ಆರೋಗ್ಯಕ್ಕಷ್ಟೇ ಅಲ್ಲ ತೂಕ ಇಳಿಕೆಗೂ ಹೇಳಿ ಮಾಡಿಸಿದ್ದು ಆಲೂ ಪಾಲಕ್ ಪರೋಟ; ಮಕ್ಕಳು ಕೂಡ ಇಷ್ಟಪಡುವ ರೆಸಿಪಿಯಿದು
ಭಾರತದಲ್ಲಿ ಬಹುತೇಕ ಕಡೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿಯೂಟಕ್ಕೆ ಚಪಾತಿ ತಿನ್ನುವುದು ಸಾಮಾನ್ಯ. ಆದರೆ ಚಪಾತಿಗಿಂತ ತರಕಾರಿ ಸೇರಿಸಿ ಮಾಡಿದ ಪರೋಟ ಆರೋಗ್ಯಕರಕ್ಕೆ ಉತ್ತಮ. ಆಲೂಗೆಡ್ಡೆ, ಪಾಲಕ್ ಸೊಪ್ಪಿನಿಂದ ಮಾಡಿದ ರುಚಿಯಾದ ಪರೋಟವನ್ನು ಮಕ್ಕಳು ಕೂಡ ಇಷ್ಟಪಟ್ಟು ತಿನ್ನುವುದರಲ್ಲಿ ಅನುಮಾನವಿಲ್ಲ. ಇದನ್ನು ಮಾಡೋದು ಹೇಗೆ ನೋಡಿ.
ಚಪಾತಿ ಹಲವರ ಫೇವರಿಟ್ ತಿಂಡಿ, ಇಷ್ಟ ಎನ್ನುವುದಕ್ಕಿಂತ ಆರೋಗ್ಯಕ್ಕೆ ಬೆಸ್ಟ್ ಎನ್ನುವ ಕಾರಣಕ್ಕೆ ತಿನ್ನುವವರೇ ಹೆಚ್ಚು. ಚಪಾತಿ ಹಾಗೂ ಪರೋಟ ಎರಡನ್ನೂ ಗೋಧಿಹಿಟ್ಟಿನಿಂದ ತಯಾರಿಸುತ್ತಾರೆ. ಆದರೆ ಪರೋಟ ಚಪಾತಿಗಿಂತ ಹೆಚ್ಚು ಉತ್ತಮ ಎನ್ನಲಾಗುತ್ತದೆ. ಯಾಕೆಂದರೆ ಇದನ್ನು ತಯಾರಿಸುವಾಗ ಆಲೂಗೆಡ್ಡೆ ಸೇರಿದಂತೆ ವಿವಿಧ ತರಕಾರಿಗಳನ್ನು ಸೇರಿಸಲಾಗುತ್ತದೆ. ಈ ಪರೋಟ ದೊಡ್ಡವರಿಗಷ್ಟೇ ಮಕ್ಕಳ ಆರೋಗ್ಯಕ್ಕೂ ಬೆಸ್ಟ್. ಭಿನ್ನ ರುಚಿ ಹೊಂದಿರುವ ಪರೋಟ ಮಕ್ಕಳಿಗೆ ಫೇವರಿಟ್ ಆಗುವುದರಲ್ಲಿ ಸಂಶಯವಿಲ್ಲ.
ಪಾಲಕ್ ಸೊಪ್ಪು, ಆಲೂಗೆಡ್ಡೆಯಿಂದ ಮಾಡಿದ ಪರೋಟ ಆರೋಗ್ಯಕ್ಕೆ ಬಹಳ ಉತ್ತಮ. ಇದು ಭಿನ್ನ ರುಚಿ ಹೊಂದಿರುವ ಜೊತೆಗೆ ತೂಕ ಇಳಿಕೆಗೂ ಹೇಳಿ ಮಾಡಿಸಿದ್ದು. ಬೆಳಗಿನ ಉಪಾಹಾರದ ಹೊತ್ತು ಆಲೂ-ಪಾಲಕ್ ಪರೋಟ ತಿಂದರೆ ಬಹಳ ಹೊತ್ತು ಹೊಟ್ಟೆ ಹಸಿವಾಗುವುದಿಲ್ಲ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗೆ ಇದು ಅತ್ಯುತ್ತಮ ಉಪಹಾರ ಎಂದು ಹೇಳಬಹುದು. ಮಕ್ಕಳಿಗೂ ದೊಡ್ಡವರಿಗೂ ಸಲ್ಲುವ ಆಲೂ ಪಾಲಕ್ ಪರೋಟ ತಯಾರಿಸುವುದು ಹೇಗೆ ನೋಡಿ.
ಆಲೂ ಪಾಲಕ್ ಪರೋಟ ರೆಸಿಪಿಗೆ ಬೇಕಾಗುವ ಪದಾರ್ಥಗಳು
ಗೋಧಿ ಹಿಟ್ಟು - ಒಂದೂವರೆ ಕಪ್, ಉಪ್ಪು - ರುಚಿಗೆ, ತುಪ್ಪ - ಎರಡು ಚಮಚ, ನೀರು - ಸಾಕಷ್ಟು, ಆಲೂಗೆಡ್ಡೆ - ಎರಡು, ಪಾಲಾಕ್ ಸೊಪ್ಪಿನ ರಸ - ಒಂದು ಕಪ್, ಈರುಳ್ಳಿ - ಒಂದು, ಬೆಳ್ಳುಳ್ಳಿ ಎಸಳು - ನಾಲ್ಕು, ಮೆಣಸಿನಕಾಯಿ - ಒಂದು ಚಮಚ, ಚಾಟ್ ಮಸಾಲ - ಒಂದು ಚಮಚ, ಆಮ್ಚೂರ್ ಪುಡಿ - ಒಂದು ಚಮಚ, ಬೆಣ್ಣೆ - ಒಂದು ಚಮಚ
ಆಲೂ ಪಾಲಕ್ ಪರೋಟ ತಯಾರಿಸುವ ವಿಧಾನ
ಮೊದಲು ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿಕೊಂಡು ಸಿಪ್ಪೆ ತೆಗೆದು ಕೈಯಿಂದ ಮ್ಯಾಶ್ ಮಾಡಿ ಪಕ್ಕಕ್ಕೆ ಇರಿಸಿಕೊಳ್ಳಿ. ಗೋಧಿಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲೆಸಿ ಅರ್ಧ ಗಂಟೆಯವರೆಗೆ ಮುಚ್ಚಿಡಿ. ಈಗ ಒಲೆಯ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ, ಬೆಳ್ಳುಳ್ಳಿ ಸೇರಿಸಿ ಮತ್ತು ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ. ಕತ್ತರಿಸಿದ ಈರುಳ್ಳಿ ಸೇರಿಸಿ ಅದನ್ನು ಫ್ರೈ ಮಾಡಿ. ಮುಚ್ಚಳ ಮುಚ್ಚಿ ಪೂರ್ತಿ ನೀರು ಆವಿಯಾಗುವವರೆಗೆ ಬೇಯಿಸಿ. ಇದಕ್ಕೆ ಚಾಟ್ ಮಸಾಲಾ ಮತ್ತು ಆಲೂಗಡ್ಡೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೃದುವಾದಾಗ ಸ್ಟವ್ ಆಫ್ ಮಾಡಿ. ಈಗ ಚಪಾತಿ ಹಿಟ್ಟನ್ನು ತೆಗೆದುಕೊಂಡು ಅಂಗೈ ಅಗಲಕ್ಕೆ ತಟ್ಟಿಕೊಳ್ಳಿ. ಒಂದು ಚಮಚ ಆಲೂಗಡ್ಡೆ ಮತ್ತು ಪಾಲಕ್‌ಸೊಪ್ಪಿನ ಮಿಶ್ರಣವನ್ನು ಮಧ್ಯದಲ್ಲಿ ಹಾಕಿ ಮತ್ತು ಚಪಾತಿ ಮಡಿಸಿ. ಪರೋಟವನ್ನು ಒತ್ತಿ ಮತ್ತು ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ, ತುಪ್ಪ ಸೇರಿಸಿ ಮತ್ತು ಪರೋಟಾವನ್ನು ಎರಡೂ ಬದಿಗಳಲ್ಲಿ ಫ್ರೈ ಮಾಡಿ. ಅಷ್ಟೇ ಟೇಸ್ಟಿ ಆಲೂ ಪಾಲಕ್ ಪರೋಟ ತಿನ್ನಲು ಸಿದ್ಧ. ನೀವು ತೂಕ ಇಳಿಕೆಗೆ ಪ್ಲಾನ್ ಮಾಡುತ್ತಿದ್ದರೂ ಈ ರೆಸಿಪಿಯನ್ನು ನಿಮ್ಮ ಲಿಸ್ಟ್‌ನಲ್ಲಿ ಸೇರಿಸಿಕೊಳ್ಳಿ.
ಇದನ್ನು ಮಕ್ಕಳಿಗೆ ನೀಡುವುದರಿಂದ ಅವರು ಪಾಲಕ್ ಮತ್ತು ಆಲೂಗಡ್ಡೆಯಿಂದ ಪೋಷಕಾಂಶಗಳನ್ನು ಪಡೆಯುತ್ತಾರೆ. ಸಾಮಾನ್ಯ ಚಪಾತಿಗಳಿಗಿಂತ ಈ ತರಕಾರಿ ಪರಾಠಗಳು ಆರೋಗ್ಯಕ್ಕೆ ಉತ್ತಮ.
ಪರಾಠಾಗಳನ್ನು ಮಾಡುವುದು ತುಂಬಾ ಸುಲಭ ಆದರೆ ಅನೇಕರು ಇದನ್ನು ಕಷ್ಟ ಎಂದು ಭಾವಿಸುತ್ತಾರೆ. ಒಮ್ಮೆ ಇದನ್ನು ಪ್ರಯತ್ನಿಸಿ ಮತ್ತು ನೀವು ಅದನ್ನು ತುಂಬಾ ಸುಲಭವಾಗಿ ಕಾಣಬಹುದು. ಮಕ್ಕಳು ಕೂಡ ಇದನ್ನು ತಿನ್ನಲು ಇಷ್ಟಪಡುತ್ತಾರೆ.
ವಿಭಾಗ