Pedicure: ನಿನ್ನ ಪಾದವೇ ಚಂದ ಹುಡುಗಿ; ಮನೆಯಲ್ಲೇ ಮಾಡಿಕೊಳ್ಳಿ ಪಾದಗಳ ಆರೈಕೆ
Pedicure Tips: ಕಾಲು ಮತ್ತು ಪಾದಗಳು ಟ್ಯಾನ್ ಆಗಿ ಕಪ್ಪಾಗಿದ್ದರೆ ನೋಡಲು ಚಂದವೆನಿಸುವುದಿಲ್ಲ. ಅದಕ್ಕಾಗಿ ನಿಯಮಿತವಾಗಿ ಕಾಲು ಮತ್ತು ಪಾದಗಳ ಆರೈಕೆ ಮಾಡುವುದು ಮುಖ್ಯ. ಅದಕ್ಕೆ ನೀವು ಪಾರ್ಲರ್‌ಗೆ ಹೋಗಬೇಕೆಂದಿಲ್ಲ, ಮನೆಯಲ್ಲೇ ಸುಲಭವಾಗಿ ಪೆಡಿಕ್ಯೂರ್ ಮಾಡಿಕೊಳ್ಳಬಹುದು.
ಈಗೀಗ ಎಲ್ಲರಿಗೂ ಸೌಂದರ್ಯದ ಪ್ರಜ್ಞೆ ಹೆಚ್ಚಾಗಿದೆ. ಫೇಶಿಯಲ್, ವ್ಯಾಕ್ಸಿಂಗ್ ಎಂದೆಲ್ಲಾ ಮಾಡಿಕೊಳ್ಳುತ್ತಾರೆ. ಹೆಚ್ಚಿನ ಜನರು ಮುಖ, ಕೂದಲು ಮತ್ತು ಕೈಗಳಿಗೆ ಆರೈಕೆ ಮಾಡಿಕೊಳ್ಳುತ್ತಾರೆ. ಕಾಲು ಮತ್ತು ಪಾದಗಳನ್ನು ಕಡೆಗಣಿಸಿಬಿಡುತ್ತಾರೆ. ಆರೈಕೆಯ ವಿಷಯ ಬಂದಾಗ ಕಾಲುಗಳೇನು ಹೊರತಾಗಿಲ್ಲ. ಅವುಗಳಿಗೂ ಆರೈಕೆ ಮುಖ್ಯವಾಗಿದೆ. ಕಾಲು ಮತ್ತು ಪಾದಗಳು ಸುಂದರವಾಗಿ ಕಾಣದಿದ್ದರೆ ಅದು ಸೌಂದರ್ಯಕ್ಕೆ ಧಕ್ಕೆ ಬಂದಂತೆ. ಹಾಗಾಗಿ ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ. ಇಲ್ಲದಿದ್ದರೆ ಒಡೆದ ಹಿಮ್ಮಡಿ, ಒರಟಾದ ಉಗುರು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಾಲು ಮತ್ತು ಪಾದಗಳ ಅಂದ ಹೆಚ್ಚಾಗಲು ಪೆಡಿಕ್ಯೂರ್ ಮಾಡಿಸಲಾಗುತ್ತದೆ. ಕೆಲವರು ಅದಕ್ಕೆಂದೇ ನೂರಾರು ರೂಪಾಯಿ ತೆತ್ತು ಪಾರ್ಲರ್‌ಗೆ ಹೋಗುತ್ತಾರೆ. ನೀವೂ ಹಾಗೆ ಮಾಡುತ್ತಿದ್ದರೆ ಇನ್ನುಂದೆ ಆ ಅಭ್ಯಾಸ ಬದಲಿಸಿಕೊಳ್ಳಿ. ಪೆಡಿಕ್ಯೂರ್‌ಗಳಲ್ಲಿ ಹಲವು ಬಗೆಯ ಪೆಡಿಕ್ಯೂರ್‌ಗಳಿವೆ. ಆದರೆ ನಾವು ನಿಮಗೆ ಮನೆಯಲ್ಲಿಯೇ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳಬಹುದಾದ ಪೆಡಿಕ್ಯೂರ್ ಬಗ್ಗೆ ಹೇಳುತ್ತೇವೆ. ಈ ಸುಲಭದ ಹಂತಗಳನ್ನು ಪಾಲಿಸಿ ನಿಮ್ಮ ಪಾದಗಳು ಹೊಳೆಯುವಂತೆ ಮಾಡಿಕೊಳ್ಳಬಹುದು.
ಪೆಡಿಕ್ಯೂರ್ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು
ಎರಡರಿಂದ ಮೂರು ನಿಂಬೆಹಣ್ಣಿನ ಸಿಪ್ಪೆಗಳು
ಶಾಂಪೂ
ಸ್ಕ್ರಬ್
ಕ್ಯಾಸ್ಟರ್ ಆಯಿಲ್
ಬೇಬಿ ಆಯಿಲ್
ಅಡಿಗೆ ಸೋಡಾ (ಬೇಕಿಂಗ್ ಪೌಡರ್)
ಹೀಗೆ ಪೆಡಿಕ್ಯೂರ್ ಮಾಡಿಕೊಳ್ಳಿ
1) ಮೊದಲಿಗೆ ಒಂದು ಲೋಟ ನೀರು ಕುದಿಸಲು ಇಡಿ. ಅದಕ್ಕೆ ಎರಡರಿಂದ ಮೂರು ನಿಂಬೆಹಣ್ಣಿನ ಸಿಪ್ಪಿಯನ್ನು ಹಾಕಿ ಚೆನ್ನಾಗಿ ಕುದಿಸಿ.
2) ಈಗ ಆ ಬಿಸಿ ನೀರನ್ನು ಒಂದು ಅಗಲವಾದ ಪಾತ್ರೆಗೆ (ನಿಮ್ಮ ಪಾದಗಳನ್ನು ಇಡಲು ಆಗುವಷ್ಟು ದೊಡ್ಡ ಪಾತ್ರೆ) ಹಾಕಿ. ಅದಕ್ಕೆ ಸ್ವಲ್ಪ ತಣ್ಣಗಿನ ನೀರು ಬೆರೆಸಿ. ನೀರು ಉಗುರು ಬೆಚ್ಚಗಿನದ್ದಾಗಿರಲಿ.
3) ಆ ನೀರಿನಲ್ಲಿ ನಿಮ್ಮ ಕಾಲು ಇಡಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ.
4) ನಂತರ ಬೇಯಿಸಿದ ನಿಂಬೆ ಸಿಪ್ಪೆಯಿಂದ ನಿಮ್ಮ ಪಾದಗಳನ್ನು ಸ್ಕ್ರಬ್ ಮಾಡಿ. ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಿ.
5) ನಿಂಬೆ ಸಿಪ್ಪೆಯಿಂದ ಉಗುರು, ಹಿಮ್ಮಡಿ ಮತ್ತು ಬೆರಳಿನ ಸಂದುಗಳನ್ನು ಉಜ್ಜಿ. ನಂತರ ಸ್ಕ್ರಬ್ ತೆಗೆದುಕೊಂಡು ನಿಧಾನವಾಗಿ ಉಜ್ಜಿ. ಆಮೇಲೆ ಸ್ವಚ್ಛ ನೀರಿನಿಂದ ತೊಳೆಯಿರಿ.
6) ಈಗ ಒಂದು ಚಿಕ್ಕ ಪಾತ್ರೆಗೆ ಒಂದು ಚಮಚ ಬೇಬಿ ಆಯಿಲ್, ಒಂದು ಚಮಚ ಕ್ಯಾಸ್ಟರ್ ಆಯಿಲ್ ಮತ್ತು ಬೇಕಿಂಗ್ ಪೌಡರ್ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ನಿಮ್ಮ ಪಾದಗಳಿಗೆ ಹಚ್ಚಿ ಮಸಾಜ್ ಮಾಡಿ. ನಂತರ ತೊಳೆಯಿರಿ.
7) ಇದರಿಂದ ಪಾದಗಳ ಟ್ಯಾನಿಂಗ್ ನಿವಾರಣೆಯಾಗುತ್ತದೆ ಮತ್ತು ಚರ್ಮ ಮೃದುವಾಗುತ್ತದೆ. ಅಷ್ಟೇ ಅಲ್ಲದೇ ಹಿಮ್ಮಡಿಗಳು ಒಡೆದು ಒರಟಾಗಿದ್ದರೆ ಅದೂ ಸಹ ದೂರವಾಗುತ್ತದೆ.
ಮೃದುವಾದ ತ್ವಚೆ ಪಡೆಯಲು ಏನು ಮಾಡಬೇಕು?
ಕೆಲವರ ತ್ವಚೆ ಮೃದುವಾಗಿರುವುದಿಲ್ಲ, ಬಹಳ ಒರಟಾಗಿರುತ್ತದೆ. ಅದನ್ನು ಮೃದುವಾಗಿಸಲು ಪ್ರತಿದಿನ ನೆನೆಸಿದ ವಾಲ್ನಟ್ ಮತ್ತು ಬಾದಾಮಿ ತಿನ್ನಬೇಕು. ಇದು ತ್ವಚೆಯಲ್ಲಿರುವ ಶುಷ್ಕತೆಯನ್ನು ಹೋಗಲಾಡಿಸಿ ಪಾದಗಳ ಚರ್ಮವನ್ನು ಮೃದುವಾಗಿಸುತ್ತದೆ.