ಕನ್ನಡ ಸುದ್ದಿ  /  ಕರ್ನಾಟಕ  /  ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಆಶ್ಲೀಲ ವಿಡಿಯೋ ಕೇಸ್ ಏನಾಯಿತು, ಇದುವರೆಗಿನ 10 ವಿದ್ಯಮಾನ

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಆಶ್ಲೀಲ ವಿಡಿಯೋ ಕೇಸ್ ಏನಾಯಿತು, ಇದುವರೆಗಿನ 10 ವಿದ್ಯಮಾನ

ಹಾಸನ ಲೈಂಗಿಕ ಹಗರಣ ದಿನೇದಿನೆ ಹೊಸ ತಿರುವುಪಡೆಯುತ್ತಿದೆ. ವಿದೇಶಕ್ಕೆ ಹೋಗಿರುವ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಶ್ಲೀಲ ವಿಡಿಯೋ ಕೇಸ್ ಏನಾಯಿತು, ಇದುವರೆಗಿನ 10 ವಿದ್ಯಮಾನಗಳು ಹೀಗಿವೆ ನೋಡಿ.

ಹಾಸನ ಲೈಂಗಿಕ ಹಗರಣ ಕೇಸ್‌ನಲ್ಲಿ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ (ಎಡ ಚಿತ್ರ) ಅತ್ಯಾಚಾರ ಮತ್ತು ಆಶ್ಲೀಲ ವಿಡಿಯೋ ಕೇಸ್ ಏನಾಯಿತು?, ಅವರ ತಂದೆ ಎಚ್ ಡಿ ರೇವಣ್ಣ ( ಬಲ ಚಿತ್ರ) ಅವರಿಗೆ ಸಂತ್ರಸ್ತೆ ಅಪಹರಣ ಕೇಸ್‌ನಲ್ಲಿ ಷರತ್ತುಬದ್ಧ ಜಾಮೀನು ಸಿಕ್ಕಿದೆ.
ಹಾಸನ ಲೈಂಗಿಕ ಹಗರಣ ಕೇಸ್‌ನಲ್ಲಿ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ (ಎಡ ಚಿತ್ರ) ಅತ್ಯಾಚಾರ ಮತ್ತು ಆಶ್ಲೀಲ ವಿಡಿಯೋ ಕೇಸ್ ಏನಾಯಿತು?, ಅವರ ತಂದೆ ಎಚ್ ಡಿ ರೇವಣ್ಣ ( ಬಲ ಚಿತ್ರ) ಅವರಿಗೆ ಸಂತ್ರಸ್ತೆ ಅಪಹರಣ ಕೇಸ್‌ನಲ್ಲಿ ಷರತ್ತುಬದ್ಧ ಜಾಮೀನು ಸಿಕ್ಕಿದೆ.

ಬೆಂಗಳೂರು: ಹಾಸನ ಲೈಂಗಿಕ ಹಗರಣ (Hassan Sex Scandal), ಅಶ್ಲೀಲ ವಿಡಿಯೋ ಪೆನ್‌ ಡ್ರೈವ್‌ ಕೇಸ್‌ಗೆ ಸಂಬಂಧಿಸಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡು 20ಕ್ಕೂ ಹೆಚ್ಚು ದಿನಗಳಾದವು. ಪ್ರಕರಣ ಬೆಳಕಿಗೆ ಬರುತ್ತಲೇ ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೀಗ ಮೇ 15ಕ್ಕೆ ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಆಗಮಿಸಲು ಮಾಡಿದ್ದ ವಿಮಾನ ಪ್ರಯಾಣದ ಟಿಕೆಟ್ ರದ್ದುಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ರದ್ದುಗೊಂಡಿರುವ ಟಿಕೆಟ್‌ನ ಇಮೇಜ್‌ ವೈರಲ್ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ (ಏಪ್ರಿಲ್ 26) ಮತದಾನಕ್ಕೆ ಮೊದಲು ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಬಹಿರಂಗವಾಗಿತ್ತು. ಈ ನಡುವೆ, ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಎಚ್ ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ಅನ್ನು ಅವರ ಮನೆಗೆಲಸದ ಮಹಿಳೆಯೊಬ್ಬರು ದಾಖಲಿಸಿದ್ದರು. ಇದರಲ್ಲಿ ಎಚ್ ಡಿ ರೇವಣ್ಣ ಮೊದಲ ಆರೋಪಿ. ಪ್ರಜ್ವಲ್ ದ್ವಿತೀಯ ಆರೋಪಿ. ಈ ನಡುವೆ, ಸಂತ್ರಸ್ತೆ ಮನೆಗೆಲಸದ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣವೂ ಎಚ್ ಡಿ ರೇವಣ್ಣ ಮತ್ತು ಅವರ ಆಪ್ತ ಸತೀಶ್ ಬಾಬು ಮೇಲೆ ದಾಖಲಾಯಿತು. ಇದರ ಜೊತೆಗೆ ಪ್ರಜ್ವಲ್ ವಿರುದ್ಧ ಎರಡು ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ.

ಪ್ರಜ್ವಲ್ ರೇವಣ್ಣ ಕೇಸ್‌ನ ಇತ್ತೀಚಿನ 10 ವಿದ್ಯಮಾನ

1) ಹಾಸನ ಪ್ರಜ್ವಲ್ ರೇವಣ್ಣ ಅವರು ಮೇ 15ರ ಮಧ್ಯಾಹ್ನ 12.30ರ ಸುಮಾರಿಗೆ ಜರ್ಮನಿಯ ಮ್ಯೂನಿಚ್‌ನಿಂದ ಹೊರಟು ಮೇ 16ರ ನಸುಕಿನ ವೇಳೆ ಬೆಂಗಳೂರಿಗೆ ಆಗಮಿಸುವ ಸುದ್ದಿ ಹರಡಿತ್ತು. ಇದಕ್ಕೆ ಪೂರಕವಾಗಿ, ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ವಾಪಾಸ್ ಆಗಲು ಮುಂಗಡವಾಗಿ ಕಾಯ್ದಿರಿಸಿದ್ದ ಲುಫ್ತಾನ್ಸಾ ವಿಮಾನ ಟಿಕೆಟ್ ಇಮೇಜ್ ವೈರಲ್ ಆಗಿತ್ತು.

2) ಎಚ್ ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿ ಬಿಡುಗಡೆಯಾದ ಬೆನ್ನಿಗೆ, ಪ್ರಜ್ವಲ್ ರೇವಣ್ಣ ಕಾನೂನು ಸಲಹೆ ಪಡೆದು ಬೆಂಗಳೂರಿಗೆ ಹಿಂದಿರುಗುವ ನಿರ್ಧಾರವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಕರ್ನಾಟಕಕ್ಕೆ ಬರಲಿದ್ದಾರೆ ಎಂಬ ವದಂತಿ ಹರಡಿದೆ.

3) ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರಿಗೆ ಜಾಮೀನು ಮಂಜೂರು ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಈವರೆಗಿನ ತನಿಖಾ ಬೆಳವಣಿಗೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ (ಮೇ 14) ಎಸ್‌ಐಟಿ ತಂಡದೊಂದಿ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು. ತನಿಖೆಯನ್ನು ಚುರುಕುಗೊಳಿಸುವಂತೆ ತಿಳಿಸಿದರಲ್ಲದೆ, ಪಾರದರ್ಶಕವಾಗಿ ಮಾಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

4) 'ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್‌ಡ್ರೈವ್ ಕೇಸ್‌ನಲ್ಲಿ ಸಣ್ಣ ಪಾತ್ರವೂ ನನ್ನದಿಲ್ಲ. ಅದಕ್ಕೂ ನನಗೂ ಸಂಬಂಧವೂ ಇಲ್ಲ. ದೇವೇಗೌಡರ ಕುಟುಂಬಕ್ಕೆ ಕೆಟ್ಟದಾಗಲಿ ಅಂತ ನಾನು ಬಯಸುವವನೂ ಅಲ್ಲ. ಈ ವಿಚಾರದಲ್ಲಿ ನನಗೂ ಬೇಸರವಿದೆ' ಎಂದು ತಮ್ಮ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಿರುವ ಜೆಡಿಎಸ್ ಮುಖ್ಯಸ್ಥ ಎಚ್‌. ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ (ಮೇ 14) ಪ್ರತಿಕ್ರಿಯಿಸಿದ್ದಾರೆ.

5) ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ ದಿನೇದಿನೇ ಹೊಸ ತಿರುವು ಪಡೆಯುತ್ತಿದೆ. ಸದ್ಯ ಬಿಜೆಪಿ ಮುಖಂಡ, ಮಾಜಿ ಶಾಸಕ ಪ್ರೀತಂಗೌಡರ ಮೂವರು ಆಪ್ತರಿಗೆ ಸೇರಿದ 18 ಸ್ಥಳಗಳ ಮೇಲೆ ಎಸ್‌ಐಟಿ ತಂಡ ಮಂಗಳವಾರ (ಮೇ 14) ದಾಳಿ ನಡೆಸಿತು. ಪ್ರೀತಂಗೌಡರ ಆಪ್ತ ಶರತ್ ಅಲಿಯಾಸ್ ಕ್ವಾಲಿಟಿ ಶರತ್, ಕಿರಣ್ ಮತ್ತು ಪುನೀತ್ ಎಂಬುವರಿಗೆ ಎಸ್‌ಐಟಿ ಬಿಸಿ ತಟ್ಟಿದೆ. ಶರತ್‌ ಒಡೆತನದ ಕ್ವಾಲಿಟಿ ಬಾರ್ ಹಾಗೂ ಕಿರಣ್ ಒಡೆತನದ ಕೃಷ್ಣಾ ಹೋಟೆಲ್ ಮೇಲೆ ದಾಳಿ ನಡೆಸಿ, ಅಲ್ಲಿ ಸಾಕ್ಷ್ಯಗಳನ್ನು ಕಲೆಹಾಕಿದೆ.

6) ಲೈಂಗಿಕ ದೌರ್ಜನ್ಯ, ಪೆನ್‌ಡ್ರೈವ್ ಪ್ರಕರಣದ ತನಿಖೆ ಚುರುಕುಗೊಂಡಿರುವ ನಡುವೆಯೇ ಇನ್‌ಸ್ಪೆಕ್ಟರ್ ಜನರಲ್ (ಐಜಿ) ಅಮಿತ್ ಸಿಂಗ್ ಮಂಗಳವಾರ (ಮೇ 14) ಹಾಸನದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಭೆ ನಡೆಸಿದರು. ಈ ಹಿಂದೆ ಹಾಸನ ಎಸ್ಪಿಆಗಿದ್ದ ಅಮಿತ್ ಸಿಂಗ್, ಎಸ್ಪಿ ಮಹಮ್ಮದ್‌ ಸುಜೀತ್ ಹಾಗೂ ಪೊಲೀಸ್‌ ಅಧಿಕಾರಿಗಳ ಜತೆಗೆ ಮಹತ್ವದ ಸಭೆ ನಡೆಸಿ, ತನಿಖೆಯ ಪ್ರಗತಿ ಪರಿಶೀಲಿಸಿದರು.

7) ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಆರೋಪದ ಮೇರೆಗೆ ಬಂಧಿತ ಚೇತನ್ ಹಾಗೂ ಲಿಖಿತ್ ಗೌಡ (ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು) ಅವರ ಜಾಮೀನು ಅರ್ಜಿಯನ್ನು ಹಾಸನದ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಮಂಗಳವಾರ (ಮೇ 14) ತಿರಸ್ಕರಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರೂ ಆರೋಪಿಗಳನ್ನು ಮೇ 12ರಂದು ಪೊಲೀಸರು ಬಂಧಿಸಿದ್ದರು. ಈ ವೇಳೆ ಕೋರ್ಟ್‌ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

8) ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್ ಮಂಗಳವಾರ (ಮೇ 14) ನಿರಾಕರಿಸಿದೆ. ಪಕ್ಷದ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ ಸಲ್ಲಿಸಿದ್ದ ತಕರಾರು ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಈ ಹಂತದಲ್ಲಿ ನಾವು ಮಧ್ಯಪ್ರವೇಶಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿ ವಿಚಾರಣೆ ಮುಂದೂಡಿದರು.

9) ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ನಾಶಪಡಿಸುವ ವೇಳೆ ಸಿಕ್ಕಬಿದ್ದಿರುವ ಹಾಸನ ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಬಂಧನದ ಬೆನ್ನಲ್ಲೇ ''ಇದು ಟ್ರೇಲರ್. ಪಿಕ್ಟರ್‌ಅಭಿ ಬಾಕಿ ಹೇ. ಈಗ ರೈಟ್, ಲೆಫ್ಟ್ ಬಂಧನವಾಗಿದೆ. ಮುಂದಿನ ವಾರ ಉಳಿದ ಪಾತ್ರಧಾರಿಗಳು ಹೊರಬರುತ್ತಾರೆ. ಪೆನ್ ಡ್ರೈವ್ ಹಂಚಿಕೆ ಹಿಂದೆ ಬಿಜೆಪಿ ಮಾಜಿ ಶಾಸಕನ ಕೈವಾಡ ಎಂದಿದ್ದೆ. ಈಗ ಅವರ ಆಪ್ತರ ಬಂಧನವಾಗಿದೆ” ಎಂದು ಮಂಡ್ಯ ಕ್ಷೇತ್ರದ ಶಾಸಕ ಪಿ. ರವಿಕುಮಾರ್ (ರವಿ ಗಣಿಗ) ಮಂಗಳವಾರ (ಮೇ 14) ಹೇಳಿದ್ದರು.

10) ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಆಶ್ಲೀಲ ವಿಡಿಯೋ ಪೆನ್‌ ಡ್ರೈವ್ ಹಂಚಿಕೆ ಕೇಸ್‌ನಲ್ಲಿ ಕೇಂದ್ರ ಬಿಂದುವಾಗಿ ಗಮನಸೆಳೆದಿದ್ದ ಬಿಜೆಪಿ ಮುಖಂಡ ಜಿ.ದೇವರಾಜೇ ಗೌಡ ಅವರನ್ನು ಎರಡು ದಿನಗಳ ಪೊಲೀಸ್ ವಿಚಾರಣೆಗಾಗಿ ಮಂಗಳವಾರ (ಮೇ 14) ಬೆಳಗ್ಗೆ ಪೊಲೀಸರು ಕಸ್ಟಡಿಗೆ ತೆಗೆದುಕೊಂಡರು.

ಜಾಮೀನು ಪಡೆದು ಹೊರಬಂದ ಎಚ್ ಡಿ ರೇವಣ್ಣ

ಸಂತ್ರಸ್ತ ಮನೆಗೆಲಸ ಮಹಿಳೆಯ ಅಪಹರಣ, ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧಿತರಾಗಿದ್ದ ಜೆಡಿಎಸ್ ಶಾಸಕ ಎಚ್‌ ಡಿ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಸಂಜೆ ಜಾಮೀನು ನೀಡಿದ್ದು, ಮಂಗಳವಾರ (ಮೇ 14) ಜಾಮೀನು ಪ್ರಕ್ರಿಯೆ ಪೂರ್ಣಗೊಂಡಿದೆ. ಇಬ್ಬರು ಶ್ಯೂರಿಟಿ, 5 ಲಕ್ಷ ರೂಪಾಯಿ ಬಾಂಡ್‌ ಮತ್ತು ಹೊಳೆನರಸೀಪುರ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗಬಾರದು. ಕೆಆರ್ ನಗರ ಪ್ರವೇಶಿಸುವಂತಿಲ್ಲ. ಸಾಕ್ಷ್ಯ ನಾಶ ಮಾಡಬಾರದು. ಎಸ್ಐಟಿ ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳೊಂದಿಗೆ ಜಾಮೀನು ನೀಡಲಾಗಿದೆ.

IPL_Entry_Point