Siddaramaiah vs Shivakumar: ಸಿದ್ದರಾಮಯ್ಯ vs ಶಿವಕುಮಾರ್‌ ಸಿಎಂ ಸ್ಥಾನಕ್ಕೆ ಪೈಪೋಟಿ; ನಾಯಕರಿಬ್ಬರ ಸಾಮರ್ಥ್ಯ, ಅಸಾಮರ್ಥ್ಯಗಳ ಅವಲೋಕನ
ಕನ್ನಡ ಸುದ್ದಿ  /  ಕರ್ನಾಟಕ  /  Siddaramaiah Vs Shivakumar: ಸಿದ್ದರಾಮಯ್ಯ Vs ಶಿವಕುಮಾರ್‌ ಸಿಎಂ ಸ್ಥಾನಕ್ಕೆ ಪೈಪೋಟಿ; ನಾಯಕರಿಬ್ಬರ ಸಾಮರ್ಥ್ಯ, ಅಸಾಮರ್ಥ್ಯಗಳ ಅವಲೋಕನ

Siddaramaiah vs Shivakumar: ಸಿದ್ದರಾಮಯ್ಯ vs ಶಿವಕುಮಾರ್‌ ಸಿಎಂ ಸ್ಥಾನಕ್ಕೆ ಪೈಪೋಟಿ; ನಾಯಕರಿಬ್ಬರ ಸಾಮರ್ಥ್ಯ, ಅಸಾಮರ್ಥ್ಯಗಳ ಅವಲೋಕನ

Siddaramaiah vs Shivakumar: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನಡುವೆ ಪೈಪೋಟಿ ಇದೆ. ಈ ಸಂದರ್ಭದಲ್ಲಿ ಅವರ ಸಾಮರ್ಥ್ಯ, ಅಸಾಮರ್ಥ್ಯ, ಅವಕಾಶ ಮತ್ತು ಆತಂಕಗಳ ಅವಲೋಕನ ಇಲ್ಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದ ಬಳಿಕ ಶನಿವಾರ ನಡೆದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಖಾಲಿ ಕುರ್ಚಿಯಲ್ಲಿದ್ದ ಕಾಗದವನ್ನು ಗಮನಿಸುತ್ತಿದ್ದಾಗ ತೆಗೆದ ಚಿತ್ರ (ಸಾಂದರ್ಭಿಕ ಮತ್ತು ಅರ್ಥಗರ್ಭಿತ ಚಿತ್ರ)
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದ ಬಳಿಕ ಶನಿವಾರ ನಡೆದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಖಾಲಿ ಕುರ್ಚಿಯಲ್ಲಿದ್ದ ಕಾಗದವನ್ನು ಗಮನಿಸುತ್ತಿದ್ದಾಗ ತೆಗೆದ ಚಿತ್ರ (ಸಾಂದರ್ಭಿಕ ಮತ್ತು ಅರ್ಥಗರ್ಭಿತ ಚಿತ್ರ) (PTI Photo/Shailendra Bhojak)

ಕರ್ನಾಟಕ ವಿಧಾನಸಭಾ ಸ್ಥಾನಗಳಿಗೆ ಮೇ 10ರಂದು ನಡೆದ ಮತದಾನದಲ್ಲಿ ಕಾಂಗ್ರೆಸ್‌ ಪಕ್ಷ 135 ಸ್ಥಾನಗಳನ್ನು ಗೆದ್ದುಕೊಂಡಿದೆ. ಈಗ ಕರ್ನಾಟಕದ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಸಿಗುವ ಹೊತ್ತು. ಈ ಪ್ರಶ್ನೆಗೆ ಉತ್ತರ ನೀಡುವವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಮುಖ್ಯಮಂತ್ರಿ ಗಾದಿಗೆ ಪೈಪೋಟಿ ನಡೆಸಿದ ಕಾಂಗ್ರೆಸ್‌ ಪಕ್ಷದ ಇಬ್ಬರು ಘಟಾನುಘಟಿ ನಾಯಕರು ಇವರು - ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್.‌

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರ ಆಕಾಂಕ್ಷೆಗಳು ರಹಸ್ಯವೇನಲ್ಲ. ಚುನಾವಣೆಗೂ ಮೊದಲೇ ಬಹಿರಂಗವಾಗಿರುವಂಥದ್ದು. ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಹೊಣೆಗಾರಿಕೆಯನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷವು ಎಐಸಿಸಿ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸರ್ವಾನುಮತದಿಂದ ನೀಡಿದೆ.

ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಘೋಷಣೆ ಆಗುವ ಈ ಹೊತ್ತಿನಲ್ಲಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರ ಸಾಮರ್ಥ್ಯ, ಅಸಾಮರ್ಥ್ಯ, ಅವಕಾಶ ಮತ್ತು ಆತಂಕಗಳ ಅವಲೋಕನ.

ಸಿದ್ದರಾಮಯ್ಯ ಅವರ ಸಾಮರ್ಥ್ಯ ಅಸಾಮರ್ಥ್ಯಗಳ ಅವಲೋಕನ

ಸಿದ್ದರಾಮಯ್ಯ ಅವರು 1948ರ ಆಗಸ್ಟ್‌ 12ರಂದು ಜನಿಸಿದರು. ಬಿಎಸ್‌ಸಿ ಎಲ್‌ಎಲ್‌ಬಿ ಪದವೀಧರ. 2006ರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜತೆಗಿನ ಭಿನ್ನಮತದ ಕಾರಣ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಪಕ್ಷ ಸೇರಿದರು. 1983ರಲ್ಲಿ ವಿಧಾನಸಭೆಗೆ ಲೋಕದಳ ಪಕ್ಷದ ಮೂಲಕ ಚಾಮುಂಡೇಶ್ವರಿಯಿಂದ ಪ್ರವೇಶಿಸಿದವರು. ಈ ಕ್ಷೇತ್ರದಲ್ಲಿ ಅವರು ಎಂಟು ಸಲ ಸ್ಪರ್ಧಿಸಿದ್ದು, ಮೂರು ಸಲ ಸೋತರೂ, ಐದು ಗೆಲುವು ಕಂಡಿದ್ದಾರೆ. 2008ರಲ್ಲಿ ಅವರು ಕೆಪಿಸಿಸಿಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿದ್ದರು.

ಸಿದ್ದರಾಮಯ್ಯ ಅವರ ವ್ಯಕ್ತಿಚಿತ್ರಕ್ಕಾಗಿ ಮುಂದಿನ ಶೀರ್ಷಿಕೆಯನ್ನು ಕ್ಲಿಕ್‌ ಮಾಡಿ 👉🏻 Siddaramaiah Profile: ಹಿಂದುತ್ವದ ಸವಾಲು ಎದುರಿಸುತ್ತಿದ್ದಾರೆ ಅಹಿಂದ ಭಾವ ಜಾಗೃತದಾರ ಸಿದ್ದರಾಮಯ್ಯ ಅವರ ಪರಿಚಯ ಹೀಗಿದೆ..

ಸಿದ್ದರಾಮಯ್ಯ ಸಾಮರ್ಥ್ಯ

ರಾಜ್ಯದಲ್ಲಿ ಸಿದ್ದರಾಮಯ್ಯ ಮಾಸ್‌ ಲೀಡರ್.‌ ಕಾಂಗ್ರೆಸ್‌ ಪಕ್ಷದ ಶಾಸಕರ ನಡುವೆ ಹೆಚ್ಚು ಜನಪ್ರಿಯತೆ ಉಳ್ಳವರು. 2013ರಿಂದ 2018ರ ತನಕ ಪೂರ್ಣ ಅವಧಿಗೆ ಸರ್ಕಾರ ಮುನ್ನಡೆಸಿದ ಅನುಭವ ಇದೆ. 13 ಮುಂಗಡಪತ್ರಗಳನ್ನು ಮಂಡಿಸಿದ ಆಡಳಿತಗಾರ. ಅಹಿಂದ ನಾಯಕರಾಗಿ ಜನಪ್ರಿಯತೆ ಗಳಿಸಿದವರು. ಬಿಜೆಪಿ ಮತ್ತು ಜೆಡಿಎಸ್‌ ಅನ್ನು ಎದುರಿಸುವ ಬಲಿಷ್ಠ ಸಾಮರ್ಥ್ಯಹೊಂದಿದವರು. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ನಿರಂತರ ಟೀಕಾಪ್ರಹಾರ ನಡೆಸುತ್ತ ಬಂದವರು. ರಾಹುಲ್‌ ಗಾಂಧಿ ಆಪ್ತವಲಯದಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದು ಪರಿಗಣಿಸಲಾಗುತ್ತಿದೆ.

ದೌರ್ಬಲ್ಯ/ಅಸಾಮರ್ಥ್ಯ

ಕಾಂಗ್ರೆಸ್‌ ಪಕ್ಷದ ಜತೆಗೆ ಸಿದ್ದರಾಮಯ್ಯ ಅವರು ಹೆಚ್ಚು ಸಂಪರ್ಕ ಇಟ್ಟುಕೊಂಡಿಲ್ಲ. 2018ರಲ್ಲಿ ಅವರ ನಾಯಕತ್ವದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದು ಅವರಿಂದ ಸಾಧ್ಯವಾಗದೇ ಹೋಗಿತ್ತು. ಇಂದಿಗೂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಪಕ್ಷದಲ್ಲಿ ಹೊರಗಿನವರು ಎಂದೇ ಗುರುತಿಸಲಾಗುತ್ತಿದೆ. ಅವರು ಹಿಂದೆ ಜೆಡಿಎಸ್‌ನಲ್ಲಿ ಇದ್ದುದು ಅದಕ್ಕೆ ಕಾರಣ. ವಯಸ್ಸು ಕೂಡ ಅವರಿಗೆ ಹಿನ್ನಡೆ ಉಂಟುಮಾಡುತ್ತಿರುವ ಅಂಶ.

ಸಿದ್ದರಾಮಯ್ಯ ಅವರಿಗೆ ಇರುವ ಅವಕಾಶ

ನಿರ್ಣಾಯಕ ಜನಾದೇಶದ ಸರ್ಕಾರವನ್ನು ಮುನ್ನಡೆಸಲು ಮತ್ತು 2024 ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅನ್ನು ಬಲಪಡಿಸಲು ಪ್ರತಿಯೊಬ್ಬರನ್ನು‌ ಜತೆಗೆ ಕರೆದುಕೊಂಡು ಹೋಗುವುದು ಅವಶ್ಯ. ಈ ನಿಟ್ಟಿನಲ್ಲಿ ಅವರ ಸ್ವೀಕಾರಾರ್ಹತೆ, ಮನವಿ ಮತ್ತು ಅನುಭವ ಇಲ್ಲಿ ಗಮನಸೆಳೆಯುತ್ತದೆ. ಇವರ ಪ್ರತಿಸ್ಪರ್ಧಿ ಡಿಕೆ ಶಿವಕುಮಾರ್‌ ಐಟಿ, ಇಡಿ ಮತ್ತು ಸಿಬಿಐ ತನಿಖೆಗಳನ್ನು ಎದುರಿಸುತ್ತಿರುವ ಕಾರಣ ಸಿದ್ದರಾಮಯ್ಯಗೆ ಹೆಚ್ಚಿನ ಅವಕಾಶ. ಎಲ್ಲದಕ್ಕೂ ಮಿಗಿಲಾಗಿ ಇದು ಅವರ ಕೊನೆಯ ಚುನಾವಣೆ ಮತ್ತು ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಾಗುವ ಕೊನೆಯ ಅವಕಾಶ ಕೂಡ ಎಂದು ಬಣ್ಣಿಸಲಾಗುತ್ತಿದೆ.

ಸಿದ್ದರಾಮಯ್ಯ ಅವರಿಗೆ ಇರುವ ಆತಂಕ

ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ (2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಕಾರಣ ಅವಕಾಶ ಕಳೆದುಕೊಂಡವರು), ಬಿಕೆ ಹರಿಪ್ರಸಾದ್‌, ಕೆಎಚ್‌ ಮುನಿಯಪ್ಪ ಮುಂತಾದ ಹಲವು ಹಿರಿಯ ನಾಯಕರನ್ನು ಸಂಘಟಿಸಿ ಮುನ್ನೆಡೆಸುವುದು ಸುಲಭ ಕಾರ್ಯವಲ್ಲ. ದಲಿತ ಮುಖ್ಯಮಂತ್ರಿ ಕೂಗು ಕೂಡ ಇದ್ದು, ಇದಕ್ಕೇನಾದರೂ ಬಲ ಬಂದರೆ ಸಿದ್ದರಾಮಯ್ಯಗೆ ಅವಕಾಶ ಕಡಿಮೆ.

ಡಿಕೆ ಶಿವಕುಮಾರ್‌ ಅವರ ಸಾಮರ್ಥ್ಯ, ಅಸಾಮರ್ಥ್ಯ, ಅವಕಾಶ, ಆತಂಕಗಳ ವಿವರ

ನೆಹರು-ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ನಾಯಕ. ಡಿಕೆ ಶಿವಕುಮಾರ್‌ ಎಂಟು ಸಲ ಶಾಸಕರು. ಕನಕಪುರ ಹುಟ್ಟೂರು. 1962ರ ಮೇ 15ರಂದು ಜನನ. ತಂದೆ ದೊಡ್ಡಲಹಳ್ಳಿ ಕೆಂಪೇಗೌಡ, ತಾಯಿ ಗೌರಮ್ಮ. ಶಿಕ್ಷಣದ ಹಂತದಲ್ಲೇ ವಿದ್ಯಾರ್ಥಿ ನಾಯಕರಾಗಿದ್ದ ಡಿಕೆ ಶಿವಕುಮಾರ್‌ 1980ರ ದಶಕದ ಆರಂಭದಲ್ಲಿ ಕಾಂಗ್ರೆಸ್‌ ಪಕ್ಷದಲ್ಲೇ ತಮ್ಮ ರಾಜಕೀಯ ಪ್ರಯಾಣ ಶುರುಮಾಡಿದವರು. ಇದುವರೆಗೆ ಪಕ್ಷ ಬಿಟ್ಟವರಲ್ಲ.

ಶಿವಕುಮಾರ್‌ ಅವರ ಸಾಮರ್ಥ್ಯ

ಪಕ್ಷದ ಟ್ರಬಲ್‌ ಶೂಟರ್‌ ಎಂಬುದು ಶಿವಕುಮಾರ್‌ ಅವರ ಸಂಘಟನಾ ಸಾಮರ್ಥ್ಯಕ್ಕೆ ಕೈಗನ್ನಡಿ. ದೇಶದ ಉದ್ದಕ್ಕೂ ಪಕ್ಷ ನಿಷ್ಠೆ, ಗಾಂಧಿ ಕುಟುಂಬಕ್ಕೆ ಆಪ್ತ, ವಿಶೇಷವಾಗಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಪ್ತವಲಯದಲ್ಲಿದ್ದಾರೆ. ಉತ್ತಮ ಸಂಘಟನಾ ಚತುರತೆ ಇರುವ ಕಾರಣ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸುವುದು ಸಾಧ್ಯವಾಯಿತು. ಪಕ್ಷಕ್ಕೆ ಸಂಕಷ್ಟ ಒದಗಿ ಬಂದಾಗೆಲ್ಲ ನೆರವಿಗೆ ನಿಂತವರು ಡಿಕೆ ಶಿವಕುಮಾರ್.‌ ಸಂಪನ್ಮೂಲ ನಾಯಕ ಮತ್ತು ಒಕ್ಕಲಿಗ ಸಮುದಾಯದ ಪ್ರಭಾವಿ, ಒಕ್ಕಲಿಗರ ಸ್ವಾಮೀಜಿ, ನಾಯಕರ ನಡುವೆ ಜನಪ್ರಿಯ ವ್ಯಕ್ತಿ. ದಶಕಗಳ ರಾಜಕೀಯ ಅನುಭವ ಇವರ ಪ್ಲಸ್‌ ಪಾಯಿಂಟ್.‌

ಶಿವಕುಮಾರ್‌ ಅವರ ಅಸಾಮರ್ಥ್ಯ/ದೌರ್ಬಲ್ಯ

ಶಿವಕುಮಾರ್‌ ಅವರ ಪಾಲಿಗೆ ಕೇಸ್‌ಗಳು ಮುಳುವಾಗಿವೆ. ಅದುವೇ ಅವರ ಅಸಾಮರ್ಥ್ಯ ಮತ್ತು ದೌರ್ಬಲ್ಯ. ಐಟಿ, ಇಡಿ ಮತ್ತು ಸಿಬಿಐ ಕೇಸ್‌ಗಳು ವಿಚಾರಣೆಯಲ್ಲಿದ್ದು ಕೆಲಕಾಲ ತಿಹಾರ್‌ ಜೈಲಿನಲ್ಲಿದ್ದು ಬಂದವರು. ಸಿದ್ದರಾಮಯ್ಯ ಅವರಿಗೆ ಹೋಲಿಸಿದರೆ ಡಿಕೆ ಶಿವಕುಮಾರ್ ರಾಜ್ಯ ಮಟ್ಟದ ಮಾಸ್‌ ಲೀಡರ್‌ ಅಲ್ಲ. ಡಿಕೆಶಿವಕುಮಾರ್ ಜನಪ್ರಿಯತೆ ಏನಿದ್ದರೂ, ಬೆಂಗಳೂರು ಸುತ್ತಮುತ್ತ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮಾತ್ರ ಇದೆ. ಇತರೆ ಜನಾಂಗದವರ ಬೆಂಬಲ ಹೇಳುವಷ್ಟು ಇಲ್ಲ.

ಶಿವಕುಮಾರ್‌ ಅವರಿಗೆ ಇರುವ ಅವಕಾಶ

ಎಸ್‌ಎಂ ಕೃಷ್ಣ ಮತ್ತು ವೀರೇಂದ್ರ ಪಾಟೀಲರ ಆಯ್ಕೆಯನ್ನು ಗಮನಿಸಿದರೆ ಒಕ್ಕಲಿಗ ಸಮುದಾಯ ಪ್ರಾಬಲ್ಯ ಇರುವ ಹಳೆ ಮೈಸೂರು ಪ್ರಾಂತ್ಯದಲ್ಲಿ ಡಿಕೆ ಶಿವಕುಮಾರ್‌ ಪ್ರಭಾವಿ. ಅವರು ಒಕ್ಕಲಿಗರು. ಕೆಪಿಸಿಸಿ ಅಧ್ಯಕ್ಷ ಕೂಡ. ಸಹಜವಾಗಿಯೇ ಮುಖ್ಯಮಂತ್ರಿ ಗಾದಿಗೆ ಆಯ್ಕೆಯಾಗಬಲ್ಲ ನಾಯಕ. ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಕಾರಣ, ಸಂಕಷ್ಟದಲ್ಲಿ ʻಟ್ರಬಲ್‌ ಶೂಟರ್‌ʼ ಆಗಿರುವ ಕಾರಣ ಅವಕಾಶ ಪರಿಗಣಿಸಬಹುದು.

ಶಿವಕುಮಾರ್‌ ಅವರಿಗೆ ಇರುವ ಆತಂಕ

ಸಿದ್ದರಾಮಯ್ಯನವರ ಅನುಭವ, ಹಿರಿತನ ಮತ್ತು ಜನಸ್ಪಂದನೆಯೇ ಅವರಿಗೆ ಪ್ರಮುಖ ಆತಂಕ. ಸಿದ್ದರಾಮಯ್ಯ ಬೆಂಬಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ನಿಲ್ಲುವ ಸಾಧ್ಯತೆ ಇದೆ. ಕಾನೂನು ವಿಷಯಗಳು ಅವರಿಗೆ ಅಡ್ಡಿಯಾಗಬಹುದು. ಜತೆಗೆ ದಲಿತ ಅಥವಾ ಲಿಂಗಾಯತ ಸಿಎಂ ಆಗಬೇಕೆಂಬ ಕೂಗು ಇದೆ. ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಬೆಂಬಲವಿರುವುದು ಗಮನಾರ್ಹ.

Whats_app_banner