Mysore Dasara 2024: ಮೈಸೂರು ದಸರಾ ಜಂಬೂ ಸವಾರಿಗೆ ಜನಸಾಗರ; ಉಘೇ ಚಾಮುಂಡಿ ಉದ್ಘೋಷದ ಸಂತೃಪ್ತ ಭಾವ
ಮೈಸೂರು ಜಂಬೂ ಸವಾರಿಗೆ ಬಂದವರು ಬೆಳಿಗ್ಗೆಯಿಂದ ಕಾದರು. ಮಳೆಯಲ್ಲಿ ತೋಯ್ದರೂ ಲಾಠಿ ರುಚಿ ತಿಂದರೂ ಕಾದು ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಕಂಡು ಪುನೀತರಾದರು.
ಮೈಸೂರು: ಮೈಸೂರು ದಸರಾ ಎಂದರೆ ಜನಜಂಗುಳಿ, ಜಂಬೂ ಸವಾರಿ ಹೋಗುವ ಮಾರ್ಗದಲ್ಲಿ ಎಲ್ಲಿಯೂ ಕಾಲಿಡಲು ಜಾಗವಿರದಷ್ಟು ಜನಸಾಗರ. ಜಂಬೂ ಸವಾರಿಯನ್ನು ಹತ್ತಿರದಿಂದ ನೋಡಬೇಕು ಎನ್ನುವ ಭಾವನೆ. ಅದಕ್ಕಿಂತ ತಾಯಿ ಚಾಮುಂಡೇಶ್ವರಿಯನ್ನು ನೋಡಬೇಕು. ನಮಸ್ಕರಿಸಿ ಉಘೇ ಚಾಮುಂಡಿ ಎಂದರೆ ಅದೇನೋ ಸಮಾಧಾನ. ಬೆಳಿಗ್ಗೆಯಿಂದಲೇ ಜಾಗ ಹಿಡಿದುಕೊಂಡು ತಿಂಡಿ, ಊಟವಿಲ್ಲದೇ ಮಕ್ಕಳನ್ನು ಹಿಡಿದು ಕೂಡಿಸಿಕೊಂಡವರಿಗೆ ಏನೋ ನೆಮ್ಮದಿ.
ಇದು ಮೈಸೂರು ದಸರಾದ ಭಕ್ತಭಾವದ ಕ್ಷಣ. ಮೈಸೂರು ದಸರಾವನ್ನೂ ಈ ಬಾರಿ ವಿಜೃಂಭಣೆಯಿಂದ ಆಚರಿಸುವುದಾಗಿ ಸರ್ಕಾರ ಘೋಷಿಸಿದ್ದರಿಂದ ಹೆಚ್ಚಿನ ಜನರೇ ಮೈಸೂರಿಗೆ ಬಂದಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಅರಮನೆಯಿಂದ ಆರಂಭಗೊಂಡು ಬನ್ನಿಮಂಟಪದವರೆಗೂ ಸೇರಿದ್ದರು.
ಚಾಮರಾಜ ವೃತ್ತ, ಕೆಆರ್ ವೃತ್ತ, ನಗರ ಬಸ್ ನಿಲ್ದಾಣ, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆ, ಆಯುರ್ವೇದ ವೃತ್ತ, ಹೈವೃತ್ತ ಸೇರಿದಂತೆ ಸುಮಾರು ಐದು ಕಿ.ಮಿ ಇಕ್ಕೆಲಗಳಲ್ಲೂ ಸೇರಿದ್ದರು. ಕಟ್ಟಡಗಳನ್ನು ಏರಿದ್ದರು. ಟವರ್‌ಗಳನ್ನೂ ಬಿಟ್ಟಿರಲಿಲ್ಲ. ಕೆಲವರು ಬೆಳಿಗ್ಗೆಯೇ ಬಂದು ತಮ್ಮ ಸೀಟು ಖಚಿತಪಡಿಸಿಕೊಂಡಿದ್ದರೆ, ಇನ್ನು ಕೆಲವರು ನಿನ್ನೆ ರಾತ್ರಿಯೇ ಚಾಪೆ ಹಾಕಿ ಹೋಗಿದ್ದರು.
ದಸರಾ ಸಡಗರವನ್ನು ಹತ್ತಿರದಿಂದ ನೋಡಬೇಕು ಎನ್ನುವುದು ಒಂದೇ ಉದ್ದೇಶ. ಅದರಲ್ಲೂ ಆನೆ ಮೇಲೆ ಕೂರಿಸಿದ್ದ ಅಂಬಾರಿಯಲ್ಲಿ ಕುಳಿತ ತಾಯಿ ಚಾಮುಂಡಿಯನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಪುನೀತ ಭಾವ. ಮಳೆಯಲ್ಲಿ ನೆನೆದುಕೊಂಡು, ಜನಜಂಗುಳಿ ನಡುವೆ ಲಾಠೀ ಏಟಿನ ರುಚಿಯನ್ನು ನೋಡಿದವರೂ ತಾಯಿ ಕಂಡಾಗ ಆ ನೋವು, ಆಯಾಸವನ್ನೆಲ್ಲಾ ಮರೆತರು. ಆ ಖುಷಿಗೆ ಪಾರವೇ ಇರಲಿಲ್ಲ. ತಾಯೇ ಚಾಮುಂಡಿ ಎಂದು ಕೈ ಮುಗಿದರು.
ಮೈಸೂರು ಅರಮನೆ ಒಳಗೆ ಹೋಗಬೇಕು ಎಂದು ಪಾಸ್ ಬೇಕೇ ಬೇಕು. ಪಾಸ್ ಇದ್ದರೂ ಕೆಲವೊಮ್ಮೆ ಒಳಗೆ ಹೋಗುವುದು ಕಷ್ಟ. ಇದರಿಂದ ಸಿಕ್ಕ ಜಾಗದಲ್ಲಿಯೇ ಆಸಿನರಾಗಿದ್ದರು. ನಿಂತೇ ಮೆರವಣಿಗೆ ನೋಡಿದರು. ಮೈಸೂರು ಅರಮನೆ ಒಳ ಭಾಗದಲ್ಲೂ ಈ ಬಾರಿ ಮಾರ್ಗದಲ್ಲಿ ಕೊಂಚ ಬದಲಾವಣೆ ಮಾಡಿದ್ದರಿಂದ ಹೆಚ್ಚಿನ ಪಾಸ್ ವಿತರಿಸಿದ್ದರು. ಅಲ್ಲೂ ಜನ ಸಾಗರವೇ ಇತ್ತು.
ಅರಮನೆ ಆವರಣದಲ್ಲಿ ಅಲಂಕಾರದ ನಂತರ ಸಾಲಂಕೃತ ನೆಗಳು ಸಿದ್ದಗೊಂಡರೆ, ಕಲಾವಿದರು ಬಣ್ಣದಿಂದ ಅಲಂಕೃತಗೊಂಡ ಕಲೆ ಪ್ರದರ್ಶಿಸಲು ಸಿದ್ದರಾಗಿದ್ದರು. ನಾಡಿನ ಸಂಸ್ಕೃತಿ ಬಿಂಬಿಸುವ ಸ್ಥಬ್ದಚಿತ್ರಗಳೂ ಕೂಡ ಅಣಿಯಾಗಿದ್ದವು. ಬೆಳಿಗ್ಗೆಯಿಂದ ಮಳೆ ಮೋಡದ ವಾತಾವರಣ, ಮಧ್ಯ ಒಮ್ಮೆ ಮಳೆ ಸುರಿದೇ ಬಿಟ್ಟಿತು. ಆದರೂ ಜನ ಕದಲದೇ ಜಂಬೂ ಸವಾರಿಯನ್ನು ನೋಡಿಯೇ ತೀರಿದರು. ಖುಷಿಯ ಕ್ಷಣದಲ್ಲಿ ಭಾಗಿಯಾದರು.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿಯೇ ಪ್ರವಾಸಿಗರು ಬಂದಿದ್ದರು. ಖುಷಿಯಿಂದಲೇ ದಸರಾದಲ್ಲಿ ಭಾಗಿಯಾಗಿದ್ದರು. ಸುಮಾರು ಎರಡು ಗಂಟೆಗಳ ಕಾಲ ಅರಮನೆಯಿಂದ ಬನ್ನಿಮಂಟಪದವರೆಗೆ ಮೆರವಣಿಗೆ ಸಾಗಿ ಜಂಬೂ ಸವಾರಿ ನಿಗದಿತ ಸಮಯದೊಳಗೆ ಸಂಪನ್ನಗೊಂಡಿತು.
ಕೈ ಮುರಿದುಕೊಂಡ ಮಹಿಳೆ
ನೂಕು ನುಗ್ಗಲಿಗೆ ಅಸ್ವಸ್ಥರಾದ ಮಹಿಳೆ ಸಿಲುಕಿದ ಮಹಾಲಕ್ಷ್ಮಿ ಎಂಬುವರ ಕೈ ಮುರಿಯಿತು. ನೋವು ತಾಳಲಾರದೆ ಚೀರಾಡಿದ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಬ್ಯುಲೆನ್ಸ್ ವಾಹನದ ಚಾಲಕ ವಿನೋದ್ ಕುಮಾರ್ ಹಾಗೂ ಸಿಬ್ಬಂದಿಗಳು ಪ್ರಥಮ ಚಿಕಿತ್ಸೆ ನೀಡಿದ್ದು ತಕ್ಷಣ ಕೆ ಆರ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಯಿತು