ಜಾಮೀನಿಗೆ ಹೈಕೋರ್ಟ್ನಲ್ಲಿ ದರ್ಶನ್ ಅರ್ಜಿ; 300 ಪುಟಗಳೊಂದಿಗೆ ಬೇಲ್ಗೆ ಹೊಸ ಕಾರಣ ಕೊಟ್ಟ ನಟ, ಈ ಪ್ಲಾನ್ ಆದರೂ ವರ್ಕ್ ಆಗುತ್ತಾ?
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ನಟ ದರ್ಶನ್ ಹೈಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಬೆನ್ನು ನೋವಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಮನವಿ ಮಾಡಿ, ಜಾಮೀನಿಗೆ 300 ಪುಟಗಳ ದಾಖಲೆ ಸಲ್ಲಿಸಿದ್ದಾರೆ. (ವರದಿ-ಎಚ್.ಮಾರುತಿ)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಜಾಮೀನು ತಿರಸ್ಕರಿಸಿದ ಬೆನ್ನಲ್ಲೇ ಅವರು ಇದೀಗ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದರ್ಶನ್ ಪರ ವಕೀಲ ಎಸ್ ಸುನಿಲ್ ಕುಮಾರ್ ಮಂಗಳವಾರ ಮಧ್ಯಾಹ್ನ ಜಾಮೀನು ಅರ್ಜಿಯನ್ನು ಹೈಕೋರ್ಟ್ ಫೈಲಿಂಗ್ ವಿಭಾಗಕ್ಕೆ ಸಲ್ಲಿಸಿದ್ದಾರೆ. ಸುಮಾರು 300 ಪುಟಗಳ ಅರ್ಜಿ ಇದಾಗಿದ್ದು, ಹಲವಾರು ದಾಖಲೆಗಳನ್ನು ಹೊಂದಿದೆ. ಸಧ್ಯ ಇವರ ಜಾಮೀನು ಅರ್ಜಿಗೆ ಎಫ್ಆರ್ ನಂಬರ್ ನೀಡಲಾಗಿದೆ. ಪರಿಶೀಲನೆ ನಡೆಸಿದ ನಂತರ ಕ್ರಿಮಿನಲ್ ಅರ್ಜಿ ಸಂಖ್ಯೆ ನಮೂದಿಸಲಾಗುತ್ತದೆ. ನಂತರ ನ್ಯಾಯಪೀಠದ ಮುಂದೆ ಬರಲಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.
ನ್ಯಾಯಪೀಠದ ಮುಂದೆ ಸ್ವಾಭಾವಿಕವಾಗಿಯೇ ಬರಬಹುದು. ಇಲ್ಲವೇ ಅವರ ವಕೀಲರು ಮೆಮೊ ಸಲ್ಲಿಕೆಯ ಮೂಲಕ ತುರ್ತು ವಿಚಾರಣೆಗೆ ಮನವಿ ಮಾಡಲೂಬಹುದು. ದರ್ಶನ್ ಅವರಿಗೆ ಬೆನ್ನುನೋವಿನ ಸಮಸ್ಯೆಯಿದ್ದು, ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ಹಾಗಾಗಿ ಅವರಿಗೆ ತ್ವರಿತವಾಗಿ ಜಾಮೀನು ಮಂಜೂರು ಮಾಡಬೇಕೆಂದು ಜಾಮೀನು ಅರ್ಜಿಯಲ್ಲಿ ಕೋರಲಾಗಿದೆ. ದರ್ಶನ್ ಅವರು ಯಾವುದೇ ತಪ್ಪು ಮಾಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯ ವೇಳೆ ವಶಪಡಿಸಿಕೊಂಡಿರುವ ವಸ್ತುಗಳೆಲ್ಲಾ ಅವರೇ ತಯಾರು ಮಾಡಿದ್ದಾರೆ. ದರ್ಶನ್ ಬಂದಿರುವ ಫೋನ್ ಕಾಲ್ ಗಳಲ್ಲಿ ಆರೋಪಿಗಳ ಆರೋಪಿಗಳ ಜತೆ ಮಾತನಾಡಿ ಸಂಚು ಮಾಡಲಾಗಿದೆ ಎನ್ನುವುದು ಅಪ್ಪಟ ಸುಳ್ಳು. ದರ್ಶನ್ ಮಾಡಿರುವ ಕಾಲ್ ಗಳಲ್ಲಿ ಒಂದೇ ಒಂದೂ ಅಸ್ವಾಭಾವಿಕ ಕಾಲ್ ಗಳಿಲ್ಲ ಎಂದು ಹೇಳಿದ್ದಾರೆ.
ಪ್ರತ್ಯಕ್ಷ ಸಾಕ್ಷಿದಾರರನ್ನು ಪೊಲೀಸರೇ ಸೃಷ್ಟಿಸಿದ್ದಾರೆ ಮತ್ತು ಅವರ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಡವಾಗಿ ದಾಖಲು ಮಾಡಿಕೊಳ್ಳಲಾಗಿದೆ ಎಂದೂ ಹೇಳಲಾಗಿದೆ. ಪ್ರಕರಣದ ತನಿಖೆಯು ಈಗಾಗಲೇ ಪೂರ್ಣಗೊಂಡಿದ್ದು, ಅವರಿಗೆ ಜಾಮೀನು ಮಂಜೂರು ಮಾಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಹೊತ್ತು ಕಳೆದ 120 ದಿನಗಳಿಂದ ಜೈಲಿನಲ್ಲಿದ್ದ ದರ್ಶನ್ ಮತ್ತು ಪವಿತ್ರಾ ಗೌಡಗೆ ನಿನ್ನೆಯಷ್ಟೇ ನ್ಯಾಯಾಲಯ ಜಾಮೀನು ನಿರಾಕರಿಸಲಾಗಿದೆ. ಸದ್ಯ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ. ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ದರ್ಶನ್ ಮತ್ತಿತರ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿ ನಂ 2 ಆಗಿದ್ದರೆ ಇವರ ಸ್ನೇಹಿತೆ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪವಿತ್ರಾಗೆ ಅಶ್ಲೀಲ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಿದ್ದಕ್ಕಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾ ಗೌಡ. ತನ್ನ ಆಪ್ತೆಗೆ ಸಂದೇಶ ಕಳುಹಿಸುತ್ತಿದ್ದ ಎಂಬ ಸಿಟ್ಟು ದರ್ಶನ್ ಗೆ ಇತ್ತು. ಇದರಿಂದ ಕೆರಳಿದ ಅವರು ಚಿತ್ರದುರ್ಗದ ತನ್ನ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಹತ್ಯೆ ಮಾಡಲಾಗಿದೆ ಎನ್ನುವುದು ಆರೋಪದ ಹೂರಣ. ಇವರ ಜಾಮೀನು ಅರ್ಜಿ ಕುರಿತು ಬೆಂಗಳೂರಿನ 52 ನೇ ಸಿಸಿಎಚ್ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿತ್ತು. ವಾದ ಪ್ರತಿವಾದ ಪೂರ್ಣಗೊಂಡ ನಂತರ ನ್ಯಾಯಾಧೀಶ ಜೈ ಶಂಕರ್ ಅವರು ಅ.14ಕ್ಕೆ ಆದೇಶವನ್ನು ಕಾಯ್ದಿರಿಸಿದ್ದರು. ನ್ಯಾಯಾಲಯದಲ್ಲಿ ದರ್ಶನ್ ಜಾಮೀನು ಅರ್ಜಿ ಕುರಿತು ವಾದ ಪ್ರತಿವಾದ ಜೋರಾಗಿಯೇ ನಡೆದಿತ್ತು. ದರ್ಶನ್ ಪರವಾಗಿ ಖ್ಯಾತ ಕ್ರಿಮಿನಲ್ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರೂ ಸಮರ್ಥ ವಾದ ಮಂಡಿಸಿ ದರ್ಶನ್ ಗೆ ಜಾಮೀನು ನೀಡದಂತೆ ವಾದಿಸಿದ್ದರು