Ganapati Temple: ಉತ್ತರ ಕನ್ನಡದ ಹೊನ್ನಾವರ ಸಮೀಪ ಇಡಗುಂಜಿಯಲ್ಲಿ ದ್ವಿಭುಜಾಕೃತಿಯಲ್ಲಿ ನಿಂತ ವಿನಾಯಕ, ಗಣೇಶನ ಹಬ್ಬಕ್ಕೆ ದೇಗುಲ ದರ್ಶನ
ಕನ್ನಡ ಸುದ್ದಿ  /  ಜೀವನಶೈಲಿ  /  Ganapati Temple: ಉತ್ತರ ಕನ್ನಡದ ಹೊನ್ನಾವರ ಸಮೀಪ ಇಡಗುಂಜಿಯಲ್ಲಿ ದ್ವಿಭುಜಾಕೃತಿಯಲ್ಲಿ ನಿಂತ ವಿನಾಯಕ, ಗಣೇಶನ ಹಬ್ಬಕ್ಕೆ ದೇಗುಲ ದರ್ಶನ

Ganapati Temple: ಉತ್ತರ ಕನ್ನಡದ ಹೊನ್ನಾವರ ಸಮೀಪ ಇಡಗುಂಜಿಯಲ್ಲಿ ದ್ವಿಭುಜಾಕೃತಿಯಲ್ಲಿ ನಿಂತ ವಿನಾಯಕ, ಗಣೇಶನ ಹಬ್ಬಕ್ಕೆ ದೇಗುಲ ದರ್ಶನ

Sri Idagunji Maha Ganapathy Temple: ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರಮುಖ ಗಣೇಶನ ದೇವಾಲಯಗಳ ಮಾಲಿಕೆಯಲ್ಲಿ ಇಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಇಡಗುಂಜಿ ವಿನಾಯಕ ದೇವಸ್ಥಾನದ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ. (ಲೇಖನ: ಹರೀಶ ಮಾಂಬಾಡಿ)

ಇಡಗುಂಜಿ ವಿನಾಯಕ ದೇಗುಲ
ಇಡಗುಂಜಿ ವಿನಾಯಕ ದೇಗುಲ

ಕಾರವಾರ: ಕರ್ನಾಟಕ ಕಡಲ ತೀರದ ಪ್ರಸಿದ್ಧವಾಗಿರುವ ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿಗೆ ಮಹತ್ವದ ಸ್ಥಾನವಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಿಂದ ಕೇವಲ 7 ಕಿ.ಮೀ. ದೂರದಲ್ಲಿ ಸಾಗಿದರೆ, ಇಡಗುಂಜಿ ವಿನಾಯಕ ದೇವಸ್ಥಾನ ಕಾಣಸಿಗುತ್ತದೆ. ಪ್ರಶಾಂತ ಸನ್ನಿವೇಶದಲ್ಲಿರುವ ಈ ದೇವಸ್ಥಾನದ ಮಹತೋಭಾರ ಶ್ರೀ ವಿನಾಯಕ ದೇವರು ದ್ವಿಭುಜಾಕೃತಿಯಲ್ಲಿ ನಿಂತಿರುವುದು ಹಾಗೂ ಸುಮಾರು 88 ಸೆಂ.ಮೀ. ಎತ್ತರ ಮತ್ತು 59 ಸೆಂ.ಮೀ. ಅಗಲದ ದೇವರ ವಿಗ್ರಹ ಅತ್ಯಂತ ಆಕರ್ಷಣೀಯವಾಗಿರುವುದಲ್ಲದೆ, ಭಕ್ತಿಯನ್ನು ಸ್ಫುರಿಸುವಂಥದ್ದಾಗಿದೆ. ಪ್ರತಿ ವರ್ಷ ಚೌತಿಯಲ್ಲೂ ಇಡಗುಂಜಿಯಲ್ಲಿ ಹಬ್ಬದ ವಾತಾವರಣ ಕಂಡುಬರುತ್ತದೆ. ಭಕ್ತರು ಸಾಲುಗಟ್ಟಿ ದೇವರ ದರ್ಶನ ಪಡೆಯುತ್ತಾರೆ.

ದರ್ಶನ ಸಮಯ ಹೀಗಿದೆ

ಇಡಗುಂಜಿ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆಯಬೇಕಾದರೆ, ಈ ವೇಳಾಪಟ್ಟಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಬೆಳಗ್ಗೆ 6ರಿಂದ ಮಧ್ಯಾಹ್ನ 1, ಮಧ್ಯಾಹ್ನ 3ರಿಂದ ರಾತ್ರಿ 8.30ರವರೆಗೆ ದರ್ಶನದ ಸಮಯವಿದೆ. ಬೆಳಗ್ಗೆ 6, 11 ಗಂಟೆ ಮತ್ತು ರಾತ್ರಿ 7 ಗಂಟೆ ಅಭಿಷೇಕದ ಸಮಯ. ಬೆಳಗ್ಗೆ 8, ಮಧ್ಯಾಹ್ನ 12 ಮತ್ತು ರಾತ್ರಿ 8 ಗಂಟೆ ಪೂಜಾಸಮಯವಾಗುತ್ತದೆ. ಮಧ್ಯಾಹ್ನ 12.30ಕ್ಕೆ ನಡೆಯುವ ಮಹಾಪೂಜೆ ಕಣ್ತುಂಬಿಕೊಂಡು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲು ನೂರಾರು ಮಂದಿ ಭಕ್ತರು ನಿತ್ಯ ಇಲ್ಲಿಗೆ ಆಗಮಿಸುತ್ತಾರೆ.

