Ola Electric; ಸ್ಕೂಟರ್ ರಿಪೇರಿಯಾಗದೆ ಹತಾಶನಾದ ಗ್ರಾಹಕ ಕಲಬುರಗಿಯಲ್ಲಿ ಓಲಾ ಎಲೆಕ್ಟ್ರಿಕ್ ಶೋರೂಮ್ ಸುಟ್ಟ- ವಿಡಿಯೋ
Ola Electric Customer Rage; ಎಲೆಕ್ಟ್ರಿಕ್ ಸ್ಕೂಟರ್ ಪದೇಪದೆ ರಿಪೇರಿಗೆ ಬಂದ ಕಾರಣ ಹತಾಶ ಗ್ರಾಹಕ ಕಲಬುರಗಿ ಓಲಾ ಎಲೆಕ್ಟ್ರಿಕ್ ಶೋರೂಂಗೆ ಬೆಂಕಿ ಹಚ್ಚಿದ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಹತಾಶೆಗೆ ನಿಜವಾದ ಕಾರಣ ಇದು.
ಕಲಬುರಗಿ: ಎಲೆಕ್ಟ್ರಿಕ್ ಸ್ಕೂಟರ್ ರಿಪೇರಿಯಾಗಿಲ್ಲ ಎಂದು ಹತಾಶನಾದ ಯುವಕನೊಬ್ಬ ಕಲಬುರಗಿಯ ಓಲಾ ಎಲೆಕ್ಟ್ರಿಕ್ ಶೋರೂಂ ಸುಟ್ಟು ಹಾಕಿದ ಘಟನೆ ನಡೆದಿದೆ. 20 ದಿನದ ಹಿಂದೆ ಖರೀದಿಸಿದ ಎಲೆಕ್ಟ್ರಿಕ್ ಸ್ಕೂಟರ್ ಪದೇಪದೆ ರಿಪೇರಿಗೆ ಬಂದ ಕಾರಣ ಆತ ಹತಾಶನಾಗಿದ್ದ. ಈ ಕುರಿತು ಕಲಬುರಗಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲಬುರಗಿಯ ಹುಮನಾಬಾದ್ ರಸ್ತೆಯಲ್ಲಿರುವ ಓಲಾ ಎಲೆಕ್ಟ್ರಿಕ್ ಶೋರೂಂ ಸುಟ್ಟು ಹೋಗಿರುವಂಥದ್ದು. ಹತಾಶ ಗ್ರಾಹಕನನ್ನು ಮೊಹಮ್ಮದ್ ನದೀಂ (26) ಎಂದು ಗುರುತಿಸಲಾಗಿದೆ. ಈತ ನಿನ್ನೆ ಶೋರೂಂಗೆ ಬಂದು ಎಲೆಕ್ಟ್ರಿಕ್ ಸ್ಕೂಟರ್ ಪದೇಪದೆ ರಿಪೇರಿಗೆ ಬರುತ್ತಿರುವ ವಿಚಾರವಾಗಿ ವಾಕ್ಸಮರ ನಡೆಸಿ ಹೋಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊತ್ತಿ ಉರಿಯಿತು ಕಲಬುರಗಿ ಓಲಾ ಎಲೆಕ್ಟ್ರಿಕ್ ಶೋರೂಂ
ಕಲಬರುಗಿಯ ಹುಮನಾಬಾದ್ ರಸ್ತೆಯಲ್ಲಿದ್ದ ಓಲಾ ಎಲೆಕ್ಟ್ರಿಕ್ ಶೋರೂಂ ಇದ್ದಕ್ಕಿದ್ದಂತೆ ಹೊತ್ತಿ ಉರಿಯತೊಡಗಿತು. ನೋಡುತ್ತಿರುವಂತೆಯೇ 6 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಭಸ್ಮವಾದವು. ಆರಂಭದಲ್ಲಿ ಇದು ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ್ದಿರಬೇಕು ಎಂದು ಶಂಕಿಸಲಾಗಿತ್ತು. ಆದರೆ ಪೊಲೀಸರು ಈ ಘಟನೆ ಬಗ್ಗೆ ತನಿಖೆ ನಡೆಸಿದಾಗ ಇದು ಹತಾಶ ಗ್ರಾಹಕನ ಕೃತ್ಯ ಎಂಬುದು ಬಹಿರಂಗವಾಗಿದೆ.
ಆರೋಪಿ ನದೀಮ್ ಅನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದರು. ಆಗ ಆತ ತನ್ನ ಹತಾಶ ಸ್ಥಿತಿಯನ್ನು ವಿವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
"ಗ್ರಾಹಕ 20 ದಿನಗಳ ಹಿಂದೆ ಶೋರೂಮ್‌ನಿಂದ ಓಲಾ ಸ್ಕೂಟರ್ ಅನ್ನು ಖರೀದಿಸಿದ್ದ. ಆದರೆ ಅದು ಆಗಾಗ್ಗೆ ರಿಪೇರಿಗೆ ಬಂದಿತ್ತು. ಹಲವು ಬಾರಿ ಭೇಟಿ ನೀಡಿದರೂ ಶೋರೂಂ ಸಿಬ್ಬಂದಿ ಸಮಸ್ಯೆ ಬಗೆಹರಿಸಿರಲಿಲ್ಲ. ಸಮಸ್ಯೆಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಹತಾಶನಾಗಿ ಮಂಗಳವಾರ ಶೋರೂಮ್‌ಗೆ ಪೆಟ್ರೋಲ್ ತಂದು ಸುರಿದು ಬೆಂಕಿ ಹಚ್ಚಿದ”ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಮನಿಕಂಟ್ರೋಲ್‌ಗೆ ವರದಿ ಮಾಡಿದೆ.
1.4 ಲಕ್ಷ ರೂ ಕೊಟ್ಟು ಖರೀದಿಸಿದ ಸ್ಕೂಟರ್ 20 ದಿನಕ್ಕೆ ಹಾಳಾದ ಸಂಕಟ
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪೂರೈಸುತ್ತಿದೆಯೇ ಹೊರತು ಅದರ ಸರ್ವೀಸ್ ಬಗ್ಗೆ ವ್ಯಾಪಕ ಟೀಕೆ ಇದೆ. ಓಲಾದ ಎಲೆಕ್ಟ್ರಿಕ್ ಬೈಕ್‌ನ ಗುಣಮಟ್ಟದಿಂದ ಅಸಮಾಧಾನಗೊಂಡ 26 ವರ್ಷದ ನದೀಮ್, ಕರ್ನಾಟಕದ ಕಲಬುರಗಿಯಲ್ಲಿ ಓಲಾ ಶೋರೂಮ್‌ಗೆ ಬೆಂಕಿ ಹಚ್ಚಿದ. ನದೀಮ್ ಎರಡು ತಿಂಗಳ ಹಿಂದಷ್ಟೆ 1.4 ಲಕ್ಷ ರೂ ಕೊಟ್ಟು ಓಲಾ ಇ-ಬೈಕ್ ಖರೀದಿಸಿದ್ದ ಎಂದು ವರದಿಯಾಗಿದೆ. ಬ್ಯಾಟರಿ ಅಸಮರ್ಪಕ ಕಾರ್ಯ ಸೇರಿ ಅಂತ್ಯವಿಲ್ಲದ ತಾಂತ್ರಿಕ ಸಮಸ್ಯೆಗಳ ಕಾರಣ ಹತಾಶನಾಗಿದ್ದ. ಪರಿಹಾರಕ್ಕಾಗಿ ಸೇವಾ ಕೇಂದ್ರಕ್ಕೆ ಹಲವು ಬಾರಿ ಭೇಟಿ ನೀಡಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಆದ್ದರಿಂದ ಶೋರೂಮ್ ಸುಡಲು ನಿರ್ಧರಿಸಿದ ಎಂದು ವರದಿಯಾಗಿದೆ.
ಓಲಾ ಎಲೆಕ್ಟ್ರಿಕ್ ಈ ಘಟನೆ ಕುರಿತು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.