ನಿತ್ಯ ವಾಕಿಂಗ್ ಒಳ್ಳೆಯದು; ಆದರೆ ದೀರ್ಘಕಾಲದ ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ
ನಿತ್ಯ ನಡೆಯುವ ಅಭ್ಯಾಸ ನಿಮಗಿದ್ದರೆ ಆರೋಗ್ಯಕ್ಕೆ ಅದು ಒಳ್ಳೆಯದು. ಆದರೆ ದೀರ್ಘಕಾಲದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳೂ ಎದುರಾಗುವ ಸಂಭಾವ್ಯತೆ ಇದೆ. ಸಣ್ಣ ಪುಟ್ಟ ದೈಹಿಕ ಅನಾರೋಗ್ಯಗಳು ಮುಂದೆ ಗಂಭೀರವಾಗುವ ಸನ್ನಿವೇಶವೂ ಎದುರಾಗಬಹುದು. ಹೀಗಾಗಿ ಆ ಸಮಸ್ಯೆಗಳ ಕುರಿತು ನಿಮಗೆ ಅರಿವಿರಲಿ.
ನಿತ್ಯ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಸುಲಭ ಹಾಗೂ ಸರಳ ವ್ಯಾಯಾಮ. ವಾಕ್ ಮಾಡಲು ಯಾವುದೇ ನಿರ್ದಿಷ್ಟ ಸ್ಥಳ ಅಥವಾ ಸಲಕರಣೆಗಳ ಅಗತ್ಯವಿಲ್ಲ. ಮನೆಯೊಳಗೆ ಹೊರಗೆ ಹೀಗೆ ಪ್ರಾಯೋಗಿಕವಾಗಿ ಎಲ್ಲಿಯಾದರೂ ಮಾಡಬಹುದಾದ ಸುಲಭ ವ್ಯಾಯಾಮ. ಸುಲಭ ವ್ಯಾಯಾಮವೆಂದು ದೇಹದ ಸಾಮರ್ಥ್ಯಕ್ಕಿಂತ ಹೆಚ್ಚು ಮಾಡಿದರೆ ದೈಹಿಕ ಒತ್ತಡ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಈ ಮಾಹಿತಿ ನಿಮ್ಮಲ್ಲಿ ಇದ್ದರೆ ಒಳ್ಳೆಯದು. ನಿತ್ಯ ಫಿಟ್‌ನೆಸ್ ದಿನಚರಿಯನ್ನು ಅನುಸರಿಸುವವರು ವಾಕಿಂಗ್ ಮಾಡುವ ನಿರ್ಧಾರಕ್ಕೆ ಬರುವ ಮುನ್ನ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು. ಒಂದು ವೇಳೆ ನಿಮ್ಮ ದೇಹಕ್ಕೆ ಹೆಚ್ಚು ವಾಕ್ ಅಗ್ಯವಿಲ್ಲ ಎಂದರೆ ಅದನ್ನು ನಿಲ್ಲಿಸುವ ನಿರ್ಧಾರ ಮಾಡಬಹುದು.
ಅತಿಯಾದ ನಡಿಗೆಯಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಸಾಮಾನ್ಯವಾಗಿ ಇಂತಹ ಸಂದರ್ಭಗಳು ಅಪರೂಪ. ಆದರೆ, ಸಮಸ್ಯೆ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಹೀಗಾಗಿ ಹೆಚ್ಚಿನ ಅಪಾಯವನ್ನು ಕಡಿಮೆ ಮಾಡಿ ಸಮತೋಲಿತ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ. ಈ ಒತ್ತಡದ ಚಿಹ್ನೆಗಳನ್ನು ಗುರುತಿಸುವುದು ನಿರ್ಣಾಯಕ.
ನಡಿಗೆಯಿಂದ ಆಗಬಹುದಾದ ಸಾಮಾನ್ಯ ಸಮಸ್ಯೆಗಳು
ಕಾಲು ನೋವು ಮತ್ತು ಗುಳ್ಳೆಗಳು
ಪಾದಗಳಲ್ಲಿ ನೋವು, ಹಿಮ್ಮಡಿ ಹಾಗೂ ಕಾಲಿನ ಬೆರಳುಗಳಲ್ಲಿ ನೋವು ಕಾಣಿಸುವ ಅಪಾಯ ಕೂಡಾ ಇದೆ. ಇದು ಅತಿಯಾದ ನಡಿಗೆಯು ದೇಹಕ್ಕೆ ಒಪ್ಪಿಗೆಯಾಗದ ಆರಂಭಿಕ ಸೂಚಕಗಳು. ಹಿಮ್ಮಡಿ ಮೂಳೆಯನ್ನು ಕಾಲ್ಬೆರಳುಗಳಿಗೆ ಸಂಪರ್ಕಿಸುವ ಅಸ್ಥಿರಜ್ಜು ಉರಿಯುವ ಸ್ಥಿತಿಯಾದ ಪ್ಲಾಂಟರ್ ಫ್ಯಾಸಿಟಿಸ್‌ಗೆ ವಾಕಿಂಗ್ ಕಾರಣವಾಗಬಹುದು. ಪಾದಗಳ ಮೇಲೆ ಮತ್ತೆ ಮತ್ತೆ ಒತ್ತಡ ಬೀಳುವುದು ಸಾಮಾನ್ಯವಾಗಿ ಈ ಉರಿಯೂತಕ್ಕೆ ಕಾರಣವಾಗಿದೆ. ವಿಶ್ರಾಂತಿ ಪಡೆಯದೆ ಅಥವಾ ಸೂಕ್ತ ಪಾದರಕ್ಷೆ ಧರಿಸದೆ ನಡೆಯುವುದು ಈ ಸಮಸ್ಯೆಗೆ ಕಾರಣವಾಗಬಹುದು.
ಕೆಳ ಬೆನ್ನು ನೋವು
ನಡಿಗೆಯ ಪ್ರಮುಖ ಆರೋಗ್ಯ ಸಮಸ್ಯೆ ಎಂದರೆ ಕೆಳ ಬೆನ್ನು ನೋವು. ನಿಮ್ಮ ನಡಿಗೆಯ ಭಂಗಿ ಸರಿಯಿಲ್ಲದಿದ್ದರೆ ಮತ್ತು ಸ್ನಾಯುಗಳು ದುರ್ಬಲವಾಗಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಾಕಿಂಗ್ ಮಾಡುವಾಗ ಆಗುವ ಪುನರಾವರ್ತಿತ ಚಲನೆ ಮತ್ತು ನಿಮ್ಮ ದೇಹದ ತೂಕವನ್ನು ನಿಭಾಯಿಸಬೇಕಾದ ಒತ್ತಡವು ಬೆನ್ನುಮೂಳೆಯ ಮತ್ತು ಕೆಳ ಬೆನ್ನಿನ ಸ್ನಾಯುಗಳ ಮೇಲೆ ಒತ್ತಡ ಉಂಟುಮಾಡಬಹುದು. ನಿಧಾನವಾಗಿ ಈ ನೋವಿನಿಂದಾಗಿ ದೀರ್ಘಕಾಲ ನಡೆಯಲು ಅಥವಾ ನಿಲ್ಲಲು ಸಹ ಕಷ್ಟವಾಗಬಹುದು. ಸಣ್ಣ ಸಮಸ್ಯೆ ಗಂಭೀರವಾಗದಂತೆ ಎಚ್ಚರ ವಹಿಸಿ.
ಸ್ನಾಯು ನೋವು ಮತ್ತು ಕೀಲು ನೋವು
ಕಾಲು ನೋವು, ತೊಡೆಗಳಲ್ಲಿ ನೋವು ಕಾಣಿಸಿಕೊಳ್ಳುವುದು ಅತಿಯಾದ ನಡಿಗೆಯ ಲಕ್ಷಣವಾಗಿರಬಹುದು. ಕೆಲವು ಅಸ್ವಸ್ಥತೆ ನೈಸರ್ಗಿಕವಾಗಿದ್ದರೂ, ದೀರ್ಘಕಾಲದ ಅಥವಾ ತೀವ್ರವಾದ ನೋವು ಅತಿಯಾದ ನಡಿಗೆಯ ಪರಿಣಾಮವನ್ನು ಸೂಚಿಸುತ್ತದೆ. ನೋವಿನ ಮೇಲೆಯೂ ನಿರಂತರ ವಾಕಿಂಗ್ ಮಾಡಿದರೆ ಮೊಣಕಾಲು ಮತ್ತು ಸೊಂಟಕ್ಕೆ ಆಯಾಸವಾಬಹುದು. ಇದರಿಂದ ಸಂಧಿವಾತದ ಸಮಸ್ಯೆ ಬೆಳೆಯಬಹುದು. ಮೊಣಕಾಲಿನ ಗಂಭೀರ ಸಮಸ್ಯೆಗೆ ಕಾಣವಾಗುವ ಕೀಲು ನೋವಿಗೂ ಮುನ್ನುಡಿಯಾಗಬಹುದು.
ಏನು ಮಾಡಬೇಕು?
ನಡಿಗೆಯ ಅಪಾಯಗಳ ಬಗ್ಗೆ ತಿಳಿದಿರುವುದು ಮುಖ್ಯ. ನಿಮ್ಮ ದೇಹಕ್ಕೆ ಯಾವಾಗ ವಿಶ್ರಾಂತಿಯ ಅಗತ್ಯವಿದೆ ಎಂಬುದನ್ನು ತಿಳಿದುಕೊಂಡರೆ ಸಮಸ್ಯೆಯಾಗುವುದಿಲ್ಲ. ಹೀಗಾಗಿ ಸೂಕ್ತವಾದ ಪಾದರಕ್ಷೆಗಳನ್ನು ಧರಿಸಿ, ದೇಹದ ಆರೋಗ್ಯದ ಆಧಾರದ ಮೇಲೆ ವಾಕಿಂಗ್ ಮಾಡಿ. ಗಾಯದ ಅಪಾಯ ಹೆಚ್ಚಿದ್ದರೆ ಅದನ್ನು ನಿಲ್ಲಿಸಿ. ನಡಿಗೆಯಿಂದಾಗಿ ಯಾವುದೇ ಏರುಪೇರು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ. ಆಗ ದೀರ್ಘಕಾಲೀನ ಹಾನಿಯನ್ನು ತಪ್ಪಿಸಬಹುದು.