ಡಯಾಲಿಸಿಸ್ ಅನ್ನೋದು ಜೀವ ಉಳಿಸುವ ಕ್ರಿಯೆ : ಕಿಡ್ನಿ ಸಮಸ್ಯೆಯಿರುವವರು ಡಾ. ಸೂರ್ಯಕುಮಾರ್​​ರ ಈ​ ಬರಹ ಓದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಡಯಾಲಿಸಿಸ್ ಅನ್ನೋದು ಜೀವ ಉಳಿಸುವ ಕ್ರಿಯೆ : ಕಿಡ್ನಿ ಸಮಸ್ಯೆಯಿರುವವರು ಡಾ. ಸೂರ್ಯಕುಮಾರ್​​ರ ಈ​ ಬರಹ ಓದಿ

ಡಯಾಲಿಸಿಸ್ ಅನ್ನೋದು ಜೀವ ಉಳಿಸುವ ಕ್ರಿಯೆ : ಕಿಡ್ನಿ ಸಮಸ್ಯೆಯಿರುವವರು ಡಾ. ಸೂರ್ಯಕುಮಾರ್​​ರ ಈ​ ಬರಹ ಓದಿ

Kidney Dialysis: ಕಿಡ್ನಿ ಡಯಾಲಿಸಿಸ್ ಬಗ್ಗೆ ಡಾ. ಕೆ. ಬಿ. ಸೂರ್ಯ ಕುಮಾರ್ ಅವರ ಬರಹವನ್ನು ಹಿರಿಯ ಪತ್ರಕರ್ತ ಅನಂತ ಪದ್ಮನಾಭ ಅವರು ತಮ್ಮ ಫೇಸ್​ಬುಕ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬರಹ ಹೆಚ್ಚು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಮರುಪ್ರಕಟಿಸಲಾಗಿದೆ.

ಕಿಡ್ನಿ ಡಯಾಲಿಸಿಸ್ (ಪ್ರಾತಿನಿಧಿಕ ಚಿತ್ರ)
ಕಿಡ್ನಿ ಡಯಾಲಿಸಿಸ್ (ಪ್ರಾತಿನಿಧಿಕ ಚಿತ್ರ)

ಡಾ. ಕೆ. ಬಿ. ಸೂರ್ಯ ಕುಮಾರ್ ಅವರ ಬರಹ ಹೀಗಿದೆ..

"ಕಿಡ್ನಿ ವೈಫಲ್ಯ ಎಂಬುದು ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಬರುವ ಮುಖ್ಯ ತೊಂದರೆ. ಶರೀರದಲ್ಲಿ ಮಧುಮೇಹ ರೋಗವು ಹಿಡಿತದಲ್ಲಿ ಇಲ್ಲದೆ, ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿದ್ದರೆ ನಮ್ಮ ಮೂತ್ರಪಿಂಡದ ಕಾರ್ಯವು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಶರೀರದಲ್ಲಿ ಇರುವ ಹೆಚ್ಚಾದ ಸಕ್ಕರೆ ಮಟ್ಟವು ಕಿಡ್ನಿಯಲ್ಲಿನ ಸಣ್ಣರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದರಿಂದ ರಕ್ತದ ಸೋಸುವಿಕೆ ದುರ್ಬಲಗೊಂಡು, ಶರೀರದಲ್ಲಿ ತ್ಯಾಜ್ಯ ಉತ್ಪನ್ನಗಳು ಹೆಚ್ಚು ಶೇಖರಿಸಲ್ಪಡುತ್ತವೆ.

