Cleaning Tips: ಹೊದಿಕೆಗಳನ್ನು ಬದಲಾಯಿಸಿದರೆ ಬೆಡ್‌ ಸ್ವಚ್ಛವಾಯ್ತು ಎಂದುಕೊಳ್ಳಬೇಡಿ: ನಿಮ್ಮ ಹಾಸಿಗೆಗಳನ್ನು ಈ ರೀತಿ ಕ್ಲೀನ್‌ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Cleaning Tips: ಹೊದಿಕೆಗಳನ್ನು ಬದಲಾಯಿಸಿದರೆ ಬೆಡ್‌ ಸ್ವಚ್ಛವಾಯ್ತು ಎಂದುಕೊಳ್ಳಬೇಡಿ: ನಿಮ್ಮ ಹಾಸಿಗೆಗಳನ್ನು ಈ ರೀತಿ ಕ್ಲೀನ್‌ ಮಾಡಿ

Cleaning Tips: ಹೊದಿಕೆಗಳನ್ನು ಬದಲಾಯಿಸಿದರೆ ಬೆಡ್‌ ಸ್ವಚ್ಛವಾಯ್ತು ಎಂದುಕೊಳ್ಳಬೇಡಿ: ನಿಮ್ಮ ಹಾಸಿಗೆಗಳನ್ನು ಈ ರೀತಿ ಕ್ಲೀನ್‌ ಮಾಡಿ

Cleaning Tips: ಅನೇಕರಿಗೆ ಹಾಸಿಗೆಯ ಸ್ವಚ್ಛತೆಯನ್ನು ಕಾಪಾಡುವುದು ಎಂದರೆ ಕೇವಲ ಹೊದಿಕೆಗಳನ್ನು ಬದಲಾಯಿಸುವುದು ಎಂಬ ಭಾವನೆಯಿದೆ. ಆದರೆ ನೀವು ಹಾಸಿಗೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಲ್ಲಿ ಎಡವುತ್ತಿದ್ದೀರಿ..? ಇದರಿಂದ ಏನೆಲ್ಲ ಅಪಾಯ ಕಾದಿದೆ..? ಮಾಹಿತಿ ಇಲ್ಲಿದೆ.

ಹಾಸಿಗೆಗಳನ್ನು ಸ್ವಚ್ಛಗೊಳಿಸುವ ವಿಧಾನ
ಹಾಸಿಗೆಗಳನ್ನು ಸ್ವಚ್ಛಗೊಳಿಸುವ ವಿಧಾನ (PC: Unsplash)

Cleaning Tips: ನಿದ್ರೆಯೊಂದು ಚೆನ್ನಾಗಿ ಆಯ್ತು ಎಂದರೆ ಅರ್ಧ ಕಾಯಿಲೆಗಳು ನಮ್ಮಿಂದ ದೂರ ಉಳಿಯುತ್ತವೆ. ರಾತ್ರಿ ವೇಳೆ ನಿದ್ರೆ ಚೆನ್ನಾಗಿ ಆಗುವುದಕ್ಕೂ ಹಾಸಿಗೆ ಗಾಢವಾದ ಸಂಬಂಧವಿದೆ. ಹೊಸ ಹಾಸಿಗೆಯೊಂದನ್ನು ಖರೀದಿಸಿ ತರುವಾಗ ನಾವು ಸಾಕಷ್ಟು ಬಾರಿ ವಿಚಾರಿಸುತ್ತೇವೆ. ಇದು ಸರಿ ಇರಬೇಕು, ಅದು ಸರಿ ಇರಬೇಕು ಅಂತಾ ಹಾಸಿಗೆ ಅಂಗಡಿ ಮಾಲೀಕನ ತಲೆ ತಿಂದು ಬಿಡುತ್ತೇವೆ.

ಆದರೆ ಹಾಸಿಗೆಯ ನೈರ್ಮಲ್ಯದ ವಿಚಾರಕ್ಕೆ ಬಂದರೆ ಮಾತ್ರ ನಿಮಗೆ ಹಾಸಿಗೆ ಖರೀದಿ ಮಾಡುವಾಗ ಇದ್ದ ಉತ್ಸಾಹ ಇರುವುದೇ ಇಲ್ಲ. ನಾವು ಧರಿಸುವ ಬಟ್ಟೆ ಹಾಗೂ ಪಾತ್ರೆಗಳನ್ನು ನಿತ್ಯ ತೊಳೆಯುತ್ತೇವೆ. ಆದರೆ ನಾವು ಪ್ರತಿದಿನ 7-8 ಗಂಟೆಗಳ ಕಾಲ ಕಾಲ ನಿದ್ರೆ ಮಾಡುವ ಹಾಸಿಗೆಯ ಸ್ವಚ್ಛತೆಯ ಕಡೆಗೆ ಗಮನ ನೀಡುವುದೇ ಇಲ್ಲ.

ನಮ್ಮಲ್ಲಿ ಅನೇಕರಿಗೆ ಹಾಸಿಗೆ ನೈರ್ಮಲ್ಯ ಕಾಪಾಡಿಕೊಳ್ಳುವುದು ಎಂದರೆ ಆಗಾಗ ದಿಂಬಿನ ಹೊದಿಕೆ ಹಾಗೂ ಹಾಸಿಗೆ ಹೊದಿಕೆಗಳನ್ನು ಬದಲಾಯಿಸುವುದು ಎಂಬುದಷ್ಟೇ ತಲೆಯಲ್ಲಿ ಇರುತ್ತದೆ. ಆದರೆ ಕೇವಲ ಬೆಡ್‌ಶೀಟ್‌ಗಳನ್ನು ಬದಲಿಸಿದ ಮಾತ್ರಕ್ಕೆ ಹಾಸಿಗೆಯ ಸ್ವಚ್ಛತೆ ಮುಗಿಯಿತು ಎಂದು ಅರ್ಥವಲ್ಲ. ನೀವು ಬೆಡ್‌ಶೀಟ್‌ಗಳ ಜೊತೆಯಲ್ಲಿ ಹಾಸಿಗೆಗಳನ್ನು ಸ್ವಚ್ಛಗೊಳಿಸುವುದು ಕೂಡಾ ಅಷ್ಟೇ ಮುಖ್ಯ..! ಹಾಸಿಗೆಗಳನ್ನು ವಾಷಿಂಗ್ ಮಷಿನ್‌ಗೆ ಹಾಕಿ ತೊಳೆಯಲು ಸಾಧ್ಯವಿಲ್ಲ. ಹೀಗಾಗಿ ಹಾಸಿಗೆಯ ನೈರ್ಮಲ್ಯ ಕಾಪಾಡಿಕೊಳ್ಳಲು ನೀವೇನು ಮಾಡಬೇಕು ಎಂಬುದಕ್ಕೆ ಇಲ್ಲಿ ಮಾಹಿತಿ ಇಲ್ಲಿದೆ ನೋಡಿ.

ಹಾಸಿಗೆಯಲ್ಲಿ ಧೂಳು ಸಂಗ್ರಹವಾಗುತ್ತಿದ್ದಂತೆ ಕ್ರಿಮಿ ಕೀಟಗಳ ಸಂಖ್ಯೆ ಹೆಚ್ಚಾಗುತ್ತದೆ. ಕೊಳಕು ಹಾಸಿಗೆಗಳಿಂದ ಅಲರ್ಜಿ ಹಾಗೂ ಉಸಿರಾಟ ಸಂಬಂಧಿ ಸಮಸ್ಯೆಗಳು ಆರಂಭಗೊಳ್ಳುತ್ತದೆ . ಹೀಗಾಗಿ ಹಾಸಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಅಸ್ತಮಾದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕೊಳಕು ಹಾಸಿಗೆಯು ಕಾಯಿಲೆ ಇನ್ನಷ್ಟು ಉಲ್ಭಣಗೊಳ್ಳಲು ಕಾರಣವಾಗುತ್ತದೆ. ಕೊಳಕು ಹಾಸಿಗೆಯಲ್ಲಿ ತಿಗಣೆ ಕಾಟ ಕೂಡ ಇರೋವುದರಿಂದ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ ಸಮಸ್ಯೆಗಳು ಆರಂಭಗೊಳ್ಳುತ್ತದೆ .ಇವುಗಳಿಂದ ನಿದ್ರೆಯ ಗುಣಮಟ್ಟ ಹಾಳಾಗುತ್ತದೆ.

