಕಳೂ ಓದುವ ಶಾಲೆಯಲ್ಲಿ ನನ್ನ ಮಗನೂ ಓದಬೇಕು. ಅರ್ಜಿ ನಮೂನೆ ಖರೀದಿಸಲು ಮೂರು ಗಂಟೆ ಹೊತ್ತು ಸರದಿಯಲ್ಲಿ ನಿಂತಿದ್ದೇನೆ. 3000 ರೂಪಾಯಿ ಕೊಟ್ಟು ಅರ್ಜಿ ಫಾರಂ, ಕೈಪಿಡಿ ಪಡೆದುಕೊಂಡಿದ್ದೇನೆ. ಇನ್ನು ಪ್ರವೇಶ ಶುಲ್ಕ ಮತ್ತು ಡೊನೇಶನ್‌ಗೆ ಹಣ ಹೊಂದಿಸಬೇಕು ಎಂದು ಹೇಳಿಕೊಂಡಿರುವುದಾಗಿ ವರದಿ ಹೇಳಿದೆ.

ಬೇರೆ ರಾಜ್ಯಗಳಲ್ಲಿ ಹೇಗಿದೆ ಪರಿಸ್ಥಿತಿ, ಪಾಲಕರು ತಿಳಿದುಕೊಂಡಿರುವುದು ಇಷ್ಟು

ಬೆಂಗಳೂರಿನಲ್ಲಿ ಶಿಕ್ಷಣ ದುಬಾರಿಯಾಗಿದೆ. ಸಾಮಾನ್ಯವಾಗಿ ಬೇರೆ ರಾಜ್ಯಗಳಲ್ಲಿ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಪ್ರವೇಶ ಪ್ರಕ್ರಿಯೇ ಶುರುವಾಗುತ್ತದೆ. ಆದರೆ ಬೆಂಗಳೂರಲ್ಲಿ ಅಕ್ಟೋಬರ್‌ನಲ್ಲೇ ಶುರುವಾಗುತ್ತದೆ. ಡಿಸೆಂಬರ್‌ಗೆ ಮುಗಿದುಬಿಡುತ್ತದೆ. ಜನವರಿ ಬಂದರೆ ಸೀಟ್‌ ಇರಲ್ಲ. ಶಾಲೆಯ ಕಾರ್ಯಕ್ಷಮತೆ ಹೇಗಿದೆ, ಅಲ್ಲಿರುವ ಮಕ್ಕಳ ಪಾಲಕರ ಜೊತೆಗೆ ಮಾತನಾಡುವ ಸ್ವಾತಂತ್ರ್ಯ, ಅವಕಾಶ ಯಾವುದೂ ಬೆಂಗಳೂರಿನಲ್ಲಿ ಇಲ್ಲ ಎಂದು ವೈಟ್‌ಫೀಲ್ಡ್‌ ನಿವಾಸಿಯೊಬ್ಬರು ತಿಳಿಸಿದ್ಧಾಗಿ ವರದಿ ವಿವರಿಸಿದೆ.

ಇನ್ನು, ಶಾಲೆಗಳು ಹೆಚ್ಚು ಶುಲ್ಕ ಪಡೆಯುತ್ತಿಲ್ಲ ಎಂದು ಸಮರ್ಥಿಸಿಕೊಂಡಿರುವ ಆಂಗ್ಲೋ ಇಂಡಿಯನ್ ಸ್ಕೂಲ್ ಅಸೋಸಿಯೇಷನ್ ಪ್ರತಿನಿಧಿ, ಅರ್ಜಿ ಮಾರಾಟ ಮಾಡಿ ಶಾಲೆಗಳು ಹಣಗಳಿಸುತ್ತಿಲ್ಲ, ಮುದ್ರಣದ ಖರ್ಚುಗಳನ್ನಷ್ಟೆ ಭರಿಸುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ, ಕರ್ನಾಟಕದ ಆಂಗ್ಲ ಮಾಧ್ಯಮ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ ಪ್ರತಿನಿಧಿಯೊಬ್ಬರು, ಶಾಲಾ ಪ್ರವೇಶ ಶುಲ್ಕವನ್ನು ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕೆ ಸದ್ಯಕ್ಕಿಲ್ಲ. ಅದರ ನಿಯಮ ತಿದ್ದುಪಡಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಈ ಪದ್ಧತಿ ಇಲ್ಲ. ಖಾಸಗಿ ಶಾಲೆಗಳಲ್ಲಷ್ಟೆ ಇದೆ. ಖಾಸಗಿ ಶಾಲೆಗಳವರು ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು. ಈ ಸಮಸ್ಯೆ ಸರ್ಕಾರದ ಗಮನದಲ್ಲಿದೆ. ನಿಯಂತ್ರಣಕ್ಕೆ ನಿಯಮ ಪರಿಷ್ಕರಣೆ ಮಾಡುವ ವಿಚಾರವೂ ಚಿಂತನೆಯಲ್ಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಿರುವುದಾಗಿ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ವಿವರಿಸಿದೆ.

Whats_app_banner