ವಿಜಯವಾಡದಲ್ಲಿ ಮುಳುಗಿದ ವಾಹನಗಳಿಗೆ ಮುಗಿಬಿದ್ದ ಶೋರೋಂ, ವಿಮಾ ಪ್ರತಿನಿಧಿಗಳು; ಗ್ರಾಹಕರನ್ನು ಹೀಗೂ ವಂಚಿಸ್ತಾರೆ ಹುಷಾರು-business news submerged vehicles customers misled by showroom and insurance reps on scrap sales in andhra pradesh uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಿಜಯವಾಡದಲ್ಲಿ ಮುಳುಗಿದ ವಾಹನಗಳಿಗೆ ಮುಗಿಬಿದ್ದ ಶೋರೋಂ, ವಿಮಾ ಪ್ರತಿನಿಧಿಗಳು; ಗ್ರಾಹಕರನ್ನು ಹೀಗೂ ವಂಚಿಸ್ತಾರೆ ಹುಷಾರು

ವಿಜಯವಾಡದಲ್ಲಿ ಮುಳುಗಿದ ವಾಹನಗಳಿಗೆ ಮುಗಿಬಿದ್ದ ಶೋರೋಂ, ವಿಮಾ ಪ್ರತಿನಿಧಿಗಳು; ಗ್ರಾಹಕರನ್ನು ಹೀಗೂ ವಂಚಿಸ್ತಾರೆ ಹುಷಾರು

ವ್ಯಾಪಾರ ವಹಿವಾಟಿನಲ್ಲಿ ಗ್ರಾಹಕ ವಂಚನೆ ಬಹುದೊಡ್ಡ ಸವಾಲು. ಇತ್ತೀಚೆಗೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಪ್ರವಾಹ ಪರಿಸ್ಥಿತಿ ಕಾರಣ ಅನೇಕ ವಾಹನಗಳು ನೀರಿನಲ್ಲಿ ಮುಳುಗಿದ್ದವು. ಈಗ ಆ ಮುಳುಗಿದ ವಾಹನಗಳಿಗೆ ಮುಗಿಬಿದ್ದ ಶೋರೋಂ, ವಿಮಾ ಪ್ರತಿನಿಧಿಗಳು ಗ್ರಾಹಕರನ್ನು ಅವ್ಯಾಹತವಾಗಿ ವಂಚಿಸುತ್ತಿರುವ ಅಂಶ ಬೆಳಕಿಗೆ ಬಂದಿದ್ದು, ಪಾರಾಗುವುದು ಹೇಗೆಂಬ ವಿವರ ಇಲ್ಲಿದೆ.

ವಿಜಯವಾಡದಲ್ಲಿ ಪ್ರವಾಹ ಪರಿಸ್ಥಿತಿ ದೃಶ್ಯ (ಕಡತ ಚಿತ್ರ).
ವಿಜಯವಾಡದಲ್ಲಿ ಪ್ರವಾಹ ಪರಿಸ್ಥಿತಿ ದೃಶ್ಯ (ಕಡತ ಚಿತ್ರ). (ANI)

ಹೈದರಾಬಾದ್‌: ವಿಜಯವಾಡ ಪ್ರವಾಹ ಪರಿಸ್ಥಿತಿ ವೇಳೆ ನಷ್ಟಕ್ಕೊಳಗಾದ ಜನರಿಗೆ ನೆರವಾಗಲು ಆಂಧ್ರ ಪ್ರದೇಶ ಸರ್ಕಾರ ಪ್ರಯತ್ನಿಸುತ್ತಿದ್ದರೆ, ಕೆಲವು ಕಂಪನಿಗಳು ದಲ್ಲಾಳಿಗಳ ಜತೆಗೂಡಿದುರಂತದಲ್ಲೂ ತಮ್ಮ ಲಾಭಕ್ಕಾಗಿ ಎದುರುನೋಡುತ್ತಿವೆ. ಮುಳುಗಡೆಯಾದ ವಾಹನಗಳ ರಿಪೇರಿ ಆಗುವುದಿಲ್ಲ ಎಂದೋ, ಖರ್ಚು ಹೆಚ್ಚು ಎಂದೋ ಹೇಳಿ ಗ್ರಾಹಕರ ದಾರಿ ತಪ್ಪಿಸಿ ಅವರನ್ನು ವಂಚಿಸುವ ಕೆಲಸ ನಡೆಯುತ್ತಿದೆ. ಪ್ರವಾಹದಲ್ಲಿ ಮುಳುಗಡೆಯಾದ ವಾಹನಗಳ ವಿಮೆಯ ಜೊತೆಗೆ ಕಡಿಮೆ ದರದಲ್ಲಿ ವಾಹನ ಪಡೆಯಬಹುದು ಎಂಬ ಕಾರಣಕ್ಕೆ ಇವರು ಕೈಜೋಡಿಸಿರುವ ಆರೋಪ ಎದುರಾಗಿದೆ. ಈ ಅಕ್ರಮ ವ್ಯವಹಾರ ಸಾರಿಗೆ ಇಲಾಖೆಯ ಗಮನಕ್ಕೆ ಬಂದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಏನಾಗಿತ್ತು ವಿಜಯವಾಡದಲ್ಲಿ; ಈಗೇನು ನಡೆಯುತ್ತಿದೆ..

ವಿಜಯವಾಡದ ಬೂದುಮೇರು ಪ್ರದೇಶದಲ್ಲಿ ಸೆಪ್ಟೆಂಬರ್ 1 ರಿಂದ 12 ರ ತನಕ ಪ್ರವಾಹ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ಅಲ್ಲಿ ಸಾವಿರಾರು ವಾಹನಗಳು ಜಲಾವೃತವಾಗಿದ್ದವು. ಸರ್ಕಾರ ದ್ವಿಚಕ್ರವಾಹನಗಳಿಗೆ 3,000 ರೂಪಾಯಿ, ಆಟೋಗಳಿಗೆ 10,000 ರೂಪಾಯಿ ಪರಿಹಾರ ಘೋ‍ಷಿಸಿದೆ. ಉಳಿದ ವಾಹನಗಳಿಗೆ ಪರಿಹಾರ ಘೋಷಿಸಿಲ್ಲ. ಈ ಪರಿಸ್ಥಿತಿಯ ಲಾಭ ಪಡೆಯಲು ವಿಮಾ ಕಂಪನಿಗಳು ಮತ್ತು ಕಾರು ಶೋರೂಮ್‌ಗಳು ಪ್ರಯತ್ನಿಸುತ್ತಿವೆ. ಎಂಜಿನ್‌ಗೆ ನೀರು ಹೋದರೆ ಮತ್ತೆ ಅದು ಉಪಯೋಗಕ್ಕೆ ಬರಲ್ಲ. ದುರಸ್ತಿ ಮಾಡಿದರೂ ಪ್ರಯೋಜನ ಇಲ್ಲ ಎಂದು ಹೇಳುತ್ತಲೇ ಅದನ್ನು ಕಡಿಮೆ ದರಕ್ಕೆ ಖರೀದಿಸಿ ಸೆಕೆಂಡ್ ಹ್ಯಾಂಡ್ ಬಜಾರ್‌ನಲ್ಲಿ ಹೆಚ್ಚು ದರಕ್ಕೆ ಮಾರಾಟ ಮಾಡುವ ಗ್ಯಾಂಗ್‌ಗಳು ಸಕ್ರಿಯವಾಗಿವೆ ಎಂಬುದು ಆರೋಪ.

