Yoga Asanas: ನಿರಂತರ ಒತ್ತಡ ಕಾಡ್ತಿದ್ಯಾ, ಮನಸ್ಸನ್ನು ರಿಲ್ಯಾಕ್ಸ್ ಮಾಡುವ ಈ 6 ಸರಳ ಯೋಗಾಸನಗಳನ್ನು ಅಭ್ಯಾಸ ಮಾಡಿ
ಒತ್ತಡ, ಆತಂಕ, ಭಯದಂತಹ ಮಾನಸಿಕ ತಲ್ಲಣಗಳಿಂದ ಮುಕ್ತಿ ಪಡೆಯಲು ಬೆಸ್ಟ್ ವಿಧಾನ ಎಂದರೆ ಯೋಗಾಸನವನ್ನು ಅಭ್ಯಾಸ ಮಾಡುವುದು. ಮನಸ್ಸಿಗೆ ರಿಲ್ಯಾಕ್ಸ್ ನೀಡುವ ಕೆಲವು ಸರಳ ಯೋಗಾಸನಗಳು ಇಲ್ಲಿವೆ.
ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಬಹುವಾಗಿ ಕಾಡುತ್ತಿರುವ, ಜಾಗತಿಕ ಸಮಸ್ಯೆ ಎನ್ನಿಸಿಕೊಂಡಿರುವುದು ಒತ್ತಡ. ಒತ್ತಡ ಮನುಷ್ಯನನ್ನು ಕಾಡುವ ಹಲವು ರೋಗ ಕಾಯಿಲೆಗಳಿಗೆ ಮೂಲವಾಗಿದೆ. ಒತ್ತಡ ಉಂಟಾಗಲು ಕಾರಣಗಳು ಹಲವು. ಹಾಗಂತ ಈ ಕಾಲದಲ್ಲಿ ನಾವು ಒತ್ತಡವಿಲ್ಲದೆ ಬದುಕಲೂ ಸಾಧ್ಯವಿಲ್ಲ. ಆದರೆ ಒತ್ತಡ ನಿಯಂತ್ರಣ ಖಂಡಿತ ಸಾಧ್ಯ. ಒತ್ತಡ ನಿಯಂತ್ರಣಕ್ಕಿರುವ ಅತ್ಯುತ್ತಮ ದಾರಿ ಎಂದರೆ ಯೋಗ. ಅದರಲ್ಲೂ ಈ ಕಾರ್ಪೋರೇಟ್ ಜಗತ್ತಿನ ಒತ್ತಡನ ಬೇಗುದಿಯಲ್ಲಿ ಬೇಯುತ್ತಿರುವವರಿಗೆ ಯೋಗ ಒಂದು ಬೆಸ್ಟ್ ವಿಧಾನ. ಪ್ರತಿದಿನ ಯೋಗಾಭ್ಯಾಸ ರೂಢಿಸಿಕೊಳ್ಳುವುದರಿಂದ ಒತ್ತಡ ರಹಿತ ಜೀವನವನ್ನು ನಡೆಸಲು ಸಾಧ್ಯ. ಇದು ನಮ್ಮ ಮನಸ್ಸನ್ನು ಆಹ್ಲಾದಗೊಳಿಸುವುದು ಮಾತ್ರವಲ್ಲ, ಹ್ಯಾಪಿ ಹಾರ್ಮೋನ್‌ಗಳ ಸಂಖ್ಯೆ ಹೆಚ್ಚಲು ನೆರವಾಗುತ್ತದೆ.
ದೇಹ, ಮನಸ್ಸನ್ನು ಶಾಂತಗೊಳಿಸಿ, ರಿಲ್ಯಾಕ್ಸ್ ನೀಡುವ 6 ಆಸನಗಳಿವು.
ಬದ್ಧ ಕೋನಾಸನ
ಇದು ಸರಳವಾಗಿ ಕುಳಿತು ಮಾಡುವ ಆಸನ. ಬದ್ಧ ಎಂದರೆ ಹಿಡಿಯವುದು ಎಂದರ್ಥ. ನೆಲದಲ್ಲಿ ಕೂತು ಪಾದಗಳನ್ನು ಜೋಡಿಸಿ ಹಿಡಿದುಕೊಳ್ಳುವ ವಿಧಾನವಿದು. ಮೊಣಕಾಲು ನೋವು ಇರುವವರು ಈ ಯೋಗಾಸನ ಅಭ್ಯಾಸ ಮಾಡುವುದು ಬೆಸ್ಟ್. ಇದು ಮನದಲ್ಲಿ ಸಂಗ್ರಹವಾಗಿದ್ದ ಭಾವನೆಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಸರಿಯಾದ ಕ್ರಮದೊಂದಿಗೆ ಅಭ್ಯಾಸ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ.
ಪ್ರಸಾರಿತ ಪಾದೋತ್ತಾನಾಸನ
ಇದು ನಿಂತು ದೇಹವನ್ನು ಬಗ್ಗಿಸಿ ಮಾಡುವ ಆಸನ. ನೇರವಾಗಿ ನಿಂತು ಕಾಲುಗಳನ್ನು ಅಗಲ ಮಾಡಬೇಕು. ಅಂತ ಮುಖವನ್ನು ನೆಲದ ಕಡೆಗೆ ಬಗ್ಗಿಸಿ. ಕೈಗಳಿಂದ ಪಾದವನ್ನು ಮುಟ್ಟಬೇಕು. ಇದು ಮನಸ್ಸು ಹಗುರಾಗಲು ನೆರವಾಗುವ ಇನ್ನೊಂದು ಆಸನ.
ಮಾರ್ಜರಿಯಾಸನ
ಮಾರ್ಜರಿಯಾಸನವು ಬಿಟಿಲಾಸನ ಮತ್ತು ಮಾರ್ಜರಿ ಆಸನಗಳ ಸಂಯೋಜನೆಯಾಗಿದೆ. ಇದು ಬೆನ್ನಮೂಳೆಗಳ ಸ್ನಾಯುಗಳನ್ನು ವಿಸ್ತರಿಸುತ್ತದೆ. ಬೆನ್ನು ನೋವಿಗೆ ಇದು ಬೆಸ್ಟ್ ಆಸನ. ಗರ್ಭಿಣಿಯರು ಕೂಡ ಈ ಆಸನವನ್ನು ಅಭ್ಯಾಸ ಮಾಡಬಹುದು. ಒತ್ತಡದಿಂದ ತ್ವರಿತ ನಿವಾರಣೆಗೂ ಇದು ಪರಿಹಾರ. ಆ ಆಸನವು ಮೊಣಕಾಲಿನ ಮೇಲೆ ಮಲಗಿ ಕೈಗಳನ್ನು ಮುಂದೆ ಚಾಚಿ ತಲೆ ಎತ್ತಿ ಮಾಡುವ ಭಂಗಿಯಾಗಿದೆ.
ಬಾಲಾಸನ
ಇದು ಕಾಲನ್ನು ಮಡಿಸಿ, ಕಾಲಿನ ಮೇಲೆ ಕೂತು ಮಾಡುವ ಆಸನವಾಗಿದೆ. ಕಾಲಿನ ಮೇಲೆ ಕೂತು ತಲೆ ಹಾಗೂ ಕೈಯನ್ನು ಮುಂದಕ್ಕೆ ಚಾಚಬೇಕು. ಆದರೆ ಸಂಧಿವಾತ ಸಮಸ್ಯೆ ಇರುವವರು ಈ ಆಸನ ಮಾಡಬಾರದು ಎನ್ನುತ್ತಾರೆ. ಅಧಿಕರಕ್ತದೊತ್ತಡ, ಆತಂಕದ ಸಮಸ್ಯೆ ಇರುವವರಿಗೆ ಈ ಆಸನ ಬೆಸ್ಟ್.
ಮತ್ಸೇಂದ್ರಾಸನ
ಇದು ನೇರವಾಗಿ ಕುಳಿತು ನಂತರ ದೇಹವನ್ನು ತಿರುಚುವ ಆಸನ. ಈ ಯೋಗಾಸನವು ಹೊಟ್ಟೆ ಮತ್ತು ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುವ ಜೊತೆಗೆ ದೇಹ ಹಾಗೂ ಮನಸ್ಸು ಒತ್ತಡದಿಂದ ಬಿಡುಗಡೆಯಾಗುವಂತೆ ಮಾಡುತ್ತದೆ.
ವಿಪರೀತಕರ್ಣಿ
ಇದು ಬಹುತೇಕರು ಪಾಲಿಸುವ ಯೋಗ ಕ್ರಮ. ಇದು ತಲೆ, ಕುತ್ತಿಗೆಯ ಭಾಗವನ್ನಷ್ಟೇ ನೆಲದ ಮೇಲೆ ಇರಿಸಿ ಸಂಪೂರ್ಣ ದೇಹವನ್ನು ಮೇಲಕ್ಕೆ ಎತ್ತುವ ಭಂಗಿ. ಇದು ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡುತ್ತದೆ. ಇದನ್ನು ಗೋಡೆಯ ಸಹಾಯದಿಂದಲೂ ಮಾಡಬಹುದು. ಗರ್ಭಿಣಿ ಮಹಿಳೆಯರು ಈ ಯೋಗಾಭ್ಯಾಸ ಮಾಡಬಹುದು. ಇದು ಒತ್ತಡ ಹಾಗೂ ಆತಂಕವನ್ನು ನಿವಾರಿಸುವ ಯೋಗ ಭಂಗಿಗಳಲ್ಲಿ ಒಂದಾಗಿದೆ.
ಪ್ರಾಣಾಯಾಮದೊಂದಿಗೆ ಈ ಯೋಗಗಳನ್ನು ಅಭ್ಯಾಸ ಮಾಡುವುದರಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು ತಜ್ಞರು ಹೇಳುತ್ತಾರೆ. ಮನಸ್ಸು ಶಾಂತವಾಗಲು ಓಂ ಮಂತ್ರ ಪಠಿಸುವುದು, ಭ್ರಮರಿ ಪ್ರಾಣಾಯಾಮ ಕೂಡ ಅವಶ್ಯ. ಆದರೆ ಯೋಗಾಭ್ಯಾಸಕ್ಕೂ ಮುನ್ನ ತಜ್ಞರಿಂದ ಸಲಹೆ ಹಾಗೂ ಮಾರ್ಗದರ್ಶನ ಪಡೆಯಲು ಮರೆಯದಿರಿ.
ವಿಭಾಗ