Court News: 5,8,9 11 ಬೋರ್ಡ್ ಪರೀಕ್ಷೆ ಇರುತ್ತಾ ಇಲ್ವಾ; ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌-education news karnataka board exams for classes 5 8 9 11 karnataka high court reserves judgment bengaluru news uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Court News: 5,8,9 11 ಬೋರ್ಡ್ ಪರೀಕ್ಷೆ ಇರುತ್ತಾ ಇಲ್ವಾ; ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

Court News: 5,8,9 11 ಬೋರ್ಡ್ ಪರೀಕ್ಷೆ ಇರುತ್ತಾ ಇಲ್ವಾ; ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

ಕರ್ನಾಟಕದಲ್ಲಿ 5,8,9 11 ಬೋರ್ಡ್ ಪರೀಕ್ಷೆ ಇರುತ್ತಾ ಇಲ್ವಾ ಎಂಬುದೇ ಪಾಲಕರು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೊಡ್ಡ ಪ್ರಶ್ನೆಯಾಗಿ ಕಾಡಿದೆ. ಬಹಳ‍ಷ್ಟು ಗೊಂದಲಕ್ಕೆ ಕಾರಣವಾಗಿರುವ ಈ ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದ ಮಹತ್ವದ ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌ ಶೀಘ್ರದಲ್ಲೇ ಅದನ್ನು ಪ್ರಕಟಿಸುವುದಾಗಿ ಘೋಷಿಸಿದೆ.

ಕರ್ನಾಟಕ ಹೈಕೋರ್ಟ್‌  (ಸಾಂಕೇತಿಕ ಚಿತ್ರ)
ಕರ್ನಾಟಕ ಹೈಕೋರ್ಟ್‌ (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ 5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ಇರುತ್ತಾ, ಇಲ್ವಾ? ಇದು ಸದ್ಯ ವಿದ್ಯಾರ್ಥಿಗಳು ಮತ್ತು ಪಾಲಕರ ಮುಂದಿರುವ ಪ್ರಶ್ನೆ.

ಕರ್ನಾಟಕದ 5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಕೆಯಾದ ದಾವೆಯ ಮುಂದುವರಿದ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್, ಅದರ ತೀರ್ಪನ್ನು ಕಾಯ್ದಿರಿಸಿದೆ.

ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ 5, 8, 9 ಮತ್ತು 11 ನೇ ತರಗತಿಗಳಿಗೆ ಬೋರ್ಡ್‌ ಮಟ್ಟದ ವಾರ್ಷಿಕ ಪರೀಕ್ಷೆಗಳನ್ನು ನಡೆಸುವುದಾಗಿ ಕರ್ನಾಟಕ ಸರ್ಕಾರ ಎರಡು ಸುತ್ತೋಲೆಗಳನ್ನು ಪ್ರಕಟಿಸಿತ್ತು. ಅವುಗಳನ್ನು ಏಕಸದಸ್ಯ ಪೀಠ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದಾಗ, ಅದರ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತ್ತು. ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋಗಿ ಅಲ್ಲಿಂದ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ನಿರ್ದೇಶನ ಸಿಕ್ಕಿದ್ದರಿಂದ ಇಲ್ಲೇ ವಿಚಾರಣೆ ನಡೆಯಿತು.

5,8,9,11 ಬೋರ್ಡ್ ಪರೀಕ್ಷೆ ನಡೆಯುವುದೇ?

ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ರಾಜೇಶ್ ಕೆ.ರೈ ಅವರಿದ್ದ ನ್ಯಾಯಪೀಠವು ಈ ದಾವೆಯ ವಿಚಾರಣೆ ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿ ಮುಂದಿನ ಕೆಲ ದಿನಗಳಲ್ಲಿ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ಇದರ ವಿಚಾರಣೆ ಸಂದರ್ಭದಲ್ಲಿ, ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ವಿಕ್ರಮ್ ಹುಯಿಲ್‌ಗೋಳ ವಾದ ಮಂಡಿಸಿದ್ದರು. ಇತರ ಸಲ್ಲಿಕೆಗಳ ನಡುವೆ, 5,8, 9 ಅಥವಾ 11 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸದಂತೆ ಯಾವುದೇ ನಿಷೇಧವಿಲ್ಲ ಎಂದು ಪ್ರತಿಪಾದಿಸಿದರು.

ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ ಕಾಯಿದೆ) ಸೆಕ್ಷನ್ 30 ಪ್ರಕಾರ, ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವವರೆಗೆ ಯಾವುದೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಗತ್ಯವಿಲ್ಲ ಎಂದು ಮಾತ್ರ ಹೇಳುತ್ತದೆ. ಇದೇ ಕಾಯ್ದೆಯ ಸೆಕ್ಷನ್ 16ರ ಪ್ರಕಾರ, ಬೋರ್ಡ್ ಪರೀಕ್ಷೆಯನ್ನು ನಡೆಸುವ ಅಗತ್ಯವಿರಬಹುದು. ಆದರೆ ಉತ್ತೀರ್ಣರಾಗಬೇಕಾದ ಅಗತ್ಯ ಇಲ್ಲ ಎಂದು ಅವರು ವಿವರಿಸಿದರು.

ಪರೀಕ್ಷೆಗಳು ತಮಾಷೆಯಲ್ಲ. ಮಕ್ಕಳು ಹಲವು ದಿನಗಳಿಂದ ಸಿದ್ಧತೆ ಮಾಡಿಕೊಂಡಿರುತ್ತಾರೆ. ಅದಕ್ಕೆ ಅಡ್ಡಿ ಉಂಟುಮಾಡಿದರೆ ಅದು ಅವರ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು ಎಂದು ಬಾರ್ ಆಂಡ್ ಬೆಂಚ್ ವೆಬ್‌ಸೈಟ್ ವರದಿ ಮಾಡಿದೆ.

ಅರ್ಜಿದಾರರ ಪರ ವಕೀಲರು, ರಾಜ್ಯ ಸರ್ಕಾರವು ಬೋರ್ಡ್ ಪರೀಕ್ಷೆಗಳನ್ನು ನಡೆಸುವುದಕ್ಕೆ ಮುಂದಾಗಿರುವುದು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಗೆ ತದ್ವಿರುದ್ಧವಾಗಿದೆ. ಈ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು ಕಾನೂನುಬಾಹಿರ ಎಂದು ಪ್ರತಿವಾದ ಮಂಡಿಸಿದ್ದರು.

ಎರಡೂ ಬದಿಯ ಕಕ್ಷಿದಾರರ ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠವು 5,8,9,11 ಬೋರ್ಡ್ ಪರೀಕ್ಷೆ ನಡೆಸಬೇಕಾ ಅಥವಾ ಬೇಡವೇ ಎಂಬುದಕ್ಕೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point