ಬೆಂಗಳೂರು ಸೇರಿದಂತೆ 12 ಜಿಲ್ಲೆಗಳಲ್ಲಿ 4 ದಿನಗಳ ಕಾಲ ಧಾರಾಕಾರ ಮಳೆ; ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್
Heavy Rain in Karnataka: ರಾಜ್ಯದ ವಿವಿಧೆಡೆ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಹೆಚ್ಚಿನದಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು: ಮತ್ತೆ ಮಳೆರಾಯನ ಆರ್ಭಟ ಮುಂದುವರೆದಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇತ್ತೀಚೆಗೆ ಬಿಡುವು ನೀಡಿ ಆತಂಕ ಸೃಷ್ಟಿಸಿದ್ದ ವರುಣ, ಇದೀಗ ರೈತರ ಮೊಗದಲ್ಲಿ ಸಂತಸ ಮೂಡಿಸಿದ್ದಾನೆ. ಇಂದು ಸಹ ಧಾರಾಕಾರ ಮಳೆಯನ್ನು ನಿರೀಕ್ಷಿಸಲಾಗಿದೆ. ಚಾಮರಾಜನಗರ, ಚಿತ್ರದುರ್ಗ, ವಿಜಯನಗರ, ದಾವಣಗೆರೆ, ಕೊಡಗು, ಮೈಸೂರು, ಬೆಂಗಳೂರು ನಗರ, ಹಾಸನ, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಶಿವಮೊಗ್ಗ ಜಿಲ್ಲೆಗಳ ಬಹುತೇಕ ಕಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಈ ಎಲ್ಲಾ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ. ಆದರೆ, ಕರಾವಳಿ ಕರ್ನಾಟಕದಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಬಹುದು. ಪ್ರಸ್ತುತ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ, ಬಹುತೇಕ ಕಡೆಗಳಲ್ಲಿ ಚಳಿಯ ಪ್ರಮಾಣವೂ ದಿನೇ ದಿನೇ ಏರುತ್ತಿದೆ.
ಎಲ್ಲೆಲ್ಲಿ ಅತ್ಯಧಿಕ ಮಳೆ?
ಅಕ್ಟೋಬರ್ 4ರಂದು ಕೊಪ್ಪಳ ಜಿಲ್ಲೆಯ ತಾವರಗೇರಾ ಮತ್ತು ವಿಜಯ ನಗರದ ಹರಪನಹಳ್ಳಿಯಲ್ಲಿ ಗರಿಷ್ಠ ಮಳೆಯಾಗಿದೆ. ಇಲ್ಲಿ ತಲಾ 4 ಸೆಂಟಿ ಮೀಟರ್ ಮಳೆ ಸುರಿದಿದೆ. ಖಜೂರಿ, ಬರಗೂರು, ಮಾಗಡಿ, ಕುಡತಿನಿ, ಕುಣಿಗಲ್, ತಿಕ್ಕೋಟ, ಗಂಗಾವತಿ, ಕದ್ರಾ, ರೋನ್, ಸೈದಾಪುರ, ನಲ್ವತವಾಡ, ಸಿರಾ, ಗುಬ್ಬಿ, ಚಾಮರಾಜನಗರ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹೆಚ್ಚಿನ ಮಳೆ ಸುರಿದಿದೆ. ರಾಜ್ಯದಲ್ಲಿ ನೈರುತ್ಯ ಮುಂಗಾರು ದುರ್ಬಲವಾಗಿತ್ತು. ಪ್ರಸ್ತುತ ಬೆಂಗಳೂರು ಮತ್ತು ಸುತ್ತಮುತ್ತ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಬಹುದು.
ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್
ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಬಹುತೇಕ ಕಡೆಗಳಲ್ಲಿ ಯೆಲ್ಲೋ ಅರ್ಲಟ್ ಘೋಷಿಸಲಾಗಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅ.8ರ ತನಕ ಸಾಧಾರಣ ಮಳೆಯಾಗುವ ಸಾಧ್ಯತೆ ಇರುವ ಕಾರಣ ಯೆಲ್ಲೋ ಅಲರ್ಟ್ ಘೋಷಿಸಲಾಗಿಲ್ಲ. ಉತ್ತರ ಒಳನಾಡಿನಲ್ಲಿ ಅಕ್ಟೋಬರ್ 6 ಮತ್ತು 7 ರಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಯೆಲ್ಲೋ ಅಲರ್ಟ್ ಹಾಕಲಾಗಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಲಿದ್ದು, ಅಕ್ಟೋಬರ್ 8ರ ತನಕ ಯೆಲ್ಲೋ ಅಲರ್ಟ್ ಹಾಕಲಾಗಿದೆ.
ಗರಿಷ್ಠ-ಕನಿಷ್ಠ ಉಷ್ಣಾಂಶ
- ಬಾಗಲಕೋಟೆಯಲ್ಲಿ ಅತಿ ಹೆಚ್ಚಿನ ಗರಿಷ್ಠ ಉಷ್ಣಾಂಶ 34.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
- ವಿಜಯಪುರದಲ್ಲಿ 18.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಮೈಸೂರಿನಲ್ಲಿ ಇವತ್ತೂ ಮಳೆ ಸಾಧ್ಯತೆ
ಮೈಸೂರಿನಲ್ಲಿ ಅಕ್ಟೋಬರ್ 4ರ ಶುಕ್ರವಾರ ಸಂಜೆ ಮಳೆ ಸುರಿದಿದೆ. ಇದು ದಸರಾ ಸಂಭ್ರಮಕ್ಕೆ ತಂಪೆರೆಯಿತು. ಸಿದ್ದಾರ್ಥನಗರ, ಉತ್ತನಹಳ್ಳಿ ಸೇರಿದಂತೆ ಹಲವೆಡೆ ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಯಿತು. ಮಳೆಯ ಕಾರಣ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ರಾತ್ರಿ 8.30ರ ನಂತರ ಮತ್ತೆ ತುಂತುರು ಮಳೆ ಸುರಿಯಿತು. ಇವತ್ತು ಸಹ ಭಾರಿ ಮಳೆಯನ್ನು ನಿರೀಕ್ಷಿಸಲಾಗಿದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇದೆ.