ಸತೀಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಕುರ್ಚಿ ಸಿಗುವ ಸಾಧ್ಯತೆ ಬಗ್ಗೆ ಬಿಸಿಬಿಸಿ ಚರ್ಚೆ: ಸಿದ್ದರಾಮಯ್ಯ ಕೆಳಗಿಳಿಯುವ ಸುಳಿವು ಕೊಟ್ಟ ಸಚಿವ
ಕನ್ನಡ ಸುದ್ದಿ  /  ಕರ್ನಾಟಕ  /  ಸತೀಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಕುರ್ಚಿ ಸಿಗುವ ಸಾಧ್ಯತೆ ಬಗ್ಗೆ ಬಿಸಿಬಿಸಿ ಚರ್ಚೆ: ಸಿದ್ದರಾಮಯ್ಯ ಕೆಳಗಿಳಿಯುವ ಸುಳಿವು ಕೊಟ್ಟ ಸಚಿವ

ಸತೀಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಕುರ್ಚಿ ಸಿಗುವ ಸಾಧ್ಯತೆ ಬಗ್ಗೆ ಬಿಸಿಬಿಸಿ ಚರ್ಚೆ: ಸಿದ್ದರಾಮಯ್ಯ ಕೆಳಗಿಳಿಯುವ ಸುಳಿವು ಕೊಟ್ಟ ಸಚಿವ

Satish Jarakiholi: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ವರ್ಷ ಇರುತ್ತಾರೋ, 3 ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ನೀವು ಅದನ್ನು ಹೈಕಮಾಂಡ್​ಗೆ ಕೇಳಿ ಎಂದು ಹೇಳುವ ಮೂಲಕ ತಾನೇ ಮುಂದಿನ ಸಿಎಂ ಎಂಬ ಸುಳಿವನ್ನು ಸತೀಶ್ ಜಾರಕಿಹೊಳಿ ಅವರು ನೀಡಿದ್ದಾರೆ.

ಸತೀಶ್ ಜಾರಕಿಹೊಳಿಯೇ ಮುಂದಿನ ಮುಖ್ಯಮಂತ್ರಿ? ಸಿದ್ದರಾಮಯ್ಯ ಕೆಳಗಿಳಿಯುವ ಕುರಿತು ಮಹತ್ವದ ಸುಳಿವು ಕೊಟ್ಟ ಸಚಿವ
ಸತೀಶ್ ಜಾರಕಿಹೊಳಿಯೇ ಮುಂದಿನ ಮುಖ್ಯಮಂತ್ರಿ? ಸಿದ್ದರಾಮಯ್ಯ ಕೆಳಗಿಳಿಯುವ ಕುರಿತು ಮಹತ್ವದ ಸುಳಿವು ಕೊಟ್ಟ ಸಚಿವ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಿರುಸು ಪಡೆದಿದೆ. ಡಿಕೆ ಶಿವಕುಮಾರ್, ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರ ನಡುವೆ ಸಿದ್ದರಾಮಯ್ಯ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದೆ. ಡಿಕೆಶಿ ಅವರು ಪರಂ ಭೇಟಿಯಾದ ಬಳಿಕ ದಲಿತ ಸಚಿವರಾದ ಸತೀಶ್, ಹೆಚ್​ಸಿ ಮಹದೇವಪ್ಪ, ಪರಮೇಶ್ವರ್ ಭೇಟಿಯಾಗಿ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರೇ ನೂತನ ಸಿಎಂ ಎಂದು ವರದಿಯಾಗುತ್ತಿದೆ. ಇದರ ನಡುವೆ ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ಮೈಸೂರಿಗೆ ಭೇಟಿ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಚಿವ ಹೆಚ್​ಸಿ ಮಹದೇವಪ್ಪ ಅವರನ್ನು ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಸಿದ್ದರಾಮಯ್ಯ ಕೆಳಗಿಳಿಯುವ ಕುರಿತು ಸತೀಶ್ ಜಾರಕಿಹೊಳಿ ಮಹತ್ವದ ಅಪ್ಡೇಟ್ ನೀಡಿದ್ದಾರೆ.

ಈಗಾಗಲೇ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ ಪರಮೇಶ್ವರ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿರುವ ಸತೀಶ್ ಜಾರಕಿಹೊಳಿ, ದೆಹಲಿ ಭೇಟಿಯ ನಂತರ ಫುಲ್ ಅಲರ್ಟ್ ಆಗಿದ್ದಾರೆ. ಇಂದು (ಅಕ್ಟೋಬರ್​) ಮೈಸೂರಿನಲ್ಲಿ ಸಚಿವ ಮಹದೇವಪ್ಪ, ಶಾಸಕ ಹರೀಶ್ ಗೌಡ ಸೇರಿದಂತೆ ಹಲವು ಶಾಸಕರನ್ನು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದ ಸತೀಶ್ ಜಾರಕಿಹೊಳಿ, ಇಂದು ಯಾವುದೇ ಅಧಿಕೃತ ಕಾರ್ಯಕ್ರಮ ಇಲ್ಲದಿದ್ದರೂ ಇಡೀ ದಿನ ನಾಯಕರ ಭೇಟಿಗೆ ಸಮಯ ಮೀಸಲಿಟ್ಟಿದ್ದಾರೆ. ಮೈಸೂರಿನ ಭೇಟಿ ವೇಳೆ ಮಾಧ್ಯದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು ಪರೋಕ್ಷವಾಗಿ ಸಿಎಂ ಬದಲಾವಣೆ ಕುರಿತು ಹೇಳಿದ್ದಾರೆ.

5 ವರ್ಷ ಇರುತ್ತಾರೋ, 3 ವರ್ಷ ಇರುತ್ತಾರೋ…

ಸತೀಶ್ ಜಾರಕಿಹೊಳಿ ಮಾತನಾಡಿ, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. ಆದರೆ 5 ವರ್ಷ ಇರುತ್ತಾರೋ, 3 ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ನೀವು ಅದನ್ನು ಹೈಕಮಾಂಡ್​ಗೆ ಕೇಳಿ ಎಂದು ಪರೋಕ್ಷವಾಗಿ ಸಿಎಂ ಬದಲಾವಣೆಯ ಸುಳಿವು ನೀಡಿದ್ದಾರೆ. ಏಕೆಂದರೆ ಸಿದ್ದರಾಮಯ್ಯ ಆಪ್ತರಾಗಿರುವ ಸತೀಶ್ ಅವರೇ ಹೀಗೆ ಹೇಳಿರುವುದು ಅಚ್ಚರಿ ಮೂಡಿಸಿದೆ. ಅವರ ಮಾತಿನ ದಾಟಿ ಬದಲಾದಂತೆ ಕಂಡು ಬಂತು. ಇತ್ತೀಚೆಗೆ ರಾಜ್ಯ ನಾಯಕರನ್ನು ಭೇಟಿಯಾಗುತ್ತಿರುವುದು ಕೂಡ ಕುತೂಹಲ ಮೂಡಿಸಿದೆ. ತದನಂತರ ಮಾತು ಮುಂದುವರೆಸಿದ ಅವರು, ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳು. ಇದರಲ್ಲಿ ಬೇರೆ ಯಾವುದೇ ಪ್ರಶ್ನೆ ಇಲ್ಲ. ನಾನು ಅವರ ಜೊತೆಯಲ್ಲಿ ಸಚಿವನಾಗಿ ಕೆಲಸ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ. ವಿಪಕ್ಷಗಳು, ಮಾಧ್ಯಮಗಳು, ಚರ್ಚೆ ಮಾಡುತ್ತಿವೆ. ವಿಪಕ್ಷಗಳ ನಾಯಕರು ಪ್ರೀತಿಯಿಂದ ನಮ್ಮ ಹೆಸರು ಹೇಳುತ್ತಿದ್ದಾರೆ ಅಷ್ಟೇ. ಆದರೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ, ಬೆಳವಣಿಗೆ ನಡೆದಿಲ್ಲ. ನಾನು ಈ ವಿಚಾರವನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ ಎಂದು ಜಾರಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಕುರಿತು ಅಚ್ಚರಿ ಹೇಳಿಕೆ

ಯಾವುದೇ ನಾಯಕರ ಬೆಂಬಲಿಗರು ಅವರ ನಾಯಕರಿಗೆ ಮುಂದಿನ ಸಿಎಂ ಎಂದು ಜೈಕಾರ ಹಾಕುವುದು ಸರ್ವೇ ಸಾಮಾನ್ಯ‌. ಇದನ್ನೇ ಮುಂದಿಟ್ಟುಕೊಂಡು ಏನೋ ಬದಲಾವಣೆ ಆಗುತ್ತದೆ ಎನ್ನೋದು ಸರಿಯಲ್ಲ ಎಂದರು. ಇದೇ ವೇಳೆ ಡಿಕೆಶಿ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, ಮತ್ತೊಬ್ಬರ ವಿಚಾರ ನಾನು ಹೇಳಲು ಆಗೋದಿಲ್ಲ. ರಾಜಕಾರಣಿಗಳು ಒಂದೆಡೆ ಸೇರಿದಾಗ ರಾಜಕಾರಣದ ಬಗ್ಗೆ ಚರ್ಚೆ ಮಾಡುತ್ತೇವೆ, ಅದರಲ್ಲಿ ವಿಶೇಷತೆ ಏನು ಇಲ್ಲ. ಇಂದಿನ ಮೈಸೂರು ಭೇಟಿಯಲ್ಲಿ ಮಹತ್ತರ ವಿಚಾರ ಏನು ಇಲ್ಲ. ‌ ಇಡೀ ದಿನ ಮೈಸೂರಿನಲ್ಲಿ ಓಡಾಡಿಕೊಂಡು ದಸರಾ ಕಾರ್ಯಕ್ರಮ ನೋಡುತ್ತೇನೆ ಅಷ್ಟೇ. ಸಚಿವ ಮಹದೇವಪ್ಪ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರ ಮನೆ ಹಾಗೂ ನಮ್ಮ ಮನೆ ಅಕ್ಕ ಪಕ್ಕ ಇವೆ. ಪ್ರತಿನಿತ್ಯ ನಾವು ಭೇಟಿ ಆಗುತ್ತಿರುತ್ತೇವೆ. ಇಂದು ರಾತ್ರಿ 9 ಗಂಟೆಯವರೆಗೂ ಮಹದೇವಪ್ಪ ಜೊತೆಗೆ ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್ ಶಾಸಕರು, ನಾಯಕರ ಭೇಟಿ

ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯನ ಮನೆಗೆ ಭೇಟಿ ನೀಡಿದ ಸಚಿವ ಸತೀಶ್ ಜಾರಕಿಹೊಳಿಗೆ ಅದ್ಧೂರಿ ಸ್ವಾಗತ‌ ದೊರೆಯಿತು. ಮೈಸೂರಿನ ಸುಣ್ಣದ ಕೇರಿಯಲ್ಲಿರುವ ಮಾಜಿ ನಗರಪಾಲಿಕೆ ಸದಸ್ಯ ಸದಸ್ಯ ಲೋಕೇಶ್ ಪ್ರಿಯಾ ನಿವಾಸಕ್ಕೆ ಭೇಟಿ ಕೊಟ್ಟರು. ಬಳಿಕ ಹೆಚ್​ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರು ಸಚಿವ ಸತೀಶ್ ಜಾರಕಿಹೋಳಿ ಭೇಟಿಯಾದರು. ನಂತರ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಮನೆಗೆ ಸಚಿವ ಸತೀಶ್ ಜಾರಕಿಹೋಳಿ ಭೇಟಿಯಾದರು. ಮೈಸೂರಿನ ಕೆಜಿ ಕೊಪ್ಪಲಿನಲ್ಲಿರುವ ಶಾಸಕ ಹರೀಶ್ ಗೌಡ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಕೆಆರ್ ನಗರ ಶಾಸಕ ಡಿ.ರವಿಶಂಕರ್, ಮೂಡಾ ಅಧ್ಯಕ್ಷ ಮರಿಗೌಡ ಜೊತೆಯೂ ಮಾತುಕತೆ ನಡೆಸಿದರು. ಶಾಸಕ ಹರೀಶ್ ಗೌಡ ನಿವಾಸಕ್ಕೆ ಮಾಜಿ ಶಾಸಕ ಎಂಕೆ ಸೋಮಶೇಖರ್ ಭೇಟಿ ನೀಡಿ, ಸತೀಶ್ ಜಾರಕಿಹೋಳಿ ಅವರ ಜೊತೆ ಮಾತುಕತೆ ನಡೆಸಿದರು.

ಹರೀಶ್​ ಗೌಡ ಪ್ರತಿಕ್ರಿಯಿಸಿ ಹೇಳಿದ್ದೇನು?

ಈ ಸತೀಶ್ ಜಾರಕಿಹೊಳಿ ಭೇಟಿಯ ಬಗ್ಗೆ ಮಾತುಕತೆ ನಡೆಸಿದ ಕುರಿತು ಪ್ರತಿಕ್ರಿಯಿಸಿದ ಹರೀಶ್​ ಗೌಡ, ಅವರು ಮೈಸೂರಿಗೆ ಬಂದಾಗ ಎಲ್ಲರನ್ನೂ ಭೇಟಿ ಮಾಡುವುದು ಮಾಮೂಲು. ಅದೇ ರೀತಿ ಇಂದು ಕೂಡ ನನ್ನ ಮನೆಗೆ ಬಂದಿದ್ದರು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ. ಆದರೆ ರಾಜಕೀಯ ಮೂಲಗಳೇ ಬೇರೆಯದ್ದನ್ನು ಹೇಳುತ್ತಿವೆ. ಸಿಎಂ ಬದಲಾವಣೆ ಖಚಿತ. ಅಲ್ಲದೆ, ಹೈಕಮಾಂಡ್ ಕೂಡ ಸತೀಶ್ ಜಾರಕಿಹೊಳಿ ಅವರನ್ನೇ ಸಿಎಂ ಮಾಡಲು ಒಲವು ತೋರಿದೆ ಎಂದು ಹೇಳಲಾಗುತ್ತಿದೆ. ಆದರೆ ಕೊನೆಯದಾಗಿ ಸಿಎಂ ಬದಲಾವಣೆ ವಿಚಾರ ಯಾವ ಹಂತಕ್ಕೆ ತಲುಪುತ್ತದೋ ಎಂಬುದು ಕುತೂಹಲ ಮೂಡಿಸಿದೆ.

Whats_app_banner