ಸೆಲೆಬ್ರಿಟಿ ಅಂದ್ರೆ ಸದಾ ಸುಖಿ ಅಲ್ವಾ? ಆದ್ರೂ ಕೆಲವರು ಡಿಪ್ರೆಶನ್‌ಗೆ ಹೋಗ್ತಾರೆ ಯಾಕೆ? ಸೆಲೆಬ್ರಿಟಿಗಳ ಮನಸ್ಸು ಹೇಗಿರುತ್ತೆ? -ಮನದ ಮಾತು
ಹೊರಗಡೆಯಿಂದ ನೋಡೋಕೆ ತುಂಬಾ ಖುಷಿಯಾಗಿ ಇರುವಂತೆ ಕಾಣುತ್ತಾರೆ. ಆದರೆ ಒಳಗಡೆ ಸಾಕಷ್ಟು ಸಮಸ್ಯೆಗಳನ್ನು ಸೆಲೆಬ್ರಿಟಿಗಳು ಎದುರಿಸುತ್ತಾರೆ. ಅದರಲ್ಲೂ ಕೆಲವರು ಖಿನ್ನತೆಯಂತಹ ಸಮಸ್ಯೆಗಳಿಗೆ ಒಳಗಾಗಿರುತ್ತಾರೆ ಯಾಕೆ ಎಂಬುದರ ಬಗ್ಗೆ ಭವ್ಯಾ ವಿಶ್ವನಾಥ್ ಅವರ ಮನದ ಮಾತು ಅಂಕಣದಲ್ಲಿ ತಿಳಿಯಿರಿ.
ಪ್ರಶ್ನೆ: ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮನಸ್ಸು ಹೇಗಿರುತ್ತೆ? ಅವರು ಯಾವ ರೀತಿ ಯೋಚಿಸುತ್ತಾರೆ? ಅವರ ಭಾವನೆಗಳೇನು? ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳು ಹೇಗಿರುತ್ತವೆ ಎಂದು ತಿಳಿದುಕೊಳ್ಳುವ ಆಸಕ್ತಿ ನನಗಿದೆ. ವಿವರಿಸಲು ಸಾಧ್ಯವೇ ಮೇಡಂ
- ಅಯ್ಯಪ್ಪ, ಮೈಸೂರು
ಉತ್ತರ: ನಿಮ್ಮ ಪ್ರಶ್ನೆ ಚೆನ್ನಾಗಿದೆ. ಇತ್ತೀಚೆಗೆ ನಮ್ಮ ಕರ್ನಾಟಕ ರಾಜ್ಯದಲ್ಲಿ ನಡೆದ ಕೆಲ ವಿದ್ಯಮಾನಗಳ ನಂತರ ಹಲವರಲ್ಲಿ ಇಂಥ ಪ್ರಶ್ನೆಗಳು ಮೂಡಿವೆ. ಪ್ರಖ್ಯಾತ ಸೆಲೆಬ್ರಿಟಿಗಳ ಅಭಿಮಾನಿಗಳಿಗೆ ಮಾತ್ರವಲ್ಲ ಸಾಮಾನ್ಯ ಜನರಿಗೂ ಇಂಥ ಪ್ರಶ್ನೆ ಇರುತ್ತದೆ. ಈ ಪ್ರಶ್ನೆಯ ಜೊತೆಗೆ, 'ಸೆಲೆಬ್ರಿಟಿಗಳಿಗೇನು ಕಡಿಮೆ? ಯಶಸ್ಸು, ಹೆಸರು, ಹಣ, ಅಂತಸ್ತು, ಕೈಗೊಂದು ಕಾಲಿಗೊಂದು ಆಳು ಇರುತ್ತಾರೆ. ಅವರಿಗೇನು ಸಮಸ್ಯೆ? ಐಷಾರಾಮದ ಬದುಕನ್ನು ಖುಷಿಯಾಗಿ ಎಂಜಾಯ್ ಮಾಡಬಹುದು' ಎನ್ನುವ ಅಭಿಪ್ರಾಯ ಹಲವರದು. ಹೀಗಾಗಿಯೇ ಸೆಲೆಬ್ರಿಟಿಗಳು ಖಿನ್ನತೆ, ಒತ್ತಡ, ಆತಂಕಗಳಿಂದ ಬಳಲಿದರೆ ಅಥವಾ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದರೆ, ಅವರನ್ನೇಕೆ ಇಂಥ ಸಮಸ್ಯೆಗಳು ಕಾಡುತ್ತವೆ ಎಂದು ಹಲವರು ಅಂದುಕೊಳ್ಳುತ್ತಾರೆ. ಹಾಗಾದರೆ, ಅವರ ಸಮಸ್ಯೆಗಳೇನು? ಚಿಂತೆಗಳೇನು? ಅವರ ಬಯಕೆಗಳೇನು? ಆಲೋಚನೆಗಳೇನು? ಒಟ್ಟಾರೆ ಅವರ ಮನಸ್ಥಿತಿ ಹೇಗಿರುತ್ತದೆ ಎಂದು ನಿಮಗೆ ಮತ್ತು ಎಲ್ಲ ಓದುಗರಿಗೆ ಈ ಅಂಕಣದ ಮೂಲಕ ಮನಃಶಾಸ್ತ್ರದ ದೃಷ್ಟಿಕೋನದಿಂದ ವಿವರಿಸುವ ಪ್ರಯತ್ನ ಮಾಡಿದ್ದೇನೆ.
ಪದವಿ, ಯಶಸ್ಸು, ಜನಪ್ರಿಯತೆ, ಹಣ, ಅಧಿಕಾರ, ಪ್ರಭಾವಶಾಲಿ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸುವುದು ಸೆಲೆಬ್ರಿಟಿಗಳಿಗೆ ಸುಲಭ. ಇವರಿಗೆ ಇತರ ಬಯಕೆಗಳು, ಅಗತ್ಯಗಳು ಮತ್ತು ಪರಿಸ್ಥಿತಿ ಒಡ್ಡುವ ಅತೀವ ಒತ್ತಡಗಳು ಸಹ ಇರುತ್ತವೆ. ಇವುಗಳನ್ನು ಪೂರೈಸಿಕೊಳ್ಳುವ ಮತ್ತು ನಿಭಾಯಿಸಿಕೊಳ್ಳುವ ಯತ್ನದಲ್ಲಿ ಅವರು ಸದಾ ನಿರತರಾಗಿರುತ್ತಾರೆ. ಸಾಮಾನ್ಯವಾಗಿ ಈ ಅಂಶಗಳೇ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿರುತ್ತವೆ. ಅವರ ಮನಸ್ಥಿತಿಯ ಮೇಲೆ ಅವರ ನಡವಳಿಕೆಗಳು ಅವಲಂಬಿತವಾಗಿರುತ್ತದೆ. ಹಾಗಾದರೆ, ಆ ಅಂಶಗಳು ಯಾವುವು? ಅವುಗಳ ಮಹತ್ವ ಏನು? ತಿಳಿಯೋಣ ಬನ್ನಿ.
ಸೆಲೆಬ್ರಿಟಿಗಳಿಗೆ ಸ್ಥಿರತೆ, ಭದ್ರತೆಯ ಅಪೇಕ್ಷೆ ಹೆಚ್ಚು
ಸೆಲೆಬ್ರಿಟಿಗಳು ತಾವು ತೊಡಗಿರುವಂತಹ ಕ್ಷೇತ್ರದಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಅಪೇಕ್ಷಿಸುತ್ತಾರೆ. ತಾವು ಕಂಡಿರುವ ಗೆಲುವು, ಯಶಸ್ಸು, ಜನಪ್ರಿಯತೆಯನ್ನು ಹೇಗೆ ನಿಭಾಯಿಸಬೇಕು ಮತ್ತು ಅದನ್ನು ಸುದೀಘ೯ವಾಗಿ ಹೇಗೆ ಕಾಪಾಡಿಕೊಳ್ಳಬೇಕೆಂದು ಸದಾ ಯೋಚಿಸುತ್ತಿರುತ್ತಾರೆ. ಇದು ಅವರಲ್ಲಿ ಒತ್ತಡವನ್ನು ಉಂಟು ಮಾಡುತ್ತದೆ. ತಮಗೆ ಈಗಾಗಲೇ ಬೇಡಿಕೆಯನ್ನು ಹೇಗೆ ಹೆಚ್ಚಿಸಿಕೊಳ್ಳಬೇಕೆಂದು ಸದಾ ಪ್ಲಾನ್ ಮಾಡುತ್ತಿರುತ್ತಾರೆ.
ಪರಿಶ್ರಮಪಟ್ಟು ಗೆಲುವು ಸಾಧಿಸಿದ ನಂತರ ಅದರ ಪ್ರತಿಫಲವಾಗಿ ದೊರಕಿರುವ ಜನಪ್ರಿಯತೆ (ಫೇಮ್), ಅಭಿಮಾನಿಗಳು (ಫ್ಯಾನ್ ಫಾಲೋಯಿಂಗ್), ಅಧಿಕಾರವನ್ನು (ಪವರ್) ಹೇಗೆ ನಿಭಾಯಿಸಬೇಕೆಂದು ಯೋಚಿಸುತ್ತಲೇ ಇರುತ್ತಾರೆ. ಇವನ್ನು ನಿಭಾಯಿಸುವುದು ಸಹ ಒಂದು ಕಲೆ. ಈ ಕಲೆಯು ಸ್ವಾಭಾವಿಕವಾಗಿ ಎಲ್ಲ ಸೆಲೆಬ್ರಿಟಿಗಳಿಗೆ ಬಂದಿರುವುದಿಲ್ಲ. ಆದ್ದರಿಂದ ಯಶಸ್ಸಿನ ಹಿಂದಿರುವ ಪರಿಶ್ರಮದಷ್ಟೇ, ಯಶಸ್ಸಿನ ನಂತರ ಅದನ್ನು ನಿಭಾಯಿಸುವ ಕಲೆಯನ್ನು ಕಲಿಯುವ ಸಮಯ ಸಾಕಷ್ಟು ಸವಾಲುಗಳಿಂದ ಕೂಡಿರುತ್ತದೆ. ಹಾಗಾಗಿ ಈ ಹಂತದಲ್ಲಿ ತಪ್ಪುಗಳು, ಅಪರಾಧಗಳು ಸಂಭವಿಸುವ ಸಾಧ್ಯತೆ ಇರುತ್ತದೆ.
ಜನಪ್ರಿಯತೆ ಕಾಯ್ದುಕೊಳ್ಳುವ ಒತ್ತಡ
ಜನಪ್ರಿಯತೆ ಕಾಯ್ದುಕೊಂಡು ಹೋಗುವ ಜವಾಬ್ಧಾರಿಯ ಒತ್ತಡಕ್ಕೆ ಅಣಿಮಾಡಿಕೊಡಬಹುದು. ತಮ್ಮ ಪ್ರತಿಭೆ, ಸಾಮರ್ಥ್ಯವನ್ನು ತಮ್ಮ ಕೆಲಸದ ಮೂಲಕ ಸದಾ ಸಾಬಿತು ಮಾಡುವ ಒತ್ತಡವೂ ಇರುತ್ತದೆ. ಗೊಂದಲ, ಆತಂಕದ ಮನಸ್ಥಿತಿಯು ಸಹ ಬಹುತೇಕ ಸೆಲೆಬ್ರಿಟಿಗಳಿಗೆ ತಪ್ಪಿದ್ದಲ್ಲ. ಲಾಭ ನಷ್ಟ, ಸರಿ ತಪ್ಪು ನಿರ್ಧಾರ ತೆಗೆದುಕೊಳ್ಳುವಲ್ಲಿ ಅನೇಕ ಗೊಂದಲ ಮತ್ತು ಆತಂಕವನ್ನು ಎದುರಿಸುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂ ಪ್ರಚಾರ ಮತ್ತು ಚಾಲ್ತಿಯಲ್ಲಿರುವ ಉದ್ದೇಶದಿಂದ ಸೆಲೆಬ್ರಿಟಿಗಳು ಹಲವು ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಆದರೆ ಇಲ್ಲೂ ಸಹ ಬಹಳ ಸಲ ತಮ್ಮ ಇಚ್ಛೆ ಇಲ್ಲವೇ ಅನಿವಾರ್ಯತೆಯಿಂದ ಸಕ್ರಿಯರಾಗಿರುವ ಸಾಧ್ಯತೆಯಿರುತ್ತದೆ. ಸೆಲೆಬ್ರಿಟಿಗಳ ಒಟ್ಟಾರೆ ಬದುಕಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ, ಸಮೂಹ ಮಾಧ್ಯಮಗಳಲ್ಲಿ ವಿಪರೀತ ಚರ್ಚೆ, ಟ್ರೋಲ್, ನೆಗೆಟಿವ್ ಕಮೆಂಟ್ಸ್, ಸಾರ್ವಜನಿಕ ತೀರ್ಪು ಮತ್ತು ಖಾಸಗಿತನದ ಕೊರತೆ ಇರುತ್ತದೆ. ಇವೆಲ್ಲವುಗಳಿಂದ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಅದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸಿ, ತಮ್ಮ ಸಾಮರ್ಥ್ಯದ ಮೇಲೆ ತಾವೇ ಸಂಶಯ ಪಡುವಂತಹ (self doubt) ಸಂದರ್ಭವನ್ನು ಉಂಟುಮಾಡುತ್ತದೆ. ಇಂಥ ಒತ್ತಡಗಳು ಕೆಲವೊಮ್ಮೆ ನೆಗೆಟೀವ್ ಪ್ರಚೋದನೆ ನೀಡಿ, ಉದ್ರೇಕಗೊಳಿಸುತ್ತದೆ. ಇಂತಹ ಪರಿಸ್ಥಿತಿಗಳು ಬಹಳ ಒತ್ತಡ ಹಾಗೂ ಖಿನ್ನತೆಗೆ ಕಾರಣ ಮಾಡಿಕೊಡುತ್ತದೆ.
ಸೆಲೆಬ್ರಿಟಿಗಳನ್ನು ಕಾಡುವ ಬಾಡಿ ಶೇಮಿಂಗ್ ಆತಂಕ
ಸೆಲೆಬ್ರಿಟಿಗಳು ಚಾಲ್ತಿಯಲ್ಲಿರುವ ಟ್ರೆಂಡ್‌ನಂತೆ ದೈಹಿಕವಾಗಿ ಫಿಟ್ ಮತ್ತು ಗ್ಲಾಮರಸ್ ಆಗಿ ಕಾಣಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುತ್ತಾರೆ. ನಿರ್ಲಕ್ಷ್ಯ ಮಾಡಿದರೆ ಟ್ರೋಲ್‌ಗಳಿಗೆ ಬಲಿಯಾಗಬೇಕಾಗುತ್ತದೆ. ಬಾಡಿ ಶೇಮಿಂಗ್ (Body shame) ಕಾರಣಕ್ಕೆ ಸೆಲೆಬ್ರಿಟಿಗಳು ಹಲವು ಬಾರಿ ಖಿನ್ನತೆ ಅನುಭವಿಸುತ್ತಾರೆ. ಅಂದರೆ ತಮ್ಮ ದೇಹದ ಬಗ್ಗೆ ಬೇರೊಬ್ಬ ವ್ಯಕ್ತಿ ನಕಾರಾತ್ಮಕವಾಗಿ ಕಾಮೆಂಟ್ ಮಾಡುವುದು ಹಲವು ಬಾರಿ, ಒಬ್ಬ ವ್ಯಕ್ತಿಯನ್ನು ಮಾನಸಿಕ ಖಿನ್ನತೆಗೆ (Depression) ನೂಕುತ್ತದೆ. ಸೆಲೆಬ್ರಿಟಿಗಳ ಬದುಕಿನಲ್ಲಿ ಇದು ದಿನನಿತ್ಯದ ಸಮಸ್ಯೆಯಾಗಿರುತ್ತದೆ.
ಜನಪ್ರಿಯತೆಯಲ್ಲಿ ಇರುವವರಿಗೆ ವದಂತಿಗಳ (Rumours) ಕಾಟವೂ ಹೆಚ್ಚು. ಎಷ್ಟೋ ಬಾರಿ ಅಭಿಮಾನಿಗಳು ಅಥವಾ ಪ್ರೇಕ್ಷಕರು ಸತ್ಯವೋ, ಕಟ್ಟು ಕಥೆಯೋ ಎಂದು ಪರಿಶೀಲಿಸದೆ ಅವರ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನ ಕುರಿತು ಹಲವು ವದಂತಿಗಳನ್ನು ಹರಡುತ್ತಾರೆ. ಇದರಿಂದ ಅನೇಕ ಅನಗತ್ಯ ಸಮಸ್ಯೆಗಳು ಉಂಟಾಗಿ ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಾರೆ.
ತಾರೆಗಳ ಲೋಕದಲ್ಲಿ ಸ್ಪರ್ಧೆಗಳ ಮೇಲಾಟ
ಸ್ಪರ್ಧೆಯು (Competition) ತಾರಾಲೋಕದ ಸಾಮಾನ್ಯ ಸಂಗತಿ. ತಮ್ಮ ಕ್ಷೇತ್ರದಲ್ಲಿರುವ ಇತರ ಸೆಲೆಬ್ರಿಟಿಗಳ ಜೊತೆ ಪೈಪೋಟಿ ಇದ್ದೇ ಇರುತ್ತದೆ. ಈ ಪೈಪೋಟಿಯು ಮಿತವಾಗಿದ್ದರೆ ಆರೋಗ್ಯಕರವಾಗಿರುತ್ತದೆ, ಅತಿಯಾದರೆ ಸಂಕಷ್ಟ ಅನುಭವಿಸಬೇಕಾಗುತ್ತದೆ. ಇನ್ನೊಬ್ಬರನ್ನು ಮೀರಿಸಬೇಕು, ಯಾವುದೇ ಕಾರಣಕ್ಕೂ ಅವರನ್ನು ಮೇಲಕ್ಕೆ ಬರದಂತೆ ನೋಡಿಕೊಳ್ಳಬೇಕು ಅಥವಾ ನನ್ನ ಸ್ಥಾನವನ್ನು ಬಿಟ್ಟುಕೊಡಬಾರದೆಂಬ ಅತಿಯಾದ ಒತ್ತಡಗಳಿಂದ ಮನಸ್ತಾಪಗಳು ಉಂಟಾಗಬಹುದು. ಕೆಲವೊಮ್ಮೆ ಇದೇ ಕಾರಣಕ್ಕಾಗಿ ಸೆಲೆಬ್ರಿಟಿಗಳು ತಪ್ಪು ಹೆಜ್ಜೆ ಇಡುವಂತೆ ಆಗಬಹುದು.
ಒಂದೆರೆಡಲ್ಲ ಸೆಲೆಬ್ರಿಟಿಗಳ ಸವಾಲು
ಗಮನಿಸಿ ನೋಡಿ, ಬಹುತೇಕ ಸೆಲೆಬ್ರಿಟಿಗಳ ದಾಂಪತ್ಯ ಜೀವನದಲ್ಲಿ ಏರುಪೇರು ಕಂಡುಬರುತ್ತದೆ. ಸಂಗಾತಿ, ಪ್ರೀತಿ, ನಂಬಿಕೆ, ವಿಶ್ವಾಸಗಳ ವಿಚಾರಗಳಲ್ಲೂ ಸಹ ಅವರು ಹಲವು ಸವಾಲುಗಳನ್ನು ಎದುರಿಸುತ್ತಾರೆ. ನಂಬಿದವರಿಂದ ವಿಶ್ವಾಸದ್ರೋಹ, ಅಭದ್ರತೆ, ಒಂಟಿತನ, ಮೋಸ ಹೀಗೆ ಹಲವಾರು ಸಮಸ್ಯೆಗಳಿಂದ ಒದ್ದಾಡುತ್ತಾರೆ. ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನ ಸಮತೋಲನ (balance) ಕಾಪಾಡಿಕೊಳ್ಳಲು ಅವರು ಸಾಕಷ್ಟು ಪ್ರಯತ್ನ ಪಡಬೇಕಾಗುತ್ತದೆ. ಅವರ ಬದುಕಿನ ಏರಿಳಿತಗಳು ಮತ್ತು ಚಲನವಲನಗಳು ಸದಾ ಸಾವ೯ಜನಿಕ ಪರಿಶೀಲನೆಯಲ್ಲಿರುವ (public scrutiny) ಕಾರಣ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಇಲ್ಲದಿದ್ದರೆ ಅವರ ಜನಪ್ರಿಯತೆ ಮತ್ತು ಪ್ರತಿಷ್ಠೆಗೆ ಧಕ್ಕೆಬರಬಹುದು ಎನ್ನುವ ಆತಂಕ ಇರುತ್ತದೆ. ಅವರ ಇತರ ಹಣಕಾಸಿನ ವ್ಯವಹಾರಗಳು ಮತ್ತು ಸ್ವಂತ ವ್ಯಾಪಾರ, ವಹಿವಾಟುಗಳ ಏಳಿರಿತಗಳು ಸಹ ಒತ್ತಡ ಮತ್ತು ಆತಂಕವನ್ನು ಉಂಟುಮಾಡುತ್ತದೆ.
ಸೆಲೆಬ್ರಿಟಿಗಳದ್ದೂ ಮನುಷ್ಯನ ಮನಸ್ಸೇ
ಇನ್ನು, ಕೆಲವು ಸೆಲೆಬ್ರಿಟಿಗಳು ಸಾಮಾನ್ಯ ಜನರಂತೆಯೇ ಅತಿಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ. ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗದೇ ಮಾನಸಿಕ ಆನಾರೋಗ್ಯಕ್ಕೆ ತುತ್ತಾಗುತ್ತಾರೆ. ಇಂಥ ಹಲವು ಕಾರಣಗಳಿಂದ ಸೆಲೆಬ್ರಿಟಿಗಳು ಸಹ ಜನಪ್ರಿಯತೆ, ಅಧಿಕಾರ, ಹಣವಿದ್ದರೂ ಆತಂಕ, ಒತ್ತಡ, ಖಿನ್ನತೆಗಳಿಗೆ ತುತ್ತಾಗುತ್ತಾರೆ. ಉತ್ತಮವಾದ ಆತ್ಮೀಯ ಗೆಳೆಯರು, ಮಾರ್ಗದರ್ಶಕರು (mentors), ಒಳ್ಳೆಯ ಹವ್ಯಾಸಗಳು, ಆಪ್ತ ಸಮಾಲೋಚನೆಯಂಥ ನೆರವಿದ್ದರೆ ಇಂತಹ ಒತ್ತಡ ಮತ್ತು ಆತಂಕವನ್ನು ಉತ್ತಮವಾಗಿ ನಿಭಾಯಿಸುವುದನ್ನು ಕಲಿಯಬಹುದು.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.