ಕಣ್ಣಿಗೆ ಏಟು ತಿಂದರೂ ಬಾಲರಾಮನ ವಿಗ್ರಹ ಸಿದ್ದಪಡಿಸಿದ ಅರುಣ್‌ ಯೋಗಿರಾಜ್‌ , ಸುತ್ತೂರು ಮಠದಲ್ಲಿ ಬಯಲಾದ ಕಾಯಕ ಬದ್ದತೆ video
ಕನ್ನಡ ಸುದ್ದಿ  /  ಕರ್ನಾಟಕ  /  ಕಣ್ಣಿಗೆ ಏಟು ತಿಂದರೂ ಬಾಲರಾಮನ ವಿಗ್ರಹ ಸಿದ್ದಪಡಿಸಿದ ಅರುಣ್‌ ಯೋಗಿರಾಜ್‌ , ಸುತ್ತೂರು ಮಠದಲ್ಲಿ ಬಯಲಾದ ಕಾಯಕ ಬದ್ದತೆ Video

ಕಣ್ಣಿಗೆ ಏಟು ತಿಂದರೂ ಬಾಲರಾಮನ ವಿಗ್ರಹ ಸಿದ್ದಪಡಿಸಿದ ಅರುಣ್‌ ಯೋಗಿರಾಜ್‌ , ಸುತ್ತೂರು ಮಠದಲ್ಲಿ ಬಯಲಾದ ಕಾಯಕ ಬದ್ದತೆ video

ಅಯೋಧ್ಯೆಯಲ್ಲಿ ಬಾಲರಾಮಮೂರ್ತಿ ಕೆತ್ತುವಾಗ ಕಲ್ಲಿನ ಏಟು ಕಣ್ಣಿಗೆ ಬಿದ್ದಿತ್ತು. ಅದೆಲ್ಲವನ್ನೂ ಮರೆತು ಮೂರ್ತಿ ಕೆತ್ತನೆ ಕೆಲಸ ಮುಗಿಸಿ ದೇಶವೇ ಮೆಚ್ಚುವಂತೆ ಮಾಡಿದರು ಅರುಣ್‌. ಆ ಆಸಕ್ತಿದಾಯಕ ಅಂಶವನ್ನು ಮೈಸೂರಿನಲ್ಲಿ ಬಿಡಿಸಿಟ್ಟರು.

ಮೈಸೂರಿನ ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗೆ ತಮಗಾದ ಕಣ್ಣಿನ ನೋವಿನ ಸನ್ನಿವೇಶವನ್ನು ವಿವರಿಸಿದರು ಅರುಣ್‌ ಯೋಗಿರಾಜ್‌. ಜತೆಗೆ ವಿಜೇತಾ ಅರುಣ್‌ ಕೂಡ ಇದ್ದರು.
ಮೈಸೂರಿನ ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗೆ ತಮಗಾದ ಕಣ್ಣಿನ ನೋವಿನ ಸನ್ನಿವೇಶವನ್ನು ವಿವರಿಸಿದರು ಅರುಣ್‌ ಯೋಗಿರಾಜ್‌. ಜತೆಗೆ ವಿಜೇತಾ ಅರುಣ್‌ ಕೂಡ ಇದ್ದರು.

ಮೈಸೂರು: ಬಾಲರಾಮನ ವಿಗ್ರಹ ಬೇಗನೇ ಸಿದ್ದವಾಗಬೇಕು. ಒಂದು ಚೂರು ವ್ಯತ್ಯಾಸವಾದರೂ ಕೈ ತಪ್ಪುವ ಆತಂಕ. ಒತ್ತಡದ ನಡುವೆಯೇ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಸಿದ್ದಪಡಿಸುವಾಗ ಮೈಸೂರಿನ ಕಲಾವಿದ ಅರುಣ್‌ ಯೋಗರಾಜ್‌ ಅವರ ಬಲಗಣ್ಣಿಗೆ ಸಣ್ಣ ಕಲ್ಲಿನ ಏಟು ಬಿದ್ದು ಏನು ಆಗಿಬಿಡುತ್ತದೋ ಎನ್ನುವ ಆತಂಕ. ಕಣ್ಣು ಮಂಜಾಗುತ್ತಿದ್ದ ಭಯ ಬೇರೆ. ಅದರಲ್ಲಿಯೇ ಕಾಯಕವನ್ನು ಬಿಡಲಿಲ್ಲ ಅರುಣ್‌. ಅಲ್ಲಿಯೇ ಸಣ್ಣಪುಟ್ಟ ಚಿಕಿತ್ಸೆ ಪಡೆದು ಛಲ ಬಿಡದ ತ್ರಿವಿಕ್ರಮನಂತೆ ಬಾಲರಾಮಮೂರ್ತಿಯನ್ನು ತಾವು ಅಂದುಕೊಂಡಂತೆ ಕೆತ್ತಿಯೇ ಬಿಟ್ಟರು. ಬರೀ ರಾಮ ಜನ್ಮಭೂಮಿ ಟ್ರಸ್ಟ್‌ ಮಾತ್ರವಲ್ಲದೇ ಇಡೀ ದೇಶವೂ ಅದನ್ನು ಒಪ್ಪಿಕೊಂಡಿತು. ಕಣ್ಣು ನೋವಿನ ನಡುವೆಯೂ ತಮ್ಮ ಕೆಲಸದಲ್ಲಿ ಗೆದ್ದರು ಅರುಣ್‌.

ಇದನ್ನು ಖುದ್ದು ತಾವು ಶುಕ್ರವಾರ ಮೈಸೂರಿನಲ್ಲಿ ಹೇಳಿಕೊಂಡರು. ಅದೂ ಮೈಸೂರು ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಬೆಳಿಗ್ಗೆಯೇ ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶಿರ್ವಾದ ಪಡೆದ ನಂತರ ಕಣ್ಣಿಗೆ ಸಣ್ಣ ಗಾಯವಾಗಿದ್ದ ಸನ್ನಿವೇಶವನ್ನು ಬಿಡಿಸಿಟ್ಟರು.

ಬೆಳಿಗ್ಗೆ ಉಪಹಾರ ಮುಗಿಸಿ ಬಂದು ಆವು ರಾಮನ ವಿಗ್ರಹ ತಯಾರಿಸಿದ ರೀತಿ, ವಿಗ್ರಹದ ಸುತ್ತಲೂ ಇರುವ ಮೂರ್ತಿಗಳ ವಿವರಗಳನ್ನು ಟ್ಯಾಬ್‌ ಮೂಲಕ ಅರುಣ್‌ ಯೋಗಿರಾಜ್‌ ನೀಡಿದರು. ಕೆತ್ತನೆಯ ಹಿಂದಿನ ಶ್ರಮವನ್ನೂ ಅವರು ಹೇಳುತ್ತಲೇ ಹೋದರು. ಸ್ವಾಮೀಜಿ ಕುತೂಹಲದಿಂದಲೇ ಚಿತ್ರವನ್ನೆಲ್ಲಾ ವೀಕ್ಷಿಸಿ ಸಾಕಷ್ಟು ಮಾಹಿತಿಯನ್ನು ಅರುಣ್‌ ಅವರಿಂದ ಪಡೆದುಕೊಂಡರು.

ಈ ವೇಳೆ ಸ್ವಾಮೀಜಿ ಅವರು ಅರುಣ್‌ ಪಕ್ಕದಲ್ಲಿಯೇ ಕುಳಿತಿದ್ದ ಅವರ ಪತ್ನಿ ವಿಜೇತಾ ಅವರನ್ನು ಕೇಳಿದರು. ಅರುಣ್‌ ಕಣ್ಣಿಗೆ ಕಲ್ಲಿನ ಏಟು ಬಿದ್ದು ನೋವಾಗಿತ್ತಲ್ಲ. ಹೇಗಿದೆ ಎಂದು ಕೇಳಿದರು. ಆಗ ವಿಜೇತಾ, ಹೌದು ಸ್ವಾಮೀಜಿ. ಕಣ್ಣಿಗೆ ಏಟು ಬಿದ್ದಿತ್ತು. ಚಿಕಿತ್ಸೆಯನ್ನು ಅಲ್ಲಿ ಸರಿಯಾಗಿ ಪಡೆದುಕೊಂಡಿಲ್ಲ. ಮೈಸೂರಿಗೆ ಬಂದಿದ್ದೀರಿ. ಮೊದಲು ಚಿಕಿತ್ಸೆ ಪಡೆಯಿರಿ ಎಂದು ತಿಳಿಸಿದರೂ ಹೂಂ ಅಂತಿದ್ದಾರೆಯೇ ಹೊರತು ಚಿಕಿತ್ಸೆಗೆ ಹೋಗಿಲ್ಲ ಎಂದು ನಗುತ್ತಲೇ ಹೇಳಿದರು.

ಇದನ್ನು ಕೇಳಿಸಿಕೊಂಡ ಅರುಣ್‌, ಕೆಲ ದಿನಗಳ ಹಿಂದೆ ಅಯೋಧ್ಯೆಯಲ್ಲಿ ಕೆಲಸ ಮಾಡುವಾಗ ವಿಗ್ರಹದ ಕಲ್ಲು ಸಿಡಿದು ಕಣ್ಣಿಗೆ ಏಟು ಬಿದ್ದಿತ್ತು. ಸಣ್ಣದಾಗಿ ನೋವು ಇತ್ತು. ಕಣ್ಣು ಮಂಜು ಕೂಡ ಆದ ಹಾಗಾಗುತ್ತಿತ್ತು. ನಾಲ್ಕು ದಿನ ಕೆಲಸ ನಿಲ್ಲಿಸಿ ಎಂದು ಹೇಳಿ ಅಲ್ಲಿನ ದೇವಸ್ಥಾನ ಸಮಿತಿಯವರೂ ನೋಡಿ ಚಿಕಿತ್ಸೆ ಕೂಡ ಕೊಡಿಸಿದರು. ಚಿಕಿತ್ಸೆ ಪಡೆದು ಅದರಲ್ಲಿಯೇ ಕೆಲಸವನ್ನು ಮುಗಿಸಿದೆ. ನೋವು ನಿವಾರಿಸುವ ಕೆಲವು ಮಾತ್ರೆಗಳನ್ನು ತೆಗೆದುಕೊಂಡೆ. ಈಗ ಸರಿಯಾಗಿದೆ. ಅಂತಹ ಸಮಸ್ಯೆ ಏನು ಇಲ್ಲ ಎಂದು ವಿವರಿಸಿದರು.

ಚಿಕಿತ್ಸೆ ಪಡೆಯಲು ನೀವೇ ಹೇಳಿ ಎಂದು ಅರುಣ್‌ ಪತ್ನಿ ವಿಜೇತಾ ಸ್ವಾಮೀಜಿ ಅವರನ್ನು ಕೋರಿ ನಕ್ಕರು. ಅರುಣ್‌ ಇದೆಲ್ಲಾ ಏನು ಅಲ್ಲ. ಸ್ವಾಮೀಜಿ ಅವರಿಗೆಲ್ಲಾ ಇದನ್ನೆಲ್ಲಾ ಯಾಕೆ ಹೇಳುವೆ. ಚಿಕಿತ್ಸೆ ತೆಗೆದುಕೊಳ್ಳುತ್ತೇನೆ ಎಂದು ಮಾತು ಬದಲಾಯಿಸಿದರು.

ಪತ್ನಿ ಕಾಳಜಿ ಮರೆಯಬೇಡಿ ಅರುಣ್‌ ಎಂದು ಅಲ್ಲಿಯೇ ನಿಂತಿದ್ದ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟ್ಟಸೂರಮಠ ಅವರು ಹಾಸ್ಯ ಚಟಾಕಿ ಹಾರಿಸಿದರು. ಅಲ್ಲಿದ್ದವರಲಿಗೂ ನಗು ತಾಳಲಿಲ್ಲ.

ಆದರೆ ಕಷ್ಟ ಬಂದರೂ ವಹಿಸಿದ ಕೆಲವರನ್ನು ಯಾರು ಬಿಡುವುದಿಲ್ಲವೋ ಅವರು ಖಂಡಿತಾ ಯಶಸ್ವಿಯಾಗುತ್ತಾರೆ ಎನ್ನುವ ಸಂದೇವನ್ನಂತೂ ಸುತ್ತೂರು ಮಠದಲ್ಲಿ ನಡೆದ ಅರುಣ್‌ ಯೋಗಿರಾಜ್‌ ಕಣ್ಣಿನ ಸಣ್ಣಗಾಯದ ಪ್ರಸಂಗ ಸಾರಿತು.

Whats_app_banner