ಕನ್ನಡ ಸುದ್ದಿ  /  ಕರ್ನಾಟಕ  /  ಚಾರ್ಮಾಡಿ ಘಾಟ್; ಮುಂಗಾರು ಮಳೆಯ ದೃಶ್ಯವೈಭವ, ಚಾರ್ಮಾಡಿ ಘಾಟಿಯಲ್ಲಿ ಅಪಾಯಕಾರಿಯಾಗುತ್ತಿವೆ ಸೆಲ್ಫೀ ಗೀಳು, ಫೊಟೋಶೂಟ್

ಚಾರ್ಮಾಡಿ ಘಾಟ್; ಮುಂಗಾರು ಮಳೆಯ ದೃಶ್ಯವೈಭವ, ಚಾರ್ಮಾಡಿ ಘಾಟಿಯಲ್ಲಿ ಅಪಾಯಕಾರಿಯಾಗುತ್ತಿವೆ ಸೆಲ್ಫೀ ಗೀಳು, ಫೊಟೋಶೂಟ್

ಚಾರ್ಮಾಡಿ ಘಾಟ್ (Charmadi Ghat); ಮುಂಗಾರು ಮಳೆಯ ದೃಶ್ಯವೈಭವ ಪಯಣಿಗರನ್ನು ಮೋಡಿ ಮಾಡತೊಡಗಿದೆ. ಸೆಲ್ಫೀ ಗೀಳು, ಫೊಟೋಶೂಟ್ ಈಗ ಚಾರ್ಮಾಡಿ ಘಾಟಿಯಲ್ಲಿ ಅಪಾಯಕಾರಿಯಾಗುತ್ತಿವೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು)

ಚಾರ್ಮಾಡಿ ಘಾಟ್; ಮುಂಗಾರು ಮಳೆಯ ದೃಶ್ಯವೈಭವ, ಚಾರ್ಮಾಡಿ ಘಾಟಿಯಲ್ಲಿ ಅಪಾಯಕಾರಿಯಾಗುತ್ತಿವೆ ಸೆಲ್ಫೀ ಗೀಳು, ಫೊಟೋಶೂಟ್.
ಚಾರ್ಮಾಡಿ ಘಾಟ್; ಮುಂಗಾರು ಮಳೆಯ ದೃಶ್ಯವೈಭವ, ಚಾರ್ಮಾಡಿ ಘಾಟಿಯಲ್ಲಿ ಅಪಾಯಕಾರಿಯಾಗುತ್ತಿವೆ ಸೆಲ್ಫೀ ಗೀಳು, ಫೊಟೋಶೂಟ್.

ಮಂಗಳೂರು: ಇಳೆಯನ್ನೇ ಭೂಸ್ವರ್ಗವನ್ನಾಗಿಸಿದ ಚಾರ್ಮಾಡಿಯ ದೃಶ್ಯ ವೈಭವವನ್ನು ನೋಡಲು ಎರಡು ಕಣ್ಣು ಸಾಲದು… ಹೀಗೆಂದುಕೊಂಡು ಸಣ್ಣ ಬಿಡುವು ಸಿಕ್ಕರೂ ಸಾಕು. ಇಲ್ಲಿಗೆ ಓಡೋಡಿ ಬರುವವರು ಹಲವರು. ಚಾರ್ಮಾಡಿ ಸುಂದರವಾಗಿ ಕಾಣುತ್ತಿದೆ. ಅದರ ಸೌಂದರ್ಯ ಸವಿಯಲು ನೂರಾರು ಮಂದಿ ಆಗಮಿಸುತ್ತಿದ್ದಾರೆ. ಅದೇ ಹೊತ್ತಿನಲ್ಲಿ ಕಂಡಕಂಡಲ್ಲಿ ಫೊಟೋ ಕ್ಲಿಕ್ ಮಾಡುವ ಚಾಳಿಯಿಂದಾಗಿ ರಸ್ತೆ ಸಂಚಾರಕ್ಕೂ ಕಷ್ಟ. ಅವರಿಗೂ ಅಪಾಯಕಾರಿ!!

ಉದ್ದಕ್ಕೆ ಹಸಿರ ಪರ್ವತ ಶ್ರೇಣಿಯನ್ನು ಸೀಳಿಕೊಂಡು ಹೋಗುವ ಕಡಿದಾದ ರಸ್ತೆ. ಅಲ್ಲಲ್ಲಿ ಕಾಣಸಿಗುವ ಸಣ್ಣಝರಿಗಳು ನೋಡುಗರ ಕಣ್ಮನ ಸೆಳೆಯುತ್ತಿರುವುದಂತೂ ನಿಜ.. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಸಂಧಿಸುವ ಚಾರ್ಮಾಡಿ ಘಾಟ್‌ನಲ್ಲಿ ಸುಂದರ ದೃಶ್ಯವೈಭವ ಕಣ್ಣು ಕುಕ್ಕುವಂತಿದೆ.

