Karnataka Next CM: ಕರ್ನಾಟಕ ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ, ಇನ್ನೊಂದು ದಿನದಲ್ಲಿ ಯಾರು ಅಂತ ಗೊತ್ತಾಗುತ್ತೆ; ರಣದೀಪ್ ಸುರ್ಜೆವಾಲಾ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Next Cm: ಕರ್ನಾಟಕ ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ, ಇನ್ನೊಂದು ದಿನದಲ್ಲಿ ಯಾರು ಅಂತ ಗೊತ್ತಾಗುತ್ತೆ; ರಣದೀಪ್ ಸುರ್ಜೆವಾಲಾ

Karnataka Next CM: ಕರ್ನಾಟಕ ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ, ಇನ್ನೊಂದು ದಿನದಲ್ಲಿ ಯಾರು ಅಂತ ಗೊತ್ತಾಗುತ್ತೆ; ರಣದೀಪ್ ಸುರ್ಜೆವಾಲಾ

Karnataka Politics: ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲಾ ನೀಡಿರುವ ಹೇಳಿಕೆಯೊಂದು ಮಹತ್ವ ಪಡೆದಿದೆ. ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಕುರಿತು ರಾಷ್ಟ್ರ ರಾಜಧಾನಿಯಲ್ಲಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಡಿ.ಕೆ.ಶಿವಕುಮಾರ್, ರಣದೀಪ್ ಸುರ್ಜೆವಾಲಾ ಮತ್ತು ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಡಿ.ಕೆ.ಶಿವಕುಮಾರ್, ರಣದೀಪ್ ಸುರ್ಜೆವಾಲಾ ಮತ್ತು ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ದೆಹಲಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ (Karnataka Next CM) ಯಾರೆಂಬ ಬಗ್ಗೆ ಇಡೀ ದೇಶ ಕುತೂಹಲದಿಂದ ನಿರೀಕ್ಷಿಸುತ್ತಿದೆ. ಸಿದ್ದರಾಮಯ್ಯ (Siddaramiah) ಅವರೇ ಮುಖ್ಯಮಂತ್ರಿ ಆಗಬಹುದು ಎಂದು ಬಹುತೇಕ ಎಲ್ಲ ಮಾಧ್ಯಮಗಳೂ ಭವಿಷ್ಯ ನುಡಿದಿದ್ದು, ಬೆಂಗಳೂರಿನಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆಗಳೂ ಆರಂಭವಾಗಿವೆ. ಈ ಎಲ್ಲ ಸಡಗರದ ನಡುವೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲಾ ನೀಡಿರುವ ಹೇಳಿಕೆಯೊಂದು ಮಹತ್ವ ಪಡೆದಿದೆ. ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಕುರಿತು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಕ್ರಿಯಿಸಿರುವ ಅವರು, 'ಕರ್ನಾಟಕದ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಳ್ಳಬೇಕಿದೆ. ಕರ್ನಾಟಕದಲ್ಲಿ ಇನ್ನು ಎರಡು ಮೂರು ದಿನಗಳಲ್ಲಿ ಹೊಸ ಸಚಿವ ಸಂಪುಟ ಹೊಂದಲಿದೆ' ಎಂದು ಹೇಳಿದ್ದಾರೆ.

'ಮುಂದಿನ ಮುಖ್ಯಮಂತ್ರಿ ಯಾರಾಗಬೇಕು' ಎನ್ನುವ ಬಗ್ಗೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಾಸಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. 'ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಕಾಂಗ್ರೆಸ್‌ ಪಕ್ಷವು ನಿರ್ಧಾರ ತೆಗೆದುಕೊಂಡ ನಂತರ ನಾವು ನಿಮಗೆ ತಿಳಿಸುತ್ತೇವೆ. ಮುಂದಿನ 48ರಿಂದ 72 ಗಂಟೆಗಳ ಒಳಗೆ ಕರ್ನಾಟಕದಲ್ಲಿ ನಾವು ಹೊಸ ಸಚಿವ ಸಂಪುಟ ಹೊಂದಲಿದ್ದೇವೆ. ಮುಂದಿನ 24 ಗಂಟೆಗಳ ಒಳಗೆ ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ' ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಆದರೆ ಪಕ್ಷವನ್ನು ಮುನ್ನಡೆಸಿದ್ದ ಮುಂಚೂಣಿ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಬಗ್ಗೆ ಹಗ್ಗಜಗ್ಗಾಟ ನಡೆದಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆರಂಭವಾಗಿದ್ದ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ 'ಇಂಡಿಯಾ ಟುಡೇ' ಸುದ್ದಿವಾಹಿನಿ ವರದಿ ಮಾಡಿದೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದವಾಗಿತ್ತು. ಮೊದಲ 2 ವರ್ಷಗಳ ಅವಧಿಗೆ ಸಿದ್ದರಾಮಯ್ಯ, ನಂತರದ ಮೂರು ವರ್ಷಗಳ ಅವಧಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತುಗಳು ರಾಜಕೀಯ ವಲಯಯಲ್ಲಿ ಪ್ರಬಲವಾಗಿ ಕೇಳಿಬರುತ್ತಿತ್ತು. ಆದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕಾಗಿ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಸಿದ್ದರಾಮಯ್ಯ ಕೂಡ ಹಿಂದೆ ಸರಿಯುತ್ತಿಲ್ಲ. ಹೀಗಾಗಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ವಿಚಾರ ಬಗೆಹರಿಯದ ಕಗ್ಗಂಟಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕರ್ನಾಟಕದಲ್ಲಿ ಪಕ್ಷವನ್ನು ಮುನ್ನಡೆಸಲು, ಮೇಲೆತ್ತಲು ತಮ್ಮ ಪರಿಶ್ರಮ ಎಷ್ಟಿದೆ ಎಂಬ ಬಗ್ಗೆ ವಿವರಿಸಿದರು. ಸಿದ್ದರಾಮಯ್ಯ ಅವರು 2013ರಿಂದ 2018ರ ಅವಧಿಯಲ್ಲಿ ನಡೆಸಿದ ಆಡಳಿತ ಸರಿಯಿರಲಿಲ್ಲ. ಹೀಗಾಗಿಯೇ ಕರ್ನಾಟಕದ ಪ್ರಬಲ ಲಿಂಗಾಯತ ಜಾತಿ ಪಕ್ಷದಿಂದ ದೂರ ಸರಿದಿತ್ತು ಎಂದು ಮನಗಾಣಿಸಲು ಪ್ರಯತ್ನಿಸಿದರು ಎಂದು ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬೆಂಬಲಿಗರು ದೆಹಲಿಗೆ ಧಾವಿಸಿದ್ದು ತಮ್ಮ ನಾಯಕರ ಪರವಾಗಿ ಲಾಬಿ ನಡೆಸಿದ್ದರು. ಇಬ್ಬರೂ ನಾಯಕರು ಇಂದು (ಮೇ 17) ಮಧ್ಯಾಹ್ನ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂಬ ಇಂಗಿತವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೊಂದಿದ್ದಾರೆ. ಆದರೆ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಕೆ.ವೇಣುಗೋಪಾಲ್ ಅವರು ಸಿದ್ದರಾಮಯ್ಯ ಪರ ಒಲವು ತೋರಿದ್ದಾರೆ ಎಂದು ಮೂಲಗಳು ಹೇಳಿವೆ.

ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಎಲ್ಲರಲ್ಲಿ ಗರಿಗೆದರಿದ್ದು, ಪ್ರತಿ ಕ್ಷಣವೂ ಈ ವಿಚಾರ ಕಾಂಗ್ರೆಸ್ ವರಿಷ್ಠರ ಪಾಲಿಗೆ ಕಗ್ಗಂಟಾಗಿಯೇ ಮುಂದುವರಿದಿದೆ.

Whats_app_banner