1500 ವರ್ಷಗಳ ಇತಿಹಾಸ

ಸುಮಾರ 1500 ವರ್ಷಗಳಿಗೂ ಅಧಿಕ ಹೊಂದಿರುವ ಇಡಗುಂಜಿಯ ಈ ಪುರಾತನ ಗಣಪತಿ ದೇವಸ್ಥಾನಕ್ಕೆ ತನ್ನದೇ ಆದ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಇಡಗುಂಜಿ ಎನ್ನುವ ಪದವು ಎಡಕುಂಜ ಎನ್ನುವ ಪದದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಈ ಎಡಕುಂಜ ಕ್ಷೇತ್ರದ ಮಹತ್ವವನ್ನು ಸ್ಕಂದಪುರಾಣದಲ್ಲಿ ಬರುವ ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖಿಸಲಾಗಿದ್ದು, ಎಡ ಎಂದರೆ ಎಡಕ್ಕೆ ಮತ್ತು ಕುಂಜ ಎಂದರೆ ಉದ್ಯಾನ ಎಂಬರ್ಥವನ್ನು ಪಡೆದುಕೊಂಡಿದೆ. ಶರಾವತಿ ನದಿಯ ಎಡ ದಡದಲ್ಲಿ ಈ ಸ್ಥಳವು ಇರುವುದರಿಂದ ಇದನ್ನು ಇಡಗುಂಜಿ ಎಂದು ಕರೆಯಲಾಯಿತು ಎಂಬ ಹೇಳಿಕೆಯಿದೆ.

ಕಪ್ಪು ಶಿಲೆಯಿಂದ ಮಾಡಿದ ಗಣೇಶ ವಿಗ್ರಹ ಪ್ರಮುಖ ಆಕರ್ಷಣೆ. ವಿಗ್ರಹವು ನಿಂತ ಭಂಗಿಯಲ್ಲಿದೆ. ಈ ರೀತಿಯಾಗಿ ನಿಂತ ಭಂಗಿಯಲ್ಲಿರುವ ಗಣೇಶನ ವಿಗ್ರಹವು ನೋಡಲು ಸಿಗುವುದು ಬಲು ವಿರಳ. ಇಲ್ಲಿನ ಗಣಪತಿ ವಿಗ್ರಹವನ್ನು ''ಮಹೋತಭಾರ ಶ್ರೀ ವಿನಾಯಕ'' ದೇವರು ಎಂದು ಕರೆಯಲಾಗುತ್ತದೆ. ಇಲ್ಲಿನ ವಿನಾಯಕ ಮೂರ್ತಿಯು 'ದ್ವಿಭುಜ ಭಂಗಿ' ಅಂದರೆ ಎರಡು ಕೈಗಳನ್ನು ಅಥವಾ ಭುಜಗಳನ್ನು ಒಳಗೊಂಡಿದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ಮೋದಕವನ್ನು ಹೊಂದಿದ್ದು, ಇಲ್ಲಿ ನಾವು ಗಣೇಶನ ವಾಹನವಾದ ಮೂಷಿಕನನ್ನು ನೋಡಲು ಸಾಧ್ಯವಿಲ್ಲ.

ಇಲ್ಲಿ ಗಣಪತಿ ದೇವರಿಗೆ ನೈವೇದ್ಯವಾಗಿ ಪಂಚಖಾದ್ಯವನ್ನು ತಯಾರಿಸಲಾಗುತ್ತದೆ, ಇದು ಈ ದೇವಾಲಯದ ವಿಶೇಷ ಪ್ರಸಾದವೂ ಆಗಿದೆ. ಯಾವುದೇ ಓರ್ವ ಭಕ್ತನು ಸಮಸ್ಯೆಯನ್ನು ಎದುರಿಸುತ್ತಿದ್ದಾಗ, ಎಷ್ಟೇ ಪ್ರಯತ್ನಿಸಿದರೂ ಆ ಸಮಸ್ಯೆಗಳಿಗೆ ಪರಿಹಾರವೆಂಬುದು ಸಿಗದಿದ್ದಾಗ ಇಲ್ಲಿನ ಇಡಗುಂಜಿ ಗಣೇಶನನ್ನು ಸ್ಮರಿಸಿ ನಮ್ಮ ಸಮಸ್ಯೆಗಳನ್ನು ದೂರ ಮಾಡೆಂದು ಪ್ರಾರ್ಥಿಸಬೇಕು. ಗಣೇಶನು ತನ್ನ ಭಕ್ತರ ಮೊರೆಯನ್ನು ಕೇಳಿಸಿಕೊಂಡು ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿದ ಬಳಿಕ, ನೀವು ಇಡಗುಂಜಿ ದೇವಸ್ಥಾನಕ್ಕೆ ಬಂದು ಇಲ್ಲಿನ ಗಣೇಶನಿಗೆ 5 ರೂಪಾಯಿ ಅಥವಾ 10 ರೂಪಾಯಿ ಕಾಣಿಕೆಯನ್ನು ಅರ್ಪಿಸಬೇಕು. ಇದರಿಂದ ಇಡಗುಂಜಿ ಮಹೋತಾಭಾರ ಶ್ರೀ ವಿನಾಯಕನ ಆಶೀರ್ವಾದವನ್ನು ಶಾಶ್ವತವಾಗಿ ಪಡೆದುಕೊಳ್ಳುತ್ತೀರಿ ಎನ್ನುತ್ತಾರೆ ಇದನ್ನು ನಂಬುವ ಭಕ್ತರು.

  • ಹರೀಶ ಮಾಂಬಾಡಿ

Whats_app_banner