ನಮ್ಮ ಶರೀರದಲ್ಲಿರುವ ಕಲ್ಮಷ, ವಿಷವನ್ನು ತೆಗೆದು ಹಾಕಿ, ದ್ರವ ಮತ್ತು ಎಲೆಕ್ಟ್ರೋಲೈಟ್ ಮಟ್ಟವನ್ನು ನಿಯಂತ್ರಿಸುವ ಮೂಲಕ ದೇಹದ ಆಂತರಿಕ ಸಮತೋಲನವನ್ನು ಕಾಪಾಡಿ ಕೊಳ್ಳಲು ಮೂತ್ರಪಿಂಡಗಳು ಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ. ಅವುಗಳು ಇಂತಹ ಶೋದಿಸುವ ( ಸೋಸುವ ) ಸಾಮರ್ಥ್ಯವನ್ನು ಕಳೆದುಕೊಂಡು, ಕಾರ್ಯ ನಿರ್ವಹಿಸಲು ವಿಫಲವಾದಾಗ, ಆ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ವ್ಯವಸ್ಥೆಗೆ ಕಿಡ್ನಿ ಡಯಾಲಿಸಿಸ್ ಎನ್ನುತ್ತಾರೆ. ಹಾಗಾಗಿ ಡಯಾಲಿಸಿಸ್ ಎಂಬುದು ಒಂದು ಜೀವ ಉಳಿಸುವ ಕ್ರಿಯೆ.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD), ಕಿಡ್ನಿ ವೈಫಲ್ಯ ಅಥವಾ ತೀವ್ರವಾದ ಮೂತ್ರಪಿಂಡದ ಗಾಯದಂತಹ ಪರಿಸ್ಥಿತಿಗಳಿಂದಾಗಿ ಮೂತ್ರಪಿಂಡಗಳು ದುರ್ಬಲಗೊಂಡಾಗ ಈ ವಿಧಾನವು ಅಗತ್ಯವಾಗಿರುತ್ತದೆ. ಡಯಾಲಿಸಿಸ್‌ನ ಮುಖ್ಯ ಉದ್ದೇಶ ವೆಂದರೆ ರಕ್ತದಿಂದ ತ್ಯಾಜ್ಯ, ಹೆಚ್ಚುವರಿ ನೀರಿನ ಅಂಶ, ಮತ್ತು ಎಲೆಕ್ಟ್ರೋಲೈಟ್‌ ಗಳನ್ನು ತೆಗೆದು ಹಾಕುವ ಮೂಲಕ ಮೂತ್ರಪಿಂಡದ ಸೋಸುವಿಕೆಯ ಕಾರ್ಯವನ್ನು ಸರಿ ಮಾಡುವುದು. ಇದರಿಂದ ದೇಹದಲ್ಲಿನ ಅಸಮತೋಲನ ವನ್ನು ಸರಿಪಡಿಸಲು ಸಹಾಯವಾಗುತ್ತದೆ. ಹೀಗೆ ಮಾಡದಿದ್ದರೆ ದೇಹವು ಅನೇಕ ತೊಂದರೆಗಳಿಗೆ ಒಳಗಾಗಬಹುದು.

ಈ ಡಯಾಲಿಸಿಸ್ ನಲ್ಲಿ ಹಿಮೋ ಡಯಾಲಿಸಿಸ್ ಮತ್ತು ಪೆರಿಟೋನಿಯಲ್ ಡಯಾಲಿಸಿಸ್ ಎಂಬ ಎರಡು ವಿಧಗಳಿವೆ. ಡಯಾಲೈಸರ್ ಎಂಬ ವಿಶೇಷ ಯಂತ್ರದ ಮೂಲಕ ರೋಗಿಯ ರಕ್ತವನ್ನು ದಾಟಿಸುವುದು ಹಿಮೋಡಯಾಲಿಸಿಸ್. ಈ ಯಂತ್ರವು ಕೃತಕ ಮೂತ್ರಪಿಂಡದಂತೆ ಕಾರ್ಯ ನಿರ್ವಹಿಸಿ, ರಕ್ತವನ್ನು ಶುದ್ಧೀಕರಿಸಿ ತ್ಯಾಜ್ಯ ಉತ್ಪನ್ನಗಳನ್ನು ತೆಗೆದು ಹಾಕುತ್ತದೆ. ಈ ಕಾರ್ಯವಿಧಾನದಲ್ಲಿ, ಶುದ್ದರಕ್ತವನ್ನು ತೆಗೆದುಕೊಂಡು ಹೋಗುವ ಅಪಧಮನಿ ಮತ್ತು ಅಶುದ್ಧ ರಕ್ತದ ಅಭಿಧಮನಿಯನ್ನು ಸಂಪರ್ಕಿಸಲು ಒಂದು ನಾಳಿಯನ್ನು (vascular access point) ರಚಿಸಲಾಗುತ್ತದೆ. ರಕ್ತವನ್ನು ದೇಹದಿಂದ ಪಂಪ್ ಮಾಡಿ, ಡಯಾಲೈಸರ್ ಮೂಲಕ ಶೋಧನೆಯ ( filter) ನಂತರ ದೇಹಕ್ಕೆ ಹಿಂತಿರುಗಿಸಲಾಗುತ್ತದೆ. ಹಿಮೋ ಡಯಾ ಲಿಸಿಸ್ ಅನ್ನು ಸಾಮಾನ್ಯವಾಗಿ ವಾರಕ್ಕೆ ಕೆಲವು ಬಾರಿ ಡಯಾಲಿಸಿಸ್ ಕೇಂದ್ರದಲ್ಲಿ ನಡೆಸಲಾಗುತ್ತದೆ.

