Hassan News: ಪತ್ನಿ ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ಕಾರು ಚಾಲಕ, ಹಾಸನ ಜಿಲ್ಲೆಯಲ್ಲಿ ದುರ್ಘಟನೆ
ಕನ್ನಡ ಸುದ್ದಿ  /  ಕರ್ನಾಟಕ  /  Hassan News: ಪತ್ನಿ ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ಕಾರು ಚಾಲಕ, ಹಾಸನ ಜಿಲ್ಲೆಯಲ್ಲಿ ದುರ್ಘಟನೆ

Hassan News: ಪತ್ನಿ ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ಕಾರು ಚಾಲಕ, ಹಾಸನ ಜಿಲ್ಲೆಯಲ್ಲಿ ದುರ್ಘಟನೆ

Driver Suicide ಹಾಸನ ಜಿಲ್ಲೆಯ ಚಾಲಕರೊಬ್ಬರು ಸಾಲಗಾರರ ಕಿರುಕುಳ ತಾಳಲಾರದೇ ಪತ್ನಿ, ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

Couple Suicide ಹಾಸನ ಜಿಲ್ಲೆ ಚನ್ನರಾಯಪಟ್ಟಣದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
Couple Suicide ಹಾಸನ ಜಿಲ್ಲೆ ಚನ್ನರಾಯಪಟ್ಟಣದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಾಸನ: ಸಾಲ ಬಾಧೆಯನ್ನು ಕಾರು ಚಾಲಕನೊಬ್ಬ ತನ್ನ ಪತ್ನಿ ಹಾಗೂ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಕರುಳು ಹಿಂಡುವ ಘಟನೆಯಿದು. ಇದು ನಡೆದಿರುವುದು ಹಾಸನ ಜಿಲ್ಲೆಯಲ್ಲಿ. ಚನ್ನರಾಯಪಟ್ಟಣ ನಗರದ ಕೆರೆ ಬೀದಿಯ ನಿವಾಸಿಗಳು ತಾಲ್ಲೂಕಿನ ಮುದ್ಲಾಪುರ ಬಳಿ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಇಡೀ ಕುಟುಂಬ ಆಕ್ರಂದನದಲ್ಲಿ ಮುಳುಗಿದೆ. ಈಗಾಗಲೇ ನಾಲೆಯಲ್ಲಿ ಪತಿ ಹಾಗೂ ಪತ್ನಿ ಶವಗಳು ಪತ್ತೆಯಾಗಿದೆ. ಮಗಳ ಶವ ಇನ್ನೂ ಪತ್ತೆಯಾಗಿಲ್ಲ. ಹುಡುಕಾಟವನ್ನು ರಕ್ಷಣಾ ತಂಡಗಳು ಚನ್ನರಾಯಪಟ್ಟಣ ಬಳಿ ಮುಂದುವರೆಸಿವೆ. ಹೇಮಾವತಿ ನಾಲೆಯಲ್ಲಿ ಭಾರೀ ನೀರು ಹರಿದಿದ್ದರಿಂದ ದೂರಕ್ಕೆ ಶವ ಹೋಗಿರಬಹುದು ಎಂದು ಶಂಕಿಸಲಾಗಿದೆ.

ಚನ್ನರಾಯಪಟ್ಟಣ ನಗರದ ನಿವಾಸಿಗಳಾದ ಕಾರು ಚಾಲಕ ಶ್ರೀನಿವಾಸ್ (43), ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಶ್ವೇತಾ (36) ಹಾಗೂ ದಂಪತಿ ಪುತ್ರಿ, ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ನಾಗಶ್ರೀ (13) ಮೃತ ದುರ್ದೈವಿಗಳು.

