ಕರ್ನಾಟಕ ವಿವಿ ಘಟಿಕೋತ್ಸವ: ಹೆತ್ತವರ ಆಸೆ ನೆರವೇರಿಸಿದ ಆಶಾಕಾರ್ಯಕರ್ತೆ ಮಗಳು; ಜಯಶ್ರೀ ತಳವಾರ ಕೊರಳಿಗೆ 9 ಚಿನ್ನದ ಪದಕ-hubballi news village girl jayashree talwar win 9 gold medals in karnataka university convocation dharwad jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ವಿವಿ ಘಟಿಕೋತ್ಸವ: ಹೆತ್ತವರ ಆಸೆ ನೆರವೇರಿಸಿದ ಆಶಾಕಾರ್ಯಕರ್ತೆ ಮಗಳು; ಜಯಶ್ರೀ ತಳವಾರ ಕೊರಳಿಗೆ 9 ಚಿನ್ನದ ಪದಕ

ಕರ್ನಾಟಕ ವಿವಿ ಘಟಿಕೋತ್ಸವ: ಹೆತ್ತವರ ಆಸೆ ನೆರವೇರಿಸಿದ ಆಶಾಕಾರ್ಯಕರ್ತೆ ಮಗಳು; ಜಯಶ್ರೀ ತಳವಾರ ಕೊರಳಿಗೆ 9 ಚಿನ್ನದ ಪದಕ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ‌ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಜಯಶ್ರೀ ತಳವಾರ 9 ಚಿನ್ನದ ಪದಕ ಪಡೆದಿದ್ದಾರೆ. ವಿವಿಯ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ‌ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ ಅವರಿಂದ ಪದಕ ಪಡೆದುಕೊಂಡಿದ್ದಾರೆ.

ಕರ್ನಾಟಕ ವಿವಿ ಘಟಿಕೋತ್ಸವ: ಜಯಶ್ರೀ ತಳವಾರ ಕೊರಳಿಗೆ 9 ಚಿನ್ನದ ಪದಕ
ಕರ್ನಾಟಕ ವಿವಿ ಘಟಿಕೋತ್ಸವ: ಜಯಶ್ರೀ ತಳವಾರ ಕೊರಳಿಗೆ 9 ಚಿನ್ನದ ಪದಕ

ಧಾರವಾಡ: ಸಾಧಿಸುವ ಛಲವಿದ್ದರೆ ಹಳ್ಳಿಯಾದರೇನು ದಿಲ್ಲಿಯಾದರೇನು? ಆರ್ಥಿಕ ಸಾಮರ್ಥ್ಯವಿದ್ದರೆಷ್ಟು ಬಿಟ್ಟರೆಷ್ಟು. ನಿರಂತರ ಪ್ರಯತ್ನ, ಅರ್ಹತೆ ಇದ್ದರೆ ಯಶಸ್ಸು ಖಚಿತ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ‌ ಘಟಿಕೋತ್ಸವದಲ್ಲಿ‌ ಹಳ್ಳಿ ಹುಡುಗಿಯೊಬ್ಬರು ಅಮೋಘ ಸಾಧನೆ ಮಾಡಿ ತೋರಿಸಿದ್ದಾರೆ. ಆಶಾ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯಿತಿ ಸಿಪಾಯಿಯ ಪುತ್ರಿಯಾದ ಜಯಶ್ರೀ ತಳವಾರ ಎಂಬವರು ಕರ್ನಾಟಕ ವಿಶ್ವವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ 9 ಚಿನ್ನದ ಪದಕಗಳನ್ನು ತಮ್ಮ ಕೊರಳಿಗೇರಿಸಿಕೊಂಡಿದ್ದಾರೆ.

ಶಿಕ್ಷಣ ಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ‌ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ 2022ರಲ್ಲಿ ಪ್ರವೇಶ ಪಡೆದ ಜಯಶ್ರೀ, ಉತ್ತಮ ಅಂಕಗಳನ್ನು ಕಲೆ ಹಾಕಿದ್ದಾರೆ. ಅದರೊಂದಿಗೆ 2023-24ನೇ ಬ್ಯಾಚ್‌ನ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ. ಅದರಂತೆಯೇ ಸೆಪ್ಟೆಂಬರ್‌ 24ರಂದು ಧಾರವಾಡದ ಗಾಂಧೀ ಭವನದಲ್ಲಿ ನಡೆದ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ‌ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ ಅವರು ಜಯಶ್ರೀ ತಳವಾರ ಅವರಿಗೆ ಪದಕ ಪ್ರದಾನ ಮಾಡಿದ್ದಾರೆ.

ಚಿನ್ನದಂತೆ ಬೆಳೆಸಿದ ಮಗಳು ಮನೆಗೆ ಚಿನ್ನದ ಪದಕವೇ ತಂದಳು

ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದವರಾದ ಜಯಶ್ರೀ ತಳವಾರ, ಆರ್ಥಿಕವಾಗಿ ಹಿಂದುಳಿದ ಕುಟುಂಬದವರು. ತಾಯಿ ಮಂಜುಳಾ ಮಹಾಂತೇಶ ತಳವಾರ ಆಶಾ ಕಾರ್ಯಕರ್ತೆಯಾಗಿದ್ದಾರೆ. ತಂದೆ ಮಹಾಂತೇಶ, ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದ ಗ್ರಾಮ ಪಂಚಾಯಿತಿ ಗ್ರೂಪ್ ಡಿ ದರ್ಜೆಯ ಸಿಪಾಯಿ. ಮನೆಯಲ್ಲಿ ಬಡತನವಿದ್ದರೂ, ಮಗಳ ಓದಿಗೆ ಅಪ್ಪ-ಅಮ್ಮ ಯಾವ ಕೊರತೆಯೂ ಆಗದಂತೆ ನೋಡಿ ಬೆಳೆಸಿದ್ದಾರೆ. ಹೆತ್ತವರು ಬೆವರಿನ ಬೆಲೆ ಅರಿತು ಛಲತೊಟ್ಟು ಓದಿದ ಜಯಶ್ರೀ ಇದೀಗ ಮನೆಗೆ ಚಿನ್ನದ ಪದಕ ತಂದಿದ್ದಾಳೆ.

ಹಳ್ಳಿ ಹುಡುಗಿ ಈಗ ಚಿನ್ನದ ಹುಡುಗಿ

ಗದಗ ಜಿಲ್ಲೆಯ ರೋಣ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪೂರೈಸಿರುವ ತಳವಾರ, ಧಾರವಾಡದ ಹುರುಕಡ್ಲಿ ಮಹಿಳಾ ಕಾಲೇಜಿನಲ್ಲಿ ಪಿಯುಸಿ ಮತ್ತು ಧಾರವಾಡದ ಸರ್ಕಾರಿ ಪ್ರಥ‌ಮ ದರ್ಜೆ ಕಾಲೇಜಿನಲ್ಲಿ ಪದವಿ ಓದಿದ್ದಾರೆ. ಹಾಸ್ಟೆಲ್‌ನಲ್ಲಿದ್ದು ಓದಿ ಚಿನ್ನದ ಪದಕ ಗಿಟ್ಟಿಸಿರುವುದು ಹಳ್ಳಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದೆ.

ಜಯಶ್ರೀ ಅವರ ಸಹೋದರಿ ಜ್ಯೋತಿ ತಳವಾರ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಲೈಬ್ರರಿ ಸಾಯಿನ್ಸ್ ಓದಿದ್ದಾಳೆ. ತನ್ನ ಓದಿಗೆ ತನ್ನ ಸಹೋದರಿ ಜ್ಯೋತಿ ನಿರಂತರ ಮಾರ್ಗದರ್ಶನ ಮಾಡುತ್ತಾಳೆ ಎನ್ನುತ್ತಾರೆ ಜಯಶ್ರೀ. ಆಶಾ ಕಾರ್ಯಕರ್ತೆ ಮತ್ತು ಸಿಪಾಯಿ ಮಗಳಾಗಿ ಜಯಶ್ರೀ ತಳವಾರ ಅವರು ವಿಶ್ವವಿದ್ಯಾಲಯದ ಮಟ್ಟದಲ್ಲಿ ಮಾಡಿದ ಸಾಧನೆಯು ಹೆತ್ತವರಿಗೆ ಹೆಮ್ಮೆ ತಂದಿದೆ.

