ನಾವೇನೇ ಬರೆದರೂ , ಹೇಳಿದರೂ ಅದ್ಯಾವುದೂ ತಪ್ಪು ಸರಿಗಳ ಬೌಂಡರಿಯಲ್ಲಿ ನಿಲುಕಲು ಸಾಧ್ಯವಿಲ್ಲ! ಏಕೆ ಗೊತ್ತಾ; ರಂಗ ನೋಟ ಅಂಕಣ-money property and power are nothing before health explained by rangaswamy mookanahalli in his column prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ನಾವೇನೇ ಬರೆದರೂ , ಹೇಳಿದರೂ ಅದ್ಯಾವುದೂ ತಪ್ಪು ಸರಿಗಳ ಬೌಂಡರಿಯಲ್ಲಿ ನಿಲುಕಲು ಸಾಧ್ಯವಿಲ್ಲ! ಏಕೆ ಗೊತ್ತಾ; ರಂಗ ನೋಟ ಅಂಕಣ

ನಾವೇನೇ ಬರೆದರೂ , ಹೇಳಿದರೂ ಅದ್ಯಾವುದೂ ತಪ್ಪು ಸರಿಗಳ ಬೌಂಡರಿಯಲ್ಲಿ ನಿಲುಕಲು ಸಾಧ್ಯವಿಲ್ಲ! ಏಕೆ ಗೊತ್ತಾ; ರಂಗ ನೋಟ ಅಂಕಣ

ರಂಗಸ್ವಾಮಿ ಮೂಕನಹಳ್ಳಿ: ಪ್ರಸ್ತುತ ಆರೋಗ್ಯ ಸಮಸ್ಯೆಗಳು ಎಲ್ಲರನ್ನೂ ಬಾಧಿಸುತ್ತಿವೆ. ವೈರಲ್ ಫೀವರ್​, ಡೆಂಗ್ಯೂ.. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ಕಾಡುತ್ತಿದೆ. ಸಮಾಜದಲ್ಲಿ ನೀವೇಷ್ಟೆ ದೊಡ್ಡವರಾಗಿ, ಹಣ, ಆಸ್ತಿ ಗಳಿಸಿ. ಆದರೆ ಆಸ್ಪತ್ರೆ ಎಂಬ ಸೌಧದಲ್ಲಿ ನೀವೊಬ್ಬ ರೋಗಿ ಅಷ್ಟೇ' ಎನ್ನುವ ಸರಳ ಸತ್ಯವನ್ನು ಮರೆಯದಿರಿ. ಆರೋಗ್ಯಕ್ಕಿಂತ ಮಿಗಿಲಾದ್ದದ್ದು ಏನಿಲ್ಲ.

 ರಂಗಸ್ವಾಮಿ ಮೂಕನಹಳ್ಳಿ ಬರಹ
ರಂಗಸ್ವಾಮಿ ಮೂಕನಹಳ್ಳಿ ಬರಹ

ಕಳೆದ ಒಂದು ವಾರದಿಂದ ಆಲಸ್ಯ. ಮೈಭಾರ, ಜೊತೆಗೆ ಯಾವುದರಲ್ಲೂ ಮೊದಲಿನ ಖುಷಿ, ತನ್ಮಯತೆ ಸಿಗುತ್ತಿರಲಿಲ್ಲ. ಮನೆಯ ಹತ್ತಿರದ ವೈದ್ಯರ ಬಳಿ ಹೋಗಿ ಪ್ರವರ ಹೇಳಿಕೊಂಡೆ. ಅವರು ಇವತ್ತಿನ ದಿನದಲ್ಲಿ ಇದು ನಾರ್ಮಲ್ ಕಣ್ರೀ, ಎಲ್ಲರಿಗೂ ಜ್ವರ, ಮೈಕೈ ನೋವು ಶುರುವಾಗಿದೆ. ಐದು ದಿನ ಈ ಮಾತ್ರೆ ಸೇವಿಸಿ ಹುಷಾರಾಗುವಿರಿ ಎಂದು ಮಾತ್ರೆ ಬರೆದು ಕೊಟ್ಟರು. ಎಲ್ಲದಕ್ಕೂ ಹತ್ತಾರು ಪ್ರಶ್ನೆ ಕೇಳುವ ನಾನು ವೈದ್ಯರ ಮುಂದೆ ಮಾತ್ರ ಕೈಕಟ್ಟಿ ಒಂದನೇ ತರಗತಿ ವಿದ್ಯಾರ್ಥಿಯಂತೆ ನಿಂತು ಬಿಡುತ್ತೇನೆ. ಅವರು ಕೊಟ್ಟ ಮಾತ್ರೆಯನ್ನು 5 ದಿನ ತಪ್ಪದೆ ಸೇವಿಸಿದೆ. ಫಲಿತಾಂಶ ಮಾತ್ರ ಸೊನ್ನೆ. ಮೈಕೈ ನೋವು, ತಲೆನೋವು ಕಡಿಮೆಯಾಗುವ ಲಕ್ಷಣ ಕಾಣಲಿಲ್ಲ. ದೊಡ್ಡ ವೈದ್ಯರೇ ಇದಕ್ಕೆ ದಾರಿ ತೋರಬೇಕು ಎಂದುಕೊಂಡು ಮೈಸೂರಿನಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಆರ್ಯ ಆಸ್ಪತ್ರೆಗೆ ಇಂದು ಬೆಳಿಗ್ಗೆ ಭೇಟಿ ಕೊಟ್ಟೆ. ಗೆಳೆಯ ರಾಮಚರಣ್ ಅವರ ರೆಫರೆನ್ಸ್ ಇದ್ದ ಕಾರಣ ಡಾ ಲಕ್ಷ್ಮಿಕಾಂತ್ ಅವರೊಂದಿಗೆ ಮಾತುಕತೆ ಬಹಳ ಸಲೀಸಾಯ್ತು.

ಇಷ್ಟು ವರ್ಷದಲ್ಲಿ ಮೈ ಮುಟ್ಟಿ ನೋಡುವ ಅಭ್ಯಾಸವನ್ನು ಇಲ್ಲಿನ ಡಾಕ್ಟರ್ ಮಾಡುವುದನ್ನು ನಾನು ಕಂಡಿಲ್ಲ. ಡಾ ಲಕ್ಷ್ಮಿಕಾಂತ್ ಅವರು ಸಾವಧಾನವಾಗಿ ಪರೀಕ್ಷೆ ಮಾಡಿದರು. ಅವರು ಐಸಿಯು ಮೇಲ್ವಿಚಾರಣೆ ಹೊತ್ತಿದ್ದ ಕಾರಣ ಅಲ್ಲಿನ ಒಂದು ರೂಮಿನಲ್ಲಿ ನನ್ನ ತಪಾಸಣೆ ಮಾಡಿದರು. ಅವರ ಮುಂದೆ ಕುಳಿತು ಮಾತನಾಡುವಾಗಲೆ ನಾನು ಬೆವೆಯಲು ಶುರು ಮಾಡಿದೆ. ಸಾಲದಕ್ಕೆ ಹಾರ್ಟ್ ರೇಟ್ 108 ನಿಮಿಷಕ್ಕೆ ಅಂತ ತೋರಿಸಿತು. ಲಕ್ಷ್ಮಿಕಾಂತ್ ಅವರು ಐಸಿಯುನಲ್ಲಿ ಒಂದು ಬೆಡ್ ರೆಡಿ ಮಾಡಿಸಿ ಅಲ್ಲಿ ನನ್ನ ಮಲಗಲು ಹೇಳಿದರು. ಹೃದಯ ಸರಿಯಾಗಿದೆಯೇ ಎಂದು ತಿಳಿದುಕೊಳ್ಳಲು ECG ಮಾಡುವುದಾಗಿ ಹೇಳಿದರು. ವೈದ್ಯರು ಹೇಳಿದ ಮೇಲೆ ಅದಕ್ಕೆ ವಿರುದ್ಧ ಹೇಳಲು ಸಾಧ್ಯವಿಲ್ಲ. ಸುಮ್ಮನೆ ಮಲಗಿದ್ದಾಯ್ತು. ಹದಿನೈದು ನಿಮಿಷದಲ್ಲಿ ECG ಮುಗಿಯುವ ವೇಳೆಗೆ ICUನಲ್ಲಿ ಬರುತ್ತಿದ್ದ ವಿಧವಿಧ ಶಬ್ದಗಳು, ನನಗಿಂತ ಕಿರಿಯರ ಬವಣೆಗಳು, ಭರವಸೆಯಿಂದ ಹೊರಗೆ ಕುಳಿತು ಕಾಯುತ್ತಿದ್ದ ರೋಗಿಗಳ ಮನೆಯವರು, ನಿತ್ಯವೂ ಇದೆ ರೀತಿಯ ನೋವುಗಳನ್ನು ನೋಡಿ ಜೀರ್ಣಿಸಿ ಕೊಳ್ಳಬೇಕಾದ ಅವಶ್ಯಕತೆ ಇರುವ ಡಾಕ್ಟರ್, ನರ್ಸಗಳು, ಕ್ಲೀನಿಂಗ್ ಸ್ಟಾಫ್ ಒಬ್ಬಬ್ಬರಾಗಿ ಮನಸ್ಸಿನಲ್ಲಿ ಹಾದು ಹೋದರು. ಇವತ್ತು ನಾನು ಇಲ್ಲಿಗೆ ಬರದೇ ಹೋಗಿದ್ದರೆ ಇಲ್ಲಿನವರ ಈ ನೋವು, ನರಳಾಟ, ವೈದ್ಯರ, ನರ್ಸಗಳ ಸೇವೆ ಎಲ್ಲವೂ ಬದಲಾಗದೆ ನಡೆದಿರುತ್ತಿತ್ತು. ವ್ಯತ್ಯಾಸವೆಂದರೆ ಇದೆಲ್ಲವೂ ಈಗ ನನ್ನ ಗಮನಕ್ಕೆ, ಅನುಭವಕ್ಕೆ ಬಂದಿದೆ ಅಷ್ಟೇ.

ಸುಖವಿರಲಿ, ದುಃಖವಿರಲಿ ಅದು ಕೇವಲ ಆಯಾ ಜೀವಿಗೆ ಸಂಬಂಧಿಸಿದ್ದು! ತೀರಾ ಪಕ್ಕದಲ್ಲಿದ್ದು, ರಕ್ತ ಹಂಚಿಕೊಂಡು ಹುಟ್ಟಿದ್ದು ಕೂಡ ನಾವು ಅದನ್ನು ಅಷ್ಟೇ ಪ್ರಬಲವಾಗಿ ಫೀಲ್ ಮಾಡಲು ಸಾಧ್ಯವಿಲ್ಲ. ಖುಷಿಯ ವಿಷಯದಲ್ಲಿ ಕುಣಿದು ಕುಪ್ಪಳಿಸಿ ಬಿಡಬಹುದು. ಆದರೆ ಈ ದುಃಖದ ವಿಷಯದಲ್ಲಿ ಇದು ಅಷ್ಟು ಸುಲಭವೂ ಅಲ್ಲ, ಸರಳವೂ ಅಲ್ಲ. ಇವತ್ತು ಈದ್ ಮಿಲಾದ್ ಹಬ್ಬ ಇದ್ದ ಕಾರಣ ಅನನ್ಯಳ ಶಾಲೆಗೆ ರಜೆಯಿತ್ತು. ರಮ್ಯ ಅನನ್ಯಳ ಜೊತೆಯಲ್ಲಿ ವಿದ್ಯಾಭ್ಯಾಸದ ಸಲುವಾಗಿ ಕುಳಿತಳು. ನಿಜ ಹೇಳಬೇಕೆಂದರೆ ಬೆಳಿಗ್ಗೆ ಆಸ್ಪತ್ರೆಗೆ ಜೊತೆಯಲ್ಲಿ ಬರುತ್ತೇನೆ ಎಂದಾಗ, ಬೇಡ ಜೊತೆಯಲ್ಲಿ ಪ್ರದೀಪಣ್ಣ ಇರುತ್ತಾರೆ ಬಿಡು ಎಂದು ನಾನೇ ಅಂದಿದ್ದೆ. ಹೀಗಾಗಿ ಆಸ್ಪತ್ರೆಯಲ್ಲಿ ಒಂದಷ್ಟು ತಾಸುಗಳು ಒಂಟಿತನವನ್ನು, ಬೇಗುದಿಯನ್ನು ಅನುಭವಿಸಬೇಕಾಗಿ ಬಂತು. ಈ ದೇವರು ಸರಿಯಿಲ್ಲ ನೋವು ಕೊಡುತ್ತಿದ್ದಾನೆ ಎನ್ನುವ ನನ್ನ ಮಾತುಗಳನ್ನು ಕೇಳಿಸಿಕೊಂಡ ನರ್ಸ್ ಸಹೋದರಿಯೊಬ್ಬರು ಅಯ್ಯೋ ಸಾರ್ ಸುಮ್ಮನಿರಿ ದೇವರನ್ನು ಹಾಗೆನ್ನಬೇಡಿ, ನಿಮ್ಮ ನೋವು ಏನೇನೂ ಇಲ್ಲ ಅದಕ್ಕೆ ಗ್ಯಾರಂಟಿ ನಾನು ಎಂದರು. ಅರೆಕ್ಷಣ ಮನಸ್ಸಿನಲ್ಲಿ ಯೋಚನೆ ಶುರುವಾಯ್ತು. ನಮಗೆ ನಮ್ಮ ನೋವು, ನಮ್ಮ ದುಃಖ ಅತಿ ದೊಡ್ಡದು. ನಮ್ಮ ಪಕ್ಕದ ಬೆಡ್​​ನಲ್ಲಿರುವವರು ಯಾವ ಸ್ಥಿತಿಯಲ್ಲಿ ಇದ್ದಾರೆ ಎನ್ನುವುದು ಕೂಡ ತಿಳಿಯದ ಪೆದ್ದರು. ಅದರ ಬಗ್ಗೆ ಯೋಚಿಸಲೂ ಆಗದ ಸ್ವಾರ್ಥಿಗಳು ಅನ್ನಿಸಿತು. ಮೂವತ್ತರ ಹರಯದ ಆಜುಬಾಜಿನ ಹೆಣ್ಣುಮಗಳನ್ನು ನೋಡಲು ಅನುಮತಿ ಪಡೆದುಕೊಂಡು ಬಂದ ಪುಟಾಣಿ ಹುಡುಗಿ ಜಿಕೆಯಂತೆ ಕುಣಿಯುತ್ತಾ, ಜೀಕುತ್ತಾ ಬಂದಿತು. ಅವರಪ್ಪನ ಮನಸಿನಲ್ಲಿ ಅದ್ಯಾವ ಭಾವವಿರಬಹುದು? ಎನ್ನುವ ಚಿಂತೆಯ ಕಡೆಗೆ ನನ್ನ ಮನಸ್ಸು ಹೊರಳಿತು.