ಪೆರಿಟೋನಿಯಲ್ ಡಯಾಲಿಸಿಸ್ನಲ್ಲಿ, ನಮ್ಮ ಹೊಟ್ಟೆಯ ಒಳಗಿರುವ ಪೆರಿಟೋನಿಯಮ್ ಎಂಬ ತೆಳು ಪೊರೆಯ ( ಸೀರಸ್ ಮೆಂಬ್ರೇನ್ ) ಪದರವನ್ನು ಬಳಸಿ ಕೊಳ್ಳಲಾಗುತ್ತದೆ. ಒಂದು ರಬ್ಬರ್ ಪೈಪಿನ (ಕ್ಯಾತಿಟರ್) ಮೂಲಕ ಪೆರಿಟೋನಿಯಲ್ ಕುಳಿಯೊಳಗೆ ಡಯಾಲಿಸಿಸ್ ದ್ರಾವಣವನ್ನು ಸೇರಿಸಲಾಗುತ್ತದೆ. ಇದು ನಿಗದಿತ ಅವಧಿಯವರೆಗೆ ಹೊಟ್ಟೆಯಲ್ಲಿ ಉಳಿಯುತ್ತದೆ. ಈ ಸಮಯದಲ್ಲಿ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವಗಳು ರಕ್ತದಿಂದ ದ್ರಾವಣಕ್ಕೆ ಹರಡುತ್ತವೆ.ಬಳಸಿದ ದ್ರಾವಣವನ್ನು ನಂತರ ಹೊರ ತೆಗೆದು ತಾಜಾ ದ್ರಾವಣವನ್ನು ಪುನಃ ಸೇರಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ರೋಗಿಗಳು ತಮ್ಮ ಕೈಯಾರೆ ಮನೆಯಲ್ಲಿ ಅಥವಾ ಯಂತ್ರದ ಸಹಾಯದಿಂದ ಮಾಡ ಬಹುದು.

ಈ ಎರಡರಲ್ಲೂ, ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳು ಮತ್ತು ದ್ರವದ ಸಮತೋಲನವನ್ನು ಕಾಪಾಡಿ ಕೊಳ್ಳುವುದು ನಮ್ಮ ಗುರಿಯಾಗಿರುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ತ್ಯಾಜ್ಯ ವಸ್ತುಗಳು ಶರೀರದಲ್ಲಿ ತುಂಬಿ ಕೊಳ್ಳುವುದನ್ನು ತಡೆಯುತ್ತದೆ. ಶರೀರದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನ, ನೀರಿನ ಅಂಶದ ಮಿತಿಮೀರಿದ ಉಳಿಕೆ ಮತ್ತು ಇತರ ಅಂಗಾಂಗಗಳ ಸಂಭವನೀಯ ಹಾನಿ, ಮೂತ್ರಪಿಂಡದ ಇನ್ನಷ್ಟು ಹಾನಿಕಾರಕ ಪರಿಣಾಮಗಳನ್ನು ತಡೆಯಲು ನಿಯಮಿತ ಡಯಾಲಿಸಿಸ್ ಅವಶ್ಯಕ.

ಕಿಡ್ನಿ ಡಯಾಲಿಸಿಸ್ ಸ್ವಲ್ಪ ಸಮಯದವರೆಗೆ ಜೀವ ಉಳಿಸುವ ಚಿಕಿತ್ಸೆಯಾಗಿದ್ದರೂ, ಇದು ಶಾಶ್ವತ ಪರಿಹಾರವಲ್ಲ. ಈ ವಿಧಾನವು ಮೂತ್ರಪಿಂಡಕ್ಕೆ ಸಂಬಂಧಿಸಿದ ಕೆಲವು ರೋಗಲಕ್ಷಣಗಳು ಮತ್ತು ತೊಂದರೆಗಳನ್ನು ನಿವಾರಿಸ ಬಹುದಷ್ಟೆ. ಆದರೆ ಇದು ಆ ರೋಗಕ್ಕೆ ಮೂಲ ಕಾರಣದ ಸ್ಥಿತಿಯನ್ನು ಗುಣ ಪಡಿಸುವುದಿಲ್ಲ. ಸದ್ಯದ ಮಟ್ಟಿಗೆ ರೋಗಿಗಳಿಗೆ ಆರೋಗ್ಯಕರ ಜೀವನವನ್ನು ನಡೆಸಲು ಅವಕಾಶವನ್ನು ನೀಡುತ್ತದೆ.

ಇಂತಹ ರೋಗಿಗಳಿಗೆ ದೀರ್ಘಾವಧಿಯ ಚಿಕಿತ್ಸೆಯೆಂದರೆ ಅದು ಕಿಡ್ನಿ ಕಸಿ ಮಾಡುವಿಕೆಯು ಮಾತ್ರ. ಇದು ಅಷ್ಟು ಸುಲಭದ ಕೆಲಸವಲ್ಲ. ಕಿಡ್ನಿಗಳನ್ನು ನೀಡಲು ನಿಮ್ಮದೇ ರಕ್ತದ ಗುಂಪಿನ ಯೋಗ್ಯ ವ್ಯಕ್ತಿ ತಯಾರಿರಬೇಕು. ಶಸ್ತ್ರ ಚಿಕಿತ್ಸೆಯ ಸಂಭವನೀಯ ಅಪಾಯ ಇಬ್ಬರಿಗೂ ಇರಬಹುದು. ಈ ಕಸಿ ಎಲ್ಲಾ ಆಸ್ಪತೆಯಲ್ಲಿ ಮಾಡಲಾಗುವುದಿಲ್ಲ ಮತ್ತು ಖರ್ಚು ಕೂಡಾ ಬಹಳಷ್ಟು ಇದೆ.

ಆದುದರಿಂದ ಈ ಕಿಡ್ನಿಯ ಆರೋಗ್ಯಕ್ಕೆ ಹಾನಿ ಮಾಡುವ, ಡಯಾಬಿಟಿಸ್ ಅಥವಾ ಮಧುಮೇಹ, ಇತ್ಯಾದಿ ರೋಗಗಳನ್ನು ಹಿಡಿತದಲ್ಲಿ ಇಟ್ಟು ಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಿ. ರಕ್ತದಲ್ಲಿ ಸಕ್ಕರೆಯ ಅಂಶ ತುಂಬಾ ಜಾಸ್ತಿ ಆಗಿ ನಂತರ ನಿಧಾನವಾಗಿ ಕಿಡ್ನಿಯ ಆರೋಗ್ಯಕ್ಕೆ ತೊಂದರೆಯಾಗುವುದನ್ನು ತಪ್ಪಿಸುವುದು ನಿಮ್ಮ ಕೈಯಲ್ಲಿಯೇ ಇರುತ್ತದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ ಇರುವವರು ಆಗಾಗ್ಗೆ ಸರಿಯಾದ ಪರೀಕ್ಷೆ ಮಾಡಿಸಿ ಕೊಳ್ಳಿ. ತಜ್ಞರ ಸಲಹೆ ಸೂಚನೆಗಳನ್ನು ಅನುಸರಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ."

ಡಾ. ಕೆ. ಬಿ. ಸೂರ್ಯ ಕುಮಾರ್ ಯಾರು?

ಸೂರ್ಯ ಕುಮಾರ್ ಅವರು ಸುಮಾರು 18 ವರ್ಷಗಳ ಕಾಲ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ವಿಭಾಗದಲ್ಲಿ ಮತ್ತು ವಿಧಿವಿಜ್ಞಾನ ಪರಿಣಿತರಾಗಿ ಕೆಲಸ ಮಾಡಿದ್ದಾರೆ. 1990 ರ ದಶಕದಲ್ಲಿ ವೈದ್ಯಕೀಯ ಕಾಲೇಜು ಹೊರತುಪಡಿಸಿ, ಇಡೀ ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿ ಇದ್ದ, ಏಕೈಕ ವಿಧಿವಿಜ್ಞಾನ ಪರಿಣಿತರು ಇವರು. ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರೂ ಆಗಿದ್ದರು. ಇವರು ತಮ್ಮ ವೈದ್ಯಕೀಯ ಜೀವನದಲ್ಲಿ ಕಂಡಂತಹ ಅನೇಕ ವಿಶೇಷ ಪ್ರಕರಣಗಳನ್ನು, ವಿಷಯಗಳನ್ನು ಕನ್ನಡದ ಕಥೆಗಳ ಮೂಲಕ ಅನೇಕ ನಿಯತಕಾಲಿಕ ಮತ್ತು ವಾರಪತ್ರಿಕೆಗಳಲ್ಲಿ ಬರೆಯುತ್ತಿದ್ದರು. (ಮಾಹಿತಿ: ಬುಕ್​​ಬ್ರಹ್ಮಾ)

Whats_app_banner