ತಾಯಿಯ ಶ್ರಮ, ಪ್ರಾಮಾಣಿಕತೆಯೇ ಸ್ಪೂರ್ತಿ

ತಾಯಿಯ ದುಡಿಮೆ, ಅವಳು ರೂಢಿಸಿಕೊಂಡ ಪ್ರಾಮಾಣಿಕತೆ, ಒಳ್ಳೆಯವರಾಗಿ ಬಾಳಬೇಕು ಎನ್ನುವ ಅವರ ವಿಚಾರಗಳು ನನಗೆ ಸದಾ ಸ್ಪೂರ್ತಿಯಾಗಿದೆ. ಧಾರವಾಡ ಕವಿವಿ ಪತ್ರಿಕೋದ್ಯಮ ವಿಭಾಗದ ಹಿಂದಿನ ಮುಖ್ಯಸ್ಥರಾಗಿದ್ದ ಪ್ರೊ.ಜೆಎಂ ಚಂದುನವರ, ವಿಭಾಗದ ಈಗಿನ ಮುಖ್ಯಸ್ಥರಾದ ಡಾ.ಸಂಜಯ್ ಮಾಲಗತ್ತಿ, ಉಪನ್ಯಾಸಕರಾದ ಮಂಜುನಾಥ‌ ಅಡಿಗಲ್, ಡಾ.ನಾಗರಾಜ, ಡಾ.ವಿಜಯಲಕ್ಷ್ಮಿ ಅವರು ಹಾಗೂ ಇನ್ನಿತರರು ತೋರಿದ ಮಾರ್ಗದರ್ಶನದಿಂದಾಗಿ ಉತ್ತಮ‌ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ಸಾಧನೆಗೆ ಸದಾಕಾಲ ಒತ್ತಾಸೆಯಾದ ಎಲ್ಲ ಸ್ನೇಹಿತರ ಪ್ರೀತಿಗೆ ಅಭಿನಂದನೆ. ಹಳ್ಳಿಯ ಹುಡುಗಿಯರೂ ಸಾಧನೆ ಮಾಡಬಲ್ಲರು ಎನ್ನುವಂತೆ ನನ್ನಂಥವರಿಗೆ ಓದಿನ ರುಚಿ ಹತ್ತಿಸುವ ಈ ಧಾರವಾಡ ಮಣ್ಣಿಗೆ, ನೆಲಕ್ಕೆ ನಾನು ಸದಾ ಋಣಿ. ನಮ್ಮಂಥ ಬಡ ಹುಡುಗಿಯರಿಗೆ ತಾಯಿ ಪ್ರೀತಿ ತೋರಿ ಕರುಣಿಸಿದ ಧಾರವಾಡ ಜನರ ಪ್ರೀತಿಯನ್ನು ಎಂದಿಗೂ ಮರೆಯಲಾರೆ ಎನ್ನುತ್ತಾರೆ ಜಯಶ್ರೀ ತಳವಾರ.

ಪದಕ ಗೆದ್ದ ವಿದ್ಯಾರ್ಥಿನಿಯರು
ಪದಕ ಗೆದ್ದ ವಿದ್ಯಾರ್ಥಿನಿಯರು

ಘಟಿಕೋತ್ಸವದಲ್ಲಿ ಅತಿ ಹೆಚ್ಚು ಪದಕಗಳನ್ನು ಪಡೆದ ವಿದ್ಯಾರ್ಥಿಗಳ ವಿವರ

  • ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿ ಜಯಶ್ರೀ ತಳವಾರ ಅವರಿಗೆ 9 ಪದಕಗಳು ಮತ್ತು ಎರಡು ನಗದು ಪ್ರಶಸ್ತಿ ಹಾಗೂ ಮಮತಾ ಜಗದೀಶ ನಾಯ್ಡು 1 ಪದಕ ಪಡೆದಿದ್ದಾರೆ.
  • ಕನ್ನಡ ಅಧ್ಯಯನ ವಿಭಾಗದ ವಿಧ್ಯಾರ್ಥಿನಿ ಸಂಗೀತಾ ರಾ ಲಕ್ಕಪ್ಪಣ್ಣನವರ 9 ಪದಕ ಮತ್ತು ಎರಡು ನಗದು ಪ್ರಶಸ್ತಿ ಪಡೆದಿದ್ದಾರೆ.
  • ಜೀವರಸಾಯನ ಶಾಸ್ತ್ರ ವಿಭಾಗದ ವಿಧ್ಯಾರ್ಥಿನಿ ಹರ್ಷಿತಾ ಡಿ 8 ಪದಕಗಳು ಪಡೆದುಕೊಂಡರು.
  • ಪ್ರಾಣಿಶಾತ್ರ ವಿಭಾಗದ ವಿದ್ಯಾರ್ಥಿನಿ ವಿಸ್ಮಯ ಸಿ ಅಂಗಡಿ ಅವರಿಗೆ 8 ಪದಕಗಳು ಮತ್ತು ಎರಡು ನಗದು ಪ್ರಶಸ್ತಿಗಳನ್ನು ಪಡೆದಿದ್ದಾರೆ.
  • ಲೈಬ್ರೆರಿ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ರಚನಾ ಶಿವಳ್ಳಿ 8 ಪದಕಗಳು ಮತ್ತು ಒಂದು ನಗದು ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ | ತುಮಕೂರಿನ ಜನ ನಿಬಿಡ ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ವೇಗವಾಗಿ ಬಂದು ಹರಿದ ಕೆಎಸ್ಆರ್‌ಟಿಸಿ ಬಸ್; ವಿಡಿಯೋ ವೈರಲ್

mysore-dasara_Entry_Point