ಮೈಸೂರಲ್ಲಿ ಬೆಳಿಗ್ಗೆ ಬಿಡುವು ಕೊಟ್ಟ ಮಳೆರಾಯ, ಪಾರಂಪರಿಕ ಕಟ್ಟಡಗಳತ್ತ ಸಂತಸದಿಂದಲೇ ಹೆಜ್ಜೆ ಹಾಕಿದ ಯುವ ಸಮೂಹ, ಪ್ರವಾಸಿಗರು
Mysore Heritage Walk: ಪುರಭವನದಿಂದ ಪ್ರಾರಂಭವಾಗಿ ದೊಡ್ಡ ಗಡಿಯಾರ, ಮೇಸನ್ ಕ್ಲಬ್, ಚಾಮರಾಜ ಒಡೆಯರ್ ವೃತ್ತ ಅರಮನೆ, ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ ಕೃಷ್ಣರಾಜೇಂದ್ರ ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು, ಗಾಂಧಿ ವೃತ್ತ ಹಾದು ರಂಗಾಚಾರ್ಲು ಪುರಭವನ ಹತ್ತಿರ ಪಾರಂಪರಿಕನಡಿಗೆ ಮುಕ್ತಾಯಗೊಂಡಿತು.
ಮೈಸೂರು:́ಶನಿವಾರ ರಾತ್ರಿ ಎಡಬಿಡದೇ ಸುರಿದ ಮಳೆಯ ನಂತರ ಭಾನುವಾರ ಬೆಳಿಗ್ಗೆ ಅರಮನೆಗಳ ನಗರಿ ಮೈಸೂರಿನಲ್ಲಿ ಮೋಡ ಮುಸುಕಿದ ವಾತಾವರಣ,ಚಳಿಯ ಅನುಭವದ ನಡುವೆ ವಿದ್ಯಾರ್ಥಿಗಳು, ಯುವಕರು, ಹಿರಿಯರು ಹಾಗೂ ಪ್ರವಾಸಿಗರು ಹೆಜ್ಜೆ ಹಾಕಿದರು. ಮೈಸೂರಿನ ಪಾರಂಪರಿಕ ರಸ್ತೆ, ಕಟ್ಟಡ, ವೃತ್ತಗಳತ್ತ ನಡೆದುಕೊಂಡೇ ಹೋಗಿ ಮಾಹಿತಿಯನ್ನು ಪಡೆದುಕೊಂಡರು. ಮೈಸೂರಿನ ಇತಿಹಾಸದ ಮಹತ್ವ ಇರುವ ಆ ದಿನಗಳ ವಿವರಗಳು, ಆಡಳಿತದ ವೈಖರಿ, ಮಹಾರಾಜರ ವಿವರಗಳನ್ನು ಆಲಿಸಿದರು. ತಮಗೆ ಬಂದ ಅನುಮಾನಗಳನ್ನೂ ಬಗೆಹರಿಸಿಕೊಂಡರು. ದಸರಾ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯಿಂದ ಆಯೋಜಿಸಿದ್ದ ಪಾರಂಪರಿಕ ನಡಿಗೆಯಲ್ಲಿ ಆಸಕ್ತರು ಭಾಗಿಯಾದರು.
ಪಾರಂಪರಿಕ ನಡಿಗೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ 350 ಕ್ಕೂ ಹೆಚ್ಚಿನ ಜನ ಭಾಗವಹಿಸಿದ್ದು, ಭಾಗವಹಿಸಿದಂತಹ ಸಾರ್ವಜನಿಕರಿಗೆ ನಗರದ ಪಾರಂಪರಿಕ ಕಟ್ಟಡಗಳ ಬಗ್ಗೆ ತಜ್ಞರು ಮಾಹಿತಿ ನೀಡಿದರು. ಮೈಸೂರಿನ ಅರಮನೆ, ಪುರಭವನ, ಚಾಮರಾಜ ವೃತ್ತ, ದೊಡ್ಡ ಗಡಿಯಾರ, ಕೆಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೆಆರ್ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ ಮಾರ್ಗದಲ್ಲಿ ತೆರಳಿದರು. ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್, ಕಾವೇರಿ ಎಂಪೋರಿಯಂ, ಗಾಂಧಿ ವೃತ್ತ ಹಾದು ರಂಗಾಚಾರ್ಲು ಪುರಭವನ(ಟೌನ್ ಹಾಲ್)ನಲ್ಲಿ ಪಾರಂಪರಿಕ ನಡಿಗೆ ಮುಕ್ತಾಯ ಕಂಡಿತು. ಒಂದು ಕಿ.ಮಿ ವ್ಯಾಪ್ತಿಯಲ್ಲಿಯೇ ಭಿನ್ನ ಪಾರಂಪರಿಕ ಕಟ್ಟಡಗಳು ಇರುವ ಕುರಿತ, ಅದನ್ನು ನಿರ್ಮಿಸಿದರ ಹಿನ್ನೆಲೆಯನ್ನು ಅರಿತುಕೊಂಡರು.
ದೊಡ್ಡ ಗಡಿಯಾರ ಹಾಗೂ ಚಿಕ್ಕ ಗಡಿಯಾರ ಭಿನ್ನ ಸ್ಥಳಗಳಲ್ಲಿ ಏಕೆ ನಿರ್ಮಿಸಿದರು ಎನ್ನುವುದು ವಿದ್ಯಾರ್ಥಿಯೊಬ್ಬರ ಪ್ರಶ್ನೆಯಾಗಿತ್ತು. ಅರಮನೆ, ವೃತ್ತಗಳನ್ನು ತಂತ್ರಜ್ಞಾನವೇ ಇಲ್ಲದ ಆ ಕಾಲದಲ್ಲಿ ಇಷ್ಟು ಸುಂದರವಾಗಿ, ವ್ಯವಸ್ಥಿತವಾಗಿ ಕಟ್ಟಿದ್ದಾದರೂ ಹೇಗೆ, ಈಗಲೂ ಇವುಗಳ ಸಂರಕ್ಷಣೆಗೆ ಸರ್ಕಾರದ ನೆರವು ಹೇಗಿದೆ ಎನ್ನುವ ಹಲವಾರು ಪ್ರಶ್ನೆಗಳನ್ನೂ ಕೇಳಿದರು. ಪಾರಂಪರಿಕ ಇಲಾಖೆ ಅಧಿಕಾರಿಗಳು, ತಜ್ಞರು ಈ ಕುರಿತು ಮಾಹಿತಿಯನ್ನು ನೀಡಿದರು.
ನಿಜಕ್ಕೂ ಮೈಸೂರಿನ ಸಂಪದ್ಭರಿತ ಇತಿಹಾಸ ಇರುವ ಈ ಮಾರ್ಗದಲ್ಲಿ ಹೆಜ್ಜೆ ಹಾಕುವುದೇ ನಿಜಕ್ಕೂ ಖುಷಿ. ನೂರು ವರ್ಷ ಹಿಂದೆ ಹೋದ ಅನುಭವ ಆಗುತ್ತದೆ. ಈಗ ಪಾರಂಪರಿಕ ನಡಿಗೆ ಮೂಲಕ ಮಾಹಿತಿ ಪಡೆದದ್ದು ಸ್ಪೂರ್ತಿ ನೀಡಿತು. ಮೈಸೂರಿನ ಮಹಾರಾಜರ ಬಗ್ಗೆಯೂ ಹೆಮ್ಮೆ ಮೂಡಿತು ಎಂದು ವಿದ್ಯಾರ್ಥಿ ಸಿಂಧು ಹೇಳಿದರು.
ಟಾಂಗ ಸವಾರಿ, ಬೈಕ್ ಸವಾರಿ ಹಾಗೂ ಪಾರಂಪರಿಕ ನಡಿಗೆಯಿಂದ ಪರಂಪರೆಯನ್ನು ಉಳಿಸಲಾಗುವುದಿಲ್ಲ. ಈ ನಡಿಗೆಗಳು ಹಾಗೂ ಸವಾರಿಗಳು ಯುವಜನರಲ್ಲಿ ಅರಿವನ್ನು ಮೂಡಿಸಲು ಆಯೋಜಿಸುವ ಒಂದು ಕಾರ್ಯಕ್ರಮ ಇದರಲ್ಲಿ ತಿಳಿದುಕೊಂಡಂತಹ ಅಂಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಪಾರಂಪರಿಕ ಕಟ್ಟಡಗಳು, ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು. ಈ ಕಾರಣದಿಂದಲೇ ವಾರಾಂತ್ಯದ ಜತೆಗೆ ದಸರೆ ವೇಳೆ ಪಾರಂಪರಿಕ ನಡಿಗೆ ಆಯೋಜಿಸುತ್ತಾ ಬಂದಿದ್ದೇವೆ. ಈ ಬಾರಿ ಉತ್ತಮ ಪ್ರತಿಕ್ರಿಯೆ ಬಂದಿದೆ ಎನ್ನುವುದು ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಆಯುಕ್ತರಾದ ಎ.ದೇವರಾಜು ವಿವರಣೆ.
ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ನಮ್ಮ ಮೈಸೂರಿನಲ್ಲಿ ನಮ್ಮ ಹಿರಿಯರು ಕಷ್ಟ ಪಟ್ಟು ನಿರ್ಮಾಣ ಮಾಡಿರುವಂತಹ ಹಲವಾರು ಪಾರಂಪರಿಕ ಕಟ್ಟಡಗಳಿದ್ದು, ಅವುಗಳನ್ನು ಉಳಿಸಿ, ಸಂರಕ್ಷಿಸುವ ಕರ್ತವ್ಯ ಸರ್ಕಾರದ ಜೊತೆಗೆ ಯುವ ಪೀಳಿಗೆಯ ಹೊಣೆಯೂ ಇದೆ. ರಾಜ್ಯದಲ್ಲಿ ಸಂರಕ್ಷಣೆ ಮಾಡಲಾಗಿಲ್ಲದ ಹಲವಾರು ಕಟ್ಟಡಗಲಿವೆ ಹಾಗೂ ವಾಸ್ತು ಶಿಲ್ಪಗಳಿವೆ. ಇದರ ಬಗ್ಗೆ ಎಷ್ಟೋ ಜನರಿಗೆ ಮಾಹಿತಿಯೇ ಇರುವುದಿಲ್ಲ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಲು ಇಲಾಖೆಯ ವತಿಯಿಂದ ಹಲವಾರು ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಅದರಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ನಮ್ಮೊಂದಿಗೆ ಕೈ ಜೋಡಿಸಿ ಎನ್ನುವುದು ಅವರ ಮನವಿ.
ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಗಂಗಾಧರ್, ಸಂಗೀತ ವಿಶ್ವವಿದ್ಯಾನಿಲಯದ ಕುಲಪತಿ ನಾಗೇಶ್ ಬೆಟ್ಟಕೋಟೆ ಕೂಡ ಮೈಸೂರಿನ ಸಂಸ್ಕೃತಿ, ಇತಿಹಾಸ, ಪರಂಪರೆಯ ಮಹತ್ವದ ಕುರಿತು ಮಾಹಿತಿ ನೀಡಿದರು.
ಪ್ರಪಂಚದ ಯಾವುದೇ ಸ್ಥಳಕ್ಕೆ ಹೋದರು ಮೈಸೂರು ಎಂದಾಕ್ಷಣ ನೆನಪಾಗುವುದೇ ಇಲ್ಲಿನ ಅರಮನೆ ಮತ್ತು ಪಾರಂಪರಿಕ ಕಟ್ಟಡಗಳು. ಅಂತಹ ವಿಶ್ವ ವಿಖ್ಯಾತ ಪರಂಪರೆ, ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆ ಯುವ ಜನರಲ್ಲಿ ಅರಿವನ್ನು ಮೂಡಿಸಲು ಅವರಿಗೆ ಪರಂಪರೆಯ ಮಹತ್ವವನ್ನು ತಿಳಿಸಲು ಇಂದು ಪಾರಂಪರಿಕ ನಡಿಗೆಯನ್ನು ಆಯೋಜಿಸಲಾಗಿದ್ದು, ಇಲ್ಲಿ ಕಲಿತಂತಹ ವಿಷಯಗಳನ್ನು ಇತರರೊಂದಿಗೆ ಹಂಚಿಕೊಂಡು ಅವರಲ್ಲಿಯೂ ಪರಂಪರೆ ಸಂಸ್ಕೃತಿ ಪಾರಂಪರಿಕ ಕಟ್ಟಡಗಳ ಬಗ್ಗೆ ಅವುಗಳ ಉಳಿವು ಹಾಗೂ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು ಎನ್ನುವುದು ಅವರ ಸಲಹೆ.