ಮುಂಗಾರು ಮಳೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಹೊಸ ಚೈತನ್ಯ ನೀಡಿದೆ. ಮಳೆಯಿಂದಾಗಿ ಪ್ರಕೃತಿ ಹಸಿರನ್ನೇ ಹೊದ್ದುಕೊಂಡು ಮಲಗಿರುವಂತೆ ಭಾಸವಾಗುತ್ತಿದೆ ಚಾರ್ಮಾಡಿಯ ನವರೂಪ ಪ್ರವಾಸಿಗರಿಗೆ ಸುಂದರ ಅನುಭವ ನೀಡುತ್ತಿದೆ. ತಿರುವು-ಮುರುವಿನ ರಸ್ತೆಯ ಸುತ್ತಲೂ ಗಿಡ, ಮರ, ಮಂಜು, ಮಳೆಯ ವಾತಾವರಣ ಹೊಂದಿರುವ ಚಾರ್ಮಾಡಿ ಘಾಟಿ ಪ್ರದೇಶದ ನಿಸರ್ಗ ಸೌಂದರ್ಯ ಅನಾವರಣಗೊಳ್ಳತೊಡಗಿದೆ.

ಟ್ರೆಂಡಿಂಗ್​ ಸುದ್ದಿ

ಬೇಸಗೆ ಮಳೆ ತಡವಾಗಿ ಆರಂಭವಾದ ಕಾರಣ ಏಪ್ರಿಲ್, ಮೇ ತಿಂಗಳುಗಳಲ್ಲಿ ಚಾರ್ಮಾಡಿ ಘಾಟಿಯಲ್ಲೂ ಒಣ ವಾತಾವರಣ ಮೂಡಿತ್ತು. ಚಿಕ್ಕ ಹಾಗೂ ದೊಡ್ಡ ಜಲಪಾತ,ಹಳ್ಳ ತೊರೆಗಳಲ್ಲೂ ನೀರು ಇಳಿದು ಹೋಗಿತ್ತು. ಮೇ ಮಧ್ಯ ಭಾಗದ ಬಳಿಕ ಆರಂಭವಾದ ಬೇಸಿಗೆ ಮಳೆ ಮತ್ತೆ ಮುಂಗಾರು ಆರಂಭದವರೆಗೂ ಮುಂದುವರಿದಿದೆ.ಒಣಗಿ ಹೋಗಿದ್ದ ಘಾಟಿ ಭಾಗದಲ್ಲಿ ಹಸಿರು ಮತ್ತೆ ಜೀವಕಳೆ ಪಡೆದಿದ್ದು ಜಲಪಾತ, ಹಳ್ಳ,ತೊರೆಗಳು ತುಂಬಿಕೊಳ್ಳತೊಡಗಿವೆ .

ಆಕರ್ಷಕ ಜಲಪಾತಗಳನ್ನು ನೋಡಬಹುದು

ಘಾಟಿ ರಸ್ತೆಯಲ್ಲಿ ಸಂಚರಿಸುವ ವೇಳೆ ಒಂದನೆ ತಿರುವಿನಿಂದಲೇ ಘಾಟಿಯ ಗುಡ್ಡದಿಂದ ಬೀಳುವ ನೀರು ಕಲ್ಲುಗಳ ಮೇಲೆ ಹರಿದು ಪುಟ್ಟ ಪುಟ್ಟ ಜಲಪಾತಗಳನ್ನು ಸೃಷ್ಟಿಸಿವೆ. 25 ಕಿಮೀ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಏಳರಿಂದ ಎಂಟು ಕಡೆ ಈ ರೀತಿ ನೀರು ಬೀಳುತ್ತಿದೆ. ಇನ್ನೂ ಹೆಚ್ಚಿನ ಜಲಪಾತಗಳು ಘಾಟಿಯ ತಿರುವುಗಳು ಕಳೆದ ಬಳಿಕ ಕಾಣಸಿಗುತ್ತವೆ. ಹತ್ತರಿಂದ ಹದಿನೈದರಷ್ಟು ತೊರೆಗಳಲ್ಲಿ ನೊರೆ ನೀರು ಧುಮ್ಮಿಕ್ಕುತ್ತಿದೆ. ಸುತ್ತಲೂ ಹಸಿರು ಪರಿಸರ,ಮಂಜು ಮಳೆಯ ವಾತಾವರಣ ಪ್ರವಾಸಿಗರ ಪ್ರಯಾಣದ ಆಯಾಸ ದೂರ ಮಾಡುತ್ತದೆ.

ಚಾರ್ಮಾಡಿಯಲ್ಲಿ ಮಾನ್ಸೂನ್ ಯಾನ, ಇರಲಿ ಎಚ್ಚರ

ಮಾನ್ಸೂನ್ ಯಾನವನ್ನು ಇಷ್ಟಪಡುವ ಪ್ರವಾಸಿಗರ ಮೊದಲ ಆದ್ಯತೆ ಚಾರ್ಮಾಡಿ ಘಾಟ್ ಆಗಿದೆ. ಕಾರಣ ದಟ್ಟವಾದ ಮಂಜು, ನಿರಂತರವಾರ ಮಳೆ, ಮೈ ಕೊರೆಯುವ ಚಳಿ ಇವೆಲ್ಲದರ ಸಮ್ಮಿಳಿತವೇ ಚಾರ್ಮಾಡಿ. ಚಾರ್ಮಾಡಿ ಘಾಟ್‌ನಲ್ಲಿ ಪ್ರಯಾಣಿಸುತ್ತಾ ಬೆಟ್ಟಗುಡ್ಡಗಳನ್ನು ನೋಡುತ್ತಾ, ಜಲಧಾರೆಗಳ ವಯ್ಯಾರ ನೋಡುತ್ತಾ ಸಾಗುತ್ತಿದ್ದರೆ, ಕಣ್ಣುತುಂಬುತ್ತದೆ.

ಆದರೆ ಪ್ರವಾಸಿಗರು ಅಲ್ಲಲ್ಲಿ ವಾಹನ ನಿಲ್ಲಿಸುವುದರಿಂದ ಇತರ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ. ರಸ್ತೆಯ ಮಧ್ಯೆ ಬಂದು ಫೋಟೋ ಕ್ಲಿಕ್ಕಿಸೋದು ಅಪಾಯಕ್ಕೆ ಆಹ್ವಾನವಿತ್ತಂತೆ. ಜನದಟ್ಟಣೆ ಹೆಚ್ಚಾದಲ್ಲಿ ಪಾರ್ಕಿಂಗ್ ಝೋನ್ ಆಗಿ ಚಾರ್ಮಾಡಿ ಘಾಟ್ ಪರಿವರ್ತನೆಯಾಗುತ್ತದೆ. ಮಾನವ ಹಸ್ತಕ್ಷೇಪದಿಂದ ಚಾರ್ಮಾಡಿಯ ಸೊಬಗು ಕುಂದದಿರಲಿ. ಪ್ರಯಾಣದ ವೇಳೆ ಜಲಪಾತ,ತೊರೆಗಳನ್ನು ವೀಕ್ಷಿಸುತ್ತಾ ಸಾಗುವವರಿದ್ದರೆ.

ಘಾಟಿಯ ಈ ಸೌಂದರ್ಯವನ್ನು ಪ್ರಯಾಣದ ವೇಳೆ ವೀಕ್ಷಿಸಲು ಯಾವುದೇ ಅಡ್ಡಿ ಇಲ್ಲ. ಆದರೆ ಇಲ್ಲಿನ ವ್ಯೂ ಪಾಯಿಂಟ್ ಗಳಲ್ಲಿ ಪ್ರವಾಸಿಗರು ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದಾರೆ. ಶನಿವಾರ ಭಾನುವಾರ ಹಾಗೂ ರಜಾ ದಿನಗಳಂದು ಇದು ವಿಪರೀತವಾಗಿರುತ್ತದೆ. ಕಲ್ಲುಗಳ ಮೇಲೆ ಹತ್ತುವುದು, ತೊರೆಗಳ ನೀರಿಗೆ ಇಳಿಯುವುದು, ತಡೆಗೋಡೆ, ಕಲ್ಲುಗಳನ್ನು ಹತ್ತಿ ರಸ್ತೆಯ ಮದ್ಯೆ ನಿಂತು ಸೆಲ್ಫಿ ಕ್ಲಿಕ್ಕಿಸುವುದು, ಘಾಟಿ ಭಾಗದ ಅಲ್ಲಲ್ಲಿ ತಲೆ ಎತ್ತುತ್ತಿರುವ ತಾತ್ಕಾಲಿಕ ಗೂಡಂಗಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಘಾಟಿ ಪ್ರದೇಶ ಪ್ರಸ್ತುತ ಹೆಚ್ಚು ಆಕರ್ಷಕವಾಗಿ ಕಂಗೊಳಿಸತೊಡಗಿದೆ. ಆದರೆ ಇಲ್ಲಿನ ಅಗಲ ಕಿರಿದಾಗ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದು, ಸೆಲ್ಫಿಗಾಗಿ ರಸ್ತೆ ತಡೆಗೋಡೆಗಳ ಮೇಲೆ ನಿಲ್ಲುವುದು ಕಂಡು ಬರುತ್ತಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದ್ದು ಪ್ರತಿನಿತ್ಯ ಘಾಟಿ ಪ್ರದೇಶದಲ್ಲಿ ವಾಹನ ಚಲಾಯಿಸುವವರಿಗೆ ಇದು ತೀವ್ರ ಸಮಸ್ಯೆಯಾಗಿ ಕಂಡು ಬರುತ್ತಿದೆ. ಎನ್ನುತ್ತಾರೆ ನಿತ್ಯಸಂಚಾರಿಗಳು.

(ವರದಿ- ಹರೀಶ ಮಾಂಬಾಡಿ, ಮಂಗಳೂರು)