ವಿದ್ಯುತ್ ದರ ಏರಿಕೆ ಸುಳಿವು; ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ ಬೆಸ್ಕಾಂ ಸೇರಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು
ಕರ್ನಾಟಕದ ಜಲಾಶಯಗಳು ಭರ್ತಿಯಾಗಿದ್ದು, ಜಲವಿದ್ಯುತ್ ಉತ್ಪಾದನೆಗೆ ಬೇಕಾದಷ್ಟು ನೀರಿನ ಸಂಗ್ರಹವಿದೆ. ಆದಾಗ್ಯೂ, ವಿದ್ಯುತ್ ಬೇಡಿಕೆ ಈ ಬಾರಿ ಕೂಡ ಹೆಚ್ಚಾಗಬಹುದು ಎಂಬ ಕಾರಣಕ್ಕೆ ವಿದ್ಯುತ್ ದರ ಏರಿಕೆ ಸುಳಿವು ಸಿಕ್ಕಿದ್ದು, ಈ ಕುರಿತು ಬೆಸ್ಕಾಂ ಸೇರಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ ಎಂದು ವರದಿ ಹೇಳಿದೆ.
ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿ ಹೆಚ್ಚುವರಿ ಮಳೆಯಾಗಿದೆ. ಎಲ್ಲ ಜಲಾಶಯಗಳೂ ಭರ್ತಿ ಆಗಿದ್ದು, ಮುಂದಿನ ಮುಂಗಾರು ಹಂಗಾಮಿನ ತನಕ ಜಲ ವಿದ್ಯುತ್ ಉತ್ಪಾದನೆಗೂ ನೀರಿನ ಸಮಸ್ಯೆ ಎದುರಾಗದು ಎಂದು ವಿದ್ಯುತ್ ಉತ್ಪಾದನಾ ವಲಯದ ಪರಿಣತರು ಹೇಳುತ್ತಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ವಿದ್ಯುತ್ ದರ ಇಳಿಸಿದ್ದ ಬೆಸ್ಕಾಂ ಮತ್ತು ಇತರೆ ವಿದ್ಯುತ್ ಸರಬರಾಜು ಕಂಪನಿಗಳು ಈಗ ದರ ಏರಿಕೆಯ ಪ್ರಸ್ತಾವನೆಗಳನ್ನು ಸಿದ್ಧಪಡಿಸುತ್ತಿದ್ದು, ಅವುಗಳನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಗೆ ಸಲ್ಲಿಸಲು ಸಿದ್ಧತೆ ನಡೆಸಿವೆ ಎಂದು ಉದಯವಾಣಿ ವರದಿ ಮಾಡಿದೆ. ಹಾಗಾಗಿ ವಿದ್ಯುತ್ ದರ ಏರಿಕೆಯ ಹೊರೆಯನ್ನು ಸಹಿಸಿಕೊಳ್ಳಲು ಗ್ರಾಹಕರು ಸಿದ್ದರಾಗಬೇಕಾಗಿದೆ. ಈ ತಿಂಗಳ ಕೊನೆಗೆ ಬೆಸ್ಕಾಂ ಮತ್ತು ಇತರೆ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಸುವ ಸಾಧ್ಯತೆಗಳಿವೆ.
ಜಲವಿದ್ಯುತ್ ಉತ್ಪಾದನಾ ವೆಚ್ಚ ಕಡಿಮೆ
ಸದ್ಯ ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇಲ್ಲ. ಸಂಗ್ರಹವಾಗಿರುವ ನೀರಿನ ಮಟ್ಟದ ಅಂಕಿ ಅಂಶ ಪ್ರಕಾರ ಮುಂದಿನ ಮುಂಗಾರು ತನಕ ಅಂದರೆ 2025ರ ಜೂನ್ ತಿಂಗಳ ತನಕ ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಆಗಲ್ಲ. ಲಿಂಗನಮಕ್ಕಿ, ಸೂಪಾ, ಮಾಣಿ ಜಲಾಶಯಗಳು ಭರ್ತಿಯಾಗಿವೆ. ಜಲವಿದ್ಯುತ್ ಉತ್ಪಾದನಾ ವೆಚ್ಚ ಉಳಿದ ಮೂಲಗಳ ವಿದ್ಯುತ್ ಉತ್ಪಾದನೆಗಿಂತ ಪ್ರತಿ ಯೂನಿಟ್‌ಗೆ 2.05 ರೂಪಾಯಿ ಕಡಿಮೆ ಇದೆ ಎಂದು ವರದಿ ವಿವರಿಸಿದೆ.
ಈ ಸಲ ಉತ್ತಮ ಮಳೆಯಾಗಿದೆ. ಅಂತರ್ಜಲ ಮಟ್ಟ ಏರಿಕೆಯಾಗಿದೆ. ಆದಾಗ್ಯೂ ಕೈಗಾರಿಕೆ, ಕೃಷಿ ಜಮೀನು ವಿಸ್ತರಣೆ ಮತ್ತು ಇತರೆ ಕಾರಣಕ್ಕೆ ವಾರ್ಷಿಕ ವಿದ್ಯುತ್ ಬೇಡಿಕೆ ಪ್ರತಿ ವರ್ಷವೂ ಏರಿಕೆಯಾಗುತ್ತದೆ. ವಿದ್ಯುತ್ ಬೇಡಿಕೆ ವಾರ್ಷಿಕವಾಗಿ ಶೇಕಡ 6- 10ರಷ್ಟು ಹೆಚ್ಚಳವಾಗುತ್ತಿದೆ. ಈ ಬೇಡಿಕೆ ಪೂರೈಸಲು ರಾಜ್ಯದಲ್ಲಿ ಲಭ್ಯವಿರುವ ವಿದ್ಯುತ್ ಸಾಕಾಗಲ್ಲ. ಹೀಗಾಗಿ ಅನ್ಯ ರಾಜ್ಯಗಳಿಂದ ಖರೀದಿ ಮಾಡಬೇಕಾಗುತ್ತದೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ಹೇಳಿದ್ದಾಗಿ ವರದಿ ತಿಳಿಸಿದೆ.
ಬೇಸಿಗೆಗೆ ವಿದ್ಯುತ್ ಖರೀದಿಗಾಗಿ ದರ ಏರಿಕೆ ಪ್ರಸ್ತಾವನೆ
ಅನ್ಯ ರಾಜ್ಯಗಳಿಂದ ಅಥವಾ ಖಾಸಗಿ ವಿದ್ಯುತ್ ಉತ್ಪಾದಕರಿಂದ ವಿದ್ಯುತ್ ಖರೀದಿ ಸ್ವಲ್ಪ ದುಬಾರಿ. ಮುಂಚಿತವಾಗಿ ಒಪ್ಪಂದ ಮಾಡಿದರೆ ಮಾತ್ರವೇ ಸ್ವಲ್ಪ ಕಡಿಮೆ ದರಕ್ಕೆ ವಿದ್ಯುತ್ ಸಿಗುತ್ತದೆ. ಬೇಸಿಗೆಯಲ್ಲಿ ಖರೀದಿ ದರವೂ ಹೆಚ್ಚಾಗಿರುತ್ತದೆ. ಹಾಗಾಗಿ ಈಗಲೇ ಖರೀದಿ ಒಪ್ಪಂದ ಮಾಡಬೇಕು. ಇದಕ್ಕಾಗಿ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಇಲಾಖೆ ಅಧಿಕಾರಿಗಳು ವಿವರಿಸಿದ್ಧಾಗಿ ವರದಿ ಹೇಳಿದೆ.
ಹೀಗೆ ಈ ಖರ್ಚಿನ ಹೊರೆ ಸಹಜವಾಗಿಯೇ ವಿದ್ಯುತ್ ಬಳಕೆದಾರರ ಮೇಲಾಗುತ್ತದೆ. ಪ್ರತಿ ಯೂನಿಟ್ ಮೇಲೆ ಈ ದರ ಬೀಳುತ್ತದೆ. ಇದನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ. ಈ ಹಿಂದಿನ ಮತ್ತು ಈಗಿನ ವಿದ್ಯುತ್ ಬೇಡಿಕೆ ಹಾಗೂ ಪೂರೈಕೆ ಗಮನಿಸುವುದಾದರೆ, ಕಳೆದ ವರ್ಷ ಬೇಸಿಗೆಯಲ್ಲಿ ಗರಿಷ್ಠ ಬೇಡಿಕೆ ದಾಖಲಾಗಿತ್ತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ವಿದ್ಯುತ್ ಎಷ್ಟು ಬೇಕಾಗಬಹುದು ಎಂದು ಅಂದಾಜಿಸಿ ಖರೀದಿ ಒಪ್ಪಂದ ಮಾಡಿಕೊಳ್ಳಲು ಸಿದ್ದತೆ ನಡೆದಿದೆ. ವಿದ್ಯುತ್ ದರ ಏರಿಕೆ ಪ್ರಸ್ತಾವನೆಯನ್ನೂ ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಕೂಡ ಮುಖ್ಯವಾಗುತ್ತವೆ. ಆದರೆ ಕೇಂದ್ರ ಸರ್ಕಾರ ಈಗ ಕಲ್ಲಿದ್ದಲು ಆಧರಿತ ವಿದ್ಯುತ್ ಯೋಜನೆಗಳಿಗೆ ಉತ್ತೇಜನ ನೀಡುತ್ತಿಲ್ಲ. ಶಾಖೋತ್ಪನ್ನ ವಿದ್ಯುತ್ ದರ ಪ್ರತಿ ಯೂನಿಟ್‌ಗೆ ಸರಾಸರಿ 7.88 ರೂಪಾಯಿ ಇದೆ. ಕೇಂದ್ರೀಯ ವಿದ್ಯುತ್ ಜಾಲದಿಂದ ಬರುವ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ಸರಾಸರಿ 5.03 ರೂ. ಆಗುತ್ತದೆ. ಹಾಗಂತ, ಕರ್ನಾಟಕದಲ್ಲಿ ಜಲವಿದ್ಯುತ್ ಉತ್ಪಾದನೆ ಅಗ್ಗ ಮಾತ್ರವಲ್ಲ. ಗರಿಷ್ಠ ಬೇಡಿಕೆ ಅವಧಿಯ ಒತ್ತಡ ಕೂಡ ತಗ್ಗಿಸಬಹುದಾದ ಸಾಮರ್ಥ್ಯವನ್ನೂ ಹೊಂದಿವೆ. ಆದರೆ, ಸಂಪೂರ್ಣವಾಗಿ ಅವುಗಳ ಮೇಲೆಯೇ ಅವಲ೦ಬಿಸಲಾಗದು ಎಂಬುದು ಕೂಡ ಒಪ್ಪಿಕೊಳ್ಳಬೇಕಾದ ಸತ್ಯ ಎಂದು ವರದಿ ಹೇಳಿದೆ.