ಸಿದ್ದರಾಮಯ್ಯ ಸವಾಲ್‌: ಮಿಸ್ಟರ್‌ ಕುಮಾರಸ್ವಾಮಿ, ಯಡಿಯೂರಪ್ಪ ಅವರೇ ನನ್ನನ್ನು ನೀವು ರಾಜಕೀಯವಾಗಿ ಮುಗಿಸ್ತೀರಾ-karnataka politics cm siddaramaiah dares hd kumar swamy bs yediyurappa in kalburgi for political conspiracy against him ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಸಿದ್ದರಾಮಯ್ಯ ಸವಾಲ್‌: ಮಿಸ್ಟರ್‌ ಕುಮಾರಸ್ವಾಮಿ, ಯಡಿಯೂರಪ್ಪ ಅವರೇ ನನ್ನನ್ನು ನೀವು ರಾಜಕೀಯವಾಗಿ ಮುಗಿಸ್ತೀರಾ

ಸಿದ್ದರಾಮಯ್ಯ ಸವಾಲ್‌: ಮಿಸ್ಟರ್‌ ಕುಮಾರಸ್ವಾಮಿ, ಯಡಿಯೂರಪ್ಪ ಅವರೇ ನನ್ನನ್ನು ನೀವು ರಾಜಕೀಯವಾಗಿ ಮುಗಿಸ್ತೀರಾ

CM Siddaramiah dares ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆಗಳು ನಡೆದಿರುವ ನಡುವೆಯೇ ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷಗಳು ಮಾತ್ರವಲ್ಲದೇ ಅಡಳಿತ ಪಕ್ಷದವರಿಗೂ ಕಲಬುರಗಿ ಜಿಲ್ಲೆಯಲ್ಲಿ ಮಾತಿನ ಚಾಟಿ ಬೀಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಉತ್ತರ ನೀಡುತ್ತಲೇ ಕುರುಬ ಸಮುದಾಯದ ಕಂಬಳಿ ಹೆಗಲಿಗೇರಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಉತ್ತರ ನೀಡುತ್ತಲೇ ಕುರುಬ ಸಮುದಾಯದ ಕಂಬಳಿ ಹೆಗಲಿಗೇರಿಸಿದರು.

ಕಲಬುರಗಿ: ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ ಅವರೇ, ನೀವೆಲ್ಲರೂ ಸೇರಿ ನನ್ನನ್ನು ರಾಜಕೀಯವಾಗಿ ಮುಗಿಸ್ತೀನಿ ಅಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ. ನನ್ನನ್ನು ಅಷ್ಟು ಸುಲಭ ಅಂದುಕೊಳ್ಳಬೇಡಿ.ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಬಡವರ, ಮದ್ಯಮ ವರ್ಗದವರ ಕಲ್ಯಾಣಕ್ಕೆ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಕ್ಕೆ ಪಟ್ಟಭದ್ರರು ಷಡ್ಯಂತ್ರ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಜಗ್ಗುವವನು ನಾನಲ್ಲ. ಬಗ್ಗುವವನೂ ನಾನಲ್ಲ. ಬನ್ನಿ ನೋಡೋಣ. ಇದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಗೆ ಎಸೆದ ಸವಾಲು,

ಎರಡು ದಿನಗಳ ಕಾಲ ಕಲಬುರಗಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಕಲಬುರಗಿ ತಾಲ್ಲೂಕಿನ‌ ಕವಲಗಿ (ಕೆ) ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಜಯಂತ್ಸೋತ್ಸವವನ್ನು ಉದ್ಘಾಟಿಸಿ ರಾಯಣ್ಣ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಅವರು ಜನರ ಎದುರು ಕೊಂಚ ಭಾವನಾತ್ಮಕವಾಗಿಯೇ ಮಾತನಾಡಿದರು.

ಮೈಸೂರಿನ ಮುಡಾ ಪ್ರಕರಣದಲ್ಲಿ ಏನೇನೂ ಇಲ್ಲ. ಆದರೂ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ದೆಹಲಿಯಿಂದ ರಾಜಭವನದವರೆಗೂ ಪಿತೂರಿ ಹೆಣೆಯುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿ ಆಗಲು ಬಿಡಬಾರದು. ಸಂಗೊಳ್ಳಿರಾಯಣ್ಣನ ಹೋರಾಟದ ಕಿಚ್ಚು ನಮ್ಮೊಳಗಿದೆ. ನಾವೇನೂ ಸುಮ್ಮನೇ ಕೂರುವುದಿಲ್ಲ. ತಕ್ಕ ಉತ್ತರವನ್ನೂ ನೀಡುತ್ತೇವೆ ಎಂದು ಎಚ್ಚರಿಸಿದರು.

ಪಟ್ಟಭದ್ರ ಹಿತಾಸಕ್ತಿಗಳೇ ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟರು, ಬಸವಣ್ಣನವರನ್ನು ಆಸ್ಥಾನದಿಂದ ಓಡಿಸಿಬಿಟ್ಟರು. ಹೀಗಾಗಿ ಈ ಬಿಜೆಪಿ ಮತ್ತು ಜೆಡಿಎಸ್ ನವರ ಬಗ್ಗೆ ಎಚ್ಚರದಿಂದ ಇರಿ ಎನ್ನುವುದು ಸಿದ್ದರಾಮಯ್ಯ ನೀಡಿದ ಸಲಹೆ.

ಅಷ್ಟೇ ಅಲ್ಲದೇ ಬ್ರಿಟೀಷರ ಜೊತೆ ನಮ್ಮವರು ಕೈಜೋಡಿಸಿದ್ದರಿಂದಲೇ 200 ವರ್ಷ ಗುಲಾಮಗಿರಿ ಅನುಭವಿಸಿದೆವು. ಸಂಗೊಳ್ಳಿ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಟ್ಟವರು ನಮ್ಮವರೇ ಆದ ಮನೆ ಮುರುಕರು. ನಮ್ಮ ಸಮಾಜದಲ್ಲೇ ಇಂಥಹ ಮನೆ ಮುರುಕರು ಹಿಂದೆಯೂ ಇದ್ದರು. ಮುಂದೆಯೂ ಇರುತ್ತಾರೆ. ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದೂ ಹೇಳಲು ಮರೆಯಲಿಲ್ಲ ಸಿದ್ದರಾಮಯ್ಯ.

40 ವರ್ಷದಿಂದ ಸಣ್ಣ ತಪ್ಪು ಮಾಡದವನು ಈಗ ಮಾಡ್ತೀನಾ? ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ. ನಾನು ಹಿಂದುಳಿದ ಸಮಾಜದಲ್ಲಿ ಜನಿಸಿ ಬಡತನ ಅಂದರೆ ಏನು, ಗ್ರಾಮಗಳ ಸ್ಥಿತಿ ಹೇಗಿದೆ ಎಂದು ಅರ್ಥಮಾಡಿಕೊಂಡಿದ್ದೇನೆ. ಬಡತನ ಹೋಗಲಾಡಿಸಲು ಕಾರ್ಯಕ್ರಮ ರೂಪಿಸುತ್ತಿದ್ದೇನೆ. ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ನಾನು ಕೊಡುತ್ತಿರುವುದರಿಂದ ನನ್ನನ್ನು ಮುಗಿಸಲು ಯತ್ನಿಸುತ್ತಿದ್ದಾರೆ. ಅವರ ಯತ್ನ ಸಕ್ಸಸ್ ಆಗಲು ಬಿಡಬೇಡಿ ಎಂದು ಸ್ಪಷ್ಟ ದನಿಯಲ್ಲೇ ಸಿದ್ದರಾಮಯ್ಯ ಹೇಳಿದರು.

ಡಾ.ಬಾಬಾ ಸಾಹೇಬರು ಕೊಟ್ಟ ಸಂವಿಧಾನದಿಂದಾಗಿ ನಾನು ಮುಖ್ಯಮಂತ್ರಿ‌ ಆಗಿದ್ದೇನೆ. ಬಾಬಾ ಸಾಹೇಬರ ಆಶಯದಂತೆ ನಾನು ಎಲ್ಲಾ ಜಾತಿ, ಜನ ವರ್ಗಗಳಿಗೆ, ಮಹಿಳೆಯರಿಗೆ ಆರ್ಥಿಕ‌ ಶಕ್ತಿ ನೀಡುತ್ತಿದ್ದೇನೆ. ದೇಶದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ಬಂದಿದ್ದು ಕಾಂಗ್ರೆಸ್ ಅವಧಿಯಲ್ಲಿ. ನಾವು ನಮ್ಮ ಜನರಿಗೆ 5 ಕೆಜಿ ಹೆಚ್ಚುವರಿ ಅಕ್ಕಿ ಕೊಡಬೇಕು ಎಂದು ತೀರ್ಮಾನಿಸಿದರೆ ನರೇಂದ್ರ ಮೋದಿಯವರು ಅಕ್ಕಿ ಕೊಡಲು ಬಿಡಲಿಲ್ಲ. ಅದಕ್ಕಾಗಿ ನಾವು ಅಕ್ಕಿ ಬದಲಿಗೆ 5ಕೆಜಿ ಅಕ್ಕಿಯ ಹಣ ಕೊಡುತ್ತಿದ್ದೇವೆ ಎಂದು ಹೇಳಿದರು.

ಕಲಬುರಗಿಯ ಕವಲಗಿಯ 14 ಹಳ್ಳಿಗಳಿಗೆ ಅನುಕೂಲ ಆಗುವ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕಾರ್ಯಕ್ರಮ ತಿಂಥಣಿ ಕಾಗಿನೆಲೆ ಪೀಠದ ಜಗದ್ಗುರು ಸಿದ್ದರಾಮಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಿತು. ಶಾಸಕರಾದ ಎಂ.ವೈ.ಪಾಟೀಲರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಬೈರತಿ ಸುರೇಶ್, ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಬಿ.ಆರ್.ಪಾಟೀಲ್, ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಜಿಲ್ಲೆಯ ಶಾಸಕರು, ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

mysore-dasara_Entry_Point