ತುಮಕೂರಿನ ಮಂಡಿಪೇಟೆಯಲ್ಲಿ ಅಗ್ನಿ ಅನಾಹುತ; ಅಂಗಡಿಯಲ್ಲಿದ್ದ ಪಟಾಕಿ ಸ್ಪೋಟ, ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿ-large number of items caught fire due to fire accident in mandipet of tumkur city short circuit esp ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ತುಮಕೂರಿನ ಮಂಡಿಪೇಟೆಯಲ್ಲಿ ಅಗ್ನಿ ಅನಾಹುತ; ಅಂಗಡಿಯಲ್ಲಿದ್ದ ಪಟಾಕಿ ಸ್ಪೋಟ, ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿ

ತುಮಕೂರಿನ ಮಂಡಿಪೇಟೆಯಲ್ಲಿ ಅಗ್ನಿ ಅನಾಹುತ; ಅಂಗಡಿಯಲ್ಲಿದ್ದ ಪಟಾಕಿ ಸ್ಪೋಟ, ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿ

ತುಮಕೂರು ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಮಂಡಿಪೇಟೆಯಲ್ಲಿ ಸೋಮವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ನೇತಾಜಿ ಟ್ರೇಡರ್ಸ್‌ನಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ಗೋಡೌನ್‌ಗೆ ಬೆಂಕಿ ಹಬ್ಬಿ ಭಾರಿ ನಷ್ಟವಾಗಿದೆ. (ವರದಿ: ಈಶ್ವರ್‌, ತುಮಕೂರು)

ತುಮಕೂರಿನ ಮಂಡಿಪೇಟೆಯಲ್ಲಿ ಅಗ್ನಿ ಅನಾಹುತ
ತುಮಕೂರಿನ ಮಂಡಿಪೇಟೆಯಲ್ಲಿ ಅಗ್ನಿ ಅನಾಹುತ

ತುಮಕೂರು: ಗ್ರಂಥಿಗೆ ಅಂಗಡಿ ಮತ್ತು ಗೋದಾಮಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಅಂಗಡಿ ಮತ್ತು ಗೋದಾಮಿನಲ್ಲಿದ್ದ ಪಟಾಕಿಗಳು ಸೇರಿದಂತೆ ಇನ್ನಿತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ಮಂಡಿಪೇಟೆಯ ನೇತಾಜಿ ಟ್ರೇಡರ್ಸ್‌ನಲ್ಲಿ ನಡೆದಿದೆ. ನಗರದ ಪ್ರಮುಖ ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವ ಮಂಡಿಪೇಟೆಯಲ್ಲಿ ಮೆಟ್ರೋ ಮುಂಭಾಗ ಇರುವ ನೇತಾಜಿ ಟ್ರೇಡರ್ಸ್‌ನಲ್ಲಿ ಸೋಮವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ಅಂಗಡಿಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಗೋಡೌನ್ ಸಹ ಇದೆ. ಹೀಗಾಗಿ ಹೊತ್ತಿಕೊಂಡಿರುವ ಬೆಂಕಿ ಗೋಡೌನ್ ಹಾಗೂ ಅಕ್ಕಪಕ್ಕದ ಅಂಗಡಿ ಮಳಿಗೆಗಳಿಗೂ ಆವರಿಸಿದ್ದು, ಧಗಧಗನೆ ಹೊತ್ತಿ ಉರಿದಿದೆ.

ಈ ಅಂಗಡಿಯಲ್ಲಿ ಕೊಂಚ ಪ್ರಮಾಣದಲ್ಲಿ ಪಟಾಕಿ, ಗ್ರಂಥಿಗೆ, ಬಂಟಿಂಗ್ಸ್‌, ಧ್ವಜಗಳು ಸೇರಿದಂತೆ ಇನ್ನಿತರೆ ಸಾಮಗ್ರಿ ಮಾರಾಟ ಮಾಡಲು ದಾಸ್ತಾನು ಇಡಲಾಗಿತ್ತು, ಬೆಳಗ್ಗೆ ಬೆಂಕಿ ಹೊತ್ತಿ ಉರಿಯುತ್ತಿರುವುದರಿಂದ ಪಟಾಕಿಗಳು ನಿರಂತರವಾಗಿ ಸ್ಫೋಟಗೊಳ್ಳುತ್ತಲೇ ಇದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿತ್ತು.

ಈ ಪಟಾಕಿ ಅಂಗಡಿಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಮನೆಗಳು ಸಹ ಇದ್ದು, ಜನರು ವಾಸ ಮಾಡುತ್ತಿದ್ದಾರೆ. ಪಟಾಕಿಗಳು ನಿರಂತರವಾಗಿ ಶಬ್ದ ಮಾಡುತ್ತಾ ಸ್ಫೋಟಗೊಳ್ಳುತ್ತಿರುವಂತೆಯೇ ಬೆಂಕಿಯೂ ಧಗಧಗನೆ ಉರಿದಿದೆ. ಹೀಗಾಗಿ ಸ್ಥಳೀಯ ನಿವಾಸಿಗಳು ತೀವ್ರ ಭಯ ಭೀತರಾಗುವಂತೆ ಮಾಡಿತ್ತು.

ಪಟಾಕಿ ಅಂಗಡಿ ಧಗಧಗನೆ ಹೊತ್ತಿ ಉರಿದಿದ್ದರಿಂದ ಮಂಡಿಪೇಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ಮುಂಜಾನೆಯಿಂದಲೇ ಬೆಂಕಿ ಹೊತ್ತಿ ಉರಿಯುತ್ತಿರುವ ಬಗ್ಗೆ ಸುದ್ದಿ ತಿಳಿದ ಅಂಗಡಿ ಮಾಲೀಕ ಮೋಹನ್ ಕುಮಾರ್ ಅವರು ಸ್ಥಳಕ್ಕೆ ಧಾವಿಸಿದರಾದರೂ ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಅಂಗಡಿಯನ್ನು ಆವರಿಸಿತ್ತು.

11 ಗಂಟೆಯವರೆಗೆ ಬೆಂಕಿ ನಂದಿಸಲು ಹರಸಾಹಸ

ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮದ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಲು ಮುಂದಾದರು, ಆದರೂ ಬೆಳಗ್ಗೆ 11 ಗಂಟೆಯಾದರೂ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಹರಸಾಹಸ ಪಟ್ಟರು.

ಪಟಾಕಿ ಅಂಗಡಿಯಲ್ಲಿ ಮುಂಜಾನೆ ಬೆಂಕಿ ಹೊತ್ತಿಕೊಂಡಿದ್ದರಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಅಂಗಡಿ ಮತ್ತು ಗೋಡೌನ್ ಇನ್ನೂ ತೆರೆಯದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ. ಆದರೆ ಲಕ್ಷಾಂತರ ರೂ. ಬೆಲೆಯ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಪೊಲೀಸ್ ಬಂದೋಬಸ್ತ್‌

ಈ ಬೆಂಕಿ ಅವಘಡದಿಂದ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಂಡಿಪೇಟೆಯ ಎರಡು ಕಡೆಗಳಲ್ಲಿ ರಸ್ತೆ ಬಂದ್ ಮಾಡಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು. ಘಟನೆಯ ಸುದ್ದಿ ತಿಳಿದ ಕೂಡಲೇ ಶಾಸಕ ಜಿಬಿ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ್, ನಗರಠಾಣೆ ಇನ್ಸ್‌ಪೆಕ್ಟರ್ ದಿನೇಶ್‌ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ್ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಅಡವೀಶ್ ನೇತೃತ್ವದಲ್ಲಿ 5 ವಾಹನಗಳಲ್ಲಿ ಮೊಕ್ಕಾಂ ಹೂಡಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.