ನಾವು ನಮ್ಮ ಅನುಭವಗಳ ಮೊತ್ತ ಅಷ್ಟೇ, ನಾವೇನೇ ಬರೆದರೂ, ಹೇಳಿದರೂ ಅದ್ಯಾವುದೂ ತಪ್ಪು ಸರಿಗಳ ಬೌಂಡರಿಯಲ್ಲಿ ನಿಲುಕಲು ಸಾಧ್ಯವಿಲ್ಲ. ಏಕೆಂದರೆ ಒಬ್ಬಬ್ಬರ ಅನುಭವ ಒಂದೊಂದು ತರಹ. ಈ ನಾನು ಎನ್ನುವ ನಾನು ಅದೆಷ್ಟು ತೃಣ ಎನ್ನುವ ಪರಿಚಯ ಮಾಡಿಸುವುದು ಆಸ್ಪತ್ರೆ, ರೋಗ ಎನ್ನುವ ಲೆವೆಲ್ಲೇರ್. ಆಸ್ಪತ್ರೆ ಪ್ರವೇಶಿಸಿದಾಗ ನಾನು ರಂಗಸ್ವಾಮಿ ಮೂಕನಹಳ್ಳಿ, ಸಮಾಜ ಆ ಹೆಸರ ಮುಂದೆ ಒಂದು ಪರಿಚಯ ಹಾಕಿದೆ, ಬೇಕೋ ಬೇಡವೋ ನಾವು ಅದನ್ನು ನಿಜವೆಂದು ಭ್ರಮೆಯಲ್ಲಿ ಬದುಕುತ್ತಿರುತ್ತೇವೆ. ವೈದ್ಯರು ಬೆಡ್ ಮೇಲೆ ಶರ್ಟು, ಬನಿಯನ್ ತೆಗೆದ್ದು ಮಲಗು ಎಂದಾಗ ನಿವ್ಯಾರೆ ಆಗಿರಿ, ಆಸ್ಪತೆಯಲ್ಲಿ ನೀವೊಬ್ಬ ರೋಗಿ ಅಷ್ಟೇ' ಎನ್ನುವ ಸರಳ ಸತ್ಯ.

ವೈದ್ಯರು, ಮೂರು ಜನ ನರ್ಸ್ ಸಹೋದರಿಯರು ಬೆಡ್ ಸುತ್ತುವರಿದ್ದಿದ್ದರು, ಅವರ ಮುಖಗಳನ್ನು ನೋಡುತ್ತಾ ನಿಧಾನಕ್ಕೆ ಕಣ್ಣು ಮುಚ್ಚಿದೆ. ನೀನೆಷ್ಟೇ ಕೂಗಾಡಿದರು ಇದೆ ನೋಡು ನಿಜವಾದ ಔಕಾತ್ ಎಂದದ್ದು ಜ್ವರದ ಅಮಲಿನ ಭ್ರಮೆಯಲ್ಲ, ವಾಸ್ತವ ಎನ್ನುವ ಅರಿವನ್ನು ಇಂದು ಕಟ್ಟಿಕೊಟ್ಟಿತು.

ಡೆಂಗ್ಯೂ ಜ್ವರವಂತೆ, ಪ್ಲೇಟ್ಲೆಟ್ ಕುಸಿದಿದೆ. ಮೈಕೈ ನೋವು, ತಲೆನೋವು ಹೇರಳವಾಗಿದೆ. ಆದರೆ ಸಹೋದರ ಘನಶ್ಯಾಮ್ ಅವರಿಗೆ ಇವತ್ತು ಲೇಖನ ಕಳಿಸುವೆ ಎನ್ನುವ ಪ್ರಾಮಿಸ್ ಮಾಡಿದ್ದೆ! ಅದನ್ನು ಮುರಿದರೆ ಹೇಗೆ ಅಲ್ವಾ?

ಆರೋಗ್ಯವೇ ಭಾಗ್ಯ. ಯಾವುದು ನಮ್ಮಿಂದ ದೂರ ಹೋಗುತ್ತೆ, ಆಗ ಅದರ ಮೌಲ್ಯ ತಿಳಿಯುತ್ತದೆ. ಹುಷಾರಾಗಿರಿ, ಆರೋಗ್ಯವಾಗಿರಿ, ಎಲ್ಲಕ್ಕಿಂತ ಮುಖ್ಯವಾಗಿ ಖುಷಿಯಾಗಿರಿ. ಇರುವುದೊಂದೇ ಬದುಕು.

ರಂಗ ನೋಟ ಅಂಕಣ
ರಂಗ ನೋಟ ಅಂಕಣ (Rangaswamy Mookanahalli)

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.

mysore-dasara_Entry_Point