ಆದರೆ ಹಾಸಿಗೆಯನ್ನು ಸ್ವಚ್ಛಗೊಳಿಸುವುದು ಬೆಡ್‌ಶೀಟ್‌ಗಳನ್ನು ತೊಳೆದಂತೆ ಅಲ್ಲ. ಹೀಗಾಗಿ ಹಾಸಿಗೆಗಳನ್ನು ನಿರ್ವಹಣೆ ಮಾಡುವುದು ಹೇಗೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಮೂಡಿರಬಹುದು. ಇದಕ್ಕಾಗಿ ನೀವು ಮಾಡಬಹುದಾದ ಮೊದಲ ಕೆಲಸವೇನೆಂದರೆ ಕಾಲ ಕಾಲಕ್ಕೆ ಹಾಸಿಗೆಯನ್ನು ಸೂರ್ಯನ ಬೆಳಕಿನಲ್ಲಿ ಇಡಬೇಕು. ಇದರಿಂದ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತದೆ.ಅಲ್ಲದೇ ಹಾಸಿಗೆಯ ತೇವಾಂಶ ಕೂಡ ನಾಶವಾಗುತ್ತದೆ. ಹಾಸಿಗೆಯ ಮೇಲೆ ಸಂಗ್ರಹವಾಗುವ ಧೂಳನ್ನು ಸ್ವಚ್ಛಗೊಳಿಸುತ್ತಲೇ ಇರಬೇಕು. ಅಲ್ಲದೇ ನೀವು ಬಳಸುವ ಹಾಸಿಗೆಗಳನ್ನು ಪ್ರತಿ 7 ರಿಂದ 10 ವರ್ಷಗಳ ಒಳಗಾಗಿ ಬದಲಾಯಿಸಬೇಕು. ನಿಮ್ಮ ಹಾಸಿಗೆಯೇನಾದರೂ ಉತ್ತಮ ಗುಣಮಟ್ಟದಾಗಿದ್ದರೆ ನೀವು 15 ವರ್ಷಗಳವರೆಗೆ ಬಳಕೆ ಮಾಡಬಹುದು.

ಈಗ ಮಾರುಕಟ್ಟೆಗಳಲ್ಲಿ ವಾಟರ್ ಪ್ರೂಫ್ ಹಾಸಿಗೆಗಳು ಲಭ್ಯವಿದೆ. ಕೊಂಚ ದುಬಾರಿಯಾಗಿದ್ದರೂ ಸಹ ನಿಮ್ಮ ಆರೋಗ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಇವುಗಳನ್ನು ಸ್ವಚ್ಛಗೊಳಿಸುವುದು ಸುಲಭವಾಗಿರುವುದರಿಂದ ಉತ್ತಮ ಗುಣಮಟ್ಟದ ಹಾಸಿಗೆಗಳನ್ನು ಖರೀದಿಸಿ ತನ್ನಿ.

ವಾರಕ್ಕೊಮ್ಮೆ ನಿಮ್ಮ ಹೊದಿಕೆ, ಬೆಡ್‌ಶೀಟ್ ಹಾಗೂ ದಿಂಬಿನ ಕವರ್‌ಗಳನ್ನು ಬದಲಾಯಿಸುತ್ತಿರಿ. ಇವುಗಳಲ್ಲಿ ನಮ್ಮ ಬೆವರು, ಸತ್ತ ಚರ್ಮಗಳು ಸಂಗ್ರಹವಾಗುವುದರಿಂದ ಹಾಸಿಗೆಯ ಹೊದಿಕೆಗಳ ನೈರ್ಮಲ್ಯದ ಬಗ್ಗೆ ನೀವು ಗಮನ ನೀಡಲೇಬೇಕು. ಹಾಸಿಗೆ ಮಾತ್ರವಲ್ಲ ಮಂಚದ ಸುತ್ತ ಶೇಖರಣೆಯಾಗುವ ಧೂಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.

Whats_app_banner