Madras Eye: ಮಳೆಯ ನಡುವೆ ಹೆಚ್ಚುತ್ತಿರುವ ಮದ್ರಾಸ್ ಐ ಸಮಸ್ಯೆ; ಪಿಂಕ್ ಐ ಹರಡುವುದನ್ನು ತಡೆಯಲು ಈ ಕ್ರಮಗಳನ್ನು ಪಾಲಿಸಿ
ದೇಶದಾದ್ಯಂತ ಹೆಚ್ಚುತ್ತಿರುವ ಮಳೆಯ ನಡುವೆ ಮದ್ರಾಸ್ ಐ ಸಮಸ್ಯೆಯೂ ಹೆಚ್ಚುತ್ತಿದೆ. ರಾಜ್ಯದಲ್ಲೂ ಹಲವು ಮಕ್ಕಳಲ್ಲಿ ಮದ್ರಾಸ್ ಸಮಸ್ಯೆ ಕಾಣಿಸುತ್ತಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಲು ಕಾರಣ ಹಾಗೂ ಹರಡುವುದನ್ನು ತಡೆಯುವ ಮಾರ್ಗಗಳ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ದೇಶದಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ರಾಜ್ಯದಲ್ಲೂ ವರುಣಾರ್ಭಟ ಹೆಚ್ಚಾಗಿದೆ. ಎಲ್ಲಿ ಕೇಳಿದರೂ ಮಳೆಯದ್ದೇ ಸುದ್ದಿ. ಈ ನಡುವೆ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿವೆ.
ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆಗುವ ಕಾರಣ ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಹಜ. ಇದರಲ್ಲಿ ಮದ್ರಾಸ್ ಐ ಅಥವಾ ಪಿಂಕ್ ಐ ಕೂಡ ಒಂದು. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಕ್ಕಳಲ್ಲಿ ಮದ್ರಾಸ್ ಐ ಸಮಸ್ಯೆ ಹೆಚ್ಚು ಕಾಣಿಸುತ್ತಿದೆ. ಕಾಂಜಂಕ್ಟಿವಿಟಿಸ್ ಎಂದು ಕರೆಸಿಕೊಳ್ಳುವ ಈ ಸಮಸ್ಯೆಗೆ ಪ್ರಮುಖ ಕಾರಣ ಸೋಂಕು.
ಈ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ ಮಕ್ಕಳ ತಜ್ಞ ಡಾ. ಸಂತೋಷ್ ಯಾದವ್. ʼಮಳೆಗಾಲದಲ್ಲಿ ಮದ್ರಾಸ್ ಐ ಅಥವಾ ಕಣ್ಣು ಗುಲಾಬಿ ಬಣ್ಣಕ್ಕೆ ತಿರುಗುವ ಪಿಂಕ್ ಐ ಸಮಸ್ಯೆ ಕಾಣಿಸಿಕೊಳ್ಳುವುದು ಹೆಚ್ಚು. ಇದಕ್ಕೆ ಕಂಜಂಕ್ಟಿವಿಟಿಸ್ ಎಂದೂ ಕರೆಯುತ್ತೇವೆ. ಇದು ಮಳೆಗಾಲದಲ್ಲಿ ಹೆಚ್ಚಲು ಪ್ರಮುಖ ಕಾರಣ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು. ಸಕ್ರಿಯ ವೈರಸ್ ಹಾಗೂ ಬ್ಯಾಕ್ಟೀರಿಯಾಗಳು ಕಣ್ಣುಗಳಿಗೆ ತಗುಲಿ ಈ ಸಮಸ್ಯೆಯನ್ನು ಉಂಟು ಮಾಡುತ್ತದೆʼ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.
ಲಕ್ಷಣಗಳು
ʼಮದ್ರಾಸ್ ಐ ಸಮಸ್ಯೆ ಕಾಣಿಸಿಕೊಂಡಾಗ ಕಣ್ಣುಗಳು ಕೆಂಪಾಗುತ್ತವೆ, ತುರಿಕೆ, ಊದಿಕೊಳ್ಳುವುದು, ಬೆಳಕಿಗೆ ಕಣ್ಣು ತೆರೆಯಲು ಕಷ್ಟವಾಗುವುದು, ಕಣ್ಣಿನಿಂದ ನೀರು ಸೋರುವುದು ಅಥವಾ ಹಿಕ್ಕೆ ಸೋರುವುದು ಉಂಟಾಗಬಹುದುʼ ಎಂದು ಅವರು ಹೇಳಿದ್ದಾರೆ. ʼಇದಕ್ಕೆ ಮನೆಮದ್ದು ಎಂದರೆ ಕಣ್ಣುಗಳಿಗೆ ವಿಶ್ರಾಂತಿ ನೀಡುವುದು. ಮೊಬೈಲ್ ಹಾಗೂ ಕಂಪ್ಯೂಟರ್ ಪರದೆಯಿಂದ ದೂರವಿರಬೇಕು. ಸೂರ್ಯನ ಬೆಳಕಿಗೆ ನೇರವಾಗಿ ಕಣ್ಣುಗಳನ್ನು ಒಡ್ಡಬಾರದು. ಬಿಸಿನೀರು ಮತ್ತು ತಣ್ಣೀರಿನ ಸಂಕೋಚನವು ಕಣ್ಣುಗಳಿಗೆ ಪರಿಹಾರವನ್ನು ನೀಡುತ್ತದೆʼ ಎಂದು ಅವರು ಹೇಳುತ್ತಾರೆ.
ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ ಎನ್ನುವ ಅವರು ʼಈ ಮದ್ರಾಸ್ ಐ ಸಮಸ್ಯೆಯು ಮನೆಯಲ್ಲಿ ಒಬ್ಬ ವ್ಯಕ್ತಿ ಹೊಂದಿದ್ದರೆ ಎಲ್ಲರಿಗೂ ಹರಡುತ್ತದೆ. ಇದಕ್ಕೆ ಮುಖ್ಯ ಕಾರಣ ನಾವು ಆಗಾಗ ಕೈ ತೊಳೆಯದೇ ಇರುವುದು. ಸೋಂಕಿತ ವ್ಯಕ್ತಿ ಬಳಸಿದ ಟವಲ್ ಅಥವಾ ಇನ್ನಿತರ ವಸ್ತುಗಳನ್ನು ಸ್ವಚ್ಛ ಮಾಡದೇ ನೇರವಾಗಿ ಬಳಸುವುದು, ಅವರ ಕಣ್ಣು ಒರೆಸಿದ ಬಟ್ಟೆಗಳನ್ನು ಮುಟ್ಟಿ ನಮ್ಮ ಮುಖ ಮುಟ್ಟುವುದು ಈ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಬಹುದು. ಇದರೊಂದಿಗೆ ಅವರು ಬಳಸಿದ ದಿಂಬು, ಬೆಡ್‌ಶೀಟ್‌ಗಳ ಬಳಕೆಯೂ ಸಮಸ್ಯೆ ಹೆಚ್ಚಲು ಕಾರಣವಾಗಬಹುದು. ಹಾಗಾಗಿ ಈ ಸಮಸ್ಯೆ ಇರುವವರು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿಡಿ ಎಂದು ಅವರು ಸಲಹೆ ನೀಡುತ್ತಾರೆ.
ʼಕಂಜಂಕ್ಟಿವಿಟಿಸ್ ಎನ್ನುವುದು ಸಾಂಕ್ರಾಮಿಕವಾಗಿದೆ. ಸೋಂಕಿತ ಸ್ರವಿಸುವಿಕೆಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದ ಮೂಲಕ ಈ ಸಮಸ್ಯೆ ಸುಲಭವಾಗಿ ಹರಡಬಹುದುʼ ಎನ್ನುತ್ತಾರೆ ವೈದ್ಯರು.
ಹಾಗಾದರೆ ಇದನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಸರಳ ಮಾರ್ಗಗಳು ಹೀಗಿವೆ:
ನಿಯಮಿತವಾಗಿ ಕೈ ತೊಳೆಯುತ್ತಿರಿ: ನಿರಂತರವಾಗಿ ಸೋಪು ಹಾಗೂ ನೀರಿನಿಂದ ಕೈ ತೊಳೆಯುತ್ತಿರುವುದು ಅವಶ್ಯ. ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳುವುದರಿಂದ ಸೋಂಕು ಹರಡುವುದನ್ನು ತಪ್ಪಿಸಬಹುದು.
ಕಣ್ಣುಗಳನ್ನು ಮುಟ್ಟುತ್ತಿರಬೇಡಿ: ಕಣ್ಣುಗಳನ್ನು ಪದೇ ಪದೇ ಮುಟ್ಟುತ್ತಿರಬೇಡಿ. ಕೈಗಳನ್ನು ತೊಳೆಯದೇ ಕಣ್ಣುಗಳನ್ನು ಮುಟ್ಟುವುದರಿಂದ ವೈರಲ್ ಹಾಗೂ ಬ್ಯಾಕ್ಟೀರಿಯಾಗಳು ಕಣ್ಣನ್ನು ಸುಲಭವಾಗಿ ಪ್ರವೇಶಿಸಬಹುದು.
ತಕ್ಷಣಕ್ಕೆ ವೈದ್ಯಕೀಯ ಆರೈಕೆ ಪಡೆಯಿರಿ: ಕಣ್ಣು ಕೆಂಪಾಗುವುದು, ಜಿಗುಟಾದ ಸ್ರವಿಸುವಿಕೆ, ನೀರು ಸೋರುವುದು ಅಥವಾ ನೋವಿನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಬಳಿ ತೋರಿಸಿ. ಸಕಾಲಿಕ ರೋಗನಿರ್ಣಯ ಹಾಗೂ ಸೂಕ್ತ ಚಿಕಿತ್ಸೆಗಾಗಿ ನೇತ್ರಶಾಸ್ತ್ರತ್ಞರನ್ನು ಸಂಪರ್ಕಿಸಲು ಮರೆಯದಿರಿ.
ವಸ್ತುಗಳನ್ನು ಪ್ರತ್ಯೇಕವಾಗಿರಿಸಿ: ಮದ್ರಾಸ್ ಐ ಸೋಂಕಿತ ಟವಲ್, ಬಟ್ಟೆಗಳು, ದಿಂಬುಗಳು, ಹೊದಿಕೆ, ಹಾಸುವ ಬಟ್ಟೆಗಳನ್ನು ಪ್ರತ್ಯೇಕವಾಗಿ ಇರಿಸಿ. ಇದನ್ನು ಸ್ಪರ್ಶಿಸುವುದರಿಂದ ಸಮಸ್ಯೆ ಹರಡುವ ಸಾಧ್ಯತೆ ಹೆಚ್ಚು.
ಐ ಡ್ರಾಪ್‌ಗಳನ್ನು ಹಂಚಿಕೊಳ್ಳದಿರಿ: ಮನೆಯಲ್ಲಿ ಹಲವರಿಗೆ ಸೋಂಕು ತಗುಲಿದ್ದರೂ ಕೂಡ ಒಬ್ಬರಿಗೊಬ್ಬರು ಬಳಸಿದ ಐ ಡ್ರಾಪ್ ಬಳಸಬೇಡಿ. ಇದರಿಂದ ಸೋಂಕು ಹರಡುವ ಅಪಾಯ ಇನ್ನಷ್ಟು ಹೆಚ್ಚಬಹುದು.
ಕಣ್ಣುಗಳನ್ನು ರಕ್ಷಿಸಿಕೊಳ್ಳಿ: ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಮದ್ರಾಸ್ ಐ ಸೋಂಕಿತರಿದ್ದರೆ ಅವರಿಗೆ ಗ್ಲಾಸ್ ಅಥವಾ ಮುಖಗವಸು ಬಳಸಲು ತಿಳಿಸಿ. ಇದರಿಂದ ಸೋಂಕು ಹರಡುವುದನ್ನು ತಪ್ಪಿಸಬಹುದು.
ವೈದ್ಯರು ಸೂಚಿಸಿದ ಐ ಡ್ರಾಪ್ ಅನ್ನೇ ಬಳಸಿ: ಸೋಂಕು ಕಾಣಿಸಿಕೊಂಡಾಗ ವೈದ್ಯರು ಸೂಚಿಸಿದ ಐ ಡ್ರಾಪ್ ಅನ್ನೇ ಬಳಸಿ.
ಕಣ್ಣುಗಳನ್ನು ಉಜ್ಜದಿರಿ: ಕಣ್ಣುಗಳಲ್ಲಿ ತುರಿಕೆ ಕಾಣಿಸಿಕೊಂಡರೂ ಉಜ್ಜದಿರಿ. ಇದರಿಂದ ಕಣ್ಣಿನ ಆರೋಗ್ಯ ಇನ್ನಷ್ಟು ಹದಗೆಡಬಹುದು ಮಾತ್ರವಲ್ಲ, ಸೋಂಕು ಹರಡುವ ಪ್ರಮಾಣ ಹೆಚ್ಚಬಹುದು. ಇದರ ಬದಲು ಸ್ವಚ್ಛವಾದ ಟಿಶ್ಯೂ ಅಥವಾ ಕರ್ಚಿಫ್ ಅನ್ನು ಕಣ್ಣೊರೆಸಿಕೊಳ್ಳಲು ಬಳಸಿ.
ಮೇಕಪ್ ಮಾಡದಿರಿ: ಮದ್ರಾಸ್ ಐ ಸಮಸ್ಯೆ ಕಾಣಿಸಿದರೆ ಮೇಕಪ್ ಮಾಡುವುದಿರಿ. ಇದರಿಂದ ಸಮಸ್ಯೆ ಇನ್ನಷ್ಟು ಉಲ್ಬಣವಾಗುವ ಜೊತೆಗೆ ಗುಣಮುಖವಾಗಲು ನಿಧಾನವಾಗಬಹುದು.
ಈಜಾಡಲು ಹೋಗದಿರಿ: ಮಳೆಗಾಲದಲ್ಲಿ ಈಜಾಡಲು ಹೋಗದೇ ಇರುವುದು ಉತ್ತಮ, ಈಜುಕೊಳದಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು.