Moringa: ಹೊಟ್ಟೆಗಷ್ಟೇ ಅಲ್ಲ, ಜುಟ್ಟಿಗೂ ಬೇಕು ನುಗ್ಗೆ ಸೊಪ್ಪು; ನುಗ್ಗೆಯಿಂದ ಹಿಗ್ಗಿಸಿ ಕೂದಲ ದಟ್ಟತೆ
ಅಡುಗೆಗೆ ಹೆಚ್ಚಾಗಿ ಬಳಕೆಯಾಗುವ ನುಗ್ಗೆಸೊಪ್ಪು ಕೂದಲ ಬೆಳಗೆಯಲ್ಲೂ ಮ್ಯಾಜಿಕ್ ಮಾಡಬಲ್ಲ ಗುಣಗಳನ್ನು ಹೊಂದಿದೆ. ಆಗಾಗ ನುಗ್ಗೆ ಸೊಪ್ಪಿನ ಪೇಸ್ಟ್ ತಲೆಗೆ ಹಚ್ಚುವ ಮೂಲಕ ದಟ್ಟ ಹಾಗೂ ನೀಳವಾದ ಕೇಶರಾಶಿ ಪಡೆಯಬಹುದು.
ಭಾರತದ ಹಲವೆಡೆ ಅಡುಗೆಯಲ್ಲಿ ನುಗ್ಗೆಕಾಯಿ ಮತ್ತು ನುಗ್ಗೆ ಸೊಪ್ಪು ಬಳಸುತ್ತಾರೆ. ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ನುಗ್ಗೆಸೊಪ್ಪಿನಲ್ಲಿ ಆಂಟಿವೈರಲ್, ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳಿವೆ. ಭಾರತದ ಹಲವು ಪ್ರದೇಶಗಳಲ್ಲಿ ನುಗ್ಗೆ ಬೆಳೆಯಲಾಗುತ್ತಿದ್ದು, ಆಗಾಗ ಅಡುಗೆಗೆ ಬಳಸಲಾಗುತ್ತಿದೆ. ಕರುಳಿನ ಆರೋಗ್ಯಕ್ಕೆ ನುಗ್ಗೆ ಸೊಪ್ಪು ಉತ್ತಮ ಆಹಾರವಾಗಿದೆ. ಅಡುಗೆಯಲ್ಲಿ ಹೆಚ್ಚಾಗು ಬಳಕೆಯಾಗುವ ಈ ನುಗ್ಗೆಸೊಪ್ಪು ಕೂದಲು ಸೊಂಪಾಗಿ ಬೆಳೆಯುವಂತೆ ಮಾಡಲು ಕೂಡಾ ಸಹಕಾರಿ ಎಂಬುದು ಹಲವರಿಗೆ ತಿಳಿದಿಲ್ಲ. ಹೊಟ್ಟೆ ಮಾತ್ರವಲ್ಲದೆ ನೀಳವಾದ ಕೇಶರಾಶಿಗೂ ನುಗ್ಗೆಸೊಪ್ಪು ಸಹಕಾರಿ.
ಸೌಂದರ್ಯಕ್ಕೂ ನುಗ್ಗೆಸೊಪ್ಪನ್ನು ಬಳಸಬಹುದು. ಕೂದಲಿನ ಬೆಳವಣಿಗೆಗೆ ಇದು ಉತ್ತಮ ಔಷಧ. ದಟ್ಟವಾಗಿ ಕೂದಲು ಬೆಳೆಯುವಂತೆ ಮಾಡಲು ನುಗ್ಗೆ ಸೊಪ್ಪನ್ನು ಬಳಸಬಹುದು.
ಈ ರೀತಿ ಪೇಸ್ಟ್ ಮಾಡಿ ತಲೆಗೆ ಹಚ್ಚಿ
ನುಗ್ಗೆ ಸೊಪ್ಪನ್ನು ಚೆನ್ನಾಗಿ ಕುದಿಸಿ ಅದನ್ನು ನುಣ್ಣಗೆ ಅರೆದು ಪೇಸ್ಟ್ ಮಾಡಿ. ಅದಕ್ಕೆ ಆಲೋವೇರಾ ಜೆಲ್ ಬೆರೆಸಿ. ನಿಮ್ಮ ಮನೆಯಲ್ಲಿ ನುಗ್ಗೆ ಸೊಪ್ಪು ಸಿಗದಿದ್ದರೆ ಮಾರುಕಟ್ಟೆಯಲ್ಲಿ ನುಗ್ಗೆ ಸೊಪ್ಪಿನ ಪುಡಿ ಅಥವಾ ಮೊರಿಂಗಾ ಪುಡಿ ಸಿಗುತ್ತದೆ. ಅದಕ್ಕೂ ಬೆಚ್ಚಗಿನ ನೀರು ಮತ್ತು ಅಲೋವೆರಾ ಸೇರಿಸಿ ಪೇಸ್ಟ್ ತಯಾರಿಸಬಹುದು. ಈ ಪೇಸ್ಟ್ ಅನ್ನು ವಾರಕ್ಕೆ ಎರಡು ಬಾರಿ ತಲೆಗೆ ಹಚ್ಚಬಹುದು.
ನೈಸರ್ಗಿಕವಾಗಿ ಹೆಚ್ಚು ಪ್ರಯೋಜನ ಪಡೆಯಲು, ನುಗ್ಗೆ ಸೊಪ್ಪನ್ನು ಚೆನ್ನಾಗಿ ಕುದಿಸಿ ನಂತರ ಅದಕ್ಕೆ ಮನೆಯಲ್ಲೇ ಬೆಳೆದ ಅಲೋವೆರಾ ರಸ ಸೇರಿಸಿದರೆ ಹೆಚ್ಚು ಪರಿಣಾಮಕಾರಿ. ನುಗ್ಗೆ ಸೊಪ್ಪಿನ ಪ್ರಯೋಜನ ಕೆಲವು ಪ್ರಯೋಜನಗಳನ್ನು ನೋಡೋಣ.
ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಎ, ಬಿ ಮತ್ತು ಒಮೆಗಾ -3 ಕೊಬ್ಬಿನಾಮ್ಲ ಹೇರಳವಾಗಿದೆ. ಇದು ಕೂದಲನ್ನು ಪೋಷಿಸುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ದೇಹದಲ್ಲಿರುವ ಆರೋಗ್ಯಕರ ಜೀವಕೋಶಗಳು ಮತ್ತು ಅಂಗಾಂಶಗಳ ಬೆಳವಣಿಗೆಗೆ ಸೊಪ್ಪು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಬಿ ಅಂಶವು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ನೆರವಾಗುತ್ತದೆ. ನೆತ್ತಿ ಮತ್ತು ಕೂದಲು ಕಿರುಚೀಲಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.
ಕೂದಲನ್ನು ಪೋಷಿಸುತ್ತದೆ
ನುಗ್ಗೆ ಸೊಪ್ಪು ಸತುವಿನ ಸಮೃದ್ಧ ಮೂಲವಾಗಿದೆ. ಹೀಗಾಗಿ ಕೂದಲು ಒಣಗದಂತೆ ರಕ್ಷಿಸುತ್ತದೆ. ನೆತ್ತಿಯಲ್ಲಿರುವ ನಮ್ಮ ನೈಸರ್ಗಿಕ ತೈಲ ಗ್ರಂಥಿಗಳನ್ನು ಆರೋಗ್ಯವಾಗಿಡುತ್ತದೆ. ಹೊಳೆಯುವ ಕೂದಲಿಗೆ ಇದು ಸಹಕಾರಿ.
ಆಂಟಿಮೈಕ್ರೊಬಿಯಲ್ ಗುಣ
ನುಗ್ಗೆಸೊಪ್ಪಿನಲ್ಲಿ ಪ್ಯಾಟರಿಗೋಸ್ಪರ್ಮಿನ್ ಅಂಶವಿದೆ. ಇದು ತಲೆಹೊಟ್ಟು, ತುರಿಕೆ, ಬ್ಯಾಕ್ಟೀರಿಯಾದ ಗುಳ್ಳೆಗಳು, ಸೇರಿದಂತೆ ವಿವಿಧ ಸಮಸ್ಯೆಗಳಿಂದ ರಕ್ಷಿಸುವ ಆಂಟಿಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ.
ಹಾನಿಯಿಂದ ನಮ್ಮ ಕೂದಲನ್ನು ರಕ್ಷಿಸುತ್ತದೆ
ಇದು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಅಂಶವು, ಬೂದು ಕೂದಲಿನ ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದೆ.
ಹೊಳೆಯುವ ಕೂದಲು
ಕೂದಲು ಹೊಳಪನ್ನು ಪಡೆಯಬೇಕೆಂದು ನೀವು ಬಯಸಿದರೆ ಇದು ಹೇಳಿಮಾಡಿಸಿದ ಔಷಧಿ. ಇದರ ಬೆಹೆನಿಕ್ ಆಮ್ಲದ ಸಾರವು ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನಿಮಗೆ ನೈಸರ್ಗಿಕವಾಗಿ ಹೊಳೆಯುವ ಕೂದಲನ್ನು ನೀಡುತ್ತದೆ.
ಕೂದಲ ಆರೈಕೆ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Peppermint Oil: ಅಂದ ಹೆಚ್ಚಿಸುವುದಲ್ಲದೇ, ಕೂದಲಿನ ಸಮಸ್ಯೆಯನ್ನೂ ಪರಿಹರಿಸುತ್ತೆ ಪುದೀನಾ ಎಣ್ಣೆ; ಇದನ್ನ ಹೀಗೆಲ್ಲಾ ಬಳಸಬಹುದು