Karnataka CM: ಸಿದ್ದರಾಮಯ್ಯ vs ಡಿಕೆಶಿವಕುಮಾರ್; ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಸಲೀಸು- ಕಗ್ಗಂಟು ಬಿಡಿಸಲು ಖರ್ಗೆ ತಯಾರು
Karnataka CM: ಮುಖ್ಯಮಂತ್ರಿ ಯಾರೆಂಬುದನ್ನು ರಹಸ್ಯ ಮತದಾನದ ಮೂಲಕ ಶಾಸಕರು ತೀರ್ಮಾನಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಯಾರು ಎಂಬುದನ್ನು ಶೀಘ್ರವೇ ಘೋಷಿಸಲಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದು ನಿನ್ನೆ ಶಾಸಕಾಂಗ ಪಕ್ಷದ ಸಭೆಯೂ ಆಗಿದೆ. ಆದರೆ ಮುಖ್ಯಮಂತ್ರಿ ಯಾರು ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಈಗಾಗಲೇ ತೀವ್ರ ಪೈಪೋಟಿ ಶುರುವಾಗಿದೆ.
ಸಿದ್ದರಾಮಯ್ಯ ಅವರು ತನಗೆ ಬಹಳಷ್ಟು ಶಾಸಕರ ಬೆಂಬಲ ಇದ್ದು, ತಾನೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡಿದ್ದಾರೆ. ಈ ನಡುವೆ, ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ಡಿಕೆ ಶಿವಕುಮಾರ್, ಮಾಡುವುದಾದರೆ ಮುಖ್ಯಮಂತ್ರಿಯನ್ನಾಗಿ ಮಾಡಿ. ಇಲ್ಲದೇ ಹೋದರೆ ಯಾವುದೇ ಸಚಿವ ಸ್ಥಾನ ಬೇಡ. ನಾನು ಒಬ್ಬ ಶಾಸಕನಾಗಿ ಉಳಿದುಬಿಡುತ್ತೇನೆ ಎಂದು ಪಟ್ಟು ಬಿಡದೆ ಹೇಳಿಕೊಂಡಿದ್ದಾರೆ.
ಈ ದಿನ ಬೆಳಗ್ಗೆಯೇ ಸಿದ್ದರಾಮಯ್ಯ ನಿವಾಸಕ್ಕೆ ಶಾಸಕರಾದ ಕೆಎನ್ ರಾಜಣ್ಣ, ಹೆಚ್.ಸಿ.ಮಹದೇವಪ್ಪ, ಶಿವಲಿಂಗೆಗೌಡ, ರುದ್ರಪ್ಪ ಲಮಾಣಿ, ನಂಜೇಗೌಡ ಮತ್ತು ಇತರರು ಹೋಗಿ ಮಾತುಕತೆ ನಡೆಸಿದ್ದರು. ಅಪರಾಹ್ನದ ಹೊತ್ತಿಗೆ ಹೈಕಮಾಂಡ್ ಕರೆಯ ಕಾರಣ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಫಾರ್ಮ್‌ಹೌಸ್‌ಗೆ ತೆರಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಸಿದ್ದರಾಮಯ್ಯ ಬೆಂಬಲಿಗರು ವ್ಯಾಪಕವಾಗಿ ಪಕ್ಷದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದು, ಅವರನ್ನೆ ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಡಿಕೆ ಶಿವಕುಮಾರ್ ಬೆಂಬಲಕ್ಕೆ ಒಕ್ಕಲಿಗ ಮಠಗಳು, ಒಕ್ಕಲಿಗ ನಾಯಕರು ನಿಂತಿದ್ದು ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಏತನ್ಮಧ್ಯೆ ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ತೀರ್ಮಾನವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೆಗೆದುಕೊಳ್ಳಬಹುದು ಎಂದು ಒಪ್ಪಿಗೆ ನೀಡಲಾಗಿದೆ. ಇದರಂತೆ, ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾಗಾಂಧಿ ಕುಟುಂಬದ ಜತೆಗೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.
ಮುಖ್ಯಮಂತ್ರಿ ಆಯ್ಕೆ ಹೇಗೆ ನಡೆಯಲಿದೆ ಎಂಬುದು ಕುತೂಹಲ
ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬ ಕುತೂಹಲ ಸಹಜ. ಇಬ್ಬರು ಘಟಾನುಘಟಿ ನಾಯಕರ ನಡುವಿನ ಪೈಪೋಟಿಯ ಫಲ ಏನಾಗಬಹುದು. ಯಾರು ಮುಖ್ಯಮಂತ್ರಿಯಾದರೂ ಆಗದೇ ಇರುವವರು ಅಸಮಾಧಾನಗೊಳ್ಳುವುದು ಇಲ್ಲಿ ಸಹಜ. ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ನಡುವಿನ ಪೈಪೋಟಿ ಚುನಾವಣೆಗೂ ಮೊದಲೇ ಶುರುವಾಗಿತ್ತು. ಈಗ ನಿರ್ಣಾಯಕ ಘಟ್ಟ ತಲುಪಿದೆ.
ಈ ಹಂತದಲ್ಲಿ ಮುಖ್ಯಮಂತ್ರಿ ಆಯ್ಕೆ ಮೇಲ್ನೋಟಕ್ಕೆ ಕಗ್ಗಂಟಾಗಿ ಉಳಿದಿದೆ. ಇದನ್ನು ಬಗೆಹರಿಸುವುದು ಸುಲಭ ಎಂದು ಪಕ್ಷದ ನಾಯಕರು ಹೇಳುತ್ತಿದ್ದು, ಅದಕ್ಕೆ ಒಂದು ಸೂತ್ರ ಕಂಡುಕೊಂಡಿರುವುದಾಗಿ ವಿವರಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಈ ಕುರಿತು ಹೇಳಿರುವುದು ಇಷ್ಟು -
ನಿನ್ನೆ ಈ ವಿಚಾರವಾಗಿ ರಹಸ್ಯ ಮತದಾನ ನಡೆಯಿತು. ಒಂದು ಸಾಲಿನ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ. ಎಐಸಿಸಿ ವೀಕ್ಷಕರಾಗಿ ಸುಶೀಲ್ ಕುಮಾರ್ ಶಿಂಧೆ, ಜಿತೇಂದ್ರ ಸಿಂಗ್, ದೀಪಕ್ ಪವರಿಯಾ ಬಂದಿದ್ದರು. ಅವರು ಪ್ರತಿಯೊಬ್ಬ ಶಾಸಕರ ಬಳಿಯೂ ಮಾತುಕತೆ ನಡೆಸಿದ್ದರು. ಅವರಿಂದ ಲಿಖಿತ ಮತ್ತು ಮೌಖಿಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅದೆಲ್ಲವನ್ನು ಪರಿಶೀಲಿಸಿ ಮುಖ್ಯಮಂತ್ರಿ ಯಾರು ಎಂಬುದು ನಿರ್ಣಯವಾಗಲಿದೆ. ಯಾರ ತಾಕತ್ತು ಏನೆಂಬುದು ಈಗ ಈ ಮೂವರ ಹೊರತಾಗಿ ಬೇರೆ ಯಾರಿಗೂ ಗೊತ್ತಿಲ್ಲ. ಅವರು ಇದರ ಸಾರಾಂಶವನ್ನು ಮತ್ತು ವರದಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಲಿದ್ದಾರೆ. ಆ ಬಳಿಕ ಅವರು ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಮುಖ್ಯಮಂತ್ರಿ ಯಾರೆಂಬುದು ಘೋಷಣೆ ಆಗಲಿದೆ.