ದೂರದ ಊರಲ್ಲಿ ಕೂತು ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ನೇರಾನೇರ ಚರ್ಚೆಗೆ ಬನ್ನಿ; ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸವಾಲ್
Siddaramaiah on Narenadra Modi: ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಎರಟೂವರೆ ಸಾವಿರ ಕೋಟಿ ರೂಪಾಯಿಗಳಿಗೆ ಹರಾಜು ಹಾಕಿ ಹಣ ಪೀಕಿದ್ದಾರೆ ಎಂಬ ಆರೋಪವನ್ನು ಸ್ವಪಕ್ಷದ ನಾಯಕರಿಂದಲೇ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ತಮ್ಮ ಪಕ್ಷದ ಮುಖ್ಯಮಂತ್ರಿ ಹುದ್ದೆಯನ್ನು ಮಾರಾಟ ಮಾಡಲಾಗಿದೆ ಎಂದು ರಾಜ್ಯದ ಬಿಜೆಪಿ ಶಾಸಕರೊಬ್ಬರು ಬಹಿರಂಗವಾಗಿ ಆರೋಪಿಸಿದ್ದರೂ ಅವರ ಮೇಲೆ ಕ್ರಮ ಇಲ್ಲ. ದಿನ ಬೆಳಗಾದರೆ ಭ್ರಷ್ಟಾಚಾರದ ಆರೋಪದ ಕೆಸರೆರಚಾಟದಲ್ಲಿ ತೊಡಗಿರುವ ಬಿಜೆಪಿ ಶಾಸಕರ ವಿರುದ್ಧವೂ ಯಾವ ಕ್ರಮವೂ ಇಲ್ಲ. ನರೇಂದ್ರ ಮೋದಿ ಅವರೇ ಈ ಮೌನಕ್ಕೆ, ಈ ನಿಷ್ಕ್ರೀಯತೆಗೆ ಏನು ಕಾರಣ? ಈ ಭ್ರಷ್ಟಾಚಾರದಲ್ಲಿ ನೀವೂ ಭಾಗಿದಾರರೆಂದು ತಿಳಿದುಕೊಳ‍್ಳಬಹುದೇ? ಎಂದು ಮತ್ತೊಂದು ಪ್ರಶ್ನೆಯನ್ನು ಹಾಕಿದ್ದಾರೆ.
ನಮ್ಮ ಸರ್ಕಾರದ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ ಅವರೇ, ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ ಎಂದು ಸೂಚಿಸಿದ್ದಾರೆ.
ನಿಮ್ಮ ಆತ್ಮಸಾಕ್ಷಿಯೂ ಚುಚ್ಚುವುದಿಲ್ಲವೇ?
ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿರುವ ನೂರಾರು ಕೋಟಿ ರೂಪಾಯಿ ಹಗರಣದ ಆರೋಪ ಎದುರಿಸುತ್ತಿರುವ ಹೆಚ್ಡಿ ಕುಮಾರಸ್ವಾಮಿ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿರುವ ನಿಮಗೆ ಇತರರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಆತ್ಮಸಾಕ್ಷಿಯೂ ಚುಚ್ಚುವುದಿಲ್ಲವೇ? ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಕರ್ನಾಟಕದ ಲೋಕಾಯುಕ್ತರು ಕೋರಿರುವ ಅನುಮತಿ ಬಗ್ಗೆ ಘನತೆವೆತ್ತ ರಾಜ್ಯಪಾಲರು ಕಣ್ಣುಮುಚ್ಚಿಕೊಂಡಿರುವುದೇಕೇ? ಅವರ ಮೇಲೆ ಒತ್ತಡ ಹೇರುತ್ತಿರುವರು ಯಾರು? ಎಂದು ಮತ್ತೊಮ್ಮೆ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ, ಕಳೆದ ಹನ್ನೊಂದು ವರ್ಷಗಳಲ್ಲಿ ನಿರಂತರವಾಗಿ ನಿಮ್ಮ ಕಾರ್ಯಾಲಯದ ವಾಷಿಂಗ್ ಮೆಷಿನ್ ಕೆಲಸ ಮಾಡುತ್ತಿರುವುದನ್ನು ದೇಶ ಗಮನಿಸುತ್ತಿದೆ. ನಿಮ್ಮಿಂದಲೇ ಭ್ರಷ್ಟಾಚಾರದ ಆರೋಪಕ್ಕೊಳಗಾಗಿರುವ ವಿರೋಧ ಪಕ್ಷಗಳ ನಾಯಕರನ್ನೆಲ್ಲಾ ವಾಷಿಂಗ್ ಮೆಷಿನ್ನಲ್ಲಿ ಹಾಕಿ ಪರಮ ಪ್ರಾಮಾಣಿಕರನ್ನಾಗಿ ಮಾಡುತ್ತಿರುವ ನಿಮ್ಮ ಚಾಕಚಕ್ಯತೆಗೆ ಶಹಬ್ಬಾಸ್ ಅನ್ನಲೇ ಬೇಕು. ಅಧಿಕೃತ ಮಾಹಿತಿಯ ಪ್ರಕಾರವೇ 2014ರಿಂದ ಇಲ್ಲಿಯವರೆಗೆ ಭ್ರಷ್ಟಾಚಾರದ ಆರೋಪ ಹೊತ್ತಿರುವ 25 ವಿರೋಧ ಪಕ್ಷದ ನಾಯಕರು ಬಿಜೆಪಿ ಸೇರಿದ್ದಾರೆ. ಇವರಲ್ಲಿ 23 ನಾಯಕರನ್ನು ಭ್ರಷ್ಟಾಚಾರದ ಆರೋಪಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಮುಕ್ತಗೊಳಿಸಿವೆ ಎಂದರು.