ವಂಚನೆಯ ಸ್ವರೂಪ ಹೇಗಿದೆ

ಪ್ರವಾಹದಲ್ಲಿ ಮುಳುಗಿದ್ದ ವಾಹನಗಳನ್ನು ಶೋರೂಮ್‌ಗೆ ತಗೊಂಡು ಹೋದರೆ ಅಲ್ಲಿ ಅದನ್ನು ಪರಿಶೀಲಿಸಿ, ಇದು ದುರಸ್ತಿ ಕಷ್ಟ. ಪೂರ್ತಿ ಹಾಳಾಗಿದೆ ಎನ್ನುತ್ತಾರೆ. ವಿಮಾ ಪ್ರತಿನಿಧಿಗಳ ಬಳಿ ಕ್ಲೈಮ್ ಮಾಡಲು ಹೋದರೆ ಪೂರ್ತಿ ಹಾಳಾಗಿರುವ ಕಾರಣ ವಿಮೆಯೂ ಪೂರ್ತಿ ಸಿಗದು ಎನ್ನುತ್ತಾರೆ. ಸ್ಕ್ರ್ಯಾಪ್‌ಗೆ ಹಾಕಿ ಬಿಡಿ ಎಂದು ಸಲಹೆ ನೀಡುತ್ತಾರೆ. ಬೇರೆ ದಾರಿ ಕಾಣದ ಗ್ರಾಹಕರು ಅದನ್ನು ಅಲ್ಲಿಯೇ ಅವರು ಕೊಟ್ಟ ದುಡ್ಡಿಗೆ ಬಿಟ್ಟು ಬರುತ್ತಿದ್ದಾರೆ. ಈ ಕಾರುಗಳನ್ನು ಅವರು ದುರಸ್ತಿ ಮಾಡಿ ಮತ್ತೆ ಸೆಕೆಂಡ್ ಹ್ಯಾಂಡ್ ಕಾರುಗಳೆಂದು ಮರುಮಾರಾಟ ಮಾಡುತ್ತಾರೆ. ಇಲ್ಲೊಂದು ವ್ಯಾಪಾರದ ಅವಕಾಶವನ್ನು ಅವರು ಗುರುತಿಸಿಕೊಂಡಿದ್ದು, ಗ್ರಾಹಕರ ಹಗಲು ದರೋಡೆ ನಡೆಯುತ್ತಿದೆ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ತೆಲುಗು ವರದಿ ಮಾಡಿದೆ.

ಗುಂಟೂರು ಭಾಗದ ಗ್ಯಾಂಗ್‌ ಇಎಂಐ ಪಾವತಿಸದ ವಾಹನ ಖರೀದಿಗೆ ವಿಜಯವಾಡ ಸುತ್ತುತ್ತಿವೆ. ನಗರದ ಕಾರು ಶೋರೂಂ ಆಡಳಿತದೊಂದಿಗೆ ಒಪ್ಪಂದ ಮಾಡಿಕೊಂಡು ಗ್ರಾಹಕರನ್ನು ವಂಚಿಸುವ ಕೃತ್ಯ ಎಸಗುತ್ತಿವೆ. ಒಂದು ಅಥವಾ ಎರಡು ಲಕ್ಷ ವೆಚ್ಚದಲ್ಲಿ ಜಲಾವೃತಗೊಂಡ ವಾಹನಗಳನ್ನು ಮರುಸ್ಥಾಪಿಸುವ ಸಾಧ್ಯತೆಯಿದ್ದರೂ, ಭಾರಿ ಅಂದಾಜು ಮಾಡಲಾಗುತ್ತಿದೆ. ಕಾರಿನ ಮಾದರಿಯನ್ನು ಅವಲಂಬಿಸಿ, ವಿಮಾ ಮೊತ್ತವು ಕಡಿಮೆಯಾಗುತ್ತದೆ. ಕಾರು ರಿಪೇರಿ ವೆಚ್ಚಕ್ಕಿಂತ ವಿಮೆಯ ವೆಚ್ಚ ಕಡಿಮೆ ಎಂದು ಅವರು ಹೇಳುತ್ತಾರೆ. ಇವುಗಳಿಗೆ ಸಂಬಂಧಿಸಿದ ಅಂದಾಜುಗಳು ಅಧಿಕೃತವಾಗಿ ಮಂಜೂರಾಗಿಲ್ಲ. ರಿಪೇರಿ ಮಾಡುವುದಕ್ಕಿಂತ ಕಾರನ್ನು ಗುಜರಿಗೆ ಹಾಕಿ ಎಂದು ಸಲಹೆ ನೀಡಿ ವಂಚಿಸಲಾಗುತ್ತಿದೆ ಎಂದು ಸಂತ್ರಸ್ತರು ಆರೋಪಿಸಿದ್ಧಾಗಿ ವರದಿ ವಿವರಿಸಿದೆ.

