ಕ್ರಿಪ್ಟೋ ಪಾಸ್‌ವರ್ಡ್ ಬದಲಿಸಿ 56 ಕೋಟಿ ರೂ ವಂಚಿಸಿದ್ದ ಆರೋಪಿ ಬಂಧನ; ಇದೇ ದುಡ್ಡಲ್ಲಿ ಸಾಲವನ್ನೂ ನೀಡಿದ್ದ!
Cryptocurrency: ಬೆಂಗಳೂರಿನ ಸಂಸ್ಥೆಯೊಂದರಿಂದ 56 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ದೋಚಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. (ವರದಿ-ಎಚ್. ಮಾರುತಿ)
ಬೆಂಗಳೂರು: ಕ್ರಿಪ್ಟೋ ಖಾತೆಯ ಪಾಸ್‌ವರ್ಡ್ ಬದಲಾಯಿಸಿ ಸುಮಾರು 56 ಕೋಟಿ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಂಗಳೂರಿನ ಸಿಐಡಿ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಣ ವಂಚನೆ ಕುರಿತು ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಸೈಫರ್ ಟೆಕ್ನಾಲಜೀಸ್ ಪ್ರೈವೇಟ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಖಿಲ್ ಗುಪ್ತಾ ದೂರು ನೀಡಿದ್ದರು. ನಂತರ ತನಿಖೆ ಕೈಗೊಂಡ ಪೊಲೀಸರು ಹರಿಯಾಣದ 26 ವರ್ಷದ ಶುಭಾಂಗ್ ಜೈನ್ ಎಂಬುವರನ್ನು ಮುಂಬೈನಲ್ಲಿ ಬಂಧಿಸಿ, ಎರಡು ಮೊಬೈಲ್ ಹಾಗೂ ಎರಡು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಶುಭಾಂಗ್, ಸೈಪರ್ ಟೆಕ್ನಾಲಜೀಸ್ ಕಂಪನಿಯಲ್ಲಿ ಕ್ರಿಪ್ಟೋ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಕಂಪನಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಕಂಪನಿಯ ವ್ಯವಹಾರಕ್ಕೆ ಉಪಯೋಗಿಸುತ್ತಿದ್ದ ಕ್ರಿಪ್ಟೋ ಪಾಸ್‌ವರ್ಡ್ ಅನ್ನು ಬದಲಿಸಿದ್ದರು. ನಂತರ ಕಂಪನಿಯ ಖಾತೆಯಲ್ಲಿದ್ದ ಕ್ರಿಪ್ಟೋ ಕರೆನ್ಸಿಯನ್ನು ರೂಪಾಯಿಗೆ ಪರಿವರ್ತಿಸಿ, ಕಂಪನಿಗೆ ಸುಮಾರು 56 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಹಣವನ್ನು ಕುಟುಂಬ, ಸ್ನೇಹಿತರಿಗೆ ವರ್ಗಾವಣೆ
ನಂತರ ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿ ಘಟಕಕ್ಕೆ ವರ್ಗಾಯಿಸಲಾಗಿತ್ತು. ಆರೋಪಿ ಶುಭಾಂಗ್ ತಮಿಳುನಾಡಿನ ವೆಲ್ಲೂರು ಇನ್ಸ್ಟಿಟ್ಯೂಟ್ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು 2021 ರಲ್ಲಿ ಸೈಫರ್ ಟೆಕ್ನಾಲಜೀಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇಲ್ಲಿ ಲಪಟಾಯಿಸಿದ ಹಣವನ್ನು ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಖಾತೆಗಳಿಗೆ ವರ್ಗಾಯಿಸಿದ್ದ.
ಕೆಲವು ಸ್ನೇಹಿತರಿಗೆ ಸಾಲವನ್ನೂ ನೀಡಿದ್ದ ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲಿಸರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಎಚ್ಎಸ್ಆರ್ ಲೇಔಟ್‌ನಲ್ಲಿ ವಾಸವಾಗಿದ್ದ ಶುಭಾಂಗ್, ಕೆಲಸ ಬಿಟ್ಟ ಬಳಿಕ ಅಹಮದಾಬಾದ್‌ನಲ್ಲಿ ನೆಲೆಸಿದ್ದ. ಬಂಧನ ಭೀತಿಯಿಂದ ಅಹಮದಾಬಾದ್ನಿಂದ ಮುಂಬೈಗೆ ತೆರಳಿ ವಾಸ್ತವ್ಯ ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಟ್ಯಂತರ ರೂಪಾಯಿ ವಂಚನೆ ಸಂಬಂಧ ಆರೋಪಿಯ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕ್ರಿಪ್ಟ್ ವಾಲೆಟ್‌ನಿಂದ ಯಾರು ಯಾರಿಗೆ ಎಷ್ಟು ಹಣ ನೀಡಿದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.