ಕರ್ನಾಟಕ ಹವಾಮಾನ: ಈ ವರ್ಷ ಮಳೆಯಷ್ಟೇ ಅಲ್ಲ, ಚಳಿಯೂ ಹೆಚ್ಚು, 15ಕ್ಕಿಂತ ಕೆಳಕ್ಕೆ ಉಷ್ಣಾಂಶ, ಬೆಂಗಳೂರು, ಬೀದರ್‌ಗಳಲ್ಲಿ ಮೈ ನಡುಕದ ಚಳಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ: ಈ ವರ್ಷ ಮಳೆಯಷ್ಟೇ ಅಲ್ಲ, ಚಳಿಯೂ ಹೆಚ್ಚು, 15ಕ್ಕಿಂತ ಕೆಳಕ್ಕೆ ಉಷ್ಣಾಂಶ, ಬೆಂಗಳೂರು, ಬೀದರ್‌ಗಳಲ್ಲಿ ಮೈ ನಡುಕದ ಚಳಿ

ಕರ್ನಾಟಕ ಹವಾಮಾನ: ಈ ವರ್ಷ ಮಳೆಯಷ್ಟೇ ಅಲ್ಲ, ಚಳಿಯೂ ಹೆಚ್ಚು, 15ಕ್ಕಿಂತ ಕೆಳಕ್ಕೆ ಉಷ್ಣಾಂಶ, ಬೆಂಗಳೂರು, ಬೀದರ್‌ಗಳಲ್ಲಿ ಮೈ ನಡುಕದ ಚಳಿ

ಕರ್ನಾಟಕದಲ್ಲಿ ಈ ವರ್ಷ ಮಳೆಯಷ್ಟೇ ಅಲ್ಲ, ಚಳಿಯೂ ಹೆಚ್ಚು ಅನುಭವಕ್ಕೆ ಬರುವ ಲಕ್ಷಣಗಳು ಗೋಚರಿಸಿವೆ. ಕೆಲವು ಕಡೆಗೆ ಉಷ್ಣಾಂಶ 15 ಡಿಗ್ರಿ ಸೆಲ್ಶಿಯಸ್‌ಗಿಂತಲೂ ಕೆಳಗೆ ಇಳಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಬೀದರ್‌ಗಳಲ್ಲಿ ಮೈ ನಡುಕದ ಚಳಿ ಶುರುವಾಗಿದೆ. ಈ ಕುರಿತ ಇನ್ನಷ್ಟು ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಈ ವರ್ಷ ಮಳೆಯಷ್ಟೇ ಅಲ್ಲ, ಚಳಿಯೂ ಹೆಚ್ಚು ಅನುಭವಕ್ಕೆ ಬಂದಿದೆ. ಕೆಲವು ಕಡೆ 20ಕ್ಕಿಂತ ಕೆಳಕ್ಕೆ ಉಷ್ಣಾಂಶ ಇಳಿಕೆಯಾಗಿದೆ. ಬೆಂಗಳೂರು, ಬೀದರ್‌ಗಳಲ್ಲಿ ಮೈ ನಡುಕದ ಚಳಿ ಶುರುವಾಗಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದಲ್ಲಿ ಈ ವರ್ಷ ಮಳೆಯಷ್ಟೇ ಅಲ್ಲ, ಚಳಿಯೂ ಹೆಚ್ಚು ಅನುಭವಕ್ಕೆ ಬಂದಿದೆ. ಕೆಲವು ಕಡೆ 20ಕ್ಕಿಂತ ಕೆಳಕ್ಕೆ ಉಷ್ಣಾಂಶ ಇಳಿಕೆಯಾಗಿದೆ. ಬೆಂಗಳೂರು, ಬೀದರ್‌ಗಳಲ್ಲಿ ಮೈ ನಡುಕದ ಚಳಿ ಶುರುವಾಗಿದೆ. (ಸಾಂಕೇತಿಕ ಚಿತ್ರ) (HT News File Photo)

ಬೆಂಗಳೂರು: ಕರ್ನಾಟಕದಲ್ಲಿ ಈ ಸಲ ಮಳೆಯ ಪ್ರಮಾಣವೂ ಹೆಚ್ಚು, ಅದೇ ರೀತಿ ಚಳಿಯೂ ಹೆಚ್ಚಾಗಿರಲಿದೆ. ವಿಶೇಷವಾಗಿ ಕೆಲವು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಶಿಯಸ್‌ಗಿಂತಲೂ ಕೆಳಗೆ ಇಳಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಎಚ್ಚರಿಸಿದೆ. ನವೆಂಬರ್ ತಿಂಗಳ ಅಂತ್ಯದಿಂದ ಕರ್ನಾಟಕದಲ್ಲಿ ಚಳಿಯು ಹೆಚ್ಚಾಗಬಹುದು. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ದಟ್ಟ ಮಂಜು ಆವರಿಸಿ, ಇಬ್ಬನಿ ಬೀಳುತ್ತಿದ್ದು, ಸಂಜೆ ಚಳಿಯ ಅನುಭವವಾಗತೊಡಗಿದೆ. ತಿಂಗಳ ಕೊನೆಗೆ ಮೈ ಕೊರೆಯುವ ಚಳಿ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಎಲ್‌ನಿನಾ ಕಾರಣ ಕರ್ನಾಟಕದಲ್ಲಿ ಸರಾಸರಿ 3 ರಿಂದ 4 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶ ಕುಸಿತ

ಕರ್ನಾಟಕದಲ್ಲಿ ಇನ್ನು ಎರಡು ತಿಂಗಳ ಕಾಲ ಕನಿಷ್ಠ ಮತ್ತು ಗರಿಷ್ಠ ತಾಪಮಾನಕ್ಕಿಂತ ಉಷ್ಣಾಂಶ ಸರಾಸರಿ ೩ರಿಂದ ೪ ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಚಳಿ ಹೆಚ್ಚಾಗಲು ಪೂರ್ವ, ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶ ಕಡಿಮೆಯಾಗಿ ಉಂಟಾಗುವ ಎಲ್-ನಿನಾ ಕೂಡ ಕಾರಣ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮುಂಗಾರು ಮಳೆಯ ಅವಧಿ (ಜೂನ್-ಸೆಪ್ಟೆಂಬರ್)ಯಲ್ಲಿ ಕರ್ನಾಟಕದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇದರ ಪರಿಣಾಮ ಮಣ್ಣು ಮತ್ತು ವಾತಾವರಣ ಹೆಚ್ಚು ತೇವಾಂಶವನ್ನು ಸಂಗ್ರಹಿಸಿಕೊಂಡಿದೆ. ಇದಲ್ಲದೆ, ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ ಕೂಡ ಚಳಿ ಹೆಚ್ಚಾಗಲು ಕಾರಣ. ಮೋಡ ಕವಿದ ಮತ್ತು ಮಂಜು ಮುಸುಕಿದ ವಾತಾವರಣ ಚಳಿಯ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಿಜಾಪುರ, ಬಾಗಲಕೋಟೆ, ಗದಗ, ಕೊಪ್ಪಳ , ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಕಡಿಮೆ ಆಗುವ ಸಾಧ್ಯತೆ ಇದ್ದು, ಚಳಿ ಅನುಭವಕ್ಕೆ ಬರಲಿದೆ.

ಬೆಂಗಳೂರು ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಭಾರಿ ಚಳಿ

ಬದಲಾದ ಹವಾಮಾನದ ಪರಿಣಾಮ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈಗಾಗಲೇ ಚಳಿ ಹೆಚ್ಚಾಗಿದೆ. ನಿನ್ನೆ (ನವೆಂಬರ್ 20) ಬೀದರ್ ಮತ್ತು ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ 12.05 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಅಂದರೆ ಅಲ್ಲಿ ಚಳಿ ಹೆಚ್ಚಳವಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 18.8 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 18.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ರಾತ್ರಿ ವೇಳೆ ಮತ್ತು ಮುಂಜಾನೆ, ಬೆಳಗ್ಗೆ ಹೊತ್ತು ಈ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿರುವ ಕಾರಣ ಬೆಳ್‌ ಬೆಳಗ್ಗೆ ಎದ್ದು ವಾಕಿಂಗ್, ಜಾಗಿಂಗ್ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಬೆಳಗ್ಗೆ ಸೂರ್ಯ ಕಾಣಿಸುವ ತನಕ ಅಗತ್ಯ ಇರುವವರಷ್ಟೇ ರಸ್ತೆಗಿಳಿಯುತ್ತಾರೆ. ಉಳಿದವರು ಬೆಚ್ಚಗೆ ಮನೆಯಲ್ಲೇ ಇದ್ದುಬಿಡುತ್ತಿದ್ದಾರೆ. ಇನ್ನೊಂದೆಡೆ, ಗಾಂಧಿ ಬಜಾರ್‌, ಜಯನಗರ ನಾಲ್ಕನೇ ಬ್ಲಾಕ್‌, ಗಾಂಧಿನಗರ, ಮೆಜೆಸ್ಟಿಕ್‌, ಮಲ್ಲೇಶ್ವರಂ ಸುತ್ತಮುತ್ತ ರಸ್ತೆ ಬದಿ ಜಾಕೆಟ್‌, ಸ್ವೆಟ್ಟರ್‌, ಟೋಪಿ, ಕಿವಿ ಮುಚ್ಚುವ ಬ್ಯಾಂಡ್ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಜನರೂ ಅಷ್ಟೇ ಇಂಥವನ್ನು ಹೆಚ್ಚು ಖರೀದಿಸಲಾರಂಭಿಸಿದ್ದಾರೆ.

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ ಕನಿಷ್ಠ ಉಷ್ಣಾಂಶ 8 ಡಿಗ್ರಿ ಸೆಲ್ಸಿಯಸ್‌ ತನಕ ಇಳಿಕೆಯಾಗಬಹುದು. ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್‌ ತನಕ ಕುಸಿಯಬಹುದು. ಅದೇ ರೀತಿ ಈ ವಾರವಿಡೀ ಕೆಲವು ಕಡೆಗೆ ಗರಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ನಿಂದ 18 ಡಿಗ್ರಿ ಸೆಲ್ಸಿಯಸ್‌ ಕಾಣಬಹುದು. ಬೀದರ್, ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮುಂದಿನ ವಾರ ಕನಿಷ್ಠ ಉಷ್ಣಾಂಶವು 12 ಡಿಗ್ರಿ ಸೆಲ್ಸಿಯಸ್‌ನಿಂದ 14 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಕೆಯಾಗಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ಕರ್ನಾಟಕದ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ ಕನಿಷ್ಠ ಉಷ್ಣಾಂಶ 8 ರಿಂದ 10 ಡಿಗ್ರಿ ದಾಖಲಾಗುವ ಸಾಧ್ಯತೆಗಳಿವೆ. ಬೆಂಗಳೂರು ಮತ್ತಿತರ ಜಿಲ್ಲೆಗಳಲ್ಲಿ 12 ರಿಂದ 14 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ನಸುಕಿನ ಜಾವ 4 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೂ ಶೀತದ ವಾತವರಣ ಇರಲಿದ್ದು, ಶೀತ-ಜ್ವರದ ಆತಂಕವೂ ಕಾಡಬಹುದು. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

Whats_app_banner