ಹಲವಾರು ವರ್ಷದಿಂದ ಕಾರು ಚಾಲಕನಾಗಿದ್ದ ಶ್ರೀನಿವಾಸ್‌ ಜೀವನ ಯಥಾರೀತಿ ನಡೆದಿತ್ತು. ಕೆಲವು ವರ್ಷದಿಂದ ಸಾಲ ಹೆಚ್ಚಾಗಿತ್ತು. ಪತ್ನಿ ಶಿಕ್ಷಕಿಯಾಗಿ ಸೇರಿಕೊಂಡ ನಂತರವೂ ವ್ಯತ್ಯಾಸವೇನೂ ಆಗಿರಲಿಲ್ಲ. ಪತ್ನಿಗೆ ಬರುತ್ತಿದ್ದ ಅಲ್ಪ ಸಂಬಳ ಹಾಗೂ ಕಾರು ಚಾಲಕನಾಗಿದ್ದರಿಂದ ಸಿಗುತ್ತಿದ್ದ ಅಲ್ಪ ನೆರವಿನಲ್ಲೇ ಕುಟುಂಬದ ಸಾಗಿತ್ತು. ಆದರೆ ಸಾಲದ ಪ್ರಮಾಣ ಅತಿಯಾಗಿದ್ದು ಶ್ರೀನಿವಾಸ್‌ಗೆ ಚಿಂತೆಗೀಡು ಮಾಡಿತ್ತು. ಸಾಲಗಾರರು ಹಣ ನೀಡುವಂತೆ ಕೇಳುತ್ತಿದ್ದುದೂ ಬೇಸರ ತಂದಿತ್ತು. ಕೆಲ ದಿನಗಳ ಹಿಂದೆ ಮನೆ ಬಳಿ ಬಂದ್ದು ಸಾಲಗಾರರು ಗಲಾಟೆ ಮಾಡಿದ್ದರಿಂದ ಶ್ರೀನಿವಾಸ್‌ ಮನ ನೊಂದಿದ್ದರು ಎನ್ನಲಾಗಿದೆ.

ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿಕೊಂಡಿದ್ದ ಶ್ರೀನಿವಾಸ್‌ ಪತ್ನಿ ಹಾಗೂ ಮಗಳನ್ನು ಕರೆದುಕೊಂಡು ಹೋಗಿದ್ದರು. ಊರಿಗೆ ಹೋಗುವುದಾಗಿ ಹೇಳಿ ಚನ್ನರಾಯಪಟ್ಟಣ ತಾಲ್ಲೂಕು ಬಾಗೂರು ಹೋಬಳಿ, ಮುದ್ಲಾಪುರ ಬಳಿ ಹರಿಯುವ ಹೇಮಾವತಿ ನಾಲೆಗೆ ಪತ್ನಿ ಹಾಗೂ ಮಗಳನ್ನು ದೂಡಿ ತಾವೂ ಆತ್ಮಹತ್ಯೆಗೆ ಶರಣಾಗಿದ್ದರು. ಎರಡು ದಿನವಾದರೂ ಮನೆಗೆ ಬಾರದೇ ಇದ್ದಾಗ ನೆರೆಹೊರೆಯವರು ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿದ್ದವು. ಹುಡುಕಾಟ ನಡೆಸಿದ ಮನೆಯವರು ಚನ್ನರಾಯಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.

ಬುಧವಾರ ನಿರಂತರವಾಗಿ ಹುಡುಕಾಟ ನಡೆಸಿದಾಗ ಸಮೀಪವೇ ಇರುವ ಹೇಮಾವತಿ ನಾಲೆ ಬಳಿ ಚಪ್ಪಲಿ ಇತರೆ ವಸ್ತು ಕಂಡು ಬಂದಿದ್ದವು. ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನದ ಮೇಲೆ ನೀರು ತಗ್ಗಿಸಿ ಹುಡುಕಾಟ ನಡೆಸಿದಾಗ ಇಬ್ಬರ ಶವಗಳು ಸಮೀಪದಲ್ಲೇ ದೊರೆತವು. ಮಗಳ ಶವ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಎಸ್ಪಿ ಮೊಹಮ್ಮದ್‌ ಸುಜೀತಾ ಹಾಗೂ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಅಗ್ನಿ ಶಾಮಕ ದಳದ ಸಿಬ್ಬಂದಿ ಶವ ಹುಡುಕಾಟಕ್ಕೆ ನೆರವಾದರು. ಈ ಕುರಿತು ನುಗ್ಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

 

(ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.)

Whats_app_banner