ಇಂತಹ ವಂಚನೆ ತಡೆಯಲು ಗ್ರಾಹಕರು ಏನು ಮಾಡಬಹುದು

ಇಂತಹ ವಂಚನೆಗಳ ವಿರುದ್ಧ ಕ್ರಮಕ್ಕೆ ಗ್ರಾಹಕರು ಮಾಡಬೇಕಾದ್ದು ಇಷ್ಟು. ಯಾವ ಶೋರೂಂನವರು ಆ ವಾಹನ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿ ಅದನ್ನು ಖರೀದಿಸಿರುತ್ತಾರೋ, ಅವರ ಬಳಿ ಅದೇ ರೀತಿ ಹಿಂಬರಹ ಪಡೆದುಕೊಂಡು ಹಣವನ್ನು ಪಡೆದುಕೊಳ್ಳಬಹುದು. ಆ ದಾಖಲೆಗಳನ್ನು ಉಳಿಸಿಕೊಂಡರೆ ಕಾನೂನು ಹೋರಾಟಕ್ಕೆ ಅನುಕೂಲವಾಗುತ್ತದೆ.

ನೀರಿನಲ್ಲಿ ಮುಳುಗಿದ ವಾಹನ ದುರಸ್ತಿಗೆ ಶೋರೂಂಗೆ ಬಿಟ್ಟಾಗ, ಅದರ ದುರಸ್ತಿಗೆ ಎಷ್ಟು ಖರ್ಚಾಗಬಹುದು ಎಂಬ ಎಸ್ಟಿಮೇಶನ್‌ ವಿವರವನ್ನು ಅಧಿಕೃತವಾಗಿ ಲಿಖಿತರೂಪದಲ್ಲಿ ಅಥವಾ ಅಧಿಕೃತ ಇಮೇಲ್ ಮೂಲಕವಾದರೂ ಪಡೆದುಕೊಳ್ಳಬೇಕು. ಗುಜರಿಗೆ ಹಾಕಿ ಎಂಬ ಸಲಹೆ ನೀಡುತ್ತಾರಾದರೆ ವಾಹನ ವಿಮೆ ಪಡೆಯುವುದಕ್ಕಾಗಿ ಅದನ್ನೂ ಲಿಖಿತವಾಗಿ ಪಡೆದುಕೊಳ್ಳಬೇಕು. ಅವರು ಅದನ್ನು ನೀಡಲು ಹಿಂಜರಿಯುತ್ತಿದ್ದಾರೆ ಎಂದರೆ ಅವರ ವ್ಯವಹಾರದಲ್ಲಿ ಏನೋ ವಂಚನೆ ಇದೆ ಎಂದು ಅರ್ಥ ಮಾಡಿಕೊಳ್ಳಬಹುದು. ಈ ರೀತಿ ದಾಖಲೀಕರಣ ಗ್ರಾಹಕ ವ್ಯಾಜ್ಯಗಳ ಕೋರ್ಟ್‌ಗೆ ಅಗತ್ಯ ಬೇಕಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಗ್ರಾಹಕ ವ್ಯಾಜ್ಯಗಳ ಮಂಡಳಿಯಲ್ಲಿ ಪ್ರಕರಣ ದಾಖಲಿಸಿದರೆ ಅದರಂತೆ ನ್ಯಾಯವನ್ನು ಗ್ರಾಹಕರ ಪಡೆಯಬಹುದು.

mysore-dasara_Entry_Point