ಕನ್ನಡ ಸುದ್ದಿ  /  Karnataka  /  Karnataka Cabinet Expansion No Ministers Post To 8 Districts Will Bk Hariprasad Give Resignation Siddaramaiah Govt Mgb

Karnataka Cabinet:ಭರ್ತಿಯಾದ ಸಿದ್ದು ಸಂಪುಟ, ತಪ್ಪದ ಪೀಕಲಾಟ; ರಾಜೀನಾಮೆ ನೀಡ್ತಾರಾ ಬಿಕೆ ಹರಿಪ್ರಸಾದ್? ಸಚಿವ ಸ್ಥಾನ ವಂಚಿತ 8 ಜಿಲ್ಲೆಗಳಿವು

Karnataka Cabinet expansion: ಕೋಲಾರ, ಹಾಸನ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ವಿಜಯನಗರ ಜಿಲ್ಲೆಗಳಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ವಲಸೆ ಬಂದಿರುವ ಹಲವರಿಗೆ ಸಚಿವ ಸ್ಥಾನ ನೀಡಿಲ್ಲದಿರುವುದು ಗಮನಾರ್ಹ.

ಕರ್ನಾಟಕ ಸಿಎಂ ಸಿದ್ದರಾಮಯ್ಯ
ಕರ್ನಾಟಕ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್‌ ಸರ್ಕಾರದ ಸಂಪುಟ ವಿಸ್ತರಣೆಯಾಗಿದೆ (Karnataka Cabinet expansion). ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸೇರಿ ಒಟ್ಟು 34 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯದ 31 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಿಗೆ ಮಾತ್ರವೇ ಸಚಿವ ಸ್ಥಾನದ ಪ್ರಾತಿನಿಧ್ಯ ಸಿಕ್ಕಿದ್ದು, ಉಳಿದ ಎಂಟು ಜಿಲ್ಲೆಗಳ ನಾಯಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ.

ಬೆಂಗಳೂರು ನಗರ ಜಿಲ್ಲೆಗೆ ಆರು ಸಚಿವ ಸ್ಥಾನ ಲಭ್ಯವಾಗಿದ್ದು, ಮೈಸೂರು ಎರಡನೇ ಸ್ಥಾನದಲ್ಲಿದೆ. ಸಿಎಂ ಸಿದ್ದರಾಮಯ್ಯ ಜತೆಗೆ ಇನ್ನೂ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ. ತುಮಕೂರು, ವಿಜಯಪುರ, ಕಲಬುರಗಿ, ಬೀದರ್ ಮತ್ತು ಬೆಳಗಾವಿ ಜಿಲ್ಲೆಗಳ ತಲಾ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದ್ದರೆ, 16 ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸಚಿವ ಸ್ಥಾನ ಲಭ್ಯವಾಗಿದೆ.

ಸಚಿವ ಸ್ಥಾನ ವಂಚಿತ ಜಿಲ್ಲೆಗಳು

ಕೋಲಾರ, ಹಾಸನ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ವಿಜಯನಗರ ಜಿಲ್ಲೆಗಳಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ವಲಸೆ ಬಂದಿರುವ ಹಲವರಿಗೆ ಸಚಿವ ಸ್ಥಾನ ನೀಡಿಲ್ಲದಿರುವುದು ಗಮನಾರ್ಹ. ಪ್ರಮುಖವಾಗಿ ಬಿಜೆಪಿಯಿಂದ ವಲಸೆ ಬಂದ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ, ಅಶೋಕ್‌ ರೈ ಅವರು ಅವಕಾಶ ವಂಚಿತರು. ಜೆಡಿಎಸ್‌ನಿಂದ ಬಂದ ಕೆ.ಎಂ ಶಿವಲಿಂಗೇಗೌಡ (ಅರಸೀಕೆರೆ), ಎಂ. ಶ್ರೀನಿವಾಸ್‌ (ಗುಬ್ಬಿ) ಇವರಿಬ್ಬರೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಇದೀಗ ಇವರಿಗೆ ನಿರಾಶೆಯಾಗಿದೆ. ಇನ್ನು ಸಚಿವ ಸ್ಥಾನ ಸಿಗದವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿ ಕಾಂಗ್ರೆಸ್ ಮುಖಂಡರು ಸಮಾಧಾನ ಮಾಡಲು ಯತ್ನಿಸುತ್ತಿದ್ದಾರೆ.

ಆದರೆ ಹಿರಿಯ ಶಾಸಕರನ್ನು ಸಮಾಧಾನ ಮಾಡುವುದು ಕಷ್ಟಸಾಧ್ಯ. ಆರ್. ವಿ.ದೇಶಪಾಂಡೆ, ಟಿ.ಬಿ. ಜಯಚಂದ್ರ, ಪುಟ್ಟರಂಗಶೆಟ್ಟಿ, ಎಂ.ಕೃಷ್ಣಪ್ಪ, ಬಿ.ಕೆ. ಹರಿಪ್ರಸಾದ್ ಮೊದಲಾದ ಹಿರಿಯ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಂಚಿಟಿಗ ಸಮುದಾಯದ ಏಕೈಕ ಪ್ರತಿನಿಧಿ ನಾನು. ಮೇಲಾಗಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರೂ ಅವಕಾಶ ನೀಡಿಲ್ಲ ಎಂದು ಟಿ.ಬಿ. ಜಯಚಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

'ಹರಿ'ಗೆ ಇಲ್ಲದ 'ಪ್ರಸಾದ '

ಬಿ.ಕೆ. ಹರಿಪ್ರಸಾದ್ ರಾಜೀನಾಮೆಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಹರಿ ಅವರನ್ನು ಬೆಳೆಸುವ ಚಿಂತನೆ ಹೈಕಮಾಂಡ್​​ನದ್ದು. ಆದರೆ ಸಿದ್ದರಾಮಯ್ಯ ಪಟ್ಟು ಹಿಡಿದ ಕಾರಣ ಸಚಿವ ಸ್ಥಾನದ ಲಕ್​ ಮಧು ಬಂಗಾರಪ್ಪ ಅವರಿಗೆ ಖುಲಾಯಿಸಿದೆ. ಕರಾವಳಿ ಕರ್ನಾಟಕದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಯನ್ನು ಮಟ್ಟ ಹಾಕಲು ಇವರಿಗೆ ಗೃಹ ಖಾತೆ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದಲ್ಲಿ ಸುದ್ದಿ ಹರಿದಾಡುತ್ತಿತ್ತು.

ಒಟ್ಟಿನಲ್ಲಿ ಹರಿಗೆ ಪ್ರಸಾದ ಇಲ್ಲವಾಗಿದೆ. ಮೇಲ್ಮನೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ತಿರುಗೇಟು ನೀಡುವುದನ್ನು ನೋಡಿದ್ದೇವೆ. ಸಿದ್ದರಾಮಯ್ಯ ಅವರಷ್ಟೇ ಖಡಕ್ ಆಗಿ ಟಾಂಗ್ ನೀಡುವುದರಲ್ಲಿ ಎತ್ತಿದ ಕೈ.

ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಪ್ರಬಲ ಆಕಾಂಕ್ಷಿಯಾಗಿದ್ದರು. ವಿಧಾನಪರಿಷತ್ ಸದಸ್ಯರನ್ನು ಕಡೆಗಣಿಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಲೀಂ ಅಹಮದ್, ಪ್ರಕಾಶ್ ರಾಥೋಡ್ ಅವರಂತಹ ಹಿರಿಯ ಮತ್ತು ನಿಷ್ಠಾವಂತರು ಅವಕಾಶ ವಂಚಿತರಾಗಿದ್ದಾರೆ. ಯಾವುದೇ ಸದನದ ಸದದ್ಯರಲ್ಲದ ಎನ್.ಎಸ್. ಬೋಸರಾಜು ಅರು ತಿಂಗಳಲ್ಲಿ ವಿಧಾನ ಪರಿಷತ್ ಸದಸ್ಯರಾಗುತ್ತಾರೆ.

ಯಾವುದೇ ಪಕ್ಷ ಎಲ್ಲರನ್ನೂ ತೃಪ್ತಿ ಪಡಿಸಲು ಅಸಾಧ್ಯ. ರಾಜ್ಯದಲ್ಲಿ ಸಿಎಂ ಸೇರಿ 34 ಮಂದಿಗೆ ಮಾತ್ರ ಸರ್ಕಾರ ಸೇರಲು ಅವಕಾಶ ಇದೆ. ಜಿಲ್ಲಾವಾರು, ಜಾತಿವಾರು, ಹಿರಿಯ, ವಲಸಿಗ, ನಿಷ್ಠಾವಂತ, ಹೈಕಮಾಂಡ್ ಕೋಟಾ ಹೀಗೆ ಹಂಚುತ್ತಾ ಹೋದರೆ ಸಮಾಧಾನ ಮಾಡುವುದಾದರೂ ಹೇಗೆ ?

ಸರ್ಕಾರಕ್ಕೆ ಭರ್ಜರಿ ಬಹುಮತ ಇದೆ. ಯಾವುದೇ ಪಿತೂರಿ ತಂತ್ರ ಕುತಂತ್ರಗಳಿಗೆ ಅವಕಾಶವೇ ಇಲ್ಲ. ಮುಖ್ಯಮಂತ್ರಿ ಬದಲಾಗುವವರೆಗೆ ಅಥವಾ ಎರಡು ವರ್ಷಗಳವರೆಗೆ ಇದೇ ಸಚಿವ ಸಂಪುಟ ಅಧಿಕಾರದಲ್ಲಿರುವುದು ನಿಶ್ಚಿತ.

ವರದಿ: ಮಾರುತಿ ಎಚ್.

IPL_Entry_Point