ಹಿಮಂತಾ ಶರ್ಮಾ, ಸುವೇಂದು ಅಧಿಕಾರಿ, ಹೆಚ್ಡಿ ಕುಮಾರಸ್ವಾಮಿ, ಅಜಿತ್ ಪವಾರ್, ಅಶೋಕ್ ಚವ್ಹಾಣ್, ನಾರಾಯಣ ರಾಣೆ, ಪ್ರತಾಪ್ ಸರ್‌ನಾಯಕ್ ಅವರಿಂದ ಹಿಡಿದು ಇತ್ತೀಚಿನ ಏಡ್ಸ್ ಟ್ರ್ಯಾಪ್ ಗಿರಾಕಿ ಮುನಿರತ್ನವರೆಗೆ ಎಷ್ಟೊಂದು ಭ್ರಷ್ಟರನ್ನು ವಾಷಿಂಗ್ ಮೆಷಿನ್ನಲ್ಲಿ ತೊಳೆದು ನೀವು ಕ್ಲೀನ್ ಮಾಡಿಲ್ಲ? ಇವೆಲ್ಲ ಕೇವಲ ಧರ್ಮಾರ್ಥ ಸೇವೆಯೇ ಪ್ರಧಾನಿಗಳೇ? ಎಂದು ಕೇಳಿದ್ದಾರೆ.
ನೇರಾನೇರ ಚರ್ಚೆಗೆ ನಾನು ಸಿದ್ದ, ನೀವು..?
ನಿಮ್ಮ ಪಕ್ಷದ ಖಜಾನೆಗೆ ಸಂದಾಯವಾಗಿರುವ ಚುನಾವಣಾ ಬಾಂಡ್ಗಳ ಹಿಂದಿನ ಕೊಡುಗೈ ದಾನಿಗಳು ಯಾರು? ಅವರು ಕೊಟ್ಟದ್ದೆಷ್ಟು? ಅದಕ್ಕಾಗಿ ಅವರು ಪಡೆದದ್ದು ಎಷ್ಟು? ಎನ್ನುವುದು ಇಂದು ದೇಶದ ಜನರ ಕಣ್ಣಮುಂದಿದೆ. ನಿಮ್ಮ ಹನ್ನೊಂದು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ಲೂಟಿಗೈದವರು ದೇಶ ಬಿಟ್ಟು ಓಡಿಹೋಗಲು ದಾರಿ ಮಾಡಿಕೊಟ್ಟವರು ಯಾರು? ಅದಾನಿ-ಅಂಬಾನಿ ಅವರ ಸಂಪತ್ತು ಎಷ್ಟು ಪಟ್ಟು ಹೆಚ್ಚಾಯಿತು? ಬಡವರ ಗಳಿಕೆ ಎಷ್ಟು ಪಟ್ಟು ಕಡಿಮೆಯಾಯಿತು? ನೀವು ಭ್ರಷ್ಟಾಚಾರದ ಬಗ್ಗೆ ಚರ್ಚೆ ಪ್ರಾರಂಭಿಸಿರುವುದನ್ನು ನೋಡಿ ಸಂತೋಷವಾಯಿತು. ನನ್ನ ವಿರುದ್ಧ ಭ‍್ರಷ್ಟಾಚಾರದ ಸುಳ್ಳು ಆರೋಪಗಳನ್ನು ಮಾಡಿ ಕುಣಿದಾಡುತ್ತಿರುವ ಪಾತ್ರದಾರಿಗಳನ್ನಷ್ಟೇ ರಾಜ್ಯದ ಜನ ನೋಡಿದ್ದಾರೆ. ಈಗ ಇದರ ಹಿಂದಿರುವ ಸೂತ್ರಧಾರಿ ಯಾರು ಎನ್ನುವುದು ಕೂಡಾ ಜನರಿಗೆ ಗೊತ್ತಾಗಲಿ. ಮೋದಿಯವರೇ, ದೂರದ ಊರಲ್ಲಿ ಕೂತು ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ನೇರಾನೇರ ಚರ್ಚೆ ಮಾಡಲು ನೀವು ಸಿದ್ಧ ಇದ್ದರೆ ನಾನು ಸದಾ ಸಿದ್ಧ ಎಂದಿದ್ದಾರೆ.