ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ನೀಡಬೇಕೇ; ದಸರಾದಲ್ಲಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಜೆಡಿಎಸ್ ಶಾಸಕ
ಸಿಎಂ ಸಿದ್ದರಾಮಯ್ಯ ಅವರ ಪರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಬ್ಯಾಟ್ ಬೀಸಿದ ಬೆನ್ನಲ್ಲೇ ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಈಗ ಸಿಎಂ ಬೆಂಬಲಿಸಿ ಮಾತನಾಡಿದ್ಧಾರೆ. ಅದೂ ದಸರಾ ವೇದಿಕೆಯಲ್ಲಿಯೇ ಸಿದ್ದರಾಮಯ್ಯ ಬೆಂಬಲಿಸಿ ಪರೋಕ್ಷವಾಗಿ ಜೆಡಿಎಸ್ ನಾಯಕರನ್ನು ಟೀಕಿಸಿದ ಜಿ.ಟಿ. ದೇವೇಗೌಡ ಮಾತಿನ ಶೈಲಿ ಹೀಗಿತ್ತು.
ಮೈಸೂರು: ಕೇವಲ ಯಾವುದೇ ಪ್ರಕರಣದಲ್ಲಿ ಎಫ್‌ಐಆರ್ ಹಾಕಿದ ತಕ್ಷಣ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು ರಾಜೀನಾಮೆ ನೀಡಬೇಕು ಎಂದರೆ ಕೇಂದ್ರ ಸಚಿವ ಸ್ಥಾನದಲ್ಲಿದ್ದ್ವರೂ ರಾಜೀನಾಮೆ ನೀಡಬೇಕು ಎನ್ನುವ ಮೂಲಕ ಹಿರಿಯ ಜೆಡಿಎಸ್ ನಾಯಕ ಹಾಗೂ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಪರೋಕ್ಷವಾಗಿ ತಮ್ಮದೇ ಪಕ್ಷದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ. ಅಲ್ಲದೇ ತಮ್ಮ ಹಳೆಯ ರಾಜಕೀಯ ಸಂಗಾತಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿಯೂ ಬ್ಯಾಟ್ ಬೀಸಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ್ ದಸರಾ ಉದ್ಘಾಟನಾ ಸಮಾರಂಭದಲ್ಲಿ ಈಗಿನ ರಾಜಕೀಯ ಬೆಳವಣಿಗೆಗಳು, ಸಿದ್ದರಾಮಯ್ಯ ರಾಜೀನಾಮೆ ಬೇಡಿಕೆ ಸೇರಿದಂತೆ ಹಲವು ವಿಚಾರಗಳನ್ನು ಹಿರಿಯ ಶಾಸಕರೂ ಆಗಿರುವ ಜಿ.ಟಿ.ದೇವೇಗೌಡ ಪ್ರಸ್ತಾಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ಕೇಳುತ್ತಿರಲ್ವ, ತಾಕತ್ತಿದ್ದರೆ ರಾಜ್ಯದಲ್ಲಿ ಎಫ್.ಐ.ಆರ್. ದಾಖಲಾಗಿರುವ ಎಲ್ಲರೂ ರಾಜೀನಾಮೆ ನೀಡುವ ಪರಿಸ್ಥಿತಿ ಬರಲಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಬಿಡುತ್ತಾರೆ, ಯಾರ ವಿರುದ್ಧವೆಲ್ಲ ಪ್ರಕರಣ ದಾಖಲಾಗಿಯೋ ಅವರೆಲ್ಲ ವಿಧಾನ ಸೌಧದ ಮುಂದೆ ನಿಂತುಕೊಂಡಿರಿ ಎಂದು ಒತ್ತಾಯಿಸಿದ ಜಿ.ಟಿ.ದೇವೇಗೌಡ, ಪ್ರಕರಣ ಎದುರಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರೂ ರಾಜೀನಾಮೆ ಕೊಡುವರೇ ಎಂದು ಪ್ರಶ್ನಿಸಿದರು.
ಯಾಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಅವರ ಮೇಲೆ ಎಫ್.ಐ.ಆರ್ ಆದಾ ಕ್ಷಣ ರಾಜೀನಾಮೆ ಕೊಡಬೇಕು ಎಂದು ಯಾವ ಕಾನೂನು ಹೇಳಿದೆ. ರಾಜ್ಯಪಾಲರು ತನಿಖೆ ಮಾಡುವಂತೆ ಹೇಳಿದ್ದಾರೆ. ನ್ಯಾಯಾಲಯವೂ ವಿಚಾರಣೆ ಮಾಡುವಂತೆ ಹೇಳಿದೆ. ಆದರೆ ರಾಜೀನಾಮೆ ನೀಡುವಂತೆ ನ್ಯಾಯಾಲಯವೇನೂ ಹೇಳಿಲ್ಲವಲ್ಲ ಎಂದು ತಮ್ಮದೇ ದಾಟಿಯಲ್ಲಿ ಜಿಟಿ ದೇವೇಗೌಡ ಕೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರಿಗೆ ಸಾಕಷ್ಟು ಅನುಕೂಲವಾಗಿವೆ. ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಅವಕಾಶ ನೀಡದೆ ಬರೀ ರಾಜೀನಾಮೆ ನೀಡಿ ಎನ್ನುವ ಒಂದೇ ಅಂಶ ಇಟ್ಟುಕೊಂಡು ಹೋರಾಟ ಮಾಡುವುದು ಸರಿಯೇ ಎಂದು ಬಿಜೆಪಿ ಹಾಗೂ ಜೆಡಿಎಸ್ ಅನ್ನು ಕೇಳಿದರು.
2 ಲಕ್ಷ ಮತಗಳಿಂದ ಗೆದ್ದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ರಾಜೀನಾಮೆ ಕೇಳಿದರೆ ಕೊಡಲು ಆಗುತ್ತದೆಯೇ? 136 ಶಾಸಕರ ಬಲದ ಮೇಲೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಸರಿಯಾದ ಕ್ರಮವಲ್ಲ. ಸಿದ್ದರಾಮಯ್ಯರಿಗೆ ಕಷ್ಟ ಬಂದಷ್ಟು ಗಟ್ಟಿಯಾಗುತ್ತಾರೆ. ತಾಯಿ ಚಾಮುಂಡೇಶ್ವರಿ ತಾಯಿ ಆಶೀರ್ವಾದ ಅವರಿಗೆ ಸದಾ ಇದ್ದೇ ಇರುತ್ತದೆ. 2006ರ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಾವು ಬಿಜೆಪಿ ಪಕ್ಷದವರು ಇಬ್ಬರು ಸೇರಿಕೊಂಡು ಅವರನ್ನು ಸೋಲಿಸಲು ಪ್ರಯತ್ನಪಟ್ಟೆವು. ಆದರೆ ಅವರು ಗೆದ್ದು ಬಂದರು. ಈಗಲೂ ಅವರು ಜಯಶಾಲಿಯಾಗುತ್ತಾರೆ ಎಂದು ಜಿಟಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದು ಖುಷ್
ತಮ್ಮ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ಅವರು, ಜಿಟಿ ದೇವೇಗೌಡರು ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದರು. ನಾವೆಲ್ಲ ಹಿಂದೆ ಜತೆಯಲ್ಲಿಯೇ ಕೆಲಸ ಮಾಡಿದ್ದವರು. ಈಗಿನ ಸನ್ನಿವೇಶವನ್ನು ಪ್ರಸ್ತಾಪಿಸಿ ಅವರು ಆಡಿದ ಮಾತು ನನಗೆ ನೈತಿಕವಾಗಿ ಬಲ ತಂದಿದೆ. ಸತ್ಯಕ್ಕೆ ಜಯ ದೊರಕೇ ದೊರಕುತ್ತದೆ ಎನ್ನುವ ವಿಶ್ವಾಸವೂ ಬಂದಿದೆ ಎಂದು ಹೇಳಿದರು.
ಜಿಟಿಡಿ ಬೇಸರ
ದಸರಾ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಕುಮಾರಸ್ವಾಮಿ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಕೂಡ ಅಂತರ ಕಾಯ್ದುಕೊಂಡಿಲ್ಲ.ಪಕ್ಷದಲ್ಲಿ ನನ್ನನ್ನು ಕೋರ್ ಕಮಿಟಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಇದಕ್ಕಿಂತ ಬೇರೆ ಇನ್ನೇನು ಬೇಕು ಎಂದು ಕೇಳಿದರು.
ಈಗ ಬಿಟ್ಟು ಹೋದರೆ ಯಾರು ತಾನೆ ಸೇರಿಸಿಕೊಳ್ಳುತ್ತಾರೆ. ಈಗ ಅದಕ್ಕೆ ಸೂಕ್ತವಾದ ಸಮಯವಲ್ಲ. ಚುನಾವಣೆ ಬಂದಾಗ ನೋಡಿಕೊಳ್ಳೋಣ.ಹಿಂದೆಯೂ ಕಾಂಗ್ರೆಸ್ ನವರು ಬಂದು ಪಕ್ಷಕ್ಕೆ ಕರೆದಿದ್ದರು. ಆಗ ದೇವೇಗೌಡರು ಮನೆಗೆ ಬಂದು ಸಮಾಧಾನ ಮಾಡಿದರು. ಹಿರಿಯರ ಮಾತಿಗೆ ಬೆಲೆ ಕೊಟ್ಟು ಜೆಡಿಎಸ್ ಪಕ್ಷದಲ್ಲೇ ಉಳಿದುಕೊಂಡಿದ್ದೇನೆ. ಪಕ್ಷ ಅಧಿಕಾರದಲ್ಲಿದ್ದಾಗ ನನಗೇನು ಕೊಟ್ಟಿದ್ದರು. ಆಗಲೇ ನಾನು ಪಕ್ಷ ಬಿಟ್ಟು ಹೋಗಲಿಲ್ಲ. ಇವಾಗ ಏನಾದ್ರು ಕೊಡಲಿಕ್ಕೆ ಅವರ ಬಳಿ ಏನು ಅಧಿಕಾರ ಇದೆ ಎಂದು ಜೆಡಿಎಸ್ ಬಗ್ಗೆ ಪರೋಕ್ಷ ಅಸಮಾಧಾನ ಹೊರ ಹಾಕಿದರು.
ನಾನು ಕುಮಾರಸ್ವಾಮಿ ರಾಜೀನಾಮೆ ಬಗ್ಗೆ ಮಾತ್ರ ಮಾತನಾಡಿಲ್ಲ. ಎಫ್ಐಆರ್ ಆಗಿರುವ ಎಲ್ಲರೂ ರಾಜೀನಾಮೆ ಕೊಡ್ತೀರಾ ಎಂದು ಮಾತನಾಡಿರೋದು ಎಲ್ಲರನ್ನೂ ಕೇಳಿದಂತೆಯೇ ಹೊರತು ಇದರಲ್ಲಿ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದರು.