ಕೂದಲು ಶುಷ್ಕವಾಗಿ ಉದುರಲು ಆರಂಭವಾಗಲು ಇದೇ ಪ್ರಮುಖ ಕಾರಣ; ಶಾಂಪೂ ಆರಿಸಿಕೊಳ್ಳುವ ಮೊದಲು ಈ ಅಂಶ ಗಮನಿಸಿ-hair care tips know the detailed information about shampoo reason behind hair damage and frizz arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೂದಲು ಶುಷ್ಕವಾಗಿ ಉದುರಲು ಆರಂಭವಾಗಲು ಇದೇ ಪ್ರಮುಖ ಕಾರಣ; ಶಾಂಪೂ ಆರಿಸಿಕೊಳ್ಳುವ ಮೊದಲು ಈ ಅಂಶ ಗಮನಿಸಿ

ಕೂದಲು ಶುಷ್ಕವಾಗಿ ಉದುರಲು ಆರಂಭವಾಗಲು ಇದೇ ಪ್ರಮುಖ ಕಾರಣ; ಶಾಂಪೂ ಆರಿಸಿಕೊಳ್ಳುವ ಮೊದಲು ಈ ಅಂಶ ಗಮನಿಸಿ

Hair Care Tips: ಈಗ ಸಾಮಾನ್ಯವಾಗಿ ಎಲ್ಲರೂ ತಲೆ ಕೂದಲು ಸ್ವಚ್ಚಗೊಳಿಸಲು ಶಾಂಪೂ ಬಳಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಶಾಂಪೂಗಳಿಂದ ಕೆಲವು ಅಡ್ಡ ಪರಿಣಾಮಗಳೂ ಉಂಟಾಗುತ್ತವೆ. ಕೂದಲು ಉದುರಲು ಹಾಗೂ ಶುಷ್ಕವಾಗಲು ಪ್ರಮುಖ ಕಾರಣಗಳು ಹೀಗಿವೆ.

ಕೂದಲಿನ ಆರೈಕೆ
ಕೂದಲಿನ ಆರೈಕೆ (PC: Freepik)

ಅದೊಂದು ಕಾಲವಿತ್ತು, ತಲೆಗೂದಲನ್ನು ತೊಳೆಯಲು ಶಿಕಾಕಾಯಿ, ಅಂಟುವಾಳ ಕಾಯಿಗಳಂತಹ ನೈಸರ್ಗಿಕ ವಸ್ತುಗಳನ್ನು ಬಳಸುತ್ತಿದ್ದರು. ಆಧುನಿಕ ಜಗತ್ತಿಗೆ ಕ್ರಮೇಣ ಕಾಲಿಡತೊಡಗಿದಾಗ, ಪರಿಮಳದ ಸಾಬೂನುಗಳ ಜೊತೆಗೆ ರಾಸಾಯನಿಕಯುಕ್ತ ಶ್ಯಾಂಪೂಗಳು ಸ್ನಾನದಕೋಣೆಯಲ್ಲಿ ಜಾಗ ಪಡೆದುಕೊಂಡವು. ಈಗ ಹಲವಾರು ಕಂಪನಿಗಳ ಶಾಂಪೂವನ್ನು ಕಾಣಬಹುದು. ಅವುಗಳಲ್ಲಿ ಕೆಲವು ಕೂದಲಿನ ಆರೋಗ್ಯ ಕಾಪಾಡಿದರೆ ಇನ್ನು ಕೆಲವು ಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ. ಕೂದಲು ಉದುರುವುದು, ನೆತ್ತಿಯ ಉರಿಯೂತಗಳಂತಹ ಸಮಸ್ಯೆಗಳನ್ನು ತರುತ್ತವೆ. ಕೂದಲು ಮತ್ತು ನೆತ್ತಿ ಇವೆರಡರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಸರಿಯಾದ ಪಿಎಚ್‌ ಹೊಂದಿರುವ ಶಾಂಪೂವನ್ನು ಆರಿಸಿಕೊಂಡು, ಕೂದಲಿಗೆ ರಕ್ಷಣೆ ಒದಗಿಸುವುದು ಮುಖ್ಯವಾಗಿದೆ. ಕೂದಲಿಗೆ ಶಾಂಪೂ ಹಾಕುವ ಮೊದಲು ಕೆಲವು ಅಂಶಗಳನ್ನು ತಿಳಿದುಕೊಂಡರೆ ಕೂದಲು ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಕೂದಲು ಉದರಲು ಮತ್ತು ಶುಷ್ಕವಾಗಲು ಕಾರಣಗಳೇನು?

ಹಾನಿಕಾರಿಕ ರಾಸಾಯನಿಕಗಳು: ಬಹಳಷ್ಟು ಶಾಂಪೂಗಳು ಸಲ್ಫೇಟ್‌ಗಳಂತಹ ಹಾನಿಕಾರಿಕ ರಾಸಾಯನಿಕಗಳನ್ನು ಹೊಂದಿರುತ್ತವೆ. ಸೋಡಿಯಂ ಸಲ್ಫೇಟ್‌ ಮತ್ತು ಸೋಡಿಯಂ ಲೊರೆತ್‌ ಸಲ್ಫೇಟ್‌ಗಳು ನೊರೆತರಿಸುವ ಕಠಿಣ ಮಾರ್ಜಕಗಳಾಗಿವೆ. ಇವು ಕೂದಲಿನಲ್ಲಿರುವ ಕೊಳೆ ಮತ್ತು ಎಣ್ಣೆಯನ್ನು ತೆಗೆದು ಹಾಕುತ್ತವೆ. ಜೊತೆಗೆ ಕೂದಲು ಮತ್ತು ನೆತ್ತಿಯ ಮೇಲಿರುವ ಎಣ್ಣೆ ಅಂಶವನ್ನು ಸಹ ತೆಗೆಯುತ್ತದೆ. ಇದರಿಂದ ಕೂದಲು ಶುಷ್ಕ ಮತ್ತು ಒರಟಾಗುವುದರ ಜೊತೆಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಮತ್ತೊಂದು ಸಾಮಾನ್ಯ ರಾಸಾಯನಿಕವಾದ ಪ್ಯಾರಾಬೆನ್‌ಗಳನ್ನು ಶ್ಯಾಂಪೂವಿನಲ್ಲಿ ಸಂರಕ್ಷಕಗಳಾಗಿ ಬಳಸಲಾಗುತ್ತದೆ. ಅದು ಹಾರ್ಮೋನ್‌ಗೆ ಅಡ್ಡಿ ಪಡಿಸುತ್ತದೆ. ಆರೋಗ್ಯದ ಮೇಲೆ ಅಪಾಯ ತಂದೊಡ್ಡುತ್ತದೆ. ಶಾಂಪೂಗಳನ್ನು ನಿರಂತರವಾಗಿ ಬಳಸುವುದರಿಂದ ಕಾಲಕ್ರಮೇಣ ಕೂದಲು ದುರ್ಬಲಗೊಳ್ಳಬಹುದು ಅಥವಾ ಹಾನಿಯುಂಟು ಮಾಡಬಹುದು.

ನೈಸರ್ಗಿಕ ಎಣ್ಣೆಯನ್ನು ಹೋಗಲಾಡಿಸುತ್ತದೆ: ನೆತ್ತಿ ನೈಸರ್ಗಿಕವಾಗಿಯೇ ಮೇದೋಗ್ರಂಥಿಗಳನ್ನು ಉತ್ಪತ್ತಿ ಮಾಡುತ್ತದೆ. ಇದು ನೆತ್ತಿ ಮತ್ತು ಕೂದಲನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಮುಖ್ಯವಾಗಿ ಶ್ಯಾಂಪೂಗಳನ್ನು ಹೆಚ್ಚುವರಿ ಕೊಳಕು ಮತ್ತು ಎಣ್ಣೆಯಂಶವನ್ನು ತೆಗೆಯಲು ತಯಾರಿಸಲಾಗಿದೆ. ಆದರೆ ಶಾಂಪೂಗಳು ಮೇದೋಗ್ರಂಥಿಗಳು ಉತ್ಪತ್ತಿ ಮಾಡುವ ತೈಲಗಳನ್ನು ಸಹ ಸಂಪೂರ್ಣವಾಗಿ ಹೋಗಲಾಡಿಸುತ್ತವೆ. ಇದರಿಂದ ಕೂದಲು ಒರಟಾಗುತ್ತದೆ. ಹೊಳಪನ್ನು ಕಳೆದುಕೊಳ್ಳುವ ಜೊತೆಗೆ ಕೂದಲು ಹಾನಿಗೊಳಗಾಗುತ್ತದೆ.

ಪಿಎಚ್‌ ಅಸಮತೋಲನ: ನೆತ್ತಿಯ ನೈಸರ್ಗಿಕ ಪಿಎಚ್‌ ಮಟ್ಟವು ಸ್ವಲ್ಪ ಆಮ್ಲೀಯ ಗುಣಗಳಿಂದ ಕೂಡಿದೆ. ಸುಮಾರು 4.5 ರಿಂದ 5.5 ರಷ್ಟನ್ನು ಹೊಂದಿದೆ. ಇದು ನೆತ್ತಿಯ ತೇವಾಂಶವನ್ನು ಕಾಯ್ದುಕೊಳ್ಳಲು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾದಿಂದ ರಕ್ಷಣೆ ಒದಗಿಸಲು ಸಹಾಯ ಮಾಡುತ್ತದೆ. ಪಿಎಚ್‌ ಮಟ್ಟ ಸರಿಯಿಲ್ಲದ ಶಾಂಪೂಗಳು ನೆತ್ತಿಯ ಪಿಎಚ್ ಅನ್ನು ಹೆಚ್ಚಿಸಬಹುದು. ಇದು ಶುಷ್ಕತೆ, ತುರಿಕೆ ಉಂಟುಮಾಡಬಹುದು. ಪಿಎಚ್‌ ಮಟ್ಟವನ್ನು ಸರಿದೂಗಿಸಲು ನೆತ್ತಿಯು ಇನ್ನಷ್ಟು ತೈಲವನ್ನು ಉತ್ಪತ್ತಿ ಮಾಡಬಹುದು. ಇದು ಕೂದಲಿನ ಹೊರಪೊರೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ಕೂದಲು ಹಾನಿಗೊಳಗಾಗುವುದರ ಜೊತೆಗೆ ಮತ್ತಷ್ಟು ಒರಟಾಗುತ್ತದೆ.

ಕೂದಲಿನ ಹೊರಪೊರೆಗೆ ಹಾನಿ: ಕೂದಲಿನ ಹೊರಪೊರೆಯು ಕೂದಲಿನ ಹೊರಭಾಗವಾಗಿದೆ. ಇದು ಪರಿಸರದಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಹೆಚ್ಚು ಮಾರ್ಜಕಗಳನ್ನು ಮತ್ತು ಪಿಎಚ್‌ ಮಟ್ಟ ಹೆಚ್ಚಿರುವ ಶಾಂಪೂಗಳನ್ನು ಪದೇ ಪದೇ ಬಳಸುವುದರಿಂದ ಕೂದಲು ಹೊರಪೊರೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಒರಟು ಮತ್ತು ಕೂದಲಿನ ರಂದ್ರಕ್ಕೆ ಕಾರಣವಾಗುತ್ತದೆ. ಇದು ಕೂದಲು ಕವಲೊಡೆಯಲು (ಸ್ಪ್ಲಿಟ್‌) ಮತ್ತು ಅಂದವನ್ನು ಕಳೆದುಕೊಳ್ಳಲು ಕಾರಣವಾಗಬಹುದು. ತೇವಾಂಶವನ್ನು ಸಹ ಕಳೆದುಕೊಳ್ಳಬಹುದು. ಕ್ರಮೇಣ ಕೂದಲಿನ ನಿರ್ವಹಣೆ ಕೂಡಾ ಕಷ್ಟವಾಗಬಹುದು.

ಶಾಂಪೂಗಳ ಬಣ್ಣ ಮತ್ತು ಪರಿಮಳ: ಅನೇಕ ಶಾಂಪೂಗಳು ಗ್ರಾಹಕರನ್ನು ಆಕರ್ಷಿಸಲು ರಾಸಾಯನಿಕಗಳಿಂದ ಕೂಡಿದ ಸುಗಂಧ ಮತ್ತು ಬಣ್ಣಗಳನ್ನು ಹೊಂದಿರುತ್ತವೆ. ಈ ರಾಸಾಯನಿಕಗಳಿಂದ ಕೂಡಿರುವ ಕೃತಕ ಪದಾರ್ಥಗಳು ಅಲರ್ಜಿಯನ್ನುಂಟು ಮಾಡಬಹುದು. ಇದು ಕೂದಲು ಮತ್ತು ನೆತ್ತಿಯ ಮೇಲೆ ದೀರ್ಘಕಾಲಿನವರೆಗೆ ಹಾನಿಯನ್ನುಂಟು ಮಾಡಬಹುದು. ಶ್ಯಾಂಪೂಗಳಲ್ಲಿ ಬಳಕೆಯಾಗುವ ಸುಗಂಧವು ಸಾಮಾನ್ಯವಾಗಿ ಥಾಲೇಟ್‌ಗಳನ್ನು ಹೊಂದಿರುತ್ತವೆ. ಇದು ಹಾರ್ಮೋನ್‌ಗಳ ಉತ್ಪತ್ತಿಗೆ ಅಡ್ಡಿಪಡಿಸುತ್ತವೆ. ಬಣ್ಣಗಳು ನೆತ್ತಿಯ ಸೂಕ್ಷ್ಮ ಪದರಗಳನ್ನು ಹಾನಿಮಾಡಬಹುದು. ಇದು ಚರ್ಮದ ಅಲರ್ಜಿ, ತುರಿಕೆ, ನೆತ್ತಿ ಕೆಂಪಾಗುವಂತಹ ಅಪಾಯಗಳಿಗೆ ಕಾರಣವಾಗಬಹುದು.

ಸಿಲಿಕಾನ್‌ ರಚನೆ: ಸಾಮಾನ್ಯವಾಗಿ ಶಾಂಪೂ ಮತ್ತು ಕಂಡೀಷನರ್‌ಗಳಲ್ಲಿ ಡಿಮೆಥಿಕೋನ್‌ನಂತಹ ಸಿಲಿಕೋನ್‌ಗಳನ್ನು ಸೇರಿಸಲಾಗುತ್ತದೆ. ಇದು ಕೂದಲಿನ ಮೇಲಿನ ನಯವಾದ ಹೊಳಪನ್ನು ಹೋಗಲಾಡಿಸುತ್ತದೆ. ಇದು ಕೂದಲಿಗೆ ರೇಷ್ಮೆಯಂತಹ ಭಾವನೆಯನ್ನು ಉಂಟುಮಾಡಬಹುದು ಆದರೆ ಅದು ಅಲ್ಪ ಸಮಯದವರೆಗೆ ಮಾತ್ರ ಕಾಣಬಹುದು. ಕ್ರಮೇಣ ಅವು ನೆತ್ತಿಯ ಮೇಲೆ ಸಿಲಿಕಾನ್‌ ರಚನೆಗಳನ್ನು ಉಂಟುಮಾಡುತ್ತವೆ. ಇದು ನೆತ್ತಿ ಮತ್ತು ಕೂದಲಿನ ತೇವಾಂಶವನ್ನು ಹೋಗಲಾಡಿಸುತ್ತದೆ. ಇದರಿಂದ ಕೂದಲು ನಿರ್ಜೀವಗೊಳ್ಳುತ್ತದೆ. ಸಿಲಿಕಾನ್‌ ರಚನೆಯು ನೆತ್ತಿ ಮತ್ತು ಕೂದಲಿನ ಮೇಲೆ ಶುಷ್ಕತೆ ಮತ್ತು ಹಾನಿಯನ್ನುಂಟು ಮಾಡಬಹುದು.

ಕೂದಲು ಉದುರುವುದು: ಕೆಲವು ಶ್ಯಾಂಪೂಗಳು ಆಲ್ಕೋಹಾಲ್‌ ಮತ್ತು ಸಂರಕ್ಷಕಗಳನ್ನು ಹೊಂದಿರುತ್ತವೆ. ಅವು ಕಠಿಣವಾಗಿರುವುದರಿಂದ ನೆತ್ತಿಯ ಮೇಲಿರುವ ನೈಸರ್ಗಿಕ ತೈಲವನ್ನು ತೆಗೆದುಹಾಕಬಹುದು. ಇದು ಕೂದಲನ್ನು ದುರ್ಬಲವಾಗಿಸಿ ಉದುರುವಿಕೆ ಮತ್ತು ನಿಧಾನಗತಿಯಲ್ಲಿ ಕೂದಲ ಬೆಳವಣಿಗೆಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ಇದು ನೆತ್ತಿಯ ಉರಿಯೂತಕ್ಕೂ ಕಾರಣವಾಗಬಹುದು. ಈಗಾಗಲೇ ಕೂದಲು ಉದುರುತ್ತಿರುವವರಿಗೆ ಇದು ಇನ್ನೂ ಹೆಚ್ಚಿನ ಹಾನಿಯನ್ನುಂಟು ಮಾಡಬಹುದು. ಇದನ್ನು ತಪ್ಪಿಸಲು ಸರಿಯಾದ ಶ್ಯಾಂಪೂ